ಐತಿಹಾಸಿಕ ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕಾಗಿದ್ದ ಜಗಳೂರು ಜಿಲ್ಲಾ ಪುನರ್ವಿಂಗಡಣೆಯ ನಂತರ ಇಂದು ದಾವಣಗೆರೆ ಜಿಲ್ಲೆಯ ಒಂದು ತಾಲೂಕಾಗಿದೆ.
ಈ ತಾಲೂಕಿನ ಕಸಬಾ ಹೋಬಳಿಯ ಒಂದು ಭೌಗೋಳಿಕ ಪ್ರದೇಶವನ್ನು ಅಲ್ಲಿನ ಜನರು “ತೊರೆ ಸಾಲು” ಎಂಬ ಉಪನಾಮಧ್ಯೇಯದಿಂದ ಅನಾದಿ ಕಾಲದಿಂದಲೂ ಹೆಮ್ಮೆ ಮತ್ತು ಪ್ರೀತಿಯಿಂದ ಕರೆಯುತ್ತಾರೆ.
ತೊರೆಸಾಲು ಎಂಬ ಹೆಸರನ್ನು ಅಲ್ಲಿ ಒಂದು ಕಾಲದಲ್ಲಿ ತುಂಬಿ ಹರಿಯುತ್ತಿದ್ದ “ಚಿನ್ನ ಹಗರಿ” ಎಂಬ ಹಳ್ಳದ ಎರಡೂ ದಡಕ್ಕೆ ಅಂಟಿಕೊಂಡಿರುವ ಗ್ರಾಮಗಳಾದ ಹಿರೇಮಲ್ಲನ ಹೊಳೆ, ಚಿಕ್ಕಮಲ್ಲನಹೊಳೆ, ಸಾಲೇಹಳ್ಳಿ, ಹಾಲೇಹಳ್ಳಿ, ದೊಣ್ಣೆಹಳ್ಳಿ, ಬೆಣ್ಣೆಹಳ್ಳಿ ಎಂಬ ಗ್ರಾಮಗಳ ಹೆಸರುಗಳೇ ಮೇಲಿನ ಹೆಸರನ್ನು ಪುಷ್ಠೀಕರಿಸುತ್ತವೆ. ಇಂಥಹ ತೊರೆಸಾಲಿನ ಚಿನ್ನಹಗರಿ ಹಳ್ಳದ ದಡದ ಮೇಲಿರುವ ಹಾಲೇಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಅರಳಿರುವ ಮೇರು ವ್ಯಕ್ತಿತ್ವದ ಸಾಹಿತ್ಯ ಪ್ರತಿಭೆಯೇ ಎನ್.ಟಿ.ಎರ್ರಿಸ್ವಾಮಿ.
ಎನ್.ಟಿ.ಎರ್ರಿಸ್ವಾಮಿಯವರು 1959 ನೇ ಇಸವಿ ಜೂನ್ ತಿಂಗಳ 28 ನೇ ತಾರೀಕು ಹಾಲೇಹಳ್ಳಿಯಲ್ಲಿ ದುಗ್ಗಯ್ಯಗಳ ತಿಮ್ಮಪ್ಪ ಮತ್ತು ತಿಮ್ಮವ್ವ ದಂಪತಿಗಳ ಸುಪುತ್ರರಾಗಿ ಜನಿಸಿದರು.
ಹಾಲೇಹಳ್ಳಿಯು ಇಂದಿಗೂ ಆಧುನಿಕತೆಯ ಯಾವುದೇ ಸೋಂಕಿಲ್ಲದೇ ಪರಿಶುದ್ಧವಾದ ಹಳ್ಳಿ ವಾತಾವರಣವನ್ನು ಹೊಂದಿರುವಂತಹ ಹಳ್ಳಿ. ಚಿನ್ನ ಹಗರಿಯ ತಟದ ಹಳ್ಳಿಗಳು ದಟ್ಟ ಬುಡಕಟ್ಟು ಸಂಸ್ಕೃತಿಯ ನೆಲೆವೀಡುಗಳು. ಹಾಗೆಯೇ ಇಲ್ಲಿ ವಾಸವಾಗಿರುವ ಮ್ಯಾಸನಾಯಕರ ಆಚಾರ-ವಿಚಾರ, ಸಂಪ್ರದಾಯ-ಸಂಸ್ಕೃತಿ, ಭಾಷೆ-ನಡವಳಿಕೆ ಎಲ್ಲವೂ ವಿಭಿನ್ನ ಮತ್ತು ವಿಶಿಷ್ಟ.
ಇಂತಹ ಗ್ರಾಮೀಣ ಮತ್ತು ಬುಡಕಟ್ಟು ಸೊಗಡಿನ ಮ್ಯಾಸಬೇಡರ ಕುಟುಂಬದಲ್ಲಿ ಜನ್ಮಿಸಿದ ಎರ್ರಿಸ್ವಾಮಿಯವರು ಭರಪೂರ ಸಂಸ್ಕೃತಿ, ಸಂಪ್ರದಾಯದ ಸೊಗಡನ್ನು ತನ್ನೊಡಲಿನಲ್ಲಿ ತುಂಬಿಕೊಂಡು ಹಾಲೇಹಳ್ಳಿ, ಸಾಲಹಳ್ಳಿ, ತುರುವನೂರು, ಜಗಳೂರು ಹಾಗೂ ಚಿತ್ರದುರ್ಗದ ವಿವಿಧ ಶಾಲೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿ.ಎಸ್‌ಸಿ ಪದವಿಯನ್ನು ಪಡೆದರು. ಪದವಿ ಪೂರೈಸುತ್ತಿದ್ದಂತೆ ಕೆನರಾ ಬ್ಯಾಂಕ್ ಉದ್ಯೋಗ ಇವರನ್ನು ಕೈಬೀಸಿ ಕರೆಯಿತು.
1979 ನೇ ಇಸವಿ ಯಲ್ಲಿ ಕೆನರಾ ಬ್ಯಾಂಕಿಗೆ ಸೇರಿ 2019 ನೇ ಇಸವಿಯವರೆಗೆ ಕರ್ನಾಟಕ ರಾಜ್ಯದ 14 ಜಿಲ್ಲೆಗಳಲ್ಲಿ, ಆಂದ್ರಪ್ರದೇಶದ ನಂದ್ಯಾಲದಲ್ಲಿ ಗುಮಾಸ್ತನಾಗಿ, ಗ್ರಾಮೀಣ ಸೇವಾ ಸ್ವಯಂಸೇವಕರಾಗಿ, ರುಡ್‌ಸೆಟಿ ಸಂಸ್ಥೆಯ ನಿರ್ದೇಶಕರಾಗಿ, ಆದರ್ಶ ಗ್ರಾಮ ಯೋಜನೆಯ ಯೋಜನಾ ನಿರ್ದೇಶಕರಾಗಿ, ಜಿಲ್ಲಾ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕರಾಗಿ, ವಿವಿಧ ಶಾಖೆಗಳಲ್ಲಿ ಶಾಖಾ ಮುಖ್ಯಸ್ಥರಾಗಿ, ಮಹಿಳಾ ಸ್ವಸಹಾಯ ಸಂಘಗಳ ಪರಿಕಲ್ಪಿತರಾಗಿ ವಿವಿಧ ಹುದ್ದೆಗಳಲ್ಲಿ ಸುಮಾರು 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ಕೃಷಿ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ನಿರುದ್ಯೋಗ ನಿವಾರಣೆ, ಅಕ್ಷರದ ಅರಿವು ಮೂಡಿಸುವ ಕೆಲಸ, ಬರಹದ ಮೂಲಕ ಬ್ಯಾಂಕಿಂಗ್ ಕುರಿತು ಅರಿವು ಮೂಡಿಸುವುದು ಹೀಗೆ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಸಮಗ್ರ ಬದಲಾವಣೆಯಲ್ಲಿ ಗಮನಾರ್ಹ ಪಾತ್ರ ವಹಿಸುವುದರ ಮೂಲಕ ನಿರುದ್ಯೋಗ ನಿವಾರಕ, ಮಹಿಳಾ ಸಬಲೀಕರಣದ ರೂವಾರಿ, ಗ್ರಾಮೀಣ ಅಭಿವೃದ್ಧಿಯ ಹರಿಕಾರ, ಅಕ್ಷರದ ಅರಿವು ಮೂಡಿಸಿದ ಮಾಂತ್ರಿಕ ಎನ್ನುವ ಹತ್ತು ಹಲವು ಬಿರುದುಗಳನ್ನು ಮುಡಿಗೇರಿಸಿಕೊಂಡು ಓರ್ವ ಯಶಸ್ವಿ ಬ್ಯಾಂಕ್ ಉದ್ಯೋಗಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು.
ಕರ್ನಾಟಕ ಮತ್ತು ಆಂದ್ರಪ್ರದೇಶದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸ್ವಯಂ ಆಸಕ್ತಿಯಿಂದ 8000 ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿ ಬಲವರ್ಧನೆಗೊಳಿಸಿ ಬ್ಯಾಂಕಿನಿಂದ ಕೋಟ್ಯಾಂತರ ರೂಪಾಯಿಗಳ ಸಾಲ ಸೌಲಭ್ಯವನ್ನು ಒದಗಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿದ್ದು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೊಣ್ಣಹಳ್ಳಿಪುರದಲ್ಲಿ ಕೆಲಸ ಮಾಡುವಾಗ 10000 ಮಹಿಳೆಯರನ್ನು ಸಂಘಟಿಸಿ 1500 ಮಹಿಳಾ ಸ್ವಸಹಾಯ ಸಂಘಗಳಿಗೆ ಒಂದೇ ದಿನ 41 ಕೋಟಿ ರೂಪಾಯಿಗಳ ಸಾಲ ಸೌಲಭ್ಯ ಒದಗಿಸಿ ದಾಖಲೆ ನಿರ್ಮಿಸಿದ್ದು ಅವರ ಜೀವಮಾನದ ಸಾಧನೆಗಳಲ್ಲಿ ಒಂದಾಗಿದೆ.
ಬ್ಯಾಂಕಿಂಗ್ ಸೇವೆಯ ಜೊತೆ ಜೊತೆಗೆ ಸಾಹಿತ್ಯ ಸೇವೆಯಲ್ಲಿಯೂ ಅವರ ಕೊಡುಗೆ ಶ್ಲಾಘನೀಯವಾದುದು. ‘ಬರದ ಬೆಂಗಾಡು’ ಎಂದು ಹೆಸರಾದ ಜಗಳೂರು ತಾಲೂಕಿನಲ್ಲಿ ಉಣಲು, ಉಡಲು ಬರವಿದ್ದ ಕಾಲಘಟ್ಟದಲ್ಲಿ ಅವರ ಸಾಹಿತ್ಯ ಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಎಂದಿಗೂ ಬರವಿರಲಿಲ್ಲ ಎಂಬುದಕ್ಕೆ ಅವರು ಈವರೆಗೆ ಕವನ ಸಂಕಲ ನಗಳು, ಕಥಾ ಸಂಕಲನಗಳು, ಮಹಿಳಾ ಸಬಲೀ ಕರಣ, ಯುವ ಸಬಲೀಕರಣ, ಧಾರ್ಮಿಕ ಕೃತಿಗಳು, ಬ್ಯಾಂಕಿಂಗ್ ವಿಚಾರ ಗಳು,ಜೀವನ ಚರಿತ್ರೆ, ಮಕ್ಕಳ ಕೃತಿಗಳು, ಕಾದಂಬರಿ ಹಾಗೂ ಸಂಪಾದಿತ ಕೃತಿಗಳು ಹೀಗೆ ಬಹು ಆಯಾಮಗಳನ್ನೊಳಗೊಂಡ ಚಂದುಳ್ಳಿ ಚೆಲುವೆ, ಗ್ರಾಮೀಣ ಅಭಿವೃದ್ಧಿಗೆ ಹೊಸ ಆಯಾಮ, ಹೂ ಮನದ ಹುಡುಗಿ, ಬಿರಿದೆದೆಯ ಭಾವಗಳು, ಸಾಧನೆಯ ಪಥದಲ್ಲಿ, ನನ್ನ ಪೆದ್ದಿ, ಸ್ವಸಹಾಯ ಸಂಘಗಳ ಒಂದು ಪರಿಕಲ್ಪನೆ, ಸ್ವಸಹಾಯ ಸಂಘಗಳು- ಪ್ರಶ್ನೆ ಮತ್ತು ಪರಿಹಾರ, ಹಳ್ಳಿ ಹೈದನ ಬ್ಯಾಂಕಿಂಗ್ ಲೋಕ, ಸ್ವಾವಲಂಬಿ ಬದುಕಿಗಾಗಿ ಸಾಲ ಹಾಗೂ ಸಹಾಯಧನ ಯೋಜನೆಗಳು, ಅಂತರಂಗದ ಮಾತು, ಅಡವಿ ಬೆಳದಿಂಗಳು, ಜನ ಸಾಮಾನ್ಯರಿಗಾಗಿ ಬ್ಯಾಂಕಿಂಗ್, ಮಕ್ಕಳ ಮನೋವಿಲಾಸ, ಚಿನ್ನ ಹಗರಿಯ ನುಡಿತೇರು ಸ್ಮರಣಸಂಚಿಕೆ ಮುಂತಾದ 41 ಮೌಲಿಕ ಕೃತಿಗಳನ್ನು ರಚಿಸಿ 34 ಕೃತಿಗಳನ್ನು ಪ್ರಕಟಿಸಿರುವುದೇ ಸಾಕ್ಷಿಯಾಗಿದೆ.
ಜೊತೆಗೆ ಕನ್ನಡ ನಾಡು-ನುಡಿ, ಕಲೆ-ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸಾಹಿತ್ಯಕ ಸಂಘಟನೆಯಲ್ಲಿ ಸದಾ ಮಂಚೂಣಿಯಲ್ಲಿರುವ ಎರ್ರಿಸ್ವಾಮಿಯವರು ಇತರರಿಗೆ ಮಾದರಿಯಾಗಿದ್ದಾರೆ.
“ಹಳ್ಳಿಯ ಹೈದ”ನೊಬ್ಬ ಬ್ಯಾಂಕಿಂಗ್ ಹಾಗೂ ಸಾಹಿತ್ಯ ಲೋಕ ಪ್ರವೇಶಿಸಿ ಅಲ್ಲಿ ತಮ್ಮ ಸದೃಢ ಹೆಜ್ಜೆಗಳ ಗುರುತನ್ನು ಮೂಡಿಸುವುದರ ಮೂಲಕ ವಿಶಿಷ್ಟ ಹಾಗೂ ವಿಭಿನ್ನವಾದ ಸಾಧನೆ ಮಾಡಿರುವುದು ಅತ್ಯಂತ ಸೋಜಿಗ ಮತ್ತು ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಕಿರೀಟಪ್ರಾಯವಾಗಿದೆ. ಕೆನರಾ ಬ್ಯಾಂಕ್ ಸೇವೆಯಿಂದ 2019 ರಲ್ಲಿ ವಯೋನಿವೃತ್ತಿ ಹೊಂದಿದ ಬಳಿಕ ಅವರು ಸಾಹಿತ್ಯ, ಕೃಷಿ, ಗ್ರಾಮಾಭಿವೃದ್ಧಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವುದು ಇತರರಿಗೆ ಚೇತೋಹಾರಿಯಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಂಟು: ಜಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ, ಕವಿಗೋಷ್ಠಿ, ವಿಚಾರ ಗೋಷ್ಠಿ, ಸಾಧಕರೊಂದಿಗೆ ಸಂವಾದ ಮುಂತಾದ ಹಲವಾರು ಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನೂರಾರು ಎಲೆಮರೆಯ ಸಾಹಿತ್ಯ ಪ್ರತಿಭೆಗಳನ್ನು ಬೆಳಕಿಗೆ ತಂದು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇಂದು ಜಗಳೂರು ತಾಲೂಕಿನಲ್ಲಿ ನೂರಾರು ಕವಿಗಳು, ಲೇಖಕರು ಇದ್ದಾರೆ ಎಂದರೆ ಇದರ ಹಿಂದೆ ಎನ್.ಟಿ.ಎರ್ರಿಸ್ವಾಮಿಯವರ ಶ್ರಮ ಸಾಕಷ್ಟಿದೆ. ಹಾಗೆಯೇ 2021 ನೇ ಇಸವಿಯಲ್ಲಿ ದಾವಣಗೆರೆ ಜಿಲ್ಲಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಇವರಿಗೆ ಒಲಿದು ಬಂದಿದ್ದು ಇವರ ಸಾಹಿತ್ಯಕ ಜೀವನಕ್ಕೆ ಭೂಷಣಪ್ರಾಯವಾಗಿದೆ.
2024 ನೇ ಇಸವಿ ಡಿಸೆಂಬರ್ ಮಾಹೆಯಲ್ಲಿ ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ 87 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಗಿತ್ತು. 2025 ನೇ ಇಸವಿ ಜನವರಿ ತಿಂಗಳಲ್ಲಿ ಜಗಳೂರಿನಲ್ಲಿ ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ ಇವರ ಮುಂದಾಳತ್ವದಲ್ಲಿ, ಪ್ರೊ.ಎ.ಬಿ.ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ದಾವಣಗೆರೆ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ತಿಂಗಳುಗಟ್ಟಲೆ ಅವಿರತವಾಗಿ ಶ್ರಮಿಸಿ ಸಮ್ಮೇಳನವು ಅಭೂತಪೂರ್ವವಾಗಿ ಯಶಸ್ವಿಯಾಗಲು ಕಾರಣೀಕರ್ತರಾಗಿದ್ದರು. ಆ ಮೂಲಕವಾಗಿ ತಾನೊಬ್ಬ ಸಾಹಿತಿ ಮಾತ್ರವಲ್ಲದೆ ಸಾಹಿತ್ಯಕ ಸಂಘಟಕ ಎನ್ನುವುದನ್ನೂ ನಿರೂಪಿಸಿದ್ದರು.
ಇಷ್ಟಲ್ಲದೇ ತಮ್ಮ ಬ್ಯಾಂಕಿಂಗ್ ಮತ್ತು ಸಾಹಿತ್ಯ ಕ್ಷೇತ್ರದ ಸೇವೆ ಹಾಗೂ ಸಾಧನೆಗಾಗಿ ರಾಜ್ಯಾದ್ಯಂತ ನೂರಾರು ಪ್ರಶಸ್ತಿ, ಸನ್ಮಾನಗಳ ಗೌರವವನ್ನೂ ಪಡೆದರು. ಗೊರೂರು ಸಾಹಿತ್ಯ ಪ್ರಶಸ್ತಿ, ಜೆ.ಎಂ.ಇಮಾಮ್ ಸ್ಮಾರಕ ರಾಜ್ಯ ಪ್ರಶಸ್ತಿ, ಲೋಹಿಯಾ ರಾಜ್ಯ ಪ್ರಶಸ್ತಿ, ಶ್ರೇಷ್ಠ ಕೃತಿ ರತ್ನ ರಾಜ್ಯ ಪ್ರಶಸ್ತಿ, ಯುನೈಟೆಡ್ ರೈಟರ್ಸ್ ಅಸೋಸಿಯೇಷನ್‌ನ ಫೆಲೋಶಿಪ್ ಗೌರವ, ವಾಲ್ಮೀಕಿ ಪ್ರಶಸ್ತಿ, ಕವಿರತ್ನ ಪ್ರಶಸ್ತಿ, ಗಾಂಧಿ ಸಹೃದಯಿ ಸೇವಾ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಸಿದ್ಧಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ಎ ಜೆಮ್ ಆಫ್ ಕರ್ನಾಟಕ ಅವಾರ್ಡ್, ಜಗಳೂರು ಸಿರಿ ಪ್ರಶಸ್ತಿ, ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಾಲ್ಮೀಕಿ ಚೈತನ್ಯ ಪ್ರಶಸ್ತಿ, ಜಿಲ್ಲಾ ಮಹಾಲಿಂಗರಂಗ ಸಾಹಿತ್ಯ ಪ್ರಶಸ್ತಿ ಅವುಗಳಲ್ಲಿ ಮುಖ್ಯವಾದವುಗಳು.
2019 ರಲ್ಲಿ ಅವರು ಕೆನರಾ ಬ್ಯಾಂಕಿನಿಂದ ವಯೋನಿವೃತ್ತಿಯಾಗುವ ಸಂದರ್ಭದಲ್ಲಿ ಅವರ ಅಭಿನಂದನಾ ಬಳಗದ ವತಿಯಿಂದ ಎಂ.ಬಸವಪ್ಪ ಅವರ ಸಂಪಾದಕತ್ವದಲ್ಲಿ “ತೊರೆಸಾಲ-ನೊರೆಹಾಲು” ಅಭಿನಂದನಾ ಗ್ರಂಥವನ್ನು ಅವರಿಗೆ ಸಮರ್ಪಿಸಲಾಗಿತ್ತು.
ದಿನಾಂಕ 29.12.2025 ರ ಸೋಮವಾರ ದಾವಣಗೆರೆಯ ರಾಷ್ಟ್ರಕವಿ ಕುವೆಂಪು ಭವನದ ಪ್ರೊ.ಎಸ್.ಬಿ.ರಂಗನಾಥ್ ವೇದಿಕೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯ ಅಂಗವಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಸಂಸ್ಕಾರ ಭಾರತೀ ಕರ್ನಾಟಕ-ದಾವಣಗೆರೆ, ಲಯನ್ಸ್ ಕ್ಲಬ್ ದಾವಣಗೆರೆ-ವಿದ್ಯಾನಗರ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘಗಳ ಸಹಯೋಗದಲ್ಲಿ ಆಚರಿಸುತ್ತಿರುವ “ವಿಶ್ವ ಮಾನವ ದಿನಾಚರಣೆ” ಯಲ್ಲಿ ಎನ್.ಟಿ.ಎರ್ರಿಸ್ವಾಮಿ ರಚಿಸಿರುವ “ಸಾಧನೆಗೆ ಹಾದಿ ನೂರು”- ಲೇಖನಗಳ ಸಂಕಲನ, “ಕೆಂಚಾಪುರದ ಕ್ರಾಂತಿ”- ಮಿನಿ ಕಾದಂಬರಿ, “ಕೆಂಚಾಪುರಂ ಕ್ರಾಂತಿಲು”- ಮಿನಿ ಕಾದಂಬರಿ ಕನ್ನಡ ಲಿಪಿಯಲ್ಲಿ ಮ್ಯಾಸನಾಯಕರ ಭಾಷೆಯಲ್ಲಿ, “ಜೇನ ಹನಿ”-ಹನಿಗವನಗಳ ಸಂಕಲನ ಹಾಗೂ “ಅರಿವಿನ ದೀವಿಗೆ”- ಅಂಕಣ ಬರಹಗಳ ಸಂಕಲನ ಎಂಬ ಐದು ವಿಶಿಷ್ಟ ಕೃತಿಗಳು ಏಕ ಕಾಲದಲ್ಲಿ ಏಕ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಸಮಸ್ತ ಕನ್ನಡಾಭಿಮಾನಿಗಳು, ಸಾಹಿತ್ಯ ಪ್ರಿಯರಿಗೆ ಹಾಗೂ ಅವರ ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿ.
ಮುಂದಿನ ದಿನಗಳಲ್ಲಿ ಅವರಿಂದ ಇನ್ನಷ್ಟು ಕೃತಿಗಳು ಸಾಹಿತ್ಯ ಲೋಕದ ಭಂಡಾರಕ್ಕೆ ಸೇರುವಂತಾಗಲಿ ಹಾಗೂ ಅವರ ಬದುಕು ತೊರೆಸಾಲಿನಂತೆ ಸಮೃದ್ಧತೆಯಿಂದ ತುಂಬಲಿ.
ಲೋಕಾರ್ಪಣೆಗೊಳ್ಳುವ ಕೃತಿಗಳು:
1.ಸಾಧನೆಗೆ ಹಾದಿ ನೂರು- ಲೇಖನಗಳ ಸಂಕಲನ
2.ಕೆಂಚಾಪುರದ ಕ್ರಾಂತಿ- ಮಿನಿ ಕಾದಂಬರಿ
3.ಕೆಂಚಾಪುರಂ ಕ್ರಾಂತಿಲು- ಮಿನಿ ಕಾದಂಬರಿ ಕನ್ನಡ ಲಿಪಿಯಲ್ಲಿ ಮ್ಯಾಸನಾಯಕರ ಭಾಷೆಯಲ್ಲಿ
4.ಜೇನ ಹನಿ- ಹನಿಗವನಗಳ ಸಂಕಲನ
5.ಅರಿವಿನ ದೀವಿಗೆ- ಅಂಕಣ ಬರಹಗಳ ಸಂಕಲನ
ಕೆ.ರಾಘವೇಂದ್ರ ನಾಯರಿ
ಗೌರವ ಕೋಶಾಧ್ಯಕ್ಷ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ದಾವಣಗೆರೆ
ಮೊ: 9844314543
ಮೈಲ್: krnairycbeu@gmail. com
