ದಾವಣಗೆರೆ: ನೀವು ಮಾಡುತ್ತಿರುವ ಕಾಮಗಾರಿ ನೋಡಿದರೆ, ರಸ್ತೆ ಕಾಮಗಾರಿ ನಡೆಸಿದ ಕೆಲವೇ ತಿಂಗಳಲ್ಲಿ ಡಾಂಬರ್ ಕಿತ್ತುಹೋಗಿ, ತಗ್ಗು–ಗುಂಡಿಗಳು ಬಿದ್ದು ಮತ್ತೆ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೊಸಹಳ್ಳಿ ಕ್ರಾಸ್‌ನಿಂದ ಲೋಕಿಕೆರೆಯವರೆಗೆ 6 ಕೋಟಿ ರೂ. ವೆಚ್ಚದ ರಾಜ್ಯ ಹೆದ್ದಾರಿ ರಸ್ತೆ ಡಾಂಬರೀಕರಣ ಕಾಮಗಾರಿ ತಿಂಗಳ ಹಿಂದೆ ಚಾಲನೆ ನೀಡಲಾಗಿತ್ತು. ವಾರದ ಹಿಂದೆ ಕಾಮಗಾರಿ ಆರಂಭವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ರಸ್ತೆ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದಾರೆ.
ಗುರುವಾರ ಶಾಸಕ ಕೆ.ಎಸ್.ಬಸವಂತಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಳಪೆ ರಸ್ತೆ ಕಾಮಗಾರಿ ಕಂಡು ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಗರಂ ಆದರು.
ಕೂಡಲೇ ದೂರವಾಣಿ ಮೂಲಕ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಅವರನ್ನು ಸಂಪರ್ಕ ಮಾಡಿ ಇಲ್ಲಿನ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದರು. ರಸ್ತೆ ಕಾಮಗಾರಿ ಆರಂಭಗೊಂಡು ಇನ್ನೂ ಮುಕ್ತಾಯವೇ ಆಗಿಲ್ಲ, ಆಗಲೇ ಮಾಡಿದ ರಸ್ತೆ ಕಿತ್ತುಕೊಂಡು ಹೋಗುವಂತಿದೆ. ಮಳೆ ಬರುವಾಗ ಡಾಂಬರ್ ಹಾಕಿದರೆ ರಸ್ತೆ ಉಳಿಯುತ್ತದೆಯೇ ಎಂದು ಪ್ರಶ್ನಿಸಿದ ಅವರು, ಇಲ್ಲಿ ಕೆಲಸಗಾರರನ್ನು ಬಿಟ್ಟರೆ ಸಂಬಂಧಪಟ್ಟ ಇಂಜಿನಿಯರ್, ಗುತ್ತಿಗೆದಾರ ಇಲ್ಲ. ಕೆಲಸಗಾರರು ಅವರ ಮನಸ್ಸಿಗೆ ತೋಚಿದಂತೆ ಡಾಂಬರ್ ಹಾಕುತ್ತಿದ್ದಾರೆ. ಈ ರೀತಿ ಕೆಲಸ ಮಾಡಿದರೆ ಮೂರು ದಿನ ಉಳಿಯೋದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಹಳೆಯ ಡಾಂಬರ್ ರಸ್ತೆ ಕಿತ್ತು ಹೊಸ ಕಾಮಗಾರಿ ನಡೆಸಬೇಕು. ಇಲ್ಲಿ ನೋಡಿದರೆ ಆ ರಸ್ತೆಯ ಮೇಲೆ ಡಾಂಬರೀಕರಣ ಮಾಡಲಾಗುತ್ತಿದೆ. 6.50 ಎಂಎಂ ಡಾಂಬರ್ ಹಾಕಬೇಕು. ಪರೀಕ್ಷೆ ಮಾಡಿದರೆ 6 ಎಂಎಂ ಡಾಂಬರ್ ಹಾಕಿದ್ದಾರೆ. ಇದಕ್ಕೆ ಯಾರು ಹೊಣೆ? ಕೂಡಲೇ ಕಳಪೆ ಕಾಮಗಾರಿ ನಿಲ್ಲಿಸಿ ಗುಣಮಟ್ಟ ಕಾಮಗಾರಿ ನಡೆಸಬೇಕು. ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲು ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.
Read also : ಕೈಮಗ್ಗ,ನೇಕಾರರು ದೇಶದ ಅಸ್ತಿತ್ವ : ಜಿ.ಪಂ. ಸಿಇಓ ಅಭಿಪ್ರಾಯ