ದಾವಣಗೆರೆ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ವೃಂದ ಸಂಘಗಳ ನೌಕರರು ಮಾಯಕೊಂಡ ಶಾಸಕ ಕೆ.ಎಸ್ ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ನೌಕರರು, ರಾಜ್ಯದ ಎಲ್ಲಾ ಸರ್ಕಾರಿಗಳಿಗೆ ಸಕಾಲಕ್ಕೆ ಇಲಾಖೆಯಿಂದ ಸಮರ್ಪಕವಾಗಿ ಔಷಧಗಳನ್ನು ಪೂರೈಕೆ ಮಾಡದಿರುವುದು, ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರ್ಕಾರದ ಆದೇಶವಿದ್ದರೂ ಸಹ ಉಲ್ಲಂಘಿಸಿ, 1973 ರಿಂದ ಈವರೆಗೂ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ, ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಈವರೆಗೂ ಪ್ರಕಟಿಸಿಲ್ಲ, ಇಲಾಖೆಯ ಎಲ್ಲಾ ವೃಂದದ ಅಧಿಕಾರಿ, ನೌಕರರನ್ನು ಕಳೆದ ಐದು ವರ್ಷಗಳಿಂದ ಮುಂಬಡ್ತಿ ನೀಡಿಲ್ಲ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಿ ನಮ್ಮ ಬೇಡಿಕೆ ಈಡೇರಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಅಲ್ಲದೇ ನಿಯಮಗಳಲ್ಲಿ ಅವಕಾಶವಿದ್ದರೂ ಸೇವಾನಿರತ ವೈದ್ಯರು, ಅಧಿಕಾರಿ, ನೌಕರರ ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡುತ್ತಿಲ್ಲ. ಇಲಾಖೆಯ ವರ್ಗಾವಣೆ ಕಾಯ್ದೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸದೆ ಅವೈಜ್ಞಾನಿಕವಾಗಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವುದನ್ನು ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ನೌಕರರ ಮನವಿ ಪತ್ರ ಸ್ವೀಕರಿಸಿದ ಶಾಸಕ ಕೆ .ಎಸ್ .ಬಸವಂತಪ್ಪ, ನಿಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೌಕರರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಮಸ್ತ ಅಧಿಕಾರಿ ಹಾಗೂ ನೌಕರರು ಉಪಸ್ಥಿತರಿದ್ದರು.
