ಅವ್ವ ಹೆಣೆದ ಕೌದಿಗೆ
ಸೂರ್ಯ ಸೋತ, ಚಂದ್ರ ಬೆಪ್ಪಾದ
ಹೊಳಪು, ನುಣುಪಿನಿಂದಲ್ಲ,
ಅದಕ್ಕಿದ್ದ ಕಾಯುವ ಕಣ್ಣಿಂದ.
ಅವ್ವನದು ಗಾಣದೆತ್ತಿನ ಹೆಣಗು
ಬಳಸಿದ ಬಟ್ಟೆ ಹಳಸಲ್ಲೋ,
ಹಾಸಿ, ಹೊಚ್ಚಿ ಬದುಕಾಕ’ ಗೊಣಗು
ಅವರಿವರು ಕೊಟ್ಟ ಬಣ್ಣಬಣ್ಣದ ಅರಿವೆಗಳ
ನವೀಲು ಗರಿಯಂತೆ ಜೋಡಿಸಿ ಹೊಲೆದ ಕೌದಿ
ಥೆಟ್ ಅವ್ವನ ಮೖಯಂತೆ
ಆಕೆಯ ಹಿಡಿಗೆ ಸೂಜಿ, ಕತ್ತರಿ,
ಬಟ್ಟೆಗಳ ಕಚ್ಚದೆ ಮುತ್ತಿಡುತ್ತವೆ
ಕೖಚಳಕಕ್ಕೆ ಅರಿವೆಯ ಬಣ್ಣಗಳು
ಒಂದನ್ನೊಂದು ಆಲಿಃಗಿಸುತ್ತವೆ.
ಕಣ್ಣಿಗೆ ಕಣ್ಣು. ಕರುಳಿಗೆ ಕರುಳ ಹಚ್ಚಿ
ಹೊಲೆದ ಕೌದಿಯ ಮೇಲೆ
ಎಷ್ಟೊಂದು ಮಕ್ಕಳ ಆಟ
ರಾಮ, ಹನುಮ, ಮೊಹಮದ್, ಏಸು,
ಯಲ್ಲಮ್ಮ, ಸೀತಮ್ಮ, ಫಾತೀಮ, ಮೇರಿ,
ಹೀಗಾಡುವ ಮಕ್ಕಳು ಬಣ್ಣಕ್ಕೆ ಬಲಿ
ಒಬ್ಬ ಹಸಿರು, ಮತ್ತೊಬ್ಬ ಕೆಸರಿ, ಮೊಗದೊಬ್ಬ ಬಿಳಿ
ಬಣ್ಣಗಳ ಎಳೆದಾಟ,
‘ಹುಚ್ಚುಕೋಡಿಗಳ ಬಣ್ಣಬ್ಯಾರೆ ಆದ್ರ ಬಟ್ಟಿ ಬ್ಯಾರೇನ್ರಲೊ’ ಅವ್ವನ ಪೇಚಾಟ.
Read also : poem | ಚೂರೇಚೂರು ಮಾನವೀಯತೆ
ಅಮಲೇರಿದ ಆಟಕ್ಕೆ
ಹಿಡಿ ಬದಲಾಗಿ ಸೂಜಿಗೆ ಚುಚ್ಚುವ,
ಕತ್ತರಿಗೆ ಕೊಚ್ಚುವ ಮಾತು ಬಂದು ಕೌದಿ ಚಿಂದಿ
ಬಣ್ಣಗಳ ಹೊಡೆದಾಟ ಸೂರ್ಯ ಬೆವೆತ
ಚಂದ್ರ ಕೆಂಪನೆಯ ಬೆಳದಿಂಗಳ ಕಕ್ಕಿದ
ಅವ್ವನ ಬಾಯಿಗೆ ಚಿಂದಿಯ ಬೀಗ
ನೆತ್ತರ ಇಬ್ಬನಿಗೆ ಗುಲಾಬಿ ತತ್ತರಿಸಿದೆ
ಕಾಯುವ ಕಣ್ಣಿಗೆ ಮಾಸದ ಹುಣ್ಣಿನ ಹುಬ್ಬು
.ಪಿ. ಆರ್. ವೆಂಕಟೇಶ್
