ದಾವಣಗೆರೆ ಸೆ.18: ಪೌಷ್ಠಿಕ ಆಹಾರ ತಯಾರಿಕೆಯು ತಾಯಂದಿರ ಜವಾಬ್ದಾರಿಯಾಗಿದ್ದು ಇಡೀ ಕುಟುಂಬ ಅವರು ತಯಾರಿಸುವ ಪೌಷ್ಠಿಕ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಬೀದಿ ಬದಿಯ ಜಂಕ್ ಫುಡ್ ತಿನ್ನುವುದರ ಬದಲಾಗಿ ಪೌಷ್ಠಿಕತೆಯುಕ್ತ ಆಹಾರ ಸೇವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ ಕರೆಣ್ಣವರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇವರ ಸಹಯೋಗದಲಿ ಇತ್ತೀಚೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಮಾಡುವುದರ ಜೊತೆಗೆ ನಿಸರ್ಗದಲ್ಲಿ ಕಾಲಕಾಲಕ್ಕೆ ದೊರೆಯುವ ಹಣ್ಣು -ತರಕಾರಿ ಸೇವಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುವುದಲ್ಲದೆ, ರೋಗಗಳು ಕಾಣಿಸಿಕೊಂಡಾಗಲೂ ಬೇಗ ಗುಣಮುಖರಾಗಲು ಸಾಧ್ಯವಿದೆ ಎಂದ ಅವರು, ಊಟದ ವಿಷಯದಲ್ಲಿ ಗಂಡು ಹೆಣ್ಣು ಎಂದು ತಾರತಮ್ಯ ಮಾಡದೆ ಎಲ್ಲರೂ ಸರಿಯಾದ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ಸೇವಿಸಬೇಕು ಎಂದರು.
Read also : ಹರಿಹರ|ರೈತರೊಂದಿಗೆ ಅನುಚಿತ ವರ್ತನೆ : ಪ್ರತಿಭಟನೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಅಪೌಷ್ಠಿಕತೆಯಿಂದಾಗಿ ಹಲವಾರು ಅನಾರೋಗ್ಯದ ಪರಿಸ್ಥಿತಿಗಳು ಉದ್ಭವಿಸಿ, ವಯಸ್ಸು ಹಾಗೂ ಲಿಂಗದ ಭೇದವಿಲ್ಲದೆ ಎಲ್ಲರೂ ಸಂಕಷ್ಟಕ್ಕೆ ಒಳಗಾಗುತ್ತಾರೆ. ಗರ್ಭಿಣಿ ಮಹಿಳೆಯರು ಪೌಷ್ಠಿಕ, ಗುಣಮಟ್ಟದ ಆಹಾರ ಸೇವನೆ ಮಾಡಬೇಕು. ಇದರಿಂದ ಹುಟ್ಟುವ ಮಗುವಿನ ಆರೋಗ್ಯ ಹಾಗೂ ಪೌಷ್ಠಿಕ ಮಟ್ಟ ನಿರ್ಧಾರವಾಗುತ್ತದೆ. ರಕ್ತ ಹೀನತೆಯು ಗರ್ಭಿಣಿ, ಬಾಣಂತಿ ಹಾಗೂ ಕಿಶೋರಿಯರಲ್ಲಿ ಒಂದು ಜ್ವಲಂತ ಸಮಸ್ಯೆಯಾಗಿದ್ದು, ಪ್ರತಿ ದಿನ ಸಮತೋಲನ ಪೌಷ್ಠಿಕತೆ ಆಹಾರವನ್ನು ಸೇವಿಸುವುದರಿಂದ ಮಾತ್ರ ಪರಿಣಾಮಕಾರಿಯಾಗಿ ರಕ್ತ ಹೀನತೆಯನ್ನು ತಡೆಗಟ್ಟುವುದರ ಜೊತೆಗೆ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಮಾತನಾಡಿ, ಗರ್ಭಿಣಿ ಬಾಣಂತಿ ಮತ್ತು ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಮಕ್ಕಳ ಪಾಲನೆ, ಪೋಷಣೆ ಮೇಲೆ ಹೆಚ್ಚು ಗಮನಹರಿಸಬೇಕು. ಮಕ್ಕಳ ರಕ್ಷಣೆ ಮತ್ತು ಆರೋಗ್ಯಕರವಾದ ಜೀವನ ನಡೆಸಬೇಕೆಂದು ತಿಳಿಸಿದರು.
ಹೊನ್ನೂರು ಪ್ರಾಥಮಿಕ ವೈದ್ಯಾಧಿಕಾರಿ ಡಾ.ಎಂ.ಕೆ.ತೃಪ್ತಿ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ದೇವರಾಜ್ ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಎಸ್.ಅಭಿಕುಮಾರ್,. ಮೇಲ್ವಿಚಾರಕರಾದ ವಿದ್ಯಾ, ಹೆಚ್.ಕವಿತಾ ಹಾಗೂ ಕಛೇರಿಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.
