1
ನೋವುಂಡು ಹರಿದು ಹೋದ ನದಿ
ಸೇರಬೇಕಿತ್ತು ಅಂಬುಧಿ ಲೋಕರೂಢಿಯಂತೆ
ಡಿಸೆಂಬರ್ ಆರು,
ನದಿಯೊಂದು ಹರಿವು ನಿಲ್ಲಿಸಿದ ದಿನ….
ಶಾಂತಿಗೂ
ಕ್ರಾಂತಿಗೂ
ಒಂದೇ ಜಾಗ!
2
ಚಳವಳಿ
ಅಲ್ಲಿ
ಜಗತ್ತಿನ ಮತ್ತೆಲ್ಲೋ….
ಬಾಂಬುಗಳು
ಕ್ಷಿಪಣಿಗಳು ಸಿಡಿದರೆ
ಯುದ್ಧ
ಇಲ್ಲಿ…..
ಇಂಡಿಯಾದಲ್ಲಿ
ಕೇವಲ
ತೂರಿದರೆ ಸಾಕು ಬೂಟು!
ಬಾಬಾ… ನೀನಿಲ್ಲದ ಇಂಡಿಯಾದಲ್ಲಿ
ಚಳವಳಿಗಳನ್ನು
ಹತ್ತಿಕ್ಕುವುದು ಈಗ ಎಷ್ಟೊಂದು ಸುಲಭ!
Read also : poem|ತಾಯಂದಿರು:ಬಿ.ಶ್ರೀನಿವಾಸ
3
ಜೋಡಿಕಣ್ಣು
ಸಂವಿಧಾನದ ಪುಟಪುಟಗಳಲ್ಲೂ
ನಿದ್ದೆಯಿಲ್ಲದೆ ಕಳೆದ ಕಣ್ಣು
ಅಪ್ಪನ ಹೊಲದ
ಮಣ್ಣ ಕಣಕಣದಲ್ಲೂ
ಭಾರ ಹೊತ್ತ
ಜೋಡುಗಳಲ್ಲೂ
ಬುದ್ಧ- ಬಾಬಾಸಾಹೇಬರ
ಜೋಡಿ ಕಣ್ಣು
4
ದಾಳಿ
ನೋಟುಗಳ ಮೇಲೆ,
ದೇಶ-ವಿದೇಶಗಳ ಮೇಲೆ
ದಾಳಿಯ ಬದಲು
ಜಾತಿಗಳ ಮೇಲೆ ನಡೆದಿದ್ದರೆ..
ಸಾಯುವ ಮುನ್ನ
ಊರ ಜನರನ್ನು ಒಮ್ಮೆಯಾದರೂ ಮುಟ್ಟುವ
ಅಪ್ಪನ ಕನಸಾದರೂ ನನಸಾಗುತ್ತಿತ್ತು.
5
ಬೋಧನೆ
ಅವರು
ವೃಕ್ಷದ ಕೆಳಗೆ
ಬೋಧಿಸಿದ್ದನ್ನೆ
ಮರದ
ಕೆಳಗೆ ನಿಂತು
ಬಾಬಾ ಹೇಳಿದ
ಮಾತು
ಅರ್ಥವಾದವು!
ಬಿ.ಶ್ರೀನಿವಾಸ
