ದಾವಣಗೆರೆ : ಬುಲೆಟ್ ಸೇರಿದಂತೆ ಬೆಲೆ ಬಾಳುವ ಬೈಕ್‍ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಹರಿಹರ ನಗರ ಪೊಲೀಸರು ಬಂಧಿಸಿ 16 ಲಕ್ಷಕ್ಕೂ ಅಧಿಕ ಮೌಲ್ಯದ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತರಿಕೆರೆ ತಾಲ್ಲೂಕಿನ ದೊಡ್ಡಲಿಂಗೇನಹಳ್ಳಿಯ ಪ್ರತಾಪ, ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆ ಗ್ರಾಮದ ಬೋಜರಾಜ್ ಬಂಧಿತ ಬೈಕ್ ಕಳ್ಳರು.
ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ-6, ವಿಜಯನಗರ-5, ಕೊಪ್ಪಳ, ಬಾಗಲಕೋಟೆ ತಲಾ-3 ಗದಗ-2, ಹಾವೇರಿ, ಚಿಕ್ಕಮಗಳೂರು, ರಾಮ ನಗರ, ಬಿಜಾಪುರ ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆಯಲ್ಲಿ ತಲಾ 2 ಬೈಕ್ ಪ್ರಕರಣಗಳಲ್ಲಿ ಈ ಇಬ್ಬರು ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಹರಿಹರೇಶ್ವರ ಲೇ ಔಟ್, ಇಂದಿರಾ ನಗರ, ವಿದ್ಯಾನಗರದಲ್ಲಿ ಸರಣಿ ದ್ವಿಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಆರ್.ಎಫ್.ದೇಸಾಯಿ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಸದರಿ ತಂಡ ಕಳ್ಳತನ ಮಾಡಿದ ಮೋಟಾರ್ ಬೈಕ್‍ನಲ್ಲಿ ಬರುತ್ತಿದ್ದ ಇಬ್ಬರನ್ನು ತಡೆದು ನಿಲ್ಲಿಸಿ ವಿಚಾರಣೆ ಮಾಡಿದಾಗ ಪ್ರಕರಣಗಳು ಬೆಳಕಿಗೆ ಬಂದಿದ್ದು, ಆರೋಪಿತರಿಂದ ಒಟ್ಟು 16,52,000/-ರೂ ಬೆಲೆಯ 5 ಬುಲೆಟ್ ಸೇರಿದಂತೆ ವಿವಿಧ ಕಂಪನಿಯ ಒಟ್ಟು 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಇಬ್ಬರನ್ನು ಬಂಧಿಸಲಾಗಿತ್ತು.
ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ತಾಂತ್ರಿಕ ಹಾಗೂ ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಕಳ್ಳರ ಜಾಡು ಪತ್ತೆ ಹಚ್ಚಿ ಅ.17 ರಂದು ಹರಿಹರ ನಗರದ ಹರಪನಹಳ್ಳಿ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದಾಗ ಈ ಜಾಲ ಬೆಳಕಿಗೆ ಬಂದಿದೆ.
ಪಿ.ಎಸ್.ಐ ಶ್ರೀಪತಿ ಗಿನ್ನಿ, ಎ.ಎಸ್.ಐ ಮಹಮ್ಮದ್ ಜಬೀವುಲ್ಲಾ, ನಾಗರಾಜ ಸುಣಗಾರ, ದಿಲೀಪ್.ಕೆ.ಸಿ, ಶಾಂತರಾಜ್.ಎಂ.ಎಸ್, ಸಿದ್ದೇಶ.ಹೆಚ್, ಮಂಜುನಾಥ ಕ್ಯಾತಮ್ಮನವರ್, ದೇವರಾಜ್ ಸೂರ್ವೆ, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ರವಿ.ಆರ್, ಚಾಲಕ ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಾಮಚಂದ್ರ ಜಾದವ್, ಶಿವಕುಮಾರ, ರಮೇಶ, ಸಿದ್ಧಾರ್ಥ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
