ದಾವಣಗೆರೆ ಸೆ.17: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಇದೇ ಸೆ. 22 ರಿಂದ ಅ. 7 ರವರೆಗೆ 16 ದಿನಗಳ ಕಾಲ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.
ಸೆ.22 ರಿಂದ ಸಮೀಕ್ಷಾ ಕಾರ್ಯ ಆರಂಭವಾಗುವುದರಿಂದ ಈಗಾಗಲೇ ಕುಟುಂಬಗಳ ಸಂಖ್ಯೆ ಹಾಗೂ ಬೆಸ್ಕಾಂ ಇಲಾಖೆ ಸಹಯೋಗದೊಂದಿಗೆ ಆರ್.ಆರ್. ಸಂಖ್ಯೆಗೆ ಅನುಗುಣವಾಗಿ ಒಟ್ಟು 4,91,981 ಕುಟುಂಬಗಳಿಗೆ ಜಿಯೋಟ್ಯಾಗ್ ಮಾಡಲಾಗಿದೆ. ಸಮೀಕ್ಷಾ ಕಾರ್ಯವನ್ನು ವ್ಯವಸ್ಥಿತ ಮತ್ತು ಸುಗಮವಾಗಿ ಯಶಸ್ವಿಗೊಳಿಸಲು ಗ್ರಾಮೀಣ ಪ್ರದೇಶದ ಕುಟುಂಬಗಳ ಆಶಾ ಕಾರ್ಯಕರ್ತೆಯರಿಂದ ಹಾಗೂ ನಗರ ಪ್ರದೇಶಗಳಲ್ಲಿ ದ್ವಿತೀಯ ಪಿಯುಸಿ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪ್ರತಿ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಅಲ್ಲದೇ ಪ್ರತ್ಯೇಕ ಆಪ್ ಕೂಡ ಸಿದ್ದಪಡಿಸಲಾಗಿದ್ದು, ಈ ಮೂಲಕ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 4,52,224 ಮನೆಗಳಿದ್ದು, ಅಲೆಮಾರಿ, ಅರೆ ಅಲೆಮಾರಿ ಹಾಗೂ ಆರ್.ಆರ್ ಸಂಖ್ಯೆಗಳಿಲ್ಲದ ಮನೆ, ಕುಟುಂಬಗಳನ್ನು ಗುರುತಿಸಿ ಮಾಹಿತಿ ಪಡೆಯಲಾಗಿದೆ. ಇನ್ನುಳಿದ ನಾಗರೀಕರು ಸಮೀಕ್ಷಾ ಕಾರ್ಯದ ವೇಳೆ ಸಿಬ್ಬಂದಿಗಳಿಗೆ ತ್ವರಿತವಾಗಿ ಮಾಹಿತಿ ನೀಡಿ ಸಮೀಕ್ಷೆಗೆ ಸಹಕರಿಸಬೇಕು ಎಂದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳುವ ಗಣತಿದಾರರಿಗೆ, ಮೇಲ್ವಿಚಾರಕರಿಗೆ ಸಮೀಕ್ಷಾ ಕಾರ್ಯ, ಸರ್ವೇ ಅಪ್ಲಿಕೇಷನ್ ಕುರಿತು 90 ಮಾಸ್ಟರ್ ಟ್ರೈನರ್‍ಗಳಿಂದ ತರಬೇತಿ ನೀಡಲಾಗಿದೆ. ಸಮೀಕ್ಷಾ ಕಾರ್ಯವನ್ನು ವ್ಯವಸ್ಥಿತ ಮತ್ತು ಸುಗಮವಾಗಿ ನಡೆಸಲು ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯ ಭೌತಿಕ ಮತ್ತು ಆನ್ ಲೈನ್ ಆಪ್ ಮೂಲಕ ನಡೆಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಪಾಲಿಕೆ ಆಯುಕ್ತರು, ಪುರಸಭೆ ಮತ್ತು ನಗರಸಭೆ ಮುಖ್ಯಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಸಮೀಕ್ಷೆಗೆ ಮೊಬೈಲ್ ಆಪ್ ಸಿದ್ದತೆ:
ಈ ಸಮೀಕ್ಷೆನ್ನು ಭೌತಿಕವಾಗಿ ಮತ್ತು ಆನ್ ಲೈನ್ ಮೂಲಕ ನಡೆಸಲಾಗುವುದು. ಅದಕ್ಕಾಗಿ ಮೊಬೈಲ್ ಆಪ್ ಕೂಡ ಸಿದ್ದಪಡಿಸಲಾಗಿದೆ. ಇದು ತುಂಬಾ ಸುಲಭವಾಗಿದ್ದು, ಮೊಬೈಲ್ ಆಪ್‍ನಲ್ಲಿಯೇ ಮಾಹಿತಿಯನ್ನು ಸಲ್ಲಿಸಬಹುದು. ಸರ್ವೇ ಮಾಡುವ ಸಂದರ್ಭದಲ್ಲಿ ಏನಾದರೂ ತಾಂತ್ರಿಕ ದೋಷ ಅಥವಾ ಸಮಸ್ಯೆಗಳು ಉಂಟಾದಲ್ಲಿ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು. ಈ ವೇಳೆ ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಆಯೋಗದ ಗಮನಕ್ಕೆ ತಂದು ತ್ವರಿತವಾಗಿ ಸರಿಪಡಿಸುವ ಕಾರ್ಯ ಮಾಡಲಾಗುವುದು.
ಸಮೀಕ್ಷೆಗೆ 3876 ಗಣತಿದಾರರು:
ಜಿಲ್ಲೆಯಲ್ಲಿ ಕುಟುಂಬ ಸಂಖ್ಯೆಗಳಿಗೆ ಅನುಗುಣವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಚನ್ನಗಿರಿ ತಾಲ್ಲೂಕಿಗೆ 727, ದಾವಣಗೆರೆ 1626, ಹರಿಹರ 578, ಜಗಳೂರು 387, ಹೊನ್ನಾಳಿ 352, ನ್ಯಾಮತಿ 207 ಸೇರಿದಂತೆ ಒಟ್ಟು 3876 ಗಣತಿದಾರರನ್ನು ನೇಮಿಸಲಾಗಿದೆ. ಗಣತಿ ಕಾರ್ಯಕ್ಕೆ ಸರ್ಕಾರಿ ಮತ್ತು ಅನುದಾನಿತ ಶಾಲೆಯ 9 ಮತ್ತು 10ನೇ ತರಗತಿಗೆ ಬೋಧಿಸುವ ಶಿಕ್ಷಕರು ಮತ್ತು ಅಂಗವಿಕಲ ಶಿಕ್ಷಕರನ್ನು ಹೊರತುಪಡಿಸಿ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟು ಸಿಬ್ಬಂದಿಗಳಿಗೆ ಅನಿವಾರ್ಯ ಅಥವಾ ಹೆಚ್ಚುವರಿ ಕಾರ್ಯಕ್ಕೆ ಅವಶ್ಯಕತೆ ಹಾಗೂ ಆರೋಗ್ಯದ ಹಿತದೃಷ್ಠಿಯಿಂದ ಶೇ.10 ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ಕಾಯ್ದಿರಿಸಲಾಗಿದೆ. ಈ ಪೈಕಿ 150 ಕುಟುಂಬಗಳಿಗೆ ಒಬ್ಬ ಗಣತಿದಾರ ಮತ್ತು 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರಂತೆ ಒಟ್ಟು 273 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
Read also : ಶೀಘ್ರವೇ ಶಿಕ್ಷಕರ ನೇಮಕಾತಿ : ಸಚಿವ ಎಸ್.ಮಧು ಬಂಗಾರಪ್ಪ
ಜಿಲ್ಲಾ ಪಂಚಾಯತ್ ಸಿಇಓ ಗಿತ್ತೆ ಮಾಧವ ವಿಠಲ ರಾವ್ ಮಾತನಾಡಿ, ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸುವ ಸಲುವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತು ಗ್ರಾಮೀಣ ಮಟ್ಟದಲ್ಲಿ ಪಿಡಿಓ, ಕರ ವಸೂಲಿಗಾರ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಒಬ್ಬ ವ್ಯಕ್ತಿಯಾಗಲೀ, ಕುಟುಂಬವಾಗಲಿ ತಪ್ಪಿ ಹೋಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಹೊಲ, ತೋಟಗಳಲ್ಲಿ ವಾಸಿಸುವ ಕುಟುಂಬಗಳು ಸಹ ಯಾವುದೇ ಕಾರಣಕ್ಕೂ ಸಮೀಕ್ಷೆಯಿಂದ ಹೊರಗುಳಿಯದಂತೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇಣುಕಾದೇವಿ ಇದ್ದರು.
