ದಾವಣಗೆರೆ : ಮ್ಯಾನ್ಯುಯಲ್ ಸ್ಕಾವೇಂಜರ್ ಸಫಾಯಿ ಕರ್ಮಚಾರಿ ಮಕ್ಕಳಿಗೆ ಇನ್ನು ಮುಂದೆ ವಿದ್ಯಾಭ್ಯಾಸಕ್ಕೆ ಅಗತ್ಯವಿರುವಷ್ಟು ಅನುದಾನವನ್ನು ಮೀಸಲಿಡುವಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಮ್ಯಾನ್ಯುಯಲ್ ಸ್ಕ್ಯಾವೇಂಜರ್ ನೇಮಕಾತಿ ನಿಷೇಧ ಮತ್ತು ಪುನರ್ ವಸತಿ ಕಾಯ್ದೆ -2013 ರ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮ್ಯಾನ್ಯುಯಲ್ ಸ್ಕಾವೇಂಜರ್ ಮತ್ತು ಸಫಾಯಿ ಕರ್ಮಚಾರಿ ಮಕ್ಕಳ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಅಗತ್ಯವಿರುವ ಲ್ಯಾಪ್‍ಟಾಪ್, ಟ್ಯಾಬ್, ವಿದ್ಯಾರ್ಥಿವೇತನ ನೀಡಲು ಮುಂದಾಗಬೇಕು. ಅದರಿಂದ ಆ ಪೀಳಿಗೆಗೆ ಸುಶಿಕ್ಷಿತರಾಗಿ ತಮ್ಮ ಮನೆ ಹಾಗೂ ಸಮುದಾಯದ ಜವಾಬ್ದಾರಿಯನ್ನು ನಿಬಾಯಿಸಬಲ್ಲರು. ಆದ್ದರಿಂದ ವಿವಿಧ ಅಭಿವೃದ್ಧಿ ನಿಗಮಗಳಡಿ ಸಿಗುವ ಅನುದಾನದಡಿ ವಿದ್ಯಾಭ್ಯಾಸಕ್ಕನುಗುಣವಾಗಿ ಶಿಷ್ಯವೇತನ, ಉಚಿತವಾಗಿ ಟ್ಯಾಬ್ ಮತ್ತು ಲ್ಯಾಪ್ ಟಾಪ್‍ಗಳನ್ನು ನೀಡಲು ಅಗತ್ಯವಿರುವಷ್ಟು ಅನುದಾನವನ್ನು ಮೀಸಲೀಡುವಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 388 ಮ್ಯಾನ್ಯುಯಲ್ ಸ್ಕಾವೇಂಜರ್‍ಗಳಿದ್ದು ಅವರಲ್ಲಿ 372 ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. ಉಳಿದ 16 ರಲ್ಲಿ 4 ಜನ ಮೃತಪಟ್ಟಿದ್ದು, 12 ಜನರಿಗೆ ಗುರುತಿನ ಚೀಟಿ ನೀಡಲು ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 388 ಮ್ಯಾನ್ಯುಯಲ್ ಸ್ಕಾವೇಂಜರ್‍ಗಳಲ್ಲಿ 298 ಜನರಿಗೆ ನಿವೇಶನ ಇರುವುದಿಲ್ಲ. ಆದುದರಿಂದ ನಿವೇಶನ ಹಂಚಿಕೆ ಮಾಡಲು ಅಗತ್ಯ ಜಮೀನು ಖರೀದಿಗಾಗಿ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ದೇವರಾಜ್ ಅರಸ್ ವಸತಿ ಯೋಜನೆಯಡಿ ಆರ್.ಜಿ.ಆರ್., ಹೆಚ್.ಸಿ.ಎಲ್ ರವರಿಂದ 59 ಮನೆಗಳು ಗುರಿ ಮಂಜೂರಾಗಿರುತ್ತದೆ. ಅದರಲ್ಲಿ 16 ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಪಡೆಯಲಾಗಿರುತ್ತದೆ. ಬಾಕಿ ಉಳಿದ 43 ಫಲಾನುಭವಿಗಳು ವಿವಿದ ಕಾರಣಗಳಿಂದ ಅಗತ್ಯ ದಾಖಲಾತಿಗಳನ್ನು ನೀಡದೇ ಇರುವುದರಿಂದ ಅನುಮೋದನೆ ನೀಡಲು ಸಾಧ್ಯವಾಗಿರುವುದಿಲ್ಲವೆಂದು ಯೋಜನಾ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಹೊರಗುತ್ತಿಗೆ ಅಥವಾ ನೇರ ನೇಮಕಾತಿ ಮಾಡುವ ಸಂದರ್ಭದಲ್ಲಿ ಮ್ಯಾನ್ಯುಯಲ್ ಸ್ಕಾವೇಂಜರ್‍ಗಳ ಕುಟುಂಬದ ಸದಸ್ಯರಿಗೆ ಮೀಸಲಾತಿಯನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಮಾಡಲಾಗುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಕ್ಕಳಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯದ್ಯಾಂತ ಗ್ರಂಥಾಲಯಗಳನ್ನು ತೆರೆಯಲು 3 ಕೋಟಿಗಳನ್ನು ಮೀಸಲಿಡಲಾಗುವುದು. ಅಗತ್ಯವಿರುವ ಕಡೆ ಗ್ರಂಥಾಲಯಗಳನ್ನು ತೆರೆಯಲು ಕ್ರಮವಹಿಸುವಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಯೋಜನೆಯಡಿ ಕಾರು ಖರೀದಿಸಲು ಧನಸಹಾಯ ಮಂಜೂರಾಗಿದ್ದು ಕಾರು ಖರೀದಿಸಲು ಹೆಚ್ಚಿನ ಮೊತ್ತವನ್ನು ಸಾಲ ಪಡೆಯಲು ಬ್ಯಾಂಕ್‍ಗಳು ನೀರಾಸಕ್ತಿ ತೊರುತ್ತಿವೆ. ಆದುದರಿಂದ ಫಲಾನುಭವಿಗಳಿಗೆ ಕಾರು ಖರೀದಿಸಲು ಬ್ಯಾಂಕ್ ಗಳಿಗೆ ಸೂಚನೆ ನೀಡುವಂತೆ ಸಮಿತಿ ಸದಸ್ಯರು ಮನವಿ ಮಾಡಿದರು.
ಬ್ಯಾಂಕ್‍ಗಳು ಅವುಗಳ ನಿಯಮಗಳಂತೆ ಕಾರ್ಯ ನಿರ್ವಹಿಸುತ್ತವೆ ಬ್ಯಾಂಕ್ ನಿಯಮಗಳಿಗೆ ವಿನಾಯಿತಿ ಇರುವುದಿಲ್ಲ. ಆದಾಗ್ಯೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಮ್ಯಾನ್ಯಯಲ್ ಸ್ಕ್ಯಾವೇಂಜರ್ ನೇಮಕಾತಿ ನಿಷೇಧ ಮತ್ತು ಪುನರ್ ವಸತಿ ಕಾಯ್ದೆ -2013 ರ ಅನುಷ್ಠಾನ ಸಮಿತಿ ಸದಸ್ಯರುಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
