ದಾವಣಗೆರೆ: ಮೈಕೊರೆಯುವ ಚಳಿಗೆ ದಾವಣಗೆರೆ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಜಿಲ್ಲೆಯಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಚಳಿ ಹಾಗೂ ಥಂಡಿಗಾಳಿಯಿಂದ ವಯೋವೃದ್ಧರು ಮನೆಯಿಂದ ಹೊರ ಬರುತ್ತಿಲ್ಲ. ವಯಸ್ಕರು ಉಣ್ಣೆ ಬಟ್ಟೆ ಧರಿಸಿದರೆ, ಮಕ್ಕಳು ಕೂಡ ಸ್ವೇಟರ್ ಮೊರೆ ಹೋಗಿದ್ದಾರೆ.
ಶಾಲೆಗಳಿಗೆ ತೆರಳುವ ಮಕ್ಕಳು ಕೂಡ ಸ್ವೇಟರ್ ಧರಿಸಿ ಹೋಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಬೆಂಕಿ ಹಚ್ಚಿ ದೇಹ ಕಾವು ಮಾಡಿಕೊಳ್ಳುತ್ತಿದ್ದಾರೆ.
ರಾತ್ರಿ 11 ಗಂಟೆಯಿಂದ ಬೆಳಗಿನ 6 ಗಂಟೆಗೆ ತಾಪಮಾನ ಕ್ಷೀಣಿಸುತ್ತಿದೆ. ಹಗಲಿನಲ್ಲಿ ಸೂರ್ಯನ ಶಾಖ ಹಿತವೆನಿಸುತ್ತಿದ್ದು ಬಹುತೇಕ ಜನರು ಸೂರ್ಯ ಬರುವಿಕೆಗೆ ಕಾಯುವಂತಾಗಿದೆ. ಕಳೆದ ಒಂದು ತಿಂಗಳಿನಿಂದ ಚಳಿ ಹೆಚ್ಚಾಗಿದೆ. ಜನರು ದೇಹ ಬಿಸಿ ಮಾಡಿಕೊಳ್ಳಲು ಬೆಂಕಿಯ ಮೊರೆ ಹೋಗುತ್ತಿದ್ದಾರೆ.
ಬೆಳ್ಳಂಬೆಳಿಗ್ಗೆ ದಟ್ಟ ಮಂಜು, ಮೈ ಕೊರೆಯುವ ಚಳಿ ಆವರಿಸಿದ್ದರೆ, ಸಂಜೆ ಶೀತಗಾಳಿ ಬೀಸುತ್ತಿರುವುದರಿಂದ ವೈದ್ಯರ ಸಲಹೆಯಂತೆ ಅನಿವಾರ್ಯವಾಗಿ ವಾಯು ವಿಹಾರಕ್ಕೆ ಬರಲೇಬೇಕಾದವರು ಮೈ ಕೊರೆಯುವ ಚಳಿಯಲ್ಲೂ ಬೆಚ್ಚನೆಯ ಉಡುಪು ಧರಿಸಿ, ಕಿವಿಗೆ ಮಂಕಿಕ್ಯಾಪ್ ಹಾಕಿಕೊಂಡು ಮನೆಯಿಂದ ಹೊರಬರುತ್ತಿದ್ದಾರೆ. ರೈತರು, ಕೂಲಿ ಕಾರ್ಮಿಕರು ಒಣಹುಲ್ಲು, ತರಗಿಗೆ ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುವ ಜತೆಗೆ ಈ ಚಳಿಗೆ ಹೆಚ್ಚಾಗಿ ಕಾಫಿ, ಟೀ ಯತ್ತ ಮೊರೆ ಹೋಗುತ್ತಿದ್ದಾರೆ. ಈ ಚಳಿಗೆ ಜನರು ಥರಗುಟ್ಟಿ ಹೋಗುತ್ತಿದ್ದು, ಜನವರಿಯಲ್ಲಿ ಶೀತಗಾಳಿ ಉತ್ತುಂಗಕ್ಕೆ ಏರುವ ನಿರೀಕ್ಷೆ ಇದ್ದು, ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಲಿದೆ. ಈ ಅವಧಿಯಲ್ಲಿ ಮಕ್ಕಳು, ಹಿರಿಯರು, ಗರ್ಭಿಣಿ-ಬಾಣಂತಿಯರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಅನುಸರಿಸಬಹುದಾದ ಕ್ರಮಗಳು:
- ಯಾವಾಗಲೂ ಬೆಚ್ಚಗಿನ ನೀರು, ಸೂಪ್ ಕುಡಿಯುವುದು.
- ಸುಲಭವಾಗಿ ಜೀರ್ಣವಾಗುವ ಹಾಗೂ ಆಗತಾನೆ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು.
- ಯಾವಾಗಲೂ ಸೈಟರ್ ಸಾಕ್ಸ್ ಹಾಗೂ ಕೈಗವಸುಗಳನ್ನು ಧರಿಸುವುದು ಹಾಗೂ ಮನೆಯಲ್ಲಿ ಬೆಚ್ಚಗಿರುವುದು ಉತ್ತಮ.
- ಸ್ನಾನಕ್ಕೆ ಬಿಸಿ ನೀರು , ಬೆಚ್ಚಗಿನ ನೀರನ್ನು ಉಪಯೋಗಿಸುವುದು.
- ಅನಗತ್ಯವಾಗಿ ಹೊರ ಸಂಚಾರವನ್ನು ತಪ್ಪಿಸಿ.
- ಕಿವಿಗಳನ್ನು ಹತ್ತಿಯಿಂದ ಮುಚ್ಚಿಕೊಳ್ಳ ಅಥವಾ ಸ್ಟಾರ್ಫ್ ಕಟ್ಟಿಕೊಳ್ಳಬೇಕು ಹಾಗೂ ಹೋಗಲೇಬೇಕಾದಲ್ಲಿ ಮಾಸ್ಕ್ ಧರಿಸಬೇಕು.
- ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳರುವರಿಂದ ದೂರವಿರಬೇಕು. ಮೊಣಕೈ ಒಳಗೆ ಸೀನುವುದು, ಕೆಮ್ಮುವುದು. ಅಥವಾ ಸೀನುವಾಗ, ಕೆಮ್ಮುವಾಗ ಶೋ ಅಥವಾ ಕರವಸ್ತ್ರವನ್ನು ಬಳಸುವುದು.
- ಕೈಗಳನ್ನು ಆಗಾಗ್ಗೆ ನೀರು ಹಾಗೂ ಸೋಪಿನಿಂದ ತೊಳೆಯುವುದು, ಜ್ವರ , ಘನ ಲಕ್ಷಣಗಳು ಅಥವಾ ಇತರೆ ಯಾವುದಾದರೂ ಖಾಯಿಲೆಯ ಲಕ್ಷಣಗಳದ್ದಲ್ಲ, ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯುವುದು. ಸ್ವಯಂವೈದ್ಯ ಪದ್ಧತಿಗಳನ್ನು ಅನುಸರಿಸಬಾರದು.
ಮಾಡಬಾರದಾದ ಕ್ರಮಗಳು:
- ತಣ್ಣಗಿನ ಪಾನೀಯಗಳು ಐಸ್ ಕ್ರೀಂಗಳನ್ನು ಸೇವಿಸಬಾರದು.
- ರೆಫ್ರಿಜರೇಟರ್‌ನ ಅಥವಾ ತಣ್ಣಗಿನ ನೀರನ್ನು ಕುಡಿಯಬಾರದು.
- ಮಳೆಯಲ್ಲಿ ನೆನೆಯುವುದನ್ನು ಹಾಗೂ ತಣ್ಣನೆಯ ಶೀತ ಗಾಳಿಗೆ ಮೈ ಒಡ್ಡುವುದನ್ನು ತಪ್ಪಿಸಬೇಕು
- ಹೊರಾಂಗಣ ಪ್ರವಾಸಗಳನ್ನು ಆದಷ್ಟು ನಿರ್ಭಂಧಿಸಿ ( ವಿಶೇಷವಾಗಿ ಗಿರಿಧಾಮಗಳಿಗೆ ವಾರಾಂತ್ಯದ ಪ್ರವಾಸ)
- ಮಸಾಲಾಯುಕ್ತ ಪದಾರ್ಥಗಳು , ಜಂಕ್ ಫುಡ್‌ಗಳನ್ನು ವರ್ಜಿಸಬೇಕು.
ಜಿಲ್ಲೆಯಲ್ಲಿ ರಾತ್ರಿ ವೇಳೆ ಉಷ್ಣಾಂಶವು 15 ಡಿಗ್ರಿ ಸಮೀಪ ದಾಖಲಾಗುತ್ತಿದ್ದು ಸಾರ್ವಜನಿಕರು ಆರೋಗ್ಯದ ಸಮಸ್ಯೆಗೆ ಒಳಗಾಗದೇ ಇರಲು ಮುಂಜಾಗ್ರತೆ ವಹಿಸಬೇಕು. ಬೆಚ್ಚಗಿನ ಉಡುಪು ಧರಿಸಬೇಕು. ಬಿಸಿಯಾದ ಆಹಾರ, ನೀರು ಸೇವಿಸಬೇಕು. ತಂಪು ಪಾನಿಯ, ಆಹಾರ ಇತ್ಯಾದಿ ಸೇವಿಸಬಾರದು.
ಶೀತದ ವಾತಾವರಣದಲ್ಲಿ ಮನುಷ್ಯರ ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಅವಕಾಶವಾದಿ ಸೂಕ್ಷ್ಮಾಣುಗಳು ಹೆಚ್ಚು ಸಕ್ರಿಯವಾಗಿ ಫ್ಲೂ, ವೈರಲ್ ಜ್ವರ, ಮುಂತಾದ ಸೋಂಕು ತಗಲುವುದು ಸಾಮಾನ್ಯ.
ವೃದ್ಧರು, ಗರ್ಭಿಣಿಯರು, ಮಕ್ಕಳು, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಮುಂತಾದ ದೀರ್ಘಕಾಲೀನ ಕಾಯಿಲೆ ಇರುವವರು ರಾತ್ರಿ ನಂತರ ಮನೆಗಳ ಒಳಗೆ ಬೆಚ್ಚಗಿನ ವಾತಾವರಣದಲ್ಲಿ ಇರುವುದು ಒಳ್ಳೆಯದು.
ಚಳಿಗಾಲದಲ್ಲಿ ರಕ್ತನಾಳಗಳು ಸಂಕುಚಿತವಾಗಿ ಹೃದಯದ ಮೇಲೆ ಪರಿಣಾಮ ಬೀರುವುದರಿಂದ ವಾಕಿಂಗ್ ಮಾಡುವ ಅಭ್ಯಾಸ ಇರುವವರು ಬೆಳಿಗ್ಗೆ 6.00 ರ ನಂತರ ಅಥವಾ ಸಂಜೆ 7.00 ಘಂಟೆ ಒಳಗೆ ಮಾಡುವುದು ಒಳ್ಳೆಯದು.
-ಡಾ.ಜಿ.ಡಿ.ರಾಘವನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಆರೋಗ್ಯ ಇಲಾಖೆ, ದಾವಣಗೆರೆ.
