ದಾವಣಗೆರೆ : ಬರುವ ಸೆ.15 ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಮಂಗಳವಾರ ನಗರದ ಶಿವಯೋಗಾಶ್ರಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಭಿಯಾನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಪ್ರಸ್ತುತ ರಾಜಕೀಯ, ಧಾರ್ಮಿಕ ವಾತಾವರಣ ತುಂಬಾ ಹದಗೆಟ್ಟಿದ್ದು, ಇದನ್ನು ಸುಸ್ಥಿತಿಗೆ ತರುವ ಆಶಯ ಇಟ್ಟುಕೊಂಡು ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ 31 ಜಿಲ್ಲಾ ಕೇಂದ್ರಗಳಲ್ಲಿ ಸೆ.1 ರಿಂದ ಅ.5 ರವರೆಗೆ ನಡೆಯಲಿದೆ. ಬಸವಣ್ಣನ ಜನ್ಮಭೂಮಿಯಾದ ಬಸವನ ಬಾಗೇವಾಡಿಯಿಂದ ಆರಂಭವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಕ್ತಾಯ ಆಗಲಿದೆ ಎಂದರು.
ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಆಗಿ ಸರ್ಕಾರ ಘೋಷಣೆ ಮಾಡಿ ವರ್ಷ ಕಳೆದಿದೆ. ಇದನ್ನು ಜನರು ಗಂಭೀರವಾಗಿ ಪರಿಗಣಿಸದೇ, ಬಸವಣ್ಣನವರ ತತ್ವ ಚಿಂತನೆಗಳನ್ನು ಪಾಲನೆ ಮಾಡದಿರುವುದನ್ನು ಮನಗಂಡು ಈ ಅಭಿಯಾನ ನಡೆಸಬೇಕು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ ಈ ತೀರ್ಮಾನ ಕೈಗೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಈ ಅಭಿಯಾನದ ವೇಳೆ ಆಯಾಯ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ವಚನಗಳ ಸಂವಾದ ನಡೆಯಲಿದೆ. ಅನುಭವ ಮಂಟಪದ ಮಾದರಿಯಲ್ಲಿ ಪರಸ್ಪರ ಚರ್ಚೆಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ವಚನಗಳ ಮಹತ್ವ ತಿಳಿಸಿಕೊಡುವ ಪ್ರಯತ್ನ ಮಾಡಲಾಗುವುದು. ಸಂಜೆ ವಚನ ಪುಸ್ತಕಗಳೊಂದಿಗೆ ಪಾದಯಾತ್ರೆ ಇರಲಿದೆ ಎಂದರು.
ಅಭಿಯಾನದ ಗೌರವಾಧ್ಯಕ್ಷ ಅಥಣಿ ಎಸ್. ವೀರಣ್ಣ ಮಾತನಾಡಿ, ಈ ಹಿಂದೆ ರಾಜ್ಯ ಸರ್ಕಾರ ಜಾತಿ ಗಣತಿ ನಡೆಸಿದಾಗ ಎಲ್ಲರೂ ಒಳಪಂಗಡದ ಹೆಸರು ಬರೆಸಿದ್ದರಿಂದ ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನಡೆಸುವ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತರು ಎಂದು ಬರೆಸಬೇಕು ಎಂಬ ಬಗ್ಗೆ ಎಲ್ಲ ಮಠಾಧೀಶರು ಸೇರಿ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದು ಕೋರಿದರು.
ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ ಮಾತನಾಡಿ, ಮೋತಿ ವೀರಪ್ಪ ಕಾಲೇಜು ಆವರಣದಿಂದ ಮೆರವಣಿಗೆ ಆರಂಭವಾಗಿದೆ. ಬಾಪೂಜಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, 45 ನಿಮಿಷ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.
ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಕೆಲವರು ವೀರಶೈವ ಹಾಗೂ ಇನ್ನೂ ಕೆಲವರು ವೀರಶೈವ ಲಿಂಗಾಯತ ಎಂದು ಬರೆಸುವಂತೆ ಹೇಳುತ್ತಿದ್ದಾರೆ. ಲಿಂಗಾಯತ ಮಠಾಧೀಶರ ಒಕ್ಕೂಟದ ನಿಲುವು ಲಿಂಗಾಯತ ಎಂದೇ ಬರೆಸಲು ತೀರ್ಮಾನ ಕೈಗೊಂಡಿದೆ. ಅಖಲ ಭಾರತಿ ವೀರಶೈವ ಮಹಾಸಭಾ ವತಿಯಿಂದ ಸರಿಯಾದ ತೀರ್ಮಾನ ಕೈಗೊಂಡರೆ ಸಮಸ್ಯೆ ಪರಿಹಾರ ಆಗಲಿದೆ ಎಂದು ಸಲಹೆ ನೀಡಿದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಸೆ.15 ರಂದು ದಾವಣಗೆರೆಗೆ ಬರಲಿದೆ. ರಾಜ್ಯದಲ್ಲಿಯೇ ಅದ್ದೂರಿಯಾಗಿ ನಡೆಸಿಕೊಟ್ಟ ಜಿಲ್ಲೆ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಬೇಕು. ಬಸವ ತತ್ವಗಳಿಂದ ನಾಡು ಉಳಿದಿದೆ. ಬಸವ ತತ್ವದ ಅಡಿಯಲ್ಲಿ ನಾಡು ಕಟ್ಟೋಣ ಎಂದರು.
Read also : ಆಡಳಿತ ನಿರ್ಲಕ್ಷ್ಯ : ಮಲೇಬೆನ್ನೂರು ರಸ್ತೆಗೆ ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ತಾತ್ಕಾಲಿಕ ಪರಿಹಾರ
ಬಸವ ಸಂಸ್ಕತಿ ಅಭಿಯಾನದ ಅಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಅಭಿಯಾನ ನಡೆಯಲಿದೆ. ಈ ಮೂಲಕ ಕ್ರಾಂತಿಕಾರಕ ಬದಲಾವಣೆ ಆಗಲಿದೆ. ಈಗಾಗಲೇ ಬಸವ ತತ್ವ ಚಿಂತಕರು ಮತ್ತು ಸಮುದಾಯದಲ್ಲಿ ಚರ್ಚೆ ನಡೆಯುತ್ತಿದೆ. ಲಿಂಗಾಯತ ಕುರಿತು ಅರ್ಥಪೂರ್ಣ ಚರ್ಚೆ ಆಗಬೇಕಿದೆ. ಈ ವಿಚಾರ ಬಹುದಿನಗಳಿಂದ ಹೊಗೆ ಆಡುತ್ತಿದೆ. ಅಭಿಯಾನದ ಸಮಾರೋಪ ಅ.5ರಂದು ಬೆಂಗಳೂರಿನಲ್ಲಿ ನಡೆಯಲಿದ್ದು ಅಂದೇ ಅಂತಿಮ ತೀರ್ಮಾನ ಆಗಲಿದೆ ಎಂಬ ವಿಶ್ವಾಸವಿದೆ. ಪಂಚಪೀಠಗಳ ಸ್ವಾಮೀಜಿಗಳು ಅಂದು ಬಂದು ಸೇರಿದರೆ ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಎಂ.ಜಯಕುಮಾರ್, ದೇವರ ಮನಿ ಶಿವಕುಮಾರ್, ಕುಸುಮಾ ಲೋಕೇಶ್. ಲಿಂಗಾನAದ ಕಮ್ಮತ್ತಹಳ್ಳಿ ಸೇರಿದಂತೆ ಸಮಾಜದ ನೂರಕ್ಕೂ ಅಧಿಕ ಮುಖಂಡರು ಬಸವ ಅನುಯಾಯಿಗಳು ಭಾಗವಹಿಸಿದ್ದರು.