ದಾವಣಗೆರೆ: ಸಾಧನೆ ಮಾಡಲು ಕಠಿಣ ಪರಿಶ್ರಮ ಬೇಕು. ಪರಿಶ್ರಮ ಪಡಲು ಬೇಕಾದ ಸೌಲಭ್ಯ. ವಾತಾವರಣ ಈ ಶಾಲೆಯಲ್ಲಿದೆ. ಸಜ್ಜನರ ಸಂಗ, ಹೆಚ್ಚೇನು ಸವಿದಂತೆ ಎಂಬಂತೆ, ಈ ಶಾಲೆಯಲ್ಲಿ ಒಳ್ಳೆಯ ಸಂಗ, ಸಹವಾಸ, ವಾತಾವರಣವನ್ನು ಆಡಳಿತ ಮಂಡಳಿ ನಿರ್ಮಿಸಿದೆ. ಅಂಕಗಳಿಕೆ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದನ್ನು ಶಾಲೆ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವಿಶ್ರಾಂತ ಉಪನಿರ್ದೇಶಕ ಕೆ.ಎಂ.ಗಂಗಾಧರಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶುಕ್ರವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮ ಶತಮಾನೋತ್ಸದ ಅಂಗವಾಗಿ ಸಾಯಿ ಸಿಂಚನ-ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 2024-25 ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಮತ್ತು ರಜತ ಪದಕ ಪ್ರಧಾನ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮವಾದ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದಿನ ಜೀವನದಲ್ಲಿ ಯಶಸ್ಸು ಲಭಿಸಬೇಕಾದರೆ ಒಳ್ಳೆಯ ವಾತಾವರಣ ಒಳ್ಳೆಯ ಜನರ ಒಡನಾಟ ಹೊಂದಿದ್ದರೆ, ತಾನಾಗಿಯೇ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್ ಮಾತನಾಡಿ, 2025-26 ರಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧಕರಿಗೆ ಪುರಸ್ಕಾರಿಸಿ, ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮ ಶತಮಾನೋತ್ಸದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಸ್ವಾಮಿ ಸೇವೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಅದರಂತೆ, ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಲು ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ನಡೆಸುತ್ತಿದ್ದೇವೆ ಎಂದರು.
ನಮ್ಮ ಭಾರತೀಯ ಸಂಸ್ಕೃತಿಯನ್ನು ನೀಡುವ ಶಿಕ್ಷಣವನ್ನು ಬಾಲವಿಕಾಸ ತರಗತಿಗಳನ್ನು ಮಾಡಿ, ರಾಮಾಯಣ. ಮಹಾಭಾರತವನ್ನು ಮಕ್ಕಳಿಗೆ ತಿಳಿಸುವುದಲ್ಲದೇ, ಅನೇಕ ನೀತಿ ಕಥೆಗಳನ್ನು ಮತ್ತು ಸಾಮಾಜಿಕ ಉಪಯುಕ್ತತೆಗೆ ಮೌಲ್ಯಗಳನ್ನು ತಿಳಿಸುವುದರಿಂದ ಶಾಲಾ ಶಿಕ್ಷಣ ಮುಗಿಸಿ, ಉನ್ನತ ಶಿಕ್ಷಣ ಪಡೆಯುತ್ತಿರುವ ಹಿರಿಯ ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿದ್ದಾರೆ ಎಂದು ಮಾಹಿತಿ ನೀಡಿದರು.
Read also : ಸಾರಿಗೆ ಇಲಾಖೆ : ಬಾಕಿ ಪ್ರಕರಣಗಳ ದಂಡ ಮೊತ್ತದಲ್ಲಿ ಶೇ.50 ವಿನಾಯಿತಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್. ಸುಜಾತ ಕೃಷ್ಣ, ಸ್ವಾಮಿ ಎಲ್ಲರನ್ನು ಪ್ರೀತಿಸು, ಎಲ್ಲರ ಸೇವೆ ಮಾಡು ಎಂಬ ಸಂದೇಶ ನೀಡಿದ್ದಾರೆ. ನಿಸ್ವಾರ್ಥತೆಯಿಂದ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಗುರುವೃಂದ ಇರುವುದರಿಂದ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ಕಲಿಸಲು ಮತ್ತು ಮೌಲ್ಯ ಶಿಕ್ಷಣವನ್ನು ನೀಡಲು ಸಾಧ್ಯವಾಗಿದೆ. ಸ್ವಾಮಿಯ ಆದರ್ಶದಂತೆ ಈಶ್ವರಮ್ಮ ಶಾಲೆ ನಡೆಯುತ್ತಿದೆ ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲರಾದ ಕೆ.ಎಸ್. ಪ್ರಭುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈಶ್ವರಮ್ಮ ಶಾಲೆ ಕಳೆದ 44 ವರ್ಷಗಳಿಂದ ಕೇವಲ ವಿದ್ಯೆಯನ್ನು ಕಲಿಸುವುದಷ್ಟೇ ಅಲ್ಲ, ವಿದ್ಯೆಯ ಜೊತೆ-ಜೊತೆಗೆ ಸಾಹಿತ್ತಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಯಾಶೀಲ ಶಿಕ್ಷಣವನ್ನು ನೀಡುವುದರಿಂದ ವಿದ್ಯಾರ್ಥಿಗಳು ಎಲ್ಲಾ ಹಂತದ ಶಿಕ್ಷಣದಲ್ಲೂ ಉತ್ತಮ ಪ್ರಗತಿಯನ್ನು ಕಾಣುತ್ತಿದ್ದಾರೆ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಆಶಯದಂತೆ, ಸಾವಿರಾರು ವಿದ್ಯಾರ್ಥಿಗಳು ವಿದ್ಯೆ ಜೀವನಕ್ಕಾಗಿ ಅಲ್ಲ, ಜೀವನದ ಸಾರ್ಥಕತೆಗಾಗಿ ಎನ್ನುವ ಮೌಲ್ಯಗಳನ್ನು ಆಳವಡಿಸಿಕೊಂಡಿದ್ದಾರೆ ಎಂದು ಎಂದು ತಿಳಿಸಿದರು.
ಶಾಲಾ ಉಪಪ್ರಾಂಶುಪಾಲರಾದ ಜಿ.ಎಸ್. ಶಶಿರೇಖಾ ವಂದಿಸಿದರು. ಜಿ.ಸಿ.ರಾಜೇಶ್ವರಿ, ಬಿ. ಶ್ರೀದೇವಿ ಹಾಗೂ ಸವಿತಾ ಎನ್. ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಪುರಸ್ಕಾರದ ನಂತರ ಶಾಲಾ ಮಕ್ಕಳಿಂದ ಶ್ರೀ ಸತ್ಯ ಸಾಯಿಬಾಬಾರವರ ಜನ್ಮ ಶತಮಾನೋತ್ಸವದ ಅಂಗವಾಗಿ ಸಾಯಿ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
