ಹರಿಹರ: ಅಮಾನವೀಯವಾದ ವೈದಿಕ ಪದ್ಧತಿಯಿಂದಾಗಿ ಶೂದ್ರರ ಜೊತೆಗೆ ಮಹಿಳಾ ಸಮುದಾಯದ ಶೋಷಣೆಯೂ ಎಗ್ಗಿಲ್ಲದೆ ನಡೆದಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.
ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸ್ಥಳೀಯ ಘಟಕ ಹಾಗೂ ಸ್ಪೂರ್ತಿ ಛಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಸದ್ಭಾವನ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವೈದಿಕ ಪದ್ಧತಿಯಿಂದಾಗಿ ಈ ಹಿಂದೆ ಶೂದ್ರರು ಗ್ರಾಮದೊಳಗೆ ಪ್ರವೇಶ ಮಾಡುವಾಗ ಹಿಂದೆ ಪೊರಕೆ ಕಟ್ಟಿಕೊಳ್ಳುವುದು, ಶಿಕ್ಷಣ, ಆರೋಗ್ಯ, ಧರ್ಮಾಚರಣೆಯಿಂದ ದೂರ ಇಡಲಾಗಿತ್ತು. ಎಲ್ಲಾ ಸಮುದಾಯದ ಮಹಿಳೆಯರನ್ನೂ ಕೂಡ ವೈದಿಕ ಪದ್ಧತಿ ಗುಲಾಮಗಿರಿಗೆ ತಳ್ಳಿ ಕೀಳಾಗಿ ಕಾಣುತ್ತಿತ್ತು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಕಾರಣದಿಂದ ದೇಶದ ಶೂದ್ರರ ಜೊತೆಗೆ ಎಲ್ಲಾ ಸಮುದಾಯದ ಮಹಿಳೆಯರಿಗೂ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿರುವದರಿಂದಲೆ ಇಂದು ಮಹಿಳೆ ಜನಪ್ರತಿನಿಧಿ, ಸಚಿವೆ ಇತರೆ ಸಾಂವಿಧಾನಿಕ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ ಎಂಬುದನ್ನು ಮರೆಯಬಾರದು ಎಂದರು.
ಜಿ.ಬಿ.ವಿನಯ್ ಕುಮಾರ್ ಮಾತನಾಡಿ, ಬಡವರ ಮಕ್ಕಳು ಪ್ರತಿಭಾವಂತರಿದ್ದರೆ ಅವರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತದಂತೆ ಶಿಕ್ಷಣವನ್ನು ಪಸರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
Read also : ಮರ್ಯಾದೆ ಹತ್ಯೆ ಪ್ರಕರಣ:ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ
ವಕೀಲೆ ಜಿ.ಎಚ್.ಭಾಗೀರಥಿ ಮಾತನಾಡಿ, ಎಲ್ಲಾ ಧರ್ಮಿಯರಿಗೂ ಸಂವಿಧಾನದ ಪೀಠಿಕೆತೆ ಮಂತ್ರ, ಪ್ರಾರ್ಥನೆಯಾಗಬೇಕು. ಮಹಿಳಾ ಆಯೋಗದ ಅಧ್ಯಕ್ಷರು ಕ್ರಿಯಾಶೀಲರಾಗಿ ಹಾಗೂ ನಿರ್ಭೀತಿಯಿಂದ ಮಾಡುತ್ತಿರುವ ಸೇವೆಯಿಂದ ರಾಜ್ಯದ ಮಹಿಳಾ ಸಮುದಾಯದಲ್ಲಿ ಆತ್ಮಸ್ಥೈರ್ಯ ಮೂಡಿದೆ ಎಂದರು.
ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪರವರು ಹುಟ್ಟಿರುವ ಮನೆಯನ್ನು ಸ್ಮಾರಕವಾಗಿಸಬೇಕು, ದಾವಣಗೆರೆ ವಿವಿಗೆ ಪ್ರೊ.ಬಿ.ಕೃಷ್ಣಪ್ಪರ ಹೆಸರು ಇಡಬೇಕು, ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದ ನಿರ್ವಸತಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸರ್ಕಾರದ ಗಮನ ಸೆಳೆಯಬೇಕೆಂದು ಡಾ.ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ನೀಡಿದರು.
ಕದಸಂಸ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಮಾತನಾಡಿ, ಬಿ.ಆರ್.ಅಂಬೇಡ್ಕರ್ ರವರ ಚಿಂತನೆಯಿಂದ ಪ್ರೇರಣೆಗೊಂಡು ಹರಿಹರ ದಲಿತ ಚಳವಳಿಯ ತವರೂರು ಆಗಿ ಬೆಳೆಯಿತು. ದಲಿತರು, ಮಹಿಳೆಯರು ಸಂವಿಧಾನ ನೀಡಿರುವ ಹಕ್ಕು ಹಾಗೂ ಜವಾಬ್ದಾರಿಗಳನ್ನು ಅರಿಯಬೇಕೆಂದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಜಿ.ಬಿ.ವಿನಯ್ ಕುಮಾರ್ ಸದ್ಭಾವನ ಪ್ರಶಸ್ತಿ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಎ.ಗೋವಿಂದರೆಡ್ಡಿ, ಅಕ್ಷಯ ಆಸ್ಪತ್ರೆ ಮುಖ್ಯಸ್ಥ ಡಾ.ವಿ.ಟಿ.ನಾಗರಾಜ್, ಬೊಂಗಾಳೆ ಆಸ್ಪತ್ರೆ ಮುಖ್ಯಸ್ಥ ಸಚಿನ್ ಬೊಂಗಾಳೆ, ಬಿಇಒ ಡಿ.ದುರುಗಪ್ಪ, ಭದ್ರಾವತಿ ನಿವೃತ್ತ ಪ್ರಾಚಾರ್ಯ ಶಿವಬಸಪ್ಪ, ಕದಸಂಸ ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ.ಏಳಕೋಟಿ, ಹೊನ್ನಾಳಿಯ ಚನ್ನಕೇಶವ, ಬುಳ್ಳಸಾಗರದ ಸಿದ್ಧರಾಮಣ್ಣ, ಸಿಡಿಪಿಒ ಪ್ರಿಯದರ್ಶಿನಿ, ಬಿ.ಮಗ್ದುಮ್, ಅಲೆಮಾರಿ ಸಮುದಾಯದ ಮುಖಂಡ ಸಣ್ಣ ಅಜ್ಜಯ್ಯ, ದುರುಗಪ್ಪ, ವಕೀಲ ವೀರೇಶ್, ಮಂಜುನಾಥ್ ಎಂ.ಎಸ್.ಕೊಕ್ಕನೂರು, ಕಡ್ಲೆಗೊಂದಿ ತಿಮ್ಮಣ್ಣ, ಚೌಡಪ್ಪ ಸಿ.ಭಾನುವಳ್ಳಿ, ಗದಿಗೆಪ್ಪ ವಾಸನ, ಸುರೇಶ್ ಬಿ. ಕೆಂಚನಹಳ್ಳಿ, ಧರ್ಮರಾಜ್ ಹಳ್ಳಿಹಾಳ್, ರಾಮಣ್ಣ ಹಿಂಡಸಘಟ್ಟ, ಹನುಮಂತ ಡಿ. ಎಳೆಹೊಳೆ, ಗುಡ್ಡದಹಳ್ಳಿ ಮಂಜಪ್ಪ ಇತರರು ಇದ್ದರು.
