ಮನದ ಮೂಲೆಯಲಿ ಅಡಗಿ ಕುಳಿತಿಹುದು,
ಹೇಳಲಾಗದ ಮಾತು, ಮೌನದಿ ಮುಳುಗಿಹುದು.
ತುಟಿಗಳಲಿ ನರ್ತಿಸಿ, ಕಂಠದಲಿ ನಿಂತಿಹುದು,
ಹೊರಬರಲಾರದೆ, ಭಾರವಾಗಿ ನರಳುತಿಹುದು.
ಕಣ್ಣಂಚಲಿ ಕಂಬನಿಯಾಗಿ ಜಿನುಗಿ
ನಗುವಿನ ಮರೆಯಲ್ಲಿ ದುಃಖವಾಗಿ ಮಲಗಿ
ಪ್ರತಿ ಹೆಜ್ಜೆಯಲ್ಲೂ ನೆರಳಂತೆ ಹಿಂಬಾಲಿಸುವುದು,
ಯಾರಿಗೆ ಹೇಳಲಿ, ಹೇಗೆ ವಿವರಿಸಲಿ ಎನ್ನುವುದು?
ಕೇಳುವ ಕಿವಿ ಇಲ್ಲ, ಅರ್ಥೈಸುವ ಮನಸಿಲ್ಲ,
ಆದರೂ ಈ ಮಾತಿಗೆ ಕೊನೆಯೆಂಬುದಿಲ್ಲ.
ಎಷ್ಟೋ ಸಲ ಯತ್ನಿಸಿದೆ, ಪದಗಳಲಿ ಪೋಣಿಸಲು,
ಬರುವ ಮುನ್ನವೇ ನಡುಗಿ, ನಾಲಿಗೆಯಲಿ ನಿಲ್ಲಲು.
Read also : poem|ತಾಯಂದಿರು:ಬಿ.ಶ್ರೀನಿವಾಸ
ಇದು ಪ್ರೀತಿಯಿರಬಹುದು, ನೋವಿನ ಕಥೆಯಿರಬಹುದು,
ಅಥವಾ ಬಯಕೆಯೊಂದು ಕನಸಾಗಿ ಉಳಿದಿರಬಹುದು.
ಸತ್ಯವೋ, ಸುಳ್ಳೋ, ಯಾರಿಗೂ ತಿಳಿಯದಿಹುದು,
ಮನದ ಮಾತು, ಮನಸಿನಲ್ಲೇ ಸಮಾಧಿಯಾಗಿದೆ.
ಮೌನದಿ ಮನವು ಭಾರ, ಸದ್ದಿಲ್ಲದ ಸಾಗಿದೆ,
“ಹೇಳದ ಮಾತು” ಎಂಬ ಭಾರ ಹೊತ್ತು ಸಾಗುತಿದೆ.
ಯಾವ ಜನ್ಮದಲಿ ಇದು ಬಿಡುಗಡೆ ಪಡೆಯುವುದೋ?
ಮನದೊಳಗೆ ಕೊರಗಿ, ಸುಮ್ಮನೆ ಕುಳಿತಿರುವುದೋ.
ಡಾ. ಡಿ. ಫ್ರಾನ್ಸಿಸ್
ಹರಿಹರ
9731395908
