ಸಂವಿಧಾನವನ್ನು ಅಪಾರ್ಥ ಮಾಡಿಕೊಳ್ಳುವವರಿಗಿಂತ, ಅರ್ಥಮಾಡಿಕೊಂಡು ಅಸಹನೆಯನ್ನು ಆಸ್ಫೋಟಿಸುವವರ ಸಂಖ್ಯೆ ಹೆಚ್ಚಾಗ್ತಿರೋದು ಈ ಹೊತ್ತಿನ ದುರಂತ.
ಜಾತ್ಯತೀತತೆ, ಧರ್ಮವನ್ನು ರಾಜಕಾರಣದಿಂದ, ಸಾಹಿತ್ಯದಿಂದ, ಸಾರ್ವಜನಿಕ ಕ್ಷೇತ್ರಗಳಿಂದ ಬೇರ್ಪಡಿಸುವುದೇ ಆಗಿದೆಯೆಂಬುದೇನೋ ನಿಜ. ಆದರೆ ಇಡೀ ವ್ಯವಸ್ಥೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೂ ಸಹ ಭ್ರಷ್ಟವಾಗಿ ಹೋದಾಗ, ಯಕಶ್ಚಿತ್ ಇಲ್ಲಿನ ನೆಲ ,ಜಲ, ಜನರ ಬೆವರನ್ನೆ ನಂಬಿದ ಕಂಪೆನಿಗಳು ಭ್ರಷ್ಟತೆಯಲ್ಲಿ ಮುಳುಗೋದೇನು ಮಹಾ?
ದೇಶದಲ್ಲಿ ದಲಿತನೊಬ್ಬ ತನ್ನ ತುಂಡು ಜಾಗಕ್ಕಾಗಿ ಮೈಮೇಲೆ ಮಲ ಸುರುವಿಕೊಂಡಾಗ, ಸತ್ತ ಹೆಣ ಸಾಗಿಸಲು ದಾರಿ ಕೊಡದೆ ಹೋದಾಗ, ಹೂಳಲು ನೆಲ ಸಿಗದೆ ಹೋದಾಗ ಭಾರತ ಮಾತನಾಡಬೇಕಿತ್ತು. ಭಾರತದ ಅಂತಹ ಮೌನವೇ ಇಂದು ಧರ್ಮಾಂಧರು ಕೊಲೆಗಡುಕರ ರೀತಿಯಲ್ಲಿ ವರ್ತಿಸಲು ಕಾರಣವಾಗಿದೆ. ಕೊರೋನಾದಿಂದ ಪಾಠ ಕಲಿಯದ ಮನುಷ್ಯ,ಹಸಿವಿನಿಂದಲೂ ಬದುಕುವುದು ಅಸಾಧ್ಯ ಎಂಬ ಶ್ರಮಿಕರ ಸಂಕಟವೂ ಕೂಡ ಧರ್ಮಾಧಾರಿತ ಭಾರತಕ್ಕೆ ಸಂಭ್ರಮದಂತೆ ಗೋಚರಿಸುತ್ತಿದೆ. ಪುಟ್ಟ ಪುಟ್ಟ ಹಳ್ಳಿಗಳು ಜಾತಿ, ಧರ್ಮಗಳಾಚೆಗಿನ ಬದುಕನ್ನು ಕಟ್ಟಿಕೊಂಡಿರುವುದರಿಂದಲೇ ಈ ಹೊತ್ತು ಭಾರತವಿನ್ನೂ ಉಸಿರಾಡುತ್ತಿದೆ.
ನನ್ನೂರಿನ ತಳವಾರಗಡ್ಡಿ, ಮ್ಯಾಸಿಗ್ಗೇರಿ, ಕುರುಬರ ಓಣಿ, ಮಾದ್ರೋಣಿ, ಕುಂಬಾರೋಣಿ, ಗೌಡ್ರೋಣಿಗಳ ಎಲ್ಲ ಬೇಸಾಯಗಾರರಿಗೆ ಹಂಪಾಪಟ್ಣದ ನನ್ನೇಸಾಬು ಪರಿಚಿತ ವ್ಯಕ್ತಿ. ಊರ ಹಿರೇಕೆರೆ ತುಂಬಿ ಕೋಡಿ ಬಿದ್ದಾಗಿನಿಂದ ಹಿಡಿದು ನೀರನ್ನು ಬಳಕೆ ಮಾಡುವ ಬಗೆಯನ್ನು ನೀರಗಂಟಿ ಗೊರವಯ್ಯ ಮಲ್ಲಪ್ಪನಿಗೆ ಹೇಳಬಲ್ಲವರಾಗಿದ್ದರು. ಒಂದು ಸಾದಾ ಅಂಗಿ, ಲುಂಗಿ ತೊಡುವ, ತಲೆ ಮ್ಯಾಲೊಂದು ಟವೆಲ್ಲಿನಂತದು ಬಟ್ಟೆಯ ತುಂಡು, ಸರಳ ಮತ್ತು ಮೆದು ಮಾತಿನ ಕುರುಚಲು ಬಿಳಿ ಗಡ್ಡದ ನನ್ನೇಸಾಬು ನಮಗೆಲ್ಲ ಆ ಕಾಲಕ್ಕೆ ಯಾರೋ ಸಂತನಂತೆ ಕಾಣಿಸುತ್ತಿದ್ದರು.
ಅವರ ಮಗ ಹೆಚ್.ಷೆಕ್ಷಾವಲಿಯೂ ನಾನೂ ಒಂದನೇ ಕ್ಲಾಸಿಂದ ಎಂಟನೇ ಕ್ಲಾಸಿನವರೆಗೂ ಕ್ಲಾಸ್ಮೇಟ್ ಆಗಿದ್ದೆವು. ಅವರ ಮನೆಯ ದೊಡ್ಡದಾದ ಹಿತ್ತಿಲಿನಲ್ಲಿ ನೂರಾರು ಕುರಿಗಳ ಅರಚುವಿಕೆ, ಹಿಕ್ಕೆ, ಹಸಿ ತಪ್ಪಲು, ಹುಲ್ಲಿನ ವಾಸನೆಯಿಂದ ತುಂಬಿರುತ್ತಿತ್ತು. ಮುಂಜಾನೆಯ ಆರು ಗಂಟೆಯ ಹೊತ್ತಿಗೆಲ್ಲ ಗೌಡ್ರ ಬಸಣ್ಣರ ಹೋರಿಗಳೋ ಇಲ್ಲವೇ ಮಾದರ ಊರಪ್ಪನ ಎತ್ತೋ ಮನೆಮುಂದೆ ನಿಂತಿರುತ್ತಿದ್ದವು. ಸಾಲದ್ದಕ್ಕೆ ನನ್ನೇಸಾಬರು ಕುರಿ ಮೇಯಿಸಲು ಕಾಡು ಮೇಡು ಗುಡ್ಡ ಅಲೆಯುವಾಗ ಸಂಗ್ರಹಿಸಿದ ಆ ತಪ್ಪಲು, ಈ ತಪ್ಪಲುಗಳನ್ನು ರುಬ್ಬಲು ನಾಮುಂದು ತಾ ಮುಂದು ಎಂದು ಬರುವ ಎಷ್ಟೋ ಜನ ವಾಲೆಂಟರಿಯರ್ಸ್ಗಳೂ ಇದ್ದರು.
Read Also: Caste survey|ಜಾತಿ ಸಮೀಕ್ಷೆ :ಯಾಕೆ ಬೇಕು ?-2
ಉಪ್ಪು, ಹಸಿ ತಪ್ಪಲುಗಳಿಗೆ, (ಪುಟ್ಲಾಸು(ಸೀತಾಫಲ) ಹಣ್ಣಿನ ಮರದ ತಪ್ಪಲು) ಮತ್ತಿನ್ನೇನೋ ಹಾಕಿ ಬಿದಿರಿನ ಗೊರಟದಿಂದ ದನಗಳ ಬಾಯಿಗೆ ಕುಡಿಸುತ್ತಿದ್ದರು. ಒಂದೆರೆಡು ದಿನ ನೇಗಿಲು ಹೂಡಬಾರದೆಂದೂ ಎಚ್ಚರಿಸಿ ಕಳುಹಿಸುತ್ತಿದ್ದರು. ಕೆಲ ದಿನಗಳಾದ ಮೇಲೆ ಹೊಲಕ್ಕೆ ಹೋಗುವಾಗ ಅದೇ ಎತ್ತು,ಆಕಳು- ಕರುಗಳು ದಾರಿಯಲ್ಲಿ ಕುರಿಹಿಂಡಿನೊಂದಿಗೆ ಸಾಗುತ್ತಿದ್ದ ತಮ್ಮ ಡಾಕ್ಟರು ನನ್ನೇಸಾಬುರನ್ನು ನೋಡಿ ಕಣ್ಣುಗಳಿಂದಲೆ ಕೃತಜ್ಞತೆ ಅರ್ಪಿಸುತ್ತಿದ್ದವು. ಇಂತವುಗಳಿಗೆಲ್ಲ ನಯಾಪೈಸೆಯನ್ನೂ ನನ್ನೇಸಾಬು ತೆಗೆದುಕೊಳ್ಳುತ್ತಿದ್ದಿಲ್ಲ. ಊರಿನ ಊರಮ್ಮನ ಜಾತ್ರೆಯಿರಲಿ, ಸೊಲ್ಲಮ್ಮನದೇ ಇರಲಿ, ಹೊನ್ನೂರು ಸ್ವಾಮಿ ದರ್ಗಾದ ಉರುಸ್ ಆಗಿರಲಿ, ಮಸೀದಿಯ ಕೆಲಸಗಳೇ ಆಗಿರಲಿ, ಎಲ್ಲವನ್ನೂ ತೆರೆದ ಅಂಗಳದಲ್ಲಿಯೇ ಚರ್ಚಿಸುತ್ತಿದ್ದರು. ಆ ಮಾತು ಕತೆಗಳು ಬಾಲಕರಾಗಿದ್ದ ನನ್ನಂಥವರಲ್ಲಿ ಸೃಷ್ಟಿಸಿದ ಜಾತ್ಯತೀತ ಭಾವ ಅಗಾಧವಾದುದು. ಎಷ್ಟೋ ಜನರಿಗೆ ನನ್ನೇಸಾಬು ಸಾಬರೋ ಹಿಂದುವೋ… ಎಂಬುದೂ ಗೊತ್ತಿರಲಿಲ್ಲ. ಅದರ ಅಗತ್ಯವೂ ಆಗ ಯಾರಿಗೂ ಇರಲೇ ಇಲ್ಲ.
ವಿಧವೆ ಬಸಮ್ಮನಂತಹ ಎಷ್ಟೋ ಜನರ ಮಕ್ಕಳ ಮದುವೆಗಗಳಿಗೆ ಬೇಕಾದ ನೆಲ್ಲನ್ನು ನನ್ನೇ ಸಾಬರು ಉಚಿತವಾಗಿಯೇ ಕೊಡುತ್ತಿದ್ದರು. ಅವರ ನಡುಮನೆಯಲ್ಲಿ ಗುಡಾಣದಂತಹ ನಿಂತ ಹಗೇವು ಸದಾ ತುಂಬಿರುತ್ತಿತ್ತು. ಹೊಟ್ಟೆ ಡುಮ್ಮ ಮನುಷ್ಯನೊಬ್ಬ ನಿಂತಿರುವಂತೆ ತೋರುತ್ತಿತ್ತು. ಅದರ ನಾಭಿಯಂತೆ ತೋರುವ ರಂಧ್ರಕ್ಕೆ ಯಾವಾಗಲೂ ಹಳೆಯ ಬಟ್ಟೆ ತುರುಕಿರುತ್ತಿದ್ದರು. ಆ ಬಟ್ಟೆ ತೆಗೆದರೆ ಸುರಿಯುವ ನೆಲ್ಲನ್ನು ತುಂಬಿಕೊಳ್ಳಬಹುದಿತ್ತು. ಹೀಗೆ ಕೆಳಗೆ ಚೀಲವೊಡ್ಡಿ ನಿಂತ ಅದೆಷ್ಟೋ ಜನರ ಹೊಟ್ಟೆ ತುಂಬಿಸಿದ ನನ್ನೇಸಾಬು, ಎಷ್ಟೋ ಮನೆಗಳ ದನಕರುಗಳ ಜೀವ ಉಳಿಸಿದ ನನ್ನೇಸಾಬು,ಕುರಿ, ಮೇಕೆಗಳ ಜೀವ ಪೊರೆದು ಆ ಮೂಲಕ ಸಣ್ಣ ಕುಟುಂಬಗಳ ಬದುಕಿಗೆ ಆಸರೆಯಾದ ನನ್ನೆಸಾಬು, ಊರಮ್ಮ, ಗುಳೆಲಕ್ಕಮ್ಮರ ಜಾತ್ರೆಗಳಿಗೆ ಮುಹೂರ್ತ ಫಿಕ್ಸ್ ಮಾಡುತ್ತಿದ್ದ, ಮೌನವಾಗಿ ಅಲ್ಲಾನನ್ನು, ಹೊನ್ನೂರುಸ್ವಾಮಿಯನ್ನೂ ಆರಾಧಿಸುತ್ತಿದ್ದ ನನ್ನೇಸಾಬು,ಎದುರಿಗೆ ಕಂಡವರಿಗೆ ಕೈಯೆತ್ತಿ ಮುಗಿದು ಮನೆಮಂದಿ ಕುಶಲ ವಿಚಾರಿಸಿದ ನನ್ನೇಸಾಬು, ನನ್ನ ಕಾಲದ ಬಹುದೊಡ್ಡ ಜೀವಪ್ರೇಮಿ. ಕೋಮುವಾದದ ಸಂಘರ್ಷಗಳ ಈ ಕಾಲಕ್ಕೆ ಹೋಲಿಸಿದರೆ ಆತ ಮಹಾನ್ ಸಂತನ ಹಾಗೆ ತೋರುತ್ತಾರೆ.
ನನ್ನಂತವರಿಗೆ ಸಿಕ್ಕ ಇಂತಹ ಬಾಲ್ಯ,ನನ್ನ ಮಕ್ಕಳ ಕಾಲಕ್ಕೆ ಇಲ್ಲವಾಯಿತು. ಅಂಗಡಿಗೆ ಹೋದ ಮಕ್ಕಳು ಬರುವುದು ಸ್ವಲ್ಪ ತಡವಾದರೂ ಆತಂಕಪಡುವ ದುರ್ದಿನಗಳಿಗೆ ನಾವಿಂದು ಕಾಲಿಟ್ಟಿದ್ದೇವೆ. ಬಹುಸಂಖ್ಯಾತ ಹಿಂದುತ್ವದ ಅಮಲು,ಅಲ್ಪಸಂಖ್ಯಾತರ ಕೋಮುವಾದ ಹಚ್ಚಿರುವ ಈ ಬೆಂಕಿಯಲ್ಲಿ ಬಹುಸಂಖ್ಯಾತ ಸಮುದಾಯಗಳ ಅಹಂಕಾರ ಮತ್ತು ಅಲ್ಪಸಂಖ್ಯಾತರ ಅಂಧ ನಡವಳಿಕೆಗಳು ಬದುಕನ್ನು ಅಸಹನೀಯಗೊಳಿಸುತ್ತಿವೆ. ಯಾವ ಮಕ್ಕಳೂ ಬಲಿಯಾಗದಿರಲಿ ಎಂದು ಮನದುಂಬಿ ಹಾರೈಸುವ ಹಿರಿಯರ ಸಂಖ್ಯೆಯೂ ಕಡಿಮೆಯಾಗುತ್ತಿರುವುದು,ಮತ್ತು
ನಾವುಣ್ಣುವ ಊಟ, ಆಡುವ ಮಾತು, ತೊಡುವ ಬಟ್ಟೆ, ನಮ್ಮ ನಡಿಗೆ, ಸಂಪ್ರದಾಯಗಳೂ ಕೂಡ ದಿನನಿತ್ಯದ ಟೀಕೆಗಳಿಗೆ ಗುರಿಯಾಗಿರುವುದು ಆರೋಗ್ಯಕರ ಲಕ್ಷಣವಲ್ಲ. ರಾಮನೂ ಇಲ್ಲದ, ರಹೀಮನೂ ಇಲ್ಲದ ಕಾಲದಲ್ಲಿ ಮುಂಜಾನೆದ್ದು ಎದುರಿನ ಸೂರ್ಯದೇವನಿಗೆ ನಮಸ್ಕರಿಸಿ ಗಳೇವು ಹೊಡಕೊಂಡು ಹೋಗುತ್ತಿದ್ದ ಅಪ್ಪ, ದಾರಿಯಲ್ಲಿ ಕುರಿ ಹಿಂಡುಗಳೊಂದಿಗೆ ಸಾಗುವ ನನ್ನೇಸಾಬು…ಮತ್ತೆ ಮತ್ತೆ ನೆನಪಾಗುತ್ತಾರೆ.
***
ಪುಲ್ವಾಮ ದಾಳಿಯಲ್ಲಿ ಭಾರತೀಯ ಸೈನಿಕರು ಹತರಾದರು.ಆ ಕ್ಷಣ ಸಹಜವಾಗಿಯೇ ಎಲ್ಲರ ದೇಶಪ್ರೇಮ ತುಸು ಹೆಚ್ಚು ಭಾವನಾತ್ಮಕವಾಗಿಯೇ ಸ್ಪಂದಿಸಿತು. ಅಂದು ನಲವತ್ತನಾಲ್ಕು ಹತಭಾಗ್ಯ ಸೈನಿಕರು ಬಲಿಯಾದರು. ಭಾರತ ಮಮ್ಮಲ ಮರುಗಿತು.
ನಮ್ಮೂರಿನ ಸರ್ಕಲ್ಲುಗಳಲಿ ರಾತ್ರಿ ಮೇಣದಬತ್ತಿ ಬೆಳಗಿದವು. ಯಾರೋ ನಲವತ್ತನಾಲ್ಕೂ ಹತಭಾಗ್ಯ ವಿಂಗ್ ಕಮಾಂಡರರ ಚಿತ್ರಪಟಗಳ ಪ್ಲೆಕ್ಸ್ ಹಾಕಿಸಿದ್ದರು. ಅದರಲ್ಲಿ ಒಬ್ಬ ಹತಭಾಗ್ಯ ವಿಂಗ್ ಕಮಾಂಡರನ ಪಟದ ಮುಖ ಕಾಣದಂತೆ ಮಸಿ ಬಳಿಯಲಾಗಿತ್ತು. ಬೆಳಕಿಗೆ ಧರ್ಮವಿಲ್ಲ, ಜಾತಿಯ ಬೇಧವಿಲ್ಲ ಎಂಬುದೆಲ್ಲ ಸುಳ್ಳಾಯಿತು. ಆ ಹತಭಾಗ್ಯ “ಅನ್ಯ”ಧರ್ಮದವನಾಗಿದ್ದ ಎಂಬುದು ಅಲ್ಲಿದ್ದವರ ವಿಶ್ಲೇಷಣೆಯಾಗಿತ್ತು! ಅವತ್ತೇ ನನಗನಿಸಿದ್ದು, ನನ್ನ ದೇಶ ಏನನ್ನೋ ಕಳೆದುಕೊಳ್ಳುತ್ತಿದೆಯೆಂಬಂತೆ, ಯಾರನ್ನೋ ಹೊರನೂಕುತ್ತಿರುವಂತೆ ಭಾಸವಾಗಿತ್ತು. ಆದರೆ ಈ ಹೊತ್ತು,. ನಾನೊಬ್ಬ ಭಾರತೀಯನೆಂಬ ನಂಬಿಕೆಯೂ ಹಾರಿಹೋಗಿ, ಅಭದ್ರತೆಯಲ್ಲಿ ಬದುಕುವ ಯಕಶ್ಚಿತ್ ಪರದೇಸಿ ಜೀವಗಳಾಗಿ ಹೋಗಿದ್ದೇವೆ.
ಗಾಂಧಿ ಸರ್ಕಲ್ಲಿನಲ್ಲಿ ಮೇಣದ ಬತ್ತಿ ಬೆಳಗಿಸಿ ವಂದೇ ಮಾತರಂ ಹಾಡುವಾಗಲೂ ಮುದುಕ ಗಾಂಧಿಯೊಳಗೆ ತೂರಿದ ಗುಂಡು ಇನ್ನೂ ಹಾಗೆ ಇರುವಂತೆ ಕಂಡವು.
ಇಂದಿನ ಮೀಡಿಯಾಗಳ ಭಾರತಕ್ಕೆ ಸ್ವಲ್ಪವಾದರೂ ಶಬ್ದಗಳ ಲಜ್ಜೆತನವಿರಬೇಕಿತ್ತು.ತಮಗೆ ತಾವೇ ಉನ್ಮತ್ತರಂತೆ ಅರಚುವ, ಬುದ್ದಿವಂತ ವಿಶ್ಲೇಷಕರೆಂಬ ಭ್ರಮಾಲೋಕದಲ್ಲಿ ತೇಲುವವರಿಗೆ ಹಳ್ಳಿಗಳಲ್ಲಿ, ಕಮ್ಮಾರ ಕರೀಮನ ಕುಲುಮೆಗೆ ಗಾಳಿಯೂದುವವನು ಕುರುಬರ ಯಲ್ಲಪ್ಪನೋ ಬ್ಯಾಡರ ಕಲ್ಲಪ್ಪನೋ ಆಗಿರುತ್ತಾನೆ ಎಂಬುದರ ಅರಿವಿರುವುದಿಲ್ಲ.
ಉನ್ಮತ್ತತೆ ಮತ್ತು ವ್ಯವಸ್ಥೆಗಳ ನಡುವಣ ಸಮತೋಲನ ಕಾಪಾಡಬೇಕಾದ ಜವಾಬ್ದಾರಿ ಹೊರಬೇಕಿದ್ದ ಆಂಕರುಗಳ ಅಣಕ, ಬೌದ್ಧಿಕ ಉದ್ಧಟತನದಿಂದ ಹುಟ್ಟುವಂಥದು.ತಮಗೆ ತಾವೇ ಬುದ್ದಿವಂತರೆನಿಸಿಕೊಂಡು ಆವೇಶ, ಆಕ್ರೋಶಗಳನ್ನು ಹೊರಹಾಕುತ್ತ, ಕಿಡಿಕಾರುತ್ತಲೇ ಮಾತನಾಡುವ ವಾರ್ತಾವಾಚಕರ ಆಂಗಿಕ ಭಾಷೆ ಕೂಡ, ಜನರು ಸೌಹಾರ್ದತೆಯಿಂದ ಬದುಕುವುದನ್ನು ಕೆಡಿಸುತ್ತಿದೆ. ಬಹುಮುಖಿ ಸಮಾಜದ ವಕ್ತಾರರಾಗಬೇಕಿದ್ದ ಮಾಧ್ಯಮ ಸ್ವತಃ ರಣಾಂಗಣದಲ್ಲಿ ಹೋರಾಡಲು ಸಜ್ಜಾಗಿ ನಿಂತಿರುವಂತೆ ತೋರುತ್ತಿದೆ. ಭಾರತದ ಭವಿಷ್ಯದ ದೃಷ್ಟಿಯಿಂದ ಇದು ಖಂಡಿತ ಒಳ್ಳೆಯ ಲಕ್ಷಣವಲ್ಲ.
ಶವ ರಾಜಕಾರಣ, ಈ ಕಾಲ ಸೃಷ್ಟಿಸಿದ ಹೊಸ ಟ್ರೆಂಡ್. ಒಂದು ಧರ್ಮದ ಹುಡುಗನೊಬ್ಬಸತ್ತರೆ ಕಾರಣ ಏನು? ಎಂಬುದನ್ನು ತನಿಖೆ ಮಾಡುವ ಮುನ್ನವೇ ಅನ್ಯಕೋಮಿನವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಸತ್ತವನ ಮನೆಗೆ ತೆರಳಿ ಲಕ್ಷ ಲಕ್ಷಗಟ್ಟಳೆ ಹಣ ಸಂದಾಯ ಮಾಡಲಾಗುತ್ತದೆ. ವಿಚಿತ್ರವೆಂದರೆ, ಭಜರಂಗದಳದ ಯುವಕರು ಧರ್ಮಕ್ಕಾಗಿ ಬಡಿದಾಡುವವರಂತೆ ಕಂಡರೂ ಅವರ್ಯಾರೂ ಕೂಡ ಅಂತರಂಗಿಕವಾಗಿ ಧಾರ್ಮಿಕರಾಗಿರುವುದಿಲ್ಲ. ಅಕ್ಷರಸ್ಥರಾದರೂ ವಿದ್ಯಾವಂತರಲ್ಲದ ಇಂತಹ ಅಮಾಯಕ ಹುಡುಗರ ಸಂಖ್ಯೆ ದಿನೇ ದಿನೇ ಬೆಳೆಯುತ್ತಿರುವುದು ಸಹ ಆತಂಕಕಾರಿ.
ಒಂದು ಧರ್ಮದ ಸಹನೆಯ ನಿಲುವು ,ನಿರ್ಲಿಪ್ತತೆ ಕೂಡ ಕೋಮುವಾದದಲ್ಲಿ ಮುಳುಗಿರುವ ದುಷ್ಟರಿಗೆ ತಳಮಳ ಉಂಟುಮಾಡಬಲ್ಲುದು. ಬೆಂಗಳೂರಿನ ಗೋರಿಪಾಳ್ಯದ ಚಂದ್ರು…ಎಂಬಾತನ ಕ್ಷುಲ್ಲಕ ಕಾರಣಕ್ಕಾದ ಸಾವು ಕೂಡ ಭ್ರಷ್ಟ ರಾಜಕಾರಣದ ಸುಳಿಗೆ ಸಿಕ್ಕು,ಅನ್ಯ ಧರ್ಮದ ಕಡೆಗೆ, ಭಾಷೆಯ ಕಡೆಗೆ ತಿರುಗಿಬಿಡುತ್ತದೆ.ಇದನ್ನೇ ಬಂಡವಾಳ ಮಾಡಿಕೊಂಡ ಮಾಧ್ಯಮಗಳೂ ಗಂಟೆಗಟ್ಟಳೆ ಭೇದಿ ಮಾಡಿಕೊಳ್ಳುತ್ತವೆ!
ಪಾಠ ಕಲಿಸಿದ ಮೇಷ್ಟ್ರು
ರೋಗ ವಾಸಿ ಮಾಡುವ ಡಾಕ್ಟ್ರು,
ಪುಸ್ತಕ ಬರೆದವರು
ಅಷ್ಟೇ ಅಲ್ಲ ,
ಅಣ್ತಮ್ಮಂದಿರು
ಅಕ್ತಂಗೀರು,
ಪ್ರಭುತ್ವ,
ಮೀಡಿಯಾ,
ಪೊಲೀಸು ಕೂಡ
ಉನ್ಮಾದದಲ್ಲಿದೆ.
ನ್ಯಾಯ ಕೂಡ ಉನ್ಮಾದದಲ್ಲಿದೆ!
ಈ ದೇಶವನ್ನು ಕಾಪಾಡುವ ಮುನ್ನ ನಮ್ಮನ್ನು ನಾವು ಕಾಪಾಡಿಕೊಳ್ಳುವ ದಾರಿ ಹುಡುಕಬೇಕಿದೆ. ಯಾವುದೇ ಧರ್ಮದ ಪುರೋಹಿತರು ಸಾರ್ವಜನಿಕ ಅಧಿಕಾರಕ್ಕೆ ಅನರ್ಹರು. ಧಾರ್ಮಿಕ ಉಡುಪು ಸಾರ್ವಜನಿಕವಾಗಿ ತೊಡಬಾರದು.
ಚುನಾವಣಾ ಪ್ರಚಾರಕ್ಕೆ ತೊಡಗಬಾರದು,ದೇವಸ್ಥಾನ ಹೊರತುಪಡಿಸಿ ಬೇರೆಲ್ಲೂ ಪ್ರಾರ್ಥನೆ,ಧರ್ಮಸಭೆ ನಡೆಸಬಾರದು, ನಿಕಟ ರಕ್ತ ಸಂಬಂಧಿಗಳನ್ನು ಹೊರತುಪಡಿಸಿ ಮಿಕ್ಕವರು ನೀಡುವ ದತ್ತಿ, ದಾನ ಸ್ವೀಕರಿಸಬಾರದು ಇತ್ಯಾದಿ…. ಕಠಿಣ ನಿಯಮಗಳು. ಇಂತಹ ಪುರೋಹಿತ ವಿರೋಧಿ ಕಾನೂನು ಜಾರಿಗೆ ಬಂದಿದ್ದು ಮೆಕ್ಸಿಕೋದಲ್ಲಿ ನಡೆದ ಕ್ರಿಸ್ಟೆರೋ ದಂಗೆಯ ಪರಿಣಾಮದಿಂದ. ಇದರಿಂದಾಗಿಯೆ ೧೯೧೭ರಲ್ಲಿ ಅಲ್ಲಿನ ಸಂವಿಧಾನಕ್ಕೆ ತಿದ್ದುಪಡಿಯಾಯಿತು.
ಇದನ್ನು ಇಂಡಿಯಾಕ್ಕೂ ಅನ್ವಯಿಸಿದರೆ ಹೇಗೆ ?
