ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ಅವರ ಕಿವಿಗೆ ಒಂದು ಸಂದೇಶ ತಲುಪಿದೆ.ಅವರಿಗೆ ಈ ಸಂದೇಶ ತಲುಪಿಸಿದ್ದು ಸ್ವತ: ಅವರ ಗೂಢಚಾರರ ಪಡೆ. ವಿಧಾನಸಬೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಡಿದರೆನ್ನಲಾದ ಮಾತನ್ನು ಈ ಗೂಢಚಾರರ ಪಡೆ ತಮ್ಮ ಕಿವಿಗೆ ತಲುಪಿಸಿದ್ದೇ ತಡ,ವಿಜಯೇಂದ್ರ ಕೆಂಡಾಮಂಡಲಗೊಂಡಿದ್ದಾರೆ. ಅಷ್ಟೇ ಅಲ್ಲ,ತಮಗೆ ತಲುಪಿದ ಸಂದೇಶದ ವಿವರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಲುಪಿಸಿ:’ಹೀಗೆಲ್ಲ ಆದರೆ ನಾನು ಕೆಲಸ ಮಾಡುವುದು ಹೇಗೆ ಸಾರ್?’ ಅಂತ ಕೇಳಿದ್ದಾರೆ.
ಅಂದ ಹಾಗೆ ವಿಜಯೇಂದ್ರ ಅವರ ಕೋಪಕ್ಕೆ ಕಾರಣವಾದ ಈ ಸಂದೇಶ ಹುಟ್ಟಿದ್ದು ಕಬಿನಿ ಹಿನ್ನೀರಿನ ಬಳಿ ಇರುವ ತಾಣದಲ್ಲಿ. ವಿಜಯೇಂದ್ರ ಅವರ ಗೂಢಚಾರರ ಪ್ರಕಾರ:ಕೆಲ ದಿನಗಳ ಹಿಂದೆ ಆರ್.ಅಶೋಕ್ ಅವರು ಕಬಿನಿ ಜಲಾಶಯದ ಬಳಿ ಇರುವ ತಾಣವೊಂದರಲ್ಲಿ ಪಾರ್ಟಿ ಮಾಡಿದ್ದಾರೆ.ಈ ಪಾರ್ಟಿಯಲ್ಲಿ ಚಿಕ್ಕಮಗಳೂರು, ಮಂಗಳೂರು ಮತ್ತು ಬೆಂಗಳೂರಿನ ಕೆಲ ಶಾಸಕರು ಭಾಗಿಯಾಗಿದ್ದಾರೆ.
ಹೀಗೆ ಪಾರ್ಟಿ ಶುರುವಾದ ನಂತರ ಮಾತನಾಡಿದ ಆರ್.ಅಶೋಕ್ ಅವರು:’ನೋಡ್ರೀ.ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಯುವುದು ಪಕ್ಕಾ.ಸ್ವತ: ಅಮಿತ್ ಶಾ ಅವರು ನನ್ನ ಬಳಿ ಇದನ್ನು ಹೇಳಿದ್ದಾರೆ. ಹೀಗೆ ವಿಜಯೇಂದ್ರ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ನನಗೆ ಆಪ್ತರಾಗಿರುವವರೇ ಅಧ್ಯಕ್ಷರಾಗಲಿದ್ದಾರೆ.
ಇನ್ ಫ್ಯಾಕ್ಟ್,ಇವತ್ತಿನ ಸ್ಥಿತಿಯಲ್ಲಿ ವಿಧಾನಸಭೆಗೆ ಚುನಾವಣೆ ನಡೆದರೆ ಪಕ್ಷ ಅಧಿಕಾರಕ್ಕೆ ಬರುವುದು ಹಂಡ್ರೆಡ್ ಪರ್ಸೆಂಟ್ ಗ್ಯಾರಂಟಿ.ಹೀಗೆ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಜಯೇಂದ್ರ ಅವರೇ ಅಧ್ಯಕ್ಷರಾಗಿದ್ದರೆ ಸಿಎಂ ಹುದ್ದೆಗೆ ಅವರು ಟ್ರೈ ಕೊಡುತ್ತಾರೆ.ಅವರ ನೇತೃತ್ವದಲ್ಲೇ ಚುನಾವಣೆ ಗೆದ್ದರೆ ಸಹಜವಾಗಿ ಅವರ ಬೇಡಿಕೆಗೆ ಶಕ್ತಿ ದೊರೆಯುತ್ತದೆ. ಹಾಗಾಗಬಾರದು ಎಂದರೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ನ್ಯೂಟ್ರಲ್ ಆಗಿರುವವರು ಬರಬೇಕು.ಆಗ ಸಿಎಂ ಹುದ್ದೆಗೇರಲು ನಮಗೂ ಶಕ್ತಿ ದೊರೆಯುತ್ತದೆ’ ಎಂದರಂತೆ.
ಹೀಗೆ ಅಶೋಕ್ ಅವರಾಡಿದ್ದಾರೆ ಎನ್ನಲಾದ ಮಾತನ್ನು ಗೂಢಚಾರರ ಪಡೆ ತಮ್ಮ ಕಿವಿಗೆ ತಲುಪಿಸಿದಾಗ ವಿಜಯೇಂದ್ರ ಸಹಜವಾಗಿಯೇ ರೋಷಾವಿಷ್ಟರಾಗಿದ್ದಾರೆ. ಅಂದ ಹಾಗೆ ಅಶೋಕ್ ಅವರ ವಿಷಯದಲ್ಲಿ ವಿಜಯೇಂದ್ರ ಕೋಪ ಗೊಳ್ಳುತ್ತಿರುವುದು ಇದೇ ಮೊದಲ ಸಲವಲ್ಲ.ನಿಜ ಸಂಗತಿ ಎಂದರೆ ವಿಜಯೇಂದ್ರ-ಅಶೋಕ್ ಮಧ್ಯೆ ಹುಲ್ಲು ಕಡ್ಡಿ ಇಟ್ಟರೂ ಧಗ್ ಅಂತ ಹೊತ್ತಿ ಉರಿಯುವ ಪರಿಸ್ಥಿತಿ ಇದೆ.
ಪರಿಣಾಮ? ಇವತ್ತು ವಿಜಯೇಂದ್ರ ಅವರ ಚಲನವಲನಗಳ ಮೇಲೆ ಅಶೋಕ್ ಮತ್ತು ಅಶೋಕ್ ಅವರ ಚಲನವಲನಗಳ ಮೇಲೆ ವಿಜಯೇಂದ್ರ ಹದ್ದುಗಣ್ಣಿಟ್ಟು ಕುಳಿತಿದ್ದಾರೆ. ಅಸೆಂಬ್ಲಿಯಲ್ಲಿ ವಿಜಯೇಂದ್ರ ಸರ್ಕಾರದ ವಿರುದ್ದ ಧ್ವನಿ ಎತ್ತುತ್ತಿಲ್ಲ.ಸರ್ಕಾರದ ವಿರುದ್ದ ನಡೆಯುವ ಬೀದಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂಬುದರಿಂದ ಹಿಡಿದು ವಿಜಯೇಂದ್ರ ಅವರ ಹೆಜ್ಜೆಗಳ ಬಗ್ಗೆ ಅಶೋಕ್ ಅವರು ಅಮಿತ್ ಶಾ ಅವರಿಗೆ ಮಾಹಿತಿ ರವಾನಿಸುತ್ತಲೇ ಇರುತ್ತಾರೆ.
ಇನ್ನು ವಿಜಯೇಂದ್ತ ಅವರು ಕೂಡಾ:ಪ್ರತಿಪಕ್ಷ ನಾಯಕರಾಗಿ ಅಶೋಕ್ ಅವರ ಫರ್ಫಾರ್ಮೆನ್ಸು ಡಲ್ಲು ಎಂಬುದರಿಂದ ಹಿಡಿದು ರಾಜಧಾನಿ ಬೆಂಗಳೂರಿನ ಬಹುತೇಕ ಬಿಜೆಪಿ ಶಾಸಕರು ಅಶೋಕ್ ಅವರ ವಿರುದ್ಧ ಏಕೆ ತಿರುಗಿ ಬಿದ್ದಿದ್ದಾರೆ ಎಂಬುದರ ತನಕ ಇಂಚಿಂಚು ಮಾಹಿತಿಯನ್ನೂ ಅದೇ ಅಮಿತ್ ಶಾ ಅವರಿಗೆ ರವಾನಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ:ಹೀಗೆ ಉಭಯ ನಾಯಕರ ನಡುವಣ ಸಂಘರ್ಷ ತಾರಕಕ್ಕೇರಿರುವುದರಿಂದ ಅಮಿತ್ ಶಾ ಅವರಿಗೇ ತಲೆಬಿಸಿಯಾಗಿ ಹೋಗಿದೆ.
ಹೀಗಾಗಿ ಅಶೋಕ್ ಅವರ ಕಂಪ್ಲೇಂಟುಗಳ ಪಟ್ಟಿ ತಮ್ಮ ಮುಂದೆ ಮಂಡನೆಯಾದಾಗ:’ನಿಜ,ವಿಜಯೇಂದ್ರ ಅವರ ಕಾರ್ಯ ವೈಖರಿಯ ಬಗ್ಗೆ ಬೇರೆ ಕಡೆಯಿಂದಲೂ ನನಗೆ ದೂರುಗಳು ಬರುತ್ತಿವೆ.ಇದನ್ನು ತುಂಬ ಕಾಲ ನೋಡಿಕೊಂಡಿರಲು ಸಾಧ್ಯವಿಲ್ಲ.ನಾವೂ ಸಮಯ ಕಾಯುತ್ತಿದ್ದೇವೆ.ವಿಜಯೇಂದ್ರ ಅವರನ್ನು ಬದಲಿಸಿ ಬೇರೆಯವರನ್ನು ತರುತ್ತೇವೆ’ ಅಂತ ಪ್ರಾಮಿಸ್ಸು ಮಾಡುತ್ತಾರೆ. ಆದರೆ ಕಂಪ್ಲೇಂಟುದಾರರ ಫೇಸ್ ಕಟ್ಟು ಬದಲಾಗಿ ವಿಜಯೇಂದ್ರ ಕಾಣಿಸಿ ಕೊಂಡರೆ: ‘ರಾಜಕಾರಣದಲ್ಲಿ ವಿರೋಧಿಗಳಿರುವುದು ಸಹಜ.ನಿಮ್ಮ ಬಗ್ಗೆ ಇರುವ ಕಂಪ್ಲೇಂಟುಗಳ ಬಗ್ಗೆ ತಲೆಕೆಡಿಸಿ ಕೊಳ್ಳಬೇಡಿ.ಅದನ್ನು ನಮಗೆ ಬಿಡಿ.ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ.ಗೋ ಅಹೆಡ್ ಎನ್ನುತ್ತಾರೆ. ಮೊನ್ನೆಯ ಎಪಿಸೋಡಿನಲ್ಲೂ ಅಷ್ಟೇ.ಅಶೋಕ್ ಅವರ ವಿರುದ್ಧ ವಿಜಯೇಂದ್ರ ಕಂಪ್ಲೇಂಟು ರವಾನಿಸಿದ ನಂತರ ಅಮಿತ್ ಶಾ ಅವರು ಕ್ತಮ ಕೈಗೊಳ್ಳುವ ಮಾತನಾಡಿದ್ದಾರೆ.
ಇದಾದ ನಂತರ ವಿಜಯೇಂದ್ರ ಅವರ ಕ್ಯಾಂಪಿಗೆ ಬಂದ ಸಂದೇಶವೆಂದರೆ,ಕಳೆದ ವಾರ ತಮ್ಮನ್ನು ಭೇಟಿ ಮಾಡಿದ ಅಶೋಕ್ ಅವರಿಗೆ ಅಮಿತ್ ಶಾ ಕಿರಿಕಿರಿ ಮಾಡಿದ್ದಾರೆ.ನಾಯಕತ್ವದ ವಿರುದ್ದ ಮಾತನಾಡಬಾರದು ಎಂದು ಎಚ್ಚರಿಸಿದ್ದಾರೆ. ಯಾವಾಗ ಅಮಿತ್ ಶಾ ಈ ಎಚ್ಚರಿಕೆ ನೀಡಿದರೋ?ಆಗ ಅಶೋಕ್:’ನಾನು ಅಂತಹ ಮಾತುಗಳನ್ನೇ ಆಡಿಲ್ಲ’ ಅಂತ ಸಮಜಾಯಿಷಿ ನೀಡಿದ್ದಾರೆ.
ಅರ್ಥಾತ್,ಅಮಿತ್ ಶಾ ಅವರು ನೀಡಿದ ಎಚ್ಚರಿಕೆಯಿಂದ ಅಶೋಕ್ ಎಚ್ಚೆತ್ತುಕೊಂಡಿದ್ದಾರೆ ಎಂಬುದು ವಿಜಯೇಂದ್ರ ಕ್ಯಾಂಪಿಗೆ ತಲುಪಿರುವ ಸಂದೇಶ. ಇದು ಎಷ್ಟರ ಮಟ್ಟಿಗೆ ನಿಜವೋ?ಅ ಮಾತು ಬೇರೆ.ಆದರೆ ಇಂತಹ ಬೆಳವಣಿಗೆಗಳು ಅಶೋಕ್ ಮತ್ತು ವಿಜಯೇಂದ್ರ ನಡುವಣ ಸಂಘರ್ಷಕ್ಕೆ ಇಂಬು ಕೊಡುತ್ತಿರುವುದು ಮಾತ್ರ ನಿಜ.
ಸುನೀಲ್ ಕುಮಾರ್ ಫೀಲ್ಡಿಗೆ ಬಂದರು (Political analysis)
ಈ ಮಧ್ಯೆ ಬಿಜೆಪಿ ಪಾಳಯದಲ್ಲಿ ತೇಲಿ ಬರುತ್ತಿರುವ ಕುತೂಹಲದ ಸಂಗತಿ ಎಂದರೆ ಮಾಜಿ ಸಚಿವ,ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು ಫೀಲ್ಡಿಗೆ ಬಂದಿರುವುದು. ಇತ್ತೀಚೆಗೆ ಆಪ್ತರ ಜತೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪಾರ್ಟಿ ಮಾಡಿದರಲ್ಲ? ಈ ಪಾರ್ಟಿಯ ಸಂದರ್ಭದಲ್ಲಿ ಅಶೋಕ್ ಅವರಾಡಿದ ಒಂದು ಮಾತು ಸುನೀಲ್ ಕುಮಾರ್ ಹೆಸರು ಫೀಲ್ಡಿಗೆ ಬರುವಂತೆ ಮಾಡಿದೆ.
ಹಾಲಿ ಅಧ್ಯಕ್ಷ ವಿಜಯೇಂದ್ರ ಅವರು ಕೆಳಗಿಳಿದು ನನ್ನ ಆಪ್ತರೇ ಆ ಜಾಗಕ್ಕೆ ಬರುತ್ತಾರೆ ಅಂತ ಅಶೋಕ್ ಹೇಳಿದ್ದು ಯಾರ ಬಗ್ಗೆ? ಎಂಬ ಬಗ್ಗೆ ಸಹಜವಾಗಿಯೇ ಚರ್ಚೆ ಶುರುವಾಗಿದೆ.ಅಷ್ಟೇ ಅಲ್ಲ,ಅಂತಿಮವಾಗಿ ಹಲವರ ಗಮನ ಸುನೀಲ್ ಕುಮಾರ್ ಕಡೆ ತಿರುಗಿದೆ.
ಅಂದ ಹಾಗೆ ಕೆಲ ತಿಂಗಳ ಹಿಂದೆ ಅಶೋಕ್ ವಿಷಯದಲ್ಲಿ ಸುನೀಲ್ ಕುಮಾರ್ ಮುನಿಸಿಕೊಂಡಿದ್ದರು.ವಿಧಾನಸಭೆಯಲ್ಲಿ ಸರ್ಕಾರದ ವಿರುದ್ದ ತಿರುಗಿ ಬೀಳಬೇಕಾದ ಸಂದರ್ಭದಲ್ಲಿ ಅಶೋಕ್ ಮೌನವಾಗಿದ್ದರು ಅನ್ನುವುದು ಸುನೀಲ್ ಕುಮಾರ್ ಸಿಟ್ಟಿಗೆ ಕಾರಣ.
ಹಾಗಂತಲೇ ಸುನೀಲ್ ಕುಮಾರ್ ಅವರು ಅಶೋಕ್ ಅವರ ವಿರುದ್ದ ಗುಡುಗುತ್ತಾ ತಿರುಗುತ್ತಿದ್ದರು.ಆದರೆ ಅವರು ಗುಡುಗುತ್ತಾ ತಿರುಗಿದರು ಅಂತ ಅಶೋಕ್ ಅವರೇನೂ ಮುನಿಸಿಕೊಳ್ಳಲಿಲ್ಲ. ಬಿಜೆಪಿ ಮೂಲಗಳ ಪ್ರಕಾರ ಈ ಎಪಿಸೋಡಿನ ನಂತರ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ಅಂತ ಹೋದ ಅಶೋಕ್ ಅವರು ಅಲ್ಲಿನ ರೆಸಾರ್ಟ್ ಒಂದರಲ್ಲಿ ಸುನೀಲ್ ಕುಮಾರ್ ಜತೆ ರಹಸ್ಯ ಸಭೆ ನಡೆಸಿದ್ದರು.
ಈ ಸಭೆಯ ಸಂದರ್ಭದಲ್ಲಿ ಅಸೆಂಬ್ಲಿಯ ತಮ್ಮ ನಡವಳಿಕೆಗೆ ಕಾರಣ ಬಿಚ್ಚಿಟ್ಟ ಅಶೋಕ್ ಅವರು:’ಸರ್ಕಾರದ ವಿರುದ್ಧ ಮಾತನಾಡಲು ನಾನು ತಯಾರಿದ್ದೆ.ಆದರೆ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ ಅವರು ಮಾತನಾಡದಂತೆ ಅಸೆಂಬ್ಲಿಯಲ್ಲೇ ನನಗೆ ಚೀಟಿ ಕಳಿಸಿದ್ದರು.ಸ್ವತ: ಪಕ್ಷಾಧ್ಯಕ್ಷರೇ ಅಂತಹ ಸೂಚನೆ ಕೊಟ್ಟ ಮೇಲೆ ನಾನು ಮಾತನಾಡುವುದು ಹೇಗೆ?’ಅಂತ ಸುನೀಲ್ ಮುಂದೆ ತಮ್ಮ ಧರ್ಮ ಸಂಕಟ ತೋಡಿಕೊಂಡಿದ್ದರು.
Read also : Political analysis|ಸಿದ್ದು ಗುಡುಗಿದ್ರೂ ಸುರ್ಜೇವಾಲ ಉಳಿದಿದ್ದು ಹೇಗೆ?
ಯಾವಾಗ ಅವರು ತಮ್ಮ ಮುಂದೆ ಈ ವಿಷಯ ಹೇಳಿದರೋ? ಇದಾದ ನಂತರ ಸುನೀಲ್ ಕುಮಾರ್ ತಮ್ಮ ಮುನಿಸು ಮರೆತು ಅಶೋಕ್ ಅವರ ಜತೆಗಿನ ವಿಶ್ವಾಸವನ್ನು ಮರುಸ್ಥಾಪಿಸಿಕೊಂಡಿದ್ದರು. ಇದೇ ಮೂಲಗಳ ಪ್ರಕಾರ:ಕರ್ನಾಟಕದಲ್ಲಿ ಪಕ್ಷಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ತರುವ ವಿಷಯದಲ್ಲಿ ಅಶೋಕ್ ಆಸಕ್ತಿ ತೋರಿರುವುದು ನಿಜವಾದರೂ ವರಿಷ್ಟರ ಮನಸ್ಸಿನಲ್ಲಿ ಸುನೀಲ್ ಕುಮಾರ್ ಹೆಸರೂ ಇದೆ ಎಂಬುದು ಅವರಿಗೆ ಕನ್ ಫರ್ಮ್ ಆಗಿದೆ. ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು:’ಸುನೀಲ್ ಕುಮಾರ್ ಅವರನ್ನು ಪಕ್ಷಾಧ್ಯಕ್ಷ ಸ್ತಾನಕ್ಕೆ ತಂದರೆ ಹೇಗೆ?’ಅಂತ ಸ್ವತ: ಅಶೋಕ್ ಅವರ ಬಳಿಯೇ ಕೇಳಿದ್ದರಂತೆ.
ಅಮಿತ್ ಶಾ ಹೀಗೆ ಕೇಳುತ್ತಿದ್ದಾರೆ ಎಂದರೆ ಹಿಂದೂ ಫೈರ್ ಬ್ರಾಂಡ್ ಅಂತ ಅವರು ಸುನೀಲ್ ಕುಮಾರ್ ಅವರನ್ನು ಗುರುತಿಸಿದ್ದಾರೆ ಅಂತಲೇ ಅರ್ಥವಲ್ಲವೇ? ಹಾಗಂತಲೇ ಅಮಿತ್ ಶಾ ಅವರ ಮುಂದೆ ಸುನೀಲ್ ಕುಮಾರ್ ಬಗ್ಗೆ ಅಶೋಕ್ ಪಾಸಿಟಿವ್ ಆಗಿ ಮಾತನಾಡಿ ಬಂದಿದ್ದಾರೆ.
ಅಂದ ಹಾಗೆ ವಿಜಯೇಂದ್ರ ಅವರ ಜಾಗಕ್ಕೆ ಸೋಮಣ್ಣ ಅವರನ್ನು ತರಬೇಕು ಎಂಬ ವಿಷಯದಲ್ಲಿ ಬೊಮ್ಮಾಯಿ ಮತ್ತಿತರ ನಾಯಕರ ಜತೆ ಸೇರಿ ಅಶೋಕ್ ಒತ್ತಾಸೆ ನೀಡಿದ್ದು ನಿಜವಾದರೂ ವರಿಷ್ಟರ ಆಟ ಯಾವ ರೂಪಕ್ಕೆ ತಿರುಗುತ್ತದೋ?ಎಂಬ ಯೋಚನೆಯಿಂದ ಹುಷಾರಾಗಿ ಹೆಜ್ಜೆ ಇಡುತ್ತಿದ್ದಾರೆ.
ಬಿಜೆಪಿ ವರಿಷ್ಟರಿಗೆ ಜೆಡಿಎಸ್ ಏಕೆ ಬೇಕು? (Political analysis)
ಈ ಮಧ್ಯೆ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಬಲ ತುಂಬಲು ಖುದ್ದು ಬಿಜೆಪಿ ವರಿಷ್ಟರು ಮುಂದಾಗಿದ್ದಾರೆ. ಇದಕ್ಕೆ ಮಧ್ಯಂತರ ಚುನಾವಣೆಯ ಕನಸೂ ಕಾರಣ. ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆಯ ಮಾತು ಸಧ್ಯಕ್ಕೆ ತಣ್ಣಗಾಗಿದ್ದರೂ ನವೆಂಬರ್ ಇಪ್ಪತ್ತರ ನಂತರ ಪರಿಸ್ಥಿತಿ ಬದಲಾಗಲಿದೆ.ಮತ್ತು ಇದು ಮಧ್ಯಂತರ ಚುನಾವಣೆಗೆ ದಾರಿಯಾಗಲಿದೆ ಎಂಬುದು ಬಿಜೆಪಿ ವರಿಷ್ಟರ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವ ವರಿಷ್ಟರು,ಮಿತ್ರ ಪಕ್ಷ ಜೆಡಿಎಸ್ ಕತೆಗಿನ ಬಾಂಧವ್ಯ ಗಟ್ಟಿ ಮಾಡಲು ಮುಂದಾಗಿದ್ದಾರೆ.
ಜೆಡಿಎಸ್ ವಿಷಯದಲ್ಲಿ ಅವರು ಹೆಚ್ಚು ಆಸಕ್ತಿ ತೋರಲು ಮತ್ತೊಂದು ಕಾರಣವೂ ಇದೆ.ಅದೆಂದರೆ ಇತ್ತೀಚೆಗೆ ಅವರಿಗೆ ತಲುಪಿರುವ ವರದಿ. ಅದರ ಪ್ರಕಾರ:ಕರ್ನಾಟಕದಲ್ಲಿ ಚುನಾವಣೆ ನಡೆದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 145 ರಿಂದ 155 ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ.ಈ ಪೈಕಿ ಬಿಜೆಪಿ 95 ರಿಂದ 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ,ಜೆಡಿಎಸ್ 50 ರಿಂದ 55 ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ. ಒಂದು ವೇಳೆ ಮೈತ್ರಿ ಇಲ್ಲದೆ ಚುನಾವಣೆಗೆ ಹೋದರೆ ಬಿಜೆಪಿ 60 ಕ್ಷೇತ್ರಗಳಿಗೆ ಲಿಮಿಟ್ ಆದರೆ ಜೆಡಿಎಸ್ 25 ಕ್ಷೇತ್ರಗಳಿಗೆ ಲಿಮಿಟ್ ಆಗುತ್ತದೆ. ಅರ್ಥಾತ್,ಕರ್ನಾಟಕದ ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಸಾಧಿಸದೆ ಸ್ವಯಂಬಲದ ಮೇಲೆ ಗೆಲ್ಲುವುದು ಕಷ್ಟ ಎಂಬುದು ಬಿಜೆಪಿ ವರಿಷ್ಟರಿಗಿರುವ ಮಾಹಿತಿ.
ಪರಿಣಾಮ? ಜೆಡಿಎಸ್ ಜತೆಗಿನ ಮೈತ್ರಿಗೆ ಆದ್ಯತೆ ನೀಡುತ್ತಿರುವ ಬಿಜೆಪಿ ವರಿಷ್ಟರು ಈ ಬಾರಿ ಮೋದಿಯವರ ಕರ್ನಾಟಕ ಭೇಟಿಯ ಸಂದರ್ಭದಲ್ಲಿ ಕೊಡಬೇಕಾದ ಮೆಸೇಜು ಕೊಟ್ಟಿದ್ದಾರೆ. ಅರ್ಥಾತ್,ಮೋದಿಯವರು ಕರ್ನಾಟಕಕ್ಕೆ ಬಂದಾಗ ಅವರನ್ನು ಸ್ವಾಗತಿಸಲು ಮತ್ತು ಬೀಳ್ಕೊಡಲು ಜೆಡಿಎಸ್ ನಾಯಕರು ಇರುವಂತೆ ನೋಡಿಕೊಂಡಿದ್ದಾರೆ.
ಲಾಸ್ಟ್ ಸಿಪ್ (Political analysis)
ಅಂದ ಹಾಗೆ ಈ ಹಿಂದೆ ಕರ್ನಾಟಕಕ್ಕೆ ಬಂದಾಗಲೆಲ್ಲ ಸಿದ್ದು ಸರ್ಕಾರದ ವಿರುದ್ಧ ಗುಡುಗುತ್ತಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಕೂಲ್ ಆಗಿದ್ದಾರೆ. ಹೀಗವರು ಕೂಲ್ ಅಗಲು ಆಪ್ತರು ನೀಡಿದ ಸಲಹೆಯೇ ಕಾರಣ.ನೀವು ಕರ್ನಾಟಕಕ್ಕೆ ಬಂದಾಗಲೆಲ್ಲ ಸಿಎಂ,ಡಿಸಿಎಂ ವಿರುದ್ದ ಮುಗಿಬೀಳುತ್ತಿದ್ದರೆ ಅವರಿಗೆ ಒಂದು ವಾರಕ್ಕಾಗುವಷ್ಡು ಆಹಾರ ನೀಡಿದಂತಾಗುತ್ತದೆ.ಅಷ್ಟೇ ಯಾಕೆ?ಕಾಂಗ್ರೆಸ್ಸಿನ ಸಣ್ಣ ಪುಟ್ಟ ನಾಯಕರಿಗೂ ವೇದಿಕೆ ಕೊಟ್ಟಂತಾಗುತ್ತದೆ.
ಹೀಗೆ ಅವರಿಗೆ ಫುಡ್ಡು ನೀಡುತ್ತಿದ್ದರೆ ಅವರ ಪಕ್ಷದ ಪರ ಪ್ರಚಾರಕ್ಕೆ ನೀವೇ ಅವಕಾಶ ಕೊಟ್ಟಂತೆ.ಆದ್ದರಿಂದ ಸಿಎಂ,ಡಿಸಿಎಂ ವಿಚಾರದಲ್ಲಿ ಆದಷ್ಟೂ ಮೌನವಾಗಿರಿ.ಕೇಂದ್ರ ಸಚಿವರಾಗಿ ನಿಮ್ಮ ಕೆಲಸದ ಮೇಲೆ ಕಾನ್ ಸಂಟ್ರೇಟ್ ಮಾಡಿ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಯ ಕನಸು ಚಿಗುರೊಡೆದಿರುವಾಗ ನಿಮ್ಮ ಪಕ್ಷವನ್ನು ಗಟ್ಟಿ ಮಾಡಿಕೊಳ್ಳಿ ಎಂಬುದು ಆಪ್ತರ ಸಲಹೆ. ಅವರ ಈ ಸಲಹೆ ಕುಮಾರಸ್ವಾಮಿಯವರಿಗೂ ಹೌದು ಎನ್ನಿಸಿದೆ.ಹೀಗಾಗಿ ಅವರು ಇದ್ದಕ್ಕಿದ್ದಂತೆ ಥಂಡಾ ಥಂಡಾ ಕೂಲ್ ಕೂಲ್ ಆಗಿದ್ದಾರೆ.
ಆರ್.ಟಿ.ವಿಠ್ಠಲಮೂರ್ತಿ