ಬೆಂಗಳೂರು: ಮಧ್ಯಮ ಕ್ರಮಾಂಕದ ಬ್ಯಾಟರ್ ರೋಹಿತ್ ಎ.ಎ. ಸಿಡಿಸಿದ ಶತಕದ ನೆರವಿನಿಂದ ಕರ್ನಾಟಕ ತಂಡವು ಇಲ್ಲಿನ ಆಲೂರು ಕೆಎಸ್‌ಸಿಎ ಮೈದಾನದಲ್ಲಿ ನಡೆದಿರುವ ಕೂಚ್‌ಬಿಹಾರ್ ಟ್ರೋಫಿಯ (19 ವರ್ಷದೊಳಗಿನ) ತನ್ನ ಮೊದಲ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಪ್ರಥಮ ಇನ್ನಿಂಗ್ಸ್ ಮುನ್ನಡೆ ಗಳಿಸಿತು.
ಮೊದಲ ದಿನದ ಅಂತ್ಯಕ್ಕೆ 16ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ 2ನೇ ದಿನ ಬ್ಯಾಟಿಂಗ್ ಮುಂದುವರಿಸುತ್ತಿದ್ದಂತೆಯೇ, 37ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಮೂರನೇ ಕ್ರಮಾಂಕದ ಆಟಗಾರ ವೈಭವ್ ಶರ್ಮಾ (45ರನ್, 107 ಎಸೆತ) ಹಾಗೂ ನಾಯಕ ಮಣಿಕಾಂತ್ ಶಿವಾನಂದ್ (24 ರನ್ 45 ಎಸೆತ) ನೆರವಿಗೆ ಬಂದರು. ನಾಲ್ಕನೇ ವಿಕೆಟ್‌ಗೆ ಇವರು ಸೇರಿಸಿದ 68 ರನ್‌ಗಳ ಜೊತೆಯಾಟ ಮುರಿದಾಗ ಕ್ರೀಸ್‌ಗೆ ಇಳಿದ ದಾವಣಗೆರೆಯ ರೋಹಿತ್ ಕೊನೆಯವರೆಗೂ ಕ್ರೀಸ್‌ಗೆ ಅಂಟಿಕೊಂಡು ಸೊಗಸಾಗಿ ಬ್ಯಾಟ್ ಮಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು.
ತಾವು ಎದುರಿಸಿದ 204 ಎಸೆತಗಳಲ್ಲಿ 101 ರನ್ ಗಳಿಸಿದ ರೋಹಿತ್, ಸೊಗಸಾದ 11 ಬೌಂಡರಿ ಬಾರಿಸಿದರು.
ಉತ್ತರಾಖಂಡದ 202 ರನ್‌ಗಳ ಮೊದಲ ಇನ್ನಿಂಗ್ಸ್ ಮೊತ್ತವನ್ನು ಬೆನ್ನತ್ತಿದ ರಾಜ್ಯ ತಂಡ 194 ರನ್ ಗಳಿಸುವುದರಲ್ಲಿ 9 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆ ಅನುಭವಿಸುವ ಅಪಾಯದಲ್ಲಿತ್ತು.
ಕೊನೆಯವರಾಗಿ ಕ್ರೀಸ್‌ಗಿಳಿದ ರತನ್ ಬಿ.ಆರ್ (ಅಜೇಯ 3, 17 ಎಸೆತ) ಅವರೊಂದಿಗೆ 10ನೇ ವಿಕೆಟ್‌ಗೆ 41 ರನ್ ಸೇರಿಸಿದ ರೋಹಿತ್ ಕೊನೆಯವರಾಗಿ ರನೌಟ್ ಆಗುವ ಮುನ್ನ 33 ರನ್‌ಗಳ ಮಹತ್ವದ ಮುನ್ನಡೆ ಒದಗಿಸಿಕೊಟ್ಟರು.
Read also : ಸಿದ್ಧು ಸೇಫ್ ಆಗಿದ್ದೇ ಬಿಜೆಪಿಗೆ ಚಿಂತೆ
ಉತ್ತರಾಖಂಡದ ಪರ ಪ್ರಿಯಾಂಶು ಸಿಂಗ್ 3, ಚೇತನ್ ಸಿಂಗ್, ಆಕಾಶ್ ಕುಮಾರ್ ಮತ್ತು ನಿಶು ಪಟೇಲ್ ತಲಾ 2 ವಿಕೆಟ್ ಪಡೆದರು. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿ ಇದೆ.
