ದಾವಣಗೆರೆ : ‘ರಾಜ್ಯ ಸರ್ಕಾರದ ಒಳ ಮೀಸಲಾತಿ ಅಲೆಮಾರಿಗಳ ಭವಿಷ್ಯವನ್ನು ಆತಂಕಕ್ಕೆ ತಳ್ಳಿದ್ದು, ಸೂಕ್ತ ಮೀಸಲಾತಿಗಾಗಿ ಆಗ್ರಹಿಸಿ, ಅಲೆಮಾರಿಗಳ ಒಕ್ಕೂಟದಿಂದ ಅ.2 ರಂದು ‘ದೆಹಲಿ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪರಿಶಿಷ್ಟ ಜಾತಿ ಅಲೆಮಾರಿಗಳು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ 49 ಜಾತಿಗಳ ಮಹಾ ಒಕ್ಕೂಟದ ದಾವಣಗೆರೆ ಜಿಲ್ಲಾ ಸಂಚಾಲಕ ಡಿ.ತಿಪ್ಪಣ್ಣ ತಿಳಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಒಳ ಮೀಸಲಾತಿ ಅಧ್ಯಯನ ನಡೆಸಿ, ಎಂಪಿರಕಲ್ ಡಾಟಾ (ದತ್ತಾಂಶ) ಆಧರಿಸಿ ವೈಜ್ಞಾನಿಕ ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಸಿತ್ತು. ವರದಿ ಪರಿಶೀಲಿಸಿ, ಪರಿಷ್ಕರಿಸಿದ ಸರ್ಕಾರ ಅಸ್ಪೃಶ್ಯ ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ ಶೇ 6 ಮತ್ತು ಸ್ಪೃಶ್ಯ ಸಮುದಾಯಗಳಿಗೆ ಶೇ 5ರ ಮೀಸಲಾತಿ ನೀಡಿದೆ.
ಸ್ಪೃಶ್ಯ ಜಾತಿಗಳಾದ ಬೋವಿ ಮತ್ತು ಲಂಬಾಣಿ ಸಮುದಾಯದೊಂದಿಗೆ 59 ಅಲೆಮಾರಿ ಜಾತಿಗಳನ್ನೂ ಸೇರಿಸಿ ಅನ್ಯಾಯ ಮಾಡಲಾಗಿದೆ. ಸಣ್ಣಪುಟ್ಟ ಕಸುಬು ನಂಬಿ ಜೀವಿಸುವ ಅಲೆಮಾರಿಗಳು ಕೂಳಿಗೂ ಪರದಾಡುತ್ತಿದ್ದಾರೆ. ಬಹುತೇಕರು ಭಿಕ್ಷಾಟನೆ ಮಾಡಿ, ಹಗಲು ವೇಷ ಹಾಕಿ, ಕೂಲಿ -ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂದಿಗೂ ಅಲೆಮಾರಿಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೂ ಇಲ್ಲವಾಗಿದೆ. ಇಂಥ ಬಡಪಾಯಿಗಳ ಬದುಕನ್ನು ಸರ್ಕಾರ ಒಳ ಮೀಸಲಾತಿ ಹಂಚಿಕೆಯಲ್ಲಿ ಪ್ರಬಲ ಕೋಮುಗಳೊಂದಿಗೆ ಸೇರಿಸಿ, ಅನ್ಯಾಯ ಮಾಡಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯೋಗದ ವರದಿಯಲ್ಲಿ ಅಲೆಮಾರಿಗಳನ್ನು ಗ್ರೂಪ್ ‘ಎ’ ಗೆ ಸೇರಿಸಿ ಶೇ 1 ರಷ್ಡು ಮೀಸಲಾತಿ ನೀಡಲಾಗಿದ್ದರೂ ಒತ್ಡಡಗಳಿಗೆ ಮಣಿದು, ಲಂಬಾಣಿ, ಬೋವಿ ಜನಾಂಗಗಳೊಂದಿಗೆ ಸೇರಿಸಿದ್ದಾರೆ. ಕೆಲ ಸಚಿವರ, ಸ್ವಾಮೀಜಿಗಳ, ಪ್ರಭಾವಿಗಳ, ಅಧಿಕಾರಿಗಳ ಷಡ್ಯಂತ್ರವೇ ಅಲೆಮಾರಿಗಳಿಗೆ ಅನ್ಯಾಯವಾಗಲು ಕಾರಣವಾಗಿದ್ದು, ಇದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗುವುದು. ಮೀಸಲಾತಿಯಲ್ಲಿನ ಅನ್ಯಾಯದ ವಿರುದ್ಧ ಅ.2ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
