ಉಂಡು ನೂರಡಿ ಇಟ್ಟು! ಕೆಂಡಕ್ಕೆ ಕೈಕಾಸಿ
ಗಂಡುಭುಜ ಮೇಲ್ಮಾಡಿ ಮಲಗಲು ವೈದ್ಯನ
ಮಿಂಡನಂತಕ್ಕು ಸರ್ವಜ್ಞ.
ಯೋಗವೆಂದರೆ ಮಾನಸಿಕ ಚಂಚಲತೆಯ ಮೇಲೆ ನಿರ್ಬಂಧ ಹೇರುವುದು, ಯೋಗವೆಂದರೆ ದೇಹ, ಮನಸ್ಸು ಮತ್ತು ಆತ್ಮಗಳನ್ನು ಒಂದುಗೂಡಿಸುವ ಒಂದು ಅಭ್ಯಾಸ. ಹಿಂದಿನ ಕಾಲದಲ್ಲಿ ನಮ್ಮ ಪ್ರಾಚೀನ ಆಹಾರ ಪದ್ದತಿಯೇ ಔಷಧಿಯಾಗಿತ್ತು.
ಇಂದು ಔಷಧಿಗಳೆ ಆಹಾರವಾಗಿವೆ. ಆಧುನಿಕ ಯುಗದಲ್ಲಿ ಮಾನವನು ಆಹಾರ ಮತ್ತು ಆರೋಗ್ಯದ ಬಗ್ಗೆ ತುಂಬಾ ನಿರ್ಲಕ್ಷ್ಯ ವಹಿಸುತ್ತಿದ್ದಾನೆ. ಅಂದು ದೈಹಿಕ ಶ್ರಮ ಹೆಚ್ಚಾಗಿದ್ದು, ಉತ್ತಮ ಆಹಾರ ಪದ್ದತಿ ಯಿತ್ತು. ಇಂದು ಒತ್ತಡದ ಜೀವನ, ಆಹಾರ ಶೈಲಿ, ದೈಹಿಕ ದಣ ವಿಲ್ಲದಿರುವುದರಿಂದ ಅನೇಕ ರೋಗಗಳು ಉಲ್ಬಣಸಿವೆ.
ಯೋಗಾಸನಗಳು : ವಜ್ರಾಸನ, ಮಂಡೂಕಾಸನ, ಶಶಾಂಕಾಸನ, ಗೋಮುಖಾಸನ, ವಕ್ರಾಸನ, ವೀರಭದ್ರಾಸನ, ಪಶ್ಚಿಮೋತ್ತಾಸನ, ತ್ರಿಕೋನಾಸನ, ಧನುರಾಸನ, ವೃಕ್ಷಾಸನ, ಭುಜಂಗಾಸನ, ತಾಡಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ಪವನ ಮುಕ್ತಾಸನ, ಶವಾಸನಗಳನ್ನು ಮಾಡಿದರೆ ದೇಹ ಸುಸ್ಥಿತಿಯಲ್ಲಿದ್ದು, ಸದೃಡವಾದ ಮತ್ತು ಸುಂದರ ಆಕರ್ಷಕ ದೇಹದ ಆಕೃತಿಯನ್ನು ಪಡೆಯುತ್ತೇವೆ.
ಲಾಭಗಳು : ಭಸ್ತ್ರಿಕಾ,ಕಪಾಲಭಾತಿ, ಬಾಹ್ಯ ಪ್ರಾಣಾಯಾಮ, ಉಜ್ಜಾಯಿ, ಅನುಲೋಮ ವಿಲೋಮ, ಪ್ರಾಣಾಯಾಮಗಳನ್ನು ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ, ಒತ್ತಡ ನಿವಾರಣೆ, ರಕ್ತದೊತ್ತಡವನ್ನು ಕಡಿಮೆಯಾಗಿ, ಆತಂಕ ದೂರವಾಗಿ, ಮಧುಮೇಹ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆಯುಷ್ಯ ವೃದ್ಧಿಯಾಗಿ, ಕಫ, ವಾತ, ಪಿತ್ತದಂತ ತ್ರಿದೋಷಗಳು ನಿವಾರಣೆಯಾಗುತ್ತವೆ. 
ನೆಗಡಿ, ಬೊಜ್ಜು ಕರಗುವಿಕೆ, ಕೀಲು ನೋವಿನಿಂದ ಮುಕ್ತಿ ಹೊಂದಿ ಮಾನಸಿಕ ನೆಮ್ಮದಿ ಸಿಗುತ್ತದೆ. ಉದರ ರೋಗ ನಿವಾರಣೆಯಾಗಿ ದೇಹದಲ್ಲಿರುವ 72 ಸಾವಿರ ನಾಡಿಗಳು ಪರಿಶುದ್ದಗೊಳ್ಳುವ ಪ್ರಾಣಾಯಾಮ ಗಳು ಜೀವ ಸಂಜೀವಿನಿಗಳಾಗಿವೆ.
ಆತ್ಮಸ್ಥೈರ್ಯ :ಯೋಗಾಭ್ಯಾಸದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆತ್ಮವಿಶ್ವಾಸವೊಂದಿದ್ದರೆ ಎಂತಹ ಖಾಯಿಲೆಯನ್ನು ಎದುರಿಸಬಹುದು. ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರಿಂದ ಯಾವುದೆ ಕೆಲಸಕ್ಕೆ ಸನ್ನದ್ದರಾಗಿ “ಎಲ್ಲವೂ ನನ್ನಿಂದ ಸಾಧ್ಯ, ನಾನು ಮಾಡಬಲ್ಲೆ.” ಎಂಬ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಮೂಡುತ್ತದೆ.
ನೆನಪಿನ ಶಕ್ತಿ ವೃದ್ಧಿ : ಯೋಗದಿಂದ ಬುದ್ಧಿ ಚುರುಕುಗೊಂಡು ದೇಹ ಬಲಿಷ್ಠವಾಗುವುದು ಮತ್ತು ಭಯ, ದುಗುಡ ದೂರವಾಗುತ್ತದೆ. ಓಂಕಾರ, ಭ್ರಾಮರಿ, ಕೆಲವು ಪ್ರಾಣಾಯಾಮಗಳು ಮತ್ತು ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗಿ ನೆನಪಿನ ಶಕ್ತಿ ವೃದ್ಧಿಸುತ್ತದೆ. ಚಂಚಲತೆ ನಿವಾರಣೆಯಾಗುತ್ತದೆ.
ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚೆ ಎದ್ದು ಯೋಗದ ಮೂಲಕ ನಮ್ಮ ದಿನಚರಿ ಪ್ರಾರಂಭವಾಗಬೇಕು, ಸದಾ ಚಟುವಟಿಕೆ ಮತ್ತು ಕ್ರಿಯಾಶಿಲತೆಯಿಂದ ಸೂರ್ಯ ನಮಸ್ಕಾರ, ಓಂಕಾರ ಜಪಿಸುವುದು, ಇತ್ಯಾದಿ ದೈಹಿಕ ಚಟುವಟಿಕೆ ಮಾಡುವುದರಿಂದ ಶರೀರದಲ್ಲಿರುವ ವಿಷ ಹೋರ ಹಾಕುವುದು.
Read also : ರಸ್ತೆ ಸುರಕ್ಷತೆ, ತುರ್ತು ಚಿಕಿತ್ಸೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕಟ್ಟುನಿಟ್ಟಿನ ಸೂಚನೆ
ದೇಹದಲ್ಲಿ ರಕ್ತ ಸಂಚಾರ ಚನ್ನಾಗಿ ಆಗಿ ಪಚನಕ್ರಿಯೆ ಉತ್ತಮಗೊಳ್ಳುವುದು. ನಮ್ಮ ನಿಜ ವೈರಿಗಳೆಂದರೆ ಉಪ್ಪು, ಎಣ್ಣೆ, ಮಸಾಲೆ, ಸಕ್ಕರೆ. ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸುವುದರಿಂದ ಆರೋಗ್ಯವನ್ನು ಸುಸ್ಥಿಯಲ್ಲಿಡಬಹುದು.
ಸೊಪ್ಪು, ತರಕಾರಿ, ಕಾಳು, ಹಣ್ಣುಗಳನ್ನು ಮತ್ತು ಸಾವಯವ ಆಹಾರಗಳನ್ನು ಯಥೇಚ್ಛವಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಂದು ಎಲ್ಲಾ ಖಾಯಿಲೆಗಳಿಗೆ ಯೋಗ ರಾಮಬಾಣವಾಗಿದೆ. ಯೋಗ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಅತ್ಯವಶ್ಯಕವಾಗಿದೆ. ನಿತ್ಯ ಒಂದು ತಾಸು ನಮಗಾಗಿ ನಮ್ಮ ಆರೋಗ್ಯಕ್ಕಾಗಿ ಯೋಗ ಮಾಡಿದರೆ ಆರೋಗ್ಯ ಸಂಪತ್ತು ನಮ್ಮದಾಗುತ್ತದೆ.
ಹೆಚ್.ಮಲ್ಲಿಕಾರ್ಜುನ,
ಕನ್ನಡ ಉಪನ್ಯಾಸಕರು,
ಯೋಗ ತರಬೇತುದಾರರು,
ಹರಪನಹಳ್ಳಿ
