ಹರಿಹರ: ನಾಯಿ ದಾಳಿಯಿಂದ ತಪ್ಪಿಸಿಕೊಳ್ಳುವ ಸಮುಯದಲ್ಲಿ ಬಾಲಕನೊಬ್ಬ ಚರಂಡಿಗೆ ಬಿದ್ದು ತೀವ್ರ ಗಾಯಗೊಂಡಿದ್ದು, ಈ ಹಿನ್ನಲೆಯಲ್ಲಿ ಪೋಷಕರ ದೂರಿನ ಆಧಾರದಲ್ಲಿ ನಗರಸಭೆ ಪೌರಾಯುಕ್ತ ಹಾಗೂ ಪರಿಸರ ಇಂಜಿನಿಯರ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಪ್ರಶಾಂತನಗರದ ವಾಸಿ ಕೂಲಿ ಕೆಲಸಗಾರ ಮೈನುದ್ದೀನ್ ಖಾನ್ ಇವರ ಪುತ್ರ ಮೊಹ್ಮದ್ ಅಲಿ ಖಾನ್ (13) ಗಾಯಗೊಂಡವರು.
ಆ.21 ರಂದು ಸಂಜೆ 7.30ಕ್ಕೆ ಪ್ರಶಾಂತನಗರದಲ್ಲಿ ಮನೆ ಸಮೀಪ ನಾಯಿಗಳ ಹಿಂಡು ದಾಳಿ ನಡೆಸಿವೆ. ನಾಯಿಗಳಿಂದ ತಪ್ಪಿಸಿಕೊಳ್ಳವ ವೇಳೆ ಚರಂಡಿಗೆ ಬಿದ್ದ ಗಾಯಗೊಂಡ ತೀವ್ರತೆಯಿಂದಾಗಿ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.ದಾವಣಗೆರೆ ಸಿ.ಜಿ.ಆಸ್ಪತ್ರೆ ನಂತರ ಎಸ್.ಎಸ್.ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಬಾಲಕ ಚಿಕಿತ್ಸೆಗಾಗಿ 50 ಸಾವಿರ ರೂ ಖರ್ಚಾಗಿದೆ. ತಲೆಯೊಳಗೆ ಸಂಪರ್ಕ ಹೊಂದಿರುವ ಸೂಕ್ಷ್ಮ ಮೂಳೆಯ ಶಸ್ತ್ರ ಚಿಕಿತ್ಸೆಯನ್ನು ಆರು ತಿಂಗಳ ನಂತರ ಮಾಡಿಸಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆಂದು ಬಾಲಕನ ತಂದೆ ಮೈನುದ್ದೀನ್ ಖಾನ್ ಪತ್ರಕರ್ತರಿಗೆ ತಿಳಿಸಿದರು.
Read also : ಬೀದಿ ನಾಯಿಗಳ ಹಾವಳಿ : ಸ್ಥಳಾಂತರಕ್ಕೆ ಡಿಸಿಗೆ ಮನವಿ
ಪ್ರಶಾಂತನಗರವೂ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಇರುವ ಬೀದಿ ನಾಯಿ ಕಾಟ ತಪ್ಪಿಸಲು ನಗರಸಭೆಗೆ ಹಲವು ಬಾರಿ ಈ ಭಾಗದ ಸಾರ್ವಜನಿಕರು, ಸಂಘಸಂಸ್ಥೆಯವರು ಹಲವು ಬಾರಿ ಮನವಿ ನೀಡಿದ್ದರೂ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ತಮ್ಮ ಬೇಸರ ವ್ಯಕ್ತಪಡಿಸಿದರು.