ದಾವಣಗೆರೆ : ಬ್ಯಾಂಕಿಗೆ ಹಣ ಜಮಾ ಮಾಡಲು ಬಂದಿದ್ದ ಬ್ಯಾಗಿನಿಂದ ಹೊರ ರಾಜ್ಯದ ಗುಂಪೊಂದು 1 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಕೆನರಾ ಬ್ಯಾಂಕ್ ನಲ್ಲಿ ನಡೆದಿದೆ. ಉಳಿದ ಹಣ ದೋಚಲು ಮುಂದಾದ ಗುಂಪಿನ ಇಬ್ಬರು ಮಹಿಳೆಯರನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಿಕ್ಕಿ ಬಿದ್ದ ಮಹಿಳೆಯರು ಮಧ್ಯಪ್ರದೇಶ ಮೂಲದವರೆಂದು ಹೇಳಿ ಕೊಂಡಿದ್ದು, ಪ್ರಿಯಾಂಕಾ ಸಿಸೋಡಿಯಾ (35) ಹಾಗೂ ಘಟನೆಯ ಸಿಸಿ ಟಿವಿ ಫೂಟೇಜ್ ತೆಗೆದು ಮೂವರ ಗುಂಪಿನಲ್ಲಿ ಹಣದೊಂದಿಗೆ ಪರಾರಿಯಾದ ಮಹಿಳೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಚನ್ನಗಿರಿ ತಾಲೂಕು ತಣಿಗೆರೆ ಗ್ರಾಮದ ಲತಾ ರುದ್ರಯ್ಯ ಎಂಬುವರು ಬಂಗಾರ ಇಟ್ಟು ಪಡೆದಿದ್ದ ಸಾಲದ ನವೀಕರಣಕ್ಕೆ 3.50 ಲಕ್ಷ ರೂ. ನಗದನ್ನು ಬ್ಯಾಂಕಿಗೆ ಕಟ್ಟಲು ಬಂದಿದ್ದರು. ಬ್ಯಾಂಕಿನಲ್ಲಿ ಚಲನ್ ತುಂಬುವ ಸಮಯದಲ್ಲಿ ಪೆನ್ನು ನೀಡುವ ನೆಪದಲ್ಲಿ ಮೂವರು ಅಪರಿಚಿತ ಮಹಿಳೆಯರು ಜೊತೆಯಾಗಿದ್ದಾರೆ. ಈ ವೇಳೆ ವೃದ್ದರೊಬ್ಬರು ಚಲನ್ ತುಂಬಿಕೊಡುವಂತೆ ಲತಾ ಅವರನ್ನು ಕೇಳಿದ್ದಾರೆ.
ವೃದ್ಧನ ಚಲನ್ ತುಂಬಿಕೊಡುವ ವೇಳೆ ಒಬ್ಬ ಮಹಿಳೆ ಲತಾ ಅವರ ಬ್ಯಾಗ್‌ನ್ನು ಕತ್ತರಿಸಿ 1 ಲಕ್ಷ ರೂ. ಕದ್ದು ಪರಾರಿಯಾಗಿದ್ದಾಳೆ. ನಂತರ ಉಳಿದ ಇಬ್ಬರು ಮಹಿಳೆಯರು ಬ್ಯಾಗ್ ಕತ್ತರಿಸಿ ಉಳಿದ 2.5 ಲಕ್ಷ ರೂ. ಕದ್ದು ಪರಾರಿಯಾಗುವ ವೇಳೆ, ಲತಾರವರ ಗಮನಕ್ಕೆ ಬಂದಿದೆ. ಕೂಡಲೇ ಹೊರಗೆ ಹೋಗುತ್ತಿದ್ದ ಮಹಿಳೆಯರನ್ನು ಹಿಡಿಯಿರಿ ಎಂದು ಕೂಗಿದಾಗ, ಲತಾ ಅವರ ಪತಿ ರುದ್ರಯ್ಯ ಹಾಗೂ ಜನರು ಇಬ್ಬರು ಮಹಿಳೆಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಒಂದು ಲಕ್ಷ ರೂ. ಕದ್ದು ಪರಾರಿಯಾದ ಮಹಿಳೆಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ಕಾಣೆಯಾದ ಒಂದು ಲಕ್ಷ ರೂ. ಹಣ ಹುಡುಕಿಕೊವಂತೆ ಸಂತೆಬೆನ್ನೂರು ಪೊಲೀಸ್ ಠಾಣೆಗೆ ಲತಾ ರುದ್ರಯ್ಯ ದೂರು ನೀಡಿದ್ದಾರೆ.