ದಾವಣಗೆರೆ.ಜ.7; ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 45 ಸಾವಿರ ರೂ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ಆದೇಶಿಸಿದೆ.
ವಿನಾಯಕ(28) ಶಿಕ್ಷೆಗೆ ಗುರಿಯಾದ ಆರೋಪಿ. 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಕಳೆದ 01/10/2022 ರಂದು ಶನಿವಾರ ಶಾಲೆಯಿಂದ ಆಟೋದಲ್ಲಿ ಕರೆದೊಯ್ದಿದ್ದ ಆರೋಪಿ ವಿನಾಯಕನ ವಿರುದ್ಧ ಬಾಲಕಿಯ ಪೋಷಕರು ಹದಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶಾಲೆಯನ್ನು ಮುಗಿಸಿಕೊಂಡ ವಾಪಾಸು ಊರಿಗೆ ಹೋಗುವಾಗ ದೂರುದಾರನ ಮಗಳನ್ನು ಬೆದರಿಸಿ ತನ್ನ ಆಟೋದಲ್ಲಿ ಬಲವಂತವಾಗಿ ಹತ್ತಿಸಿಕೊಂಡು ಅಪಹರಣ ಮಾಡಿಕೊಂಡು ಕಿರುಚಾಡಿದರೆ ನಿನ್ನನ್ನು ಇಲ್ಲಿಯೇ ಸಾಯಿಸಿಬಿಡುತ್ತೇನೆಂದು ಬೆದರಿಕೆ ಹಾಕಿ ಆಟೋದಲ್ಲಿ ಕರೆದುಕೊಂಡು ಹೋಗಿ ಅಪ್ರಾಪ್ತೆಯನ್ನು ಬಲವಂತವಾಗಿ ಹೆದರಿಸಿ ಅತ್ಯಾಚಾರಮಾಡಿರುತ್ತಾನೆ.
ಆರೋಪಿಯು ಅಪ್ರಾಪ್ತ ವಯಸ್ಕಳನ್ನು ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಆಟೋದಲ್ಲಿ ಅಪಹರಣ ಮಾಡಿಕೊಂಡು ಹೋಗಿ ನಂತರ ಅವಳ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿರುವುದು ಹಾಗೂ ಅಪ್ರಾಪ್ತ ವಯಸ್ಕಳು ಎಂದು ಗೊತ್ತಿದ್ದರು ಬಾಲ್ಯವಿವಾಹ ಮಾಡಿಕೊಂಡಿರುವುದು ತನಿಖೆಯಿಂದ ಹಾಗೂ ಸಂಗ್ರಹಿಸಿದ ದಾಖಲೆಗಳಿಂದ, ಸಾಕ್ಷಿದಾರರ ಹೇಳಿಕೆಗಳಿಂದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
Read also : ಮುಸ್ಲಿಂ ಒಕ್ಕೂಟದ ಸಂಚಾಲಕರಾಗಿ ವಕೀಲ ನಜೀರ್ ಅಹ್ಮದ್ ಆಯ್ಕೆ
ಆರೋಪಿ ವಿನಾಯಕನ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಆರೋಪಿ ವಿನಾಯಕ ನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 45,000/- ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿತರಿಂದ ವಸೂಲು ಮಾಡಿದ ದಂಡದ ಒಟ್ಟು ಮೊತ್ತ 45,000/-ರೂಗಳನ್ನು ಪ್ರಕರಣದ ಸಂತ್ರಸ್ಥೆಗೆ ನೀಡುವಂತೆ ಹಾಗೂ ಸಂತ್ರಸ್ಥೆಗೆ ಸರ್ಕಾರದಿಂದ 4 ಲಕ್ಷ ರೂ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ನೊಂದವರ ಪರವಾಗಿ ಸರ್ಕಾರಿ ವಕೀಲರಾದ ಬಸವರಾಜ್ ಎ. ಎಂ ರವರು ನ್ಯಾಯ ಮಂಡನೆ ಮಾಡಿರುತ್ತಾರೆ
