ಕೆಲವು ಸಂಬಂಧಗಳು ಹೇಗೆಂದರೆ ಮೈದಾ ಹಿಟ್ಟಿನ ಕಣಕದಂತೆ…… ಕಿತ್ತರೂ ಕೂಡಿಕೊಳ್ಳುವ ಅನಿವಾರ್ಯತೆಗೆ ತಲುಪಿರುತ್ತವೆ.
ಬದುಕಿನ ಪಯಣದಲ್ಲಿ ಎದುರಾಗುವರೆಲ್ಲರೂ ತಮ್ಮದೇ ಆದ ಛಾಪುಗಳನ್ನು ಮೂಡಿಸಿ ಮಾಯವಾಗಿರುತ್ತಾರೆ. ಕೆಲವರು ವ್ಯವಹಾರಕ್ಕಾಗಿ,ಕೆಲವರು ದೈಹಿಕ ವಾಂಛೆಗಾಗಿ ಮತ್ತೆ ಕೆಲವರು ತಮ್ಮ ಬದುಕಿನ ದಾರಿಯನ್ನು ಸುಗಮಗೊಳಿಸಿಕೊಳ್ಳುವುದಕ್ಕಾಗಿ, ಇನ್ನು ಕೆಲವರು ಟೈಮ್ ಪಾಸ್ಗಾಗಿ ಹೇಗೆ ಅವರವರ ಕಂಫರ್ಟ್ ಝೋನನ್ನು ಸೃಷ್ಟಿಸಿಕೊಳ್ಳುತ್ತಾರೆ.
ಟೈಮ್ ಪಾಸ್ ಸಂಬಂಧಗಳ ಬಗ್ಗೆ ಹೇಳದೆ ಇರಲು ಸಾಧ್ಯವಿಲ್ಲ. ಇವು ಕಾಲ ಕಳೆಯಲು ಸಂಬಂಧ ಬೆಳೆಸುತ್ತವೆ.ಮನಸ್ಸಿನ,ದೇಹದ ಮತ್ತು ಹಣದ ಕೊರತೆ ನೀಗುವವರೆಗೂ ಆತ್ಮೀಯವಾಗಿ ಬೆರೆತು…. ನಲಿದು ಕೊನೆಗೊಂದಿನ ನೋವಿನ ವಿದಾಯವನ್ನು ಹೇಳಿ ಕೊನೆಯಾಗುತ್ತವೆ.
Friends with benifit ತರ ಉಪಯೋಗ ಕೊಟ್ಟು, ತಗೊಳ್ಳಿ ಅನ್ನುವವರೆಗೂ ಮಾತ್ರವೇ. ಇಲ್ಲಿ ಆಪ್ತತೆಯ ತೀವ್ರತೆ ಇರುವುದಿಲ್ಲ.ಮನೆಯವರೆಗೂ,ಮನಸ್ಸಿನವರೆಗೂ ಭಾವನೆಗಳು ಚಲನಾತ್ಮಕವಾಗಿದ್ದರೂ,ಎಲ್ಲೋ ಒಂದು ಕಡೆ ಮೋಸ,ಸುಳ್ಳು, ದ್ರೋಹದ ತಡೆಗೋಡೆಗೆ ಸಿಲುಕಿ ಸಂಬಂಧಗಳ ನಡುವಿನ ನಂಬಿಕೆಯೇ ಬಿರುಕು ಬಿಡುವಂತೆ ಮಾಡುತ್ತವೆ.
ಈ ಆಪ್ತತೆಗಳು ಬದುಕನ್ನು ಪ್ರವೇಶಿಸಿ ಹೃದಯದ ಒಳಗೆ ಬೆಚ್ಚನೆಯ ನವಿರಾದ ಗುರುತನ್ನು ಮೂಡಿಸುವ ಮೊದಲೇ ಕಹಿ ನೆನಪುಗಳಿಗೆ ಸಹಿ ಮಾಡಿರುತ್ತವೆ. “ಕೆಲವೊಮ್ಮೆ ಅತಿಯಾಗಿ ಪ್ರೀತಿಸುವುದು ಒಂದು ಸ್ವಯಂ ವಿನಾಶದ ರೂಪವೇ ಆಗಿರುತ್ತದೆ “.ಯಾವುದೇ ಸಂಬಂಧಗಳು ಶಾಶ್ವತವಲ್ಲ.ಸಂಬಂಧಗಳಲ್ಲಿ ಕಾಲಕ್ರಮೇಣ ಆಸಕ್ತಿಗಳು ಮಾಸುತ್ತವೆ.
ಪ್ರೀತಿ ನಿರೀಕ್ಷೆಯ ವಸ್ತುವಲ್ಲ.... ಯಾವಾಗ ನಾವು ಯಾವುದೇ ನಿರೀಕ್ಷೆಯ ಹಂಗಿಲ್ಲದೆ ಬದುಕಲು ಪ್ರಾರಂಭಿಸುತ್ತೇವೆಯೋ ಆಗಲೇ ಬದುಕಿನಲ್ಲಿ ನಿಜವಾದ ಸಂತೋಷ ನೆಲೆಯೂರಲು ಸಾಧ್ಯ. ಬದುಕು ಒಂದು ಕನಸಿನ ಮೂಟೆ ಇದ್ದಂತೆ.ಕಟ್ಟುವುದು ಸುಲಭ, ಹೊತ್ತು ಜೀವನ ಸಾಗಿಸುವುದು ಕಷ್ಟ.
ಬದಲಾಗುತ್ತಿರುವ ನನ್ನವರನ್ನೆಲ್ಲ ಬಿಟ್ಟು, ನನಸಾಗದ ಆ ಕನಸುಗಳನ್ನು ಮರೆತು…. ಹಗಲಿರುಳು ಕಾಡುವ ಅಷ್ಟು ಆಲೋಚನೆಗಳನ್ನೆಲ್ಲ ತೊರೆದು ಗಟ್ಟಿಯಾಗುವ ಹೃದಯವೀಗ ಹೈರಾಣಾಗಿದೆ.
ಯಾವುದೇ ಸಂಬಂಧವನ್ನು ಕೇವಲ ಕಣ್ಣುಗಳಿಂದ ಒಪ್ಪಿಕೊಳ್ಳಬೇಕೆ ವಿನಹ ಎದೆಯಿಂದ ಅಪ್ಪಿಕೊಳ್ಳಬಾರದು ಎಂಬ ತಾತ್ವಿಕತೆಯೆಡೆಗೆ ಮನಸ್ಸು ವಾಲುತ್ತದೆ. ಅಷ್ಟೊತ್ತಿಗಾಗಲೇ ಬದುಕಿನ ಸತ್ಯದರ್ಶನವಾಗಿ “ಮೌನವನ್ನು ಖರೀದಿಸಲು ಮಾತುಗಳನ್ನೇ ಮಾರಿಬಿಟ್ಟಿರುತ್ತೇವೆ”.

ಕೆಲವೊಂದಿಷ್ಟು ಬದಲಾವಣೆಗಳು ನೋವು ಕೊಡುತ್ತವೆ.ಆದರೆ ನಮ್ಮ ಒಳಿತಿಗಾಗಿ ಅವು ಅಗತ್ಯ ಎಂಬ ಸಕಾರಾತ್ಮಕ ಆಲೋಚನೆಗಳಿಂದ ಅಂತಹ ಸಂಬಂಧಗಳಿಗೆ ತಿಲಾಂಜಲಿ ಇಟ್ಟು ನೆಮ್ಮದಿಯ ರಹದಾರಿಗೆ ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು ಅನಿವಾರ್ಯವಾಗಿದೆ.
Read also : ಕನ್ನಡ ರಾಜ್ಯೋತ್ಸವ|ಕನ್ನಡವೇ ಸತ್ಯ,ಕನ್ನಡವೇ ನಿತ್ಯವಾಗಬೇಕಾದರೆ…..:
ನಂಬಿಕೆಗಳು ಸಾಯಬಾರದು,ಭರವಸೆಗಳು ಬತ್ತಬಾರದು, ಭಾವನೆಗಳು ಕ್ಷೀಣಿಸಬಾರದೆಂದು ನಂಬಿದವರಿಗೆ ಪ್ರಾಣ ಕೊಡುವ ಅಗತ್ಯವಿಲ್ಲ.ಪ್ರಾಣವಿರುವವರೆಗೂ ನಂಬಿಕೆಗೆ ದ್ರೋಹ ಮಾಡದೆ ಇದ್ದರೆ ಅದೇ ನಿಜವಾದ ಸಂಬಂಧಗಳು.
ಕೆಲವು ವಿದಾಯಗಳು ಕಠಿಣವೆನಿಸಿದರೂ…. ಅನಿವಾರ್ಯ. ಅಕ್ಕರೆ ಇಲ್ಲದ ಸಂಬಂಧಕ್ಕೆ ಬಿಕ್ಕಿಬಿಕ್ಕಿ ಕಣ್ಣೀರಿಟ್ಟರೇನು?…. ಅದು ನೀಡುವುದು ಬೇವಿನ ಕಹಿ ಹೊರತು, ಬೆಲ್ಲದ ರುಚಿಯನ್ನಲ್ಲ.
ಎಷ್ಟು ದಿನದ ಋಣಾನುಬಂಧವೋ ಅಷ್ಟೇ ದಿನ ಪ್ರತಿಯೊಂದು ಸಂಬಂಧಗಳು ನಮ್ಮೊಟ್ಟಿಗೆ ಇರುತ್ತವೆ. ಅವು ಮುಗಿದ ಮೇಲೆ ಕೆಲವರು ದೂರ ಹೋಗುತ್ತಾರೆ, ಮತ್ತೆ ಕೆಲವರು ಸತ್ತು ಹೋಗ್ತಾರೆ ಮತ್ತೆ ಕೆಲವರು ಬದುಕಿರುವಾಗಲೇ ದೂರ ಸರಿಯುತ್ತಾರೆ. ಅದನ್ನು ನಾವು ಸ್ವೀಕರಿಸಬೇಕೆ ವಿನಹ ದುಃಖಿಸಬಾರದು.
ಆದ್ದರಿಂದ ಏನನ್ನೋ ಪಡೆದುಕೊಳ್ಳುವ ಭರದಲ್ಲಿ ಮತ್ತಿನ್ನೇನನ್ನೋ ಕಳೆದುಕೊಳ್ಳುತ್ತಾ,ಪಡೆದದ್ದನ್ನು ನನ್ನದಲ್ಲವೆಂದು ಮತ್ತು ಕಳೆದುಕೊಂಡಿದ್ದು ನನ್ನದಲ್ಲವೆಂದು ತಿಳಿಯುವಷ್ಟರಲ್ಲಿ ನಮ್ಮ ಜೀವನವೇ ಮುಗಿದು ಹೋಗಿರುತ್ತದೆ.
ಈ ಸಮಯದಲ್ಲಿ ನಮ್ಮೊಟ್ಟಿಗಿರುವ ಸಂಬಂಧಗಳೊಂದಿಗೆ ಮತ್ತೆ ಮತ್ತೆ ಜೀವಿಸೋಣ. ಜೊತೆಗಿರದ,ಬಲವಂತದ ಸಂಬಂಧಗಳನ್ನು ಮುಕ್ತವಾಗಿ ತೊರೆದು ಬಿಡೋಣ.
ಗೀತಾ ಭರಮಸಾಗರ
ಲೇಖಕರು
ಚಿತ್ರದುರ್ಗ
