ಬೆಳಗಾವಿ: ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಒಟ್ಟು 35 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಡಿಸೆಂಬರ್ 1ರಿಂದ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ಎನ್.ಎಚ್. ಕೋನರೆಡ್ಡಿ ಮತ್ತು ಶಿವಗಂಗ ಅವರು ನಿಯಮ 73ರ ಅಡಿಯಲ್ಲಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಡಿಸ್ಟಿಲರಿಗಳಿಂದ 15,747 ಮೆಟ್ರಿಕ್ ಟನ್ ಮೆಕ್ಕೆಜೋಳಕ್ಕೆ ಬೇಡಿಕೆ ಬಂದಿದ್ದು, 17 ಖರೀದಿ ಕೇಂದ್ರ ಆರಂಭಿಸಿ ಇದುವರೆಗೆ 114 ರೈತರಿಂದ 303.75 ಮೆಟ್ರಿಕ್ ಟನ್ ಖರೀದಿ ಮಾಡಲಾಗಿದೆ.
ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರ ಅಸೋಸಿಯೇಷನ್‌ನಿಂದ 10,465 ಮೆಟ್ರಿಕ್ ಟನ್ ಮೆಕ್ಕಜೋಳಕ್ಕೆ ಬೇಡಿಕೆ ಬಂದಿದ್ದು, 18 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. 1697 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕೆಎಂಎಫ್‌ನಿಂದ 50 ಸಾವಿರ ಮೆಟ್ರಿಕ್ ಟನ್‌ಗೆ ಬೇಡಿಕೆ ಬಂದಿದ್ದು, 22,109 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. 3,185 ರೈತರಿಂದ 5,866 ಮೆಟ್ರಿಕ್ ಟನ್ ಖರೀದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ 2,400 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಈ ಯೋಜನೆಯಲ್ಲಿ ಖರೀದಿ ಮಾಡಿದರೆ ರಾಜ್ಯದ ಪಡಿತರ ವಿತರಣೆಗಾಗಿ ಮಾತ್ರ ಬಳಸಬೇಕು ಎಂದು ಸೂಚನೆ ನೀಡಿತ್ತು. ಆದರೆ ರಾಜ್ಯದಲ್ಲಿ ಮೆಕ್ಕೆಜೋಳವನ್ನು ಆಹಾರ ಪದ್ದತಿಯಲ್ಲಿ ಬಳಸದ ಕಾರಣ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿ ಮಾಡಲು ಅವಕಾಶವಿರಲಿಲ್ಲ.
ಹೀಗಾಗಿ ಪಿಡಿಪಿಎಸ್ ಯೋಜನೆಯಲ್ಲಿ ಖರೀದಿ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಮೆಕ್ಕೆಜೋಳ ಬೆಳೆಗಾರರ ಹಿತರಕ್ಷಣೆಗೆ ಡಿಸ್ಟಿಲರಿ ಮಾಲೀಕರು, ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನೆ ಅಸೋಷಿಯೇಷನ್ ಪದಾಧಿಕಾರಿಗಳ ಸಭೆ ಕರೆದು ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಲು ಅವರ ಮನವೊಲಿಸಲಾಯಿತು ಎಂದು ವಿವರಿಸಿದರು.
ಡಿಸ್ಟಿಲರಿ ಮಾಲೀಕರು ಬೆಂಬಲ ಬೆಲೆಯಲ್ಲಿ ಖರೀದಿಸಿದರೆ ನಷ್ಟವಾಗಲಿದೆ ಎಂದು ಹೇಳಿದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಸಾಗಾಟ ಮತ್ತು ಪ್ರಾಸಂಗಿಕ ವೆಚ್ಚ ಭರಿಸುವ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದಿಂದ ಖರೀದಿ ಮಾಡಿ ಡಿಸ್ಟಿಲರಿಗಳು ಹಾಗೂ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರ ಅಸೋಸಿಯೇಷನ್‌ಗೆ ಪೂರೈಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಸರ್ಕಾರದ ಸಕಾಲಿಕ ಮಧ್ಯಪ್ರವೇಶದಿಂದ ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 1,800ರಿಂದ 2,100 ರೂ.ವರೆಗೆ ಮಾರಾಟವಾಗಿದೆ. ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸುವ ಪೂರ್ವದಲ್ಲಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಧಾರಣಿ ಕ್ವಿಂಟಾಲ್‌ಗೆ 1,600ರಿಂದ 1,800 ರೂ.ವರೆಗೆ ಇತ್ತು ಎಂದು ಹೇಳಿದರು.
