ದಾವಣಗೆರೆ.ಮಾ.1: ಒಳ ಮೀಸಲಾತಿ ವರ್ಗೀಕರಣ ಜಾರಿಗೆ ತರಲು ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ಮಾದಿಗ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ವಿವಿಧ ಮಾದಿಗಪರ ಸಂಘಟನೆಗಳ ಒಕ್ಕೂಟವು ಇದೇ ಮಾರ್ಚ್ 06 ರಂದು ‘ದಾವಣಗೆರೆ ಬಂದ್’ ಗೆ ಕರೆ ನೀಡಿದೆ.
ಭಾನುವಾರ ನಗರದಲ್ಲಿ ನಡೆದ ವಿವಿಧ ತಾಲ್ಲೂಕುಗಳ ಮುಖಂಡರ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ನಂತರ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಬಸವಂತಪ್ಪ ಅವರನ್ನು ಪ್ರತಿಭಟನಾಕಾರರು ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“35 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ರಾಜ್ಯಪಾಲರಿಂದ ಅಂಕಿತಗೊAಡು ಕಾಯ್ದೆಯಾಗಿರುವ ಒಳ ಮೀಸಲಾತಿಯನ್ನು ಸಿದ್ದರಾಮಯ್ಯ ಸರ್ಕಾರದ ಕೆಲವು ಸಚಿವರು ವಿರೋಧಿಸುತ್ತಿದ್ದಾರೆ. ಇದು ಸಮಾಜಕ್ಕೆ ಮಾಡುತ್ತಿರುವ ದ್ರೋಹ. ಪ್ರಸ್ತುತ 56 ಸಾವಿರ ಉದ್ಯೋಗಗಳನ್ನು ಹಳೆ ಮೀಸಲಾತಿ ಆಧಾರದ ಮೇಲೆ ಭರ್ತಿ ಮಾಡುತ್ತಿರುವುದು ಮಾದಿಗ ಸಮುದಾಯದ ಹಕ್ಕನ್ನು ಕಸಿದುಕೊಂಡAತೆ,” ಎಂದು ಮುಖಂಡರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.
ಶಾಸಕ ಕೆ.ಬಸವಂತಪ್ಪ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. “ಸಮುದಾಯದ ಪ್ರತಿನಿಧಿಯಾಗಿ ನೀವು ಸದನದಲ್ಲಿ ಧ್ವನಿ ಎತ್ತುತ್ತಿಲ್ಲ. ಸಮಾಜದ ಋಣ ತೀರಿಸಬೇಕಾದ ನೀವು ಮೌನವಾಗಿರುವುದು ಸರಿಯಲ್ಲ. ಸರ್ಕಾರದ ಕಿವಿ ಹಿಂಡಿಯಾದರೂ ಒಳ ಮೀಸಲಾತಿ ಜಾರಿಗೊಳಿಸಿ ನ್ಯಾಯ ಕೊಡಿಸಬೇಕು,” ಎಂದು ಹಿರಿಯ ಮುಖಂಡ ಆಲೂರು ನಿಂಗರಾಜ ಆಗ್ರಹಿಸಿದರು.
Read also : ದಾವಣಗೆರೆ ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಬಿಸಿಗಾಳಿ: ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಹಾಗೂ ಮಾರ್ಗಸೂಚಿ ಪ್ರಕಟ
ಸಭೆಯಲ್ಲಿ ಮಾಜಿ ಕಾರ್ಪೊರೇಟ್ ಎಂ ಹಾಲೇಶ್, ಮಾದಿಗ ಸಮಾಜದ ಹಿರಿಯ ಮುಖಂಡರಾದ ಎಚ್ ವಿಶ್ವನಾಥ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಮಾದಿಗ ದಂಡೋರ ಅಧ್ಯಕ್ಷ ಎಚ್ ಸಿ ಗುಡ್ಡಪ್ಪ, ಹಿರಿಯ ದಲಿತ ಹೋರಾಟಗಾರರಾದ ಮಲ್ಲೇಶಪ್ಪ ಹರಿಹರ, ಕಡತಿ ಅಂಜಿನಪ್ಪ, ಡಿಎಸ್ಎಸ್ ಸಂಚಾಲಕರಾದ ರಾಘವೇಂದ್ರ ಕಡೆಮನಿ, ಭೀಮಾರ್ಮಿ ಜಿಲ್ಲಾ ಸಂಚಾಲಕ ನಿಂಗರಾಜ್ ಚಿಕ್ಕನಹಳ್ಳಿ , ರವಿಕುಮಾರ್ ಎಂ ಕೆ ಟಿ ನಗರ, ರವಿಕುಮಾರ್ ಟಿ, ಚನ್ನಗಿರಿ ತಾಲೂಕ ಸಂಚಾಲಕರಾದ ಪಾಂಡೋಮಟ್ಟಿ ಪ್ರಭಾಕರ್, ಚನ್ನಗಿರಿ ಮೂರ್ತಿ, ಕೆಂಚಮ್ಮನಹಳ್ಳಿ ರುದ್ರೇಶ್, ಗಂಗೂರು ಮಂಜುನಾಥ, ಗುಮ್ಮನೂರ್ ಬಸವರಾಜ್,ಮಹಾಂತೇಶ್ ಹಾಲವರ್ತಿ, ಶಾಮ್ ವಕೀಲರು, ಮಂಜಪ್ಪ ವಕೀಲರು ಮತ್ತು ಇತರರು ಇದ್ದರು.
