ದಾವಣಗೆರೆ,ಫೆ.25 : ಜಿಲ್ಲೆಯಲ್ಲಿ ಏಪ್ರಿಲ್ 16 ರಿಂದ ಮೇ 15 ರವರೆಗೆ 30 ದಿನಗಳ ಕಾಲ ಭಾರತದ ಜನಗಣತಿ 2027 ರ ಸಮೀಕ್ಷೆ ನಡೆಯಲಿದ್ದು ಸಮೀಕ್ಷೆಗೆ ಎಲ್ಲಾ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರ ಸ್ವಾಮಿ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಭಾರತದ ಜನಗಣತಿ 2027 ರ ಮೊದಲ ಹಂತದ ಕ್ಷೇತ್ರ ಕಾರ್ಯಚರಣೆ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದ ಜನಗಣತಿ 2027 ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸೂಚನೆ ನೀಡಿದರು.
ಸಮೀಕ್ಷೆಯು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಈ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಗಣತಿದಾರರು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳು ಗಣತೀದಾರರಿಗೆ ತರಬೇತಿ ನೀಡಬೇಕು, ಸಮೀಕ್ಷೆಯ ಗುಣ ಮಟ್ಟ ಕಾಪಾಡಿಕೊಳ್ಳಲು ಉತ್ತಮ ಸಾಮರ್ಥ್ಯವುಳ್ಳವರನ್ನು ಮಾತ್ರ ಗಣತಿದಾರರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಈ ಹಿಂದೆ ಸಮೀಕ್ಷೆಯ ಸಂದರ್ಭದಲ್ಲಿ ಕಂಡುಬಂದ ತಾಂತ್ರಿಕ ತೊಂದರೆ ಗಳು ಮತ್ತು ಗೊಂದಲಗಳನ್ನು ಪರಿಹರಿಸಲಾಗಿದೆ. ಈ ಬಾರಿ ಸಮೀಕ್ಷೆಯನ್ನು ಯಾವುದೇ ದೋಷವಿಲ್ಲದೆ ನಡೆಸಲು ಆದ್ಯತೆ ನೀಡಲಾಗಿದೆ ಎಂದರು.
ಯಾವುದೇ ಕಾರಣಕ್ಕೂ ಸಮೀಕ್ಷೆಯ ಸಂದರ್ಭದಲ್ಲಿ ಅನಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳದಂತೆ ಸೂಚಿಸಲಾಗಿದ್ದು, ಒಂದು ವೇಳೆ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಬಂದರೆ, ನೇರವಾಗಿ ಬಿಇಓ ಗಳು (BEO) ಮತ್ತು ತಾಲೂಕು ಮಟ್ಟದ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ಈ ಸಮೀಕ್ಷೆಯು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ದಿಕ್ಸೂಚಿಯಾಗಲಿದ್ದು, ಸಿಬ್ಬಂದಿಗಳು ಯಾವುದೇ ಲೋಪದೋಷಗಳಿಲ್ಲದೆ ಸಮೀಕ್ಷೆ ನಡೆಸಬೇಕೆಂದು ತಿಳಿಸಿದರು.
Read also : ಪಾಸ್ ವಿಥೌಟ್ ಹಿಂದಿ ಕಾನೂನು ಜಾರಿಗೆ ಆಗ್ರಹ
ತಹಶೀಲ್ದಾರ್, ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಬಿ.ಸಿ.ಎಂ ಅಧಿಕಾರಿಗಳನ್ನು ಒಳಗೊಂಡ ವಾಟ್ಸ್ ಆ್ಯಪ್ ಗ್ರೂಪ್ ರಚಿಸುವಂತೆ ಸೂಚಿಸಿ ದರು.
ವರ್ಗಾವಣೆಯಾಗಿರುವವರು ಅಥವಾ ನಿವೃತ್ತರಾಗಿರುವವರ ಜಾಗಕ್ಕೆ ಬೇರೆ ಸಿಬ್ಬಂದಿಗಳನ್ನು ನೇಮಕ ಮಾಡಿ, ಅನಾರೋಗ್ಯಪೀಡಿತರು ಅಥವಾ ಗರ್ಭಿಣಿಯರು, ಹಾಲುಣಿಸುವ ತಾಯಂದಿರನ್ನು ಕೆಲಸಕ್ಕೆ ನಿಯೋಜಿಸಬಾರದು. ಡ್ರಾಪ್ ಲೆವೆಲ್ 1% ಕ್ಕಿಂತ ಕಡಿಮೆ ಇರಬೇಕು, ಈ ನಿಟ್ಟಿನಲ್ಲಿ ಗುಣಮಟ್ಟದ ಕೆಲಸ ಮಾಡಬೇಕು ಎಂದರು.
ತರಬೇತಿಯು ಮಾರ್ಚ್ 11 ರವರೆಗೂ ನಡೆಯಲಿದೆ. ಕ್ಷೇತ್ರ ಅಧಿಕಾರಿಗಳಿಗೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ನ ಮೊದಲ ವಾರದೊಳಗೆ ತರಬೇತಿ ನೀಡಬೇಕು, ಮತ್ತು ಮಾರ್ಚ್ 4ರೊಳಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳಬೇಕು. ಮಾನವ ಸಂಪನ್ಮೂಲದ ಗುಣಮಟ್ಟ ಬಹಳ ಮುಖ್ಯ. ಯಾರು ಆರ್ಥಿಕ ಸರ್ವೆ ಮಾಡಿದರೋ ಅವರನ್ನೇ ನೇಮಿಸಿಕೊಳ್ಳುವುದು ಅನುಕೂಲಕರ. ಪ್ರತಿ ಬ್ಲಾಕ್‌ನಲ್ಲಿ ಕನಿಷ್ಠ ಇಬ್ಬರು ಎಣಿಕೆದಾರರನ್ನು ನೇಮಿಸಬೇಕು. ಮನೆಪಟ್ಟಿ ಮಾಡುವಾಗ ಸರಿಯಾಗಿ ಮ್ಯಾಪಿಂಗ್ ಮಾಡಬೇಕು. ಈ ಮಾಹಿತಿಯನ್ನು ಎಕ್ಸೆಲ್ ಶೀಟ್‌ನಲ್ಲಿ ಸಿದ್ಧವಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಣುಕಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನೀಲಾ, ಡಿಡಿಪಿಐ ಕೊಟ್ರೇಶ್, ಜನಗಣತಿ ನೋಡಲ್ ಅಧಿಕಾರಿ ವಿವೇಕ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಆನ್ಲೈನ್ ಮೂಲಕ ಉಪಸ್ಥಿತರಿದ್ದರು.
