ದಾವಣಗೆರೆ: ಲೋಕಸಭಾ ಚುನಾವಣೆ ಪ್ರಯುಕ್ತ ಮತದಾರರಲ್ಲಿ ಜಾಗೃತಿ, ಅರಿವು ಮೂಡಿಸುವ, ಮತ ಚಲಾವಣೆಯ ಕುರಿತು ಜಾಹೀರಾತುಗಳನ್ನು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ(ರಿ) ದ ಜಿಲ್ಲಾ ಘಟಕ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಎಸ್ ಬಳ್ಳಾರಿ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿತು.
ಮನವಿ ಸ್ವೀಕರಿಸಿ ಮಾತನಾಡಿದ ಎಡಿಸಿ ಅವರು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಮತದಾನದ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸುವ ಕುರಿತು, ಚುನಾವಣಾ ನೀತಿ ಸಂಹಿತೆ ಪಾಲಿಸುವ ಕುರಿತಂತೆ ಚುನಾವಣಾ ಆಯೋಗದಿಂದ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡುವ ಜಾಹೀರಾತುಗಳನ್ನು ಕೂಡ ದಾವಣಗೆರೆ ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ನೀಡುವಂತೆ ಮನವಿ ಮೂಲಕ ಸಂಘದಿಂದ ಕೋರಲಾಗಿದೆ.
ಆಯೋಗದಿಂದ ಚುನಾವಣೆ ಕುರಿತಂತೆ ಜಾಹೀರಾತುಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗುವುದರ ಜೊತೆಗೆ ಜಿಲ್ಲಾ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತುಗಳು ಪ್ರಕಟವಾದರೆ ಗ್ರಾಮೀಣ ಪ್ರದೇಶದ ಮತದಾರರ ಗಮನವನ್ನು ಹೆಚ್ಚಿನ ರೀತಿಯಲ್ಲಿ ಸೆಳೆಯುತ್ತವೆ.
ಆದ್ದರಿಂದ ಲೋಕಸಭಾ ಚುನಾವಣೆ ಕುರಿತಂತೆ ಎಲ್ಲಾ ಜಾಹೀರಾತುಗಳನ್ನು ರಾಜ್ಯಮಟ್ಟದ ಪತ್ರಿಕೆಗಳಿಗೆ ನೀಡುವಂತೆಯೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೂ ಎಲ್ಲಾ ಬಗೆಯ ಜಾಹೀರಾತುಗಳನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಯಿತು.
ಸಂಘದ ರಾಜ್ಯಾಧ್ಯಕ್ಷರು ಎ.ಸಿ. ತಿಪ್ಪೇಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್.ಸುಧಾಕರ, ಜಿಲ್ಲಾಧ್ಯಕ್ಷ ಆರ್.ರವಿ, ಉಪಾಧ್ಯಕ್ಷರಾದ ಕೆ.ಏಕಾಂತಪ್ಪ, ಎ.ಫಕೃದ್ಧೀನ್, ಪ್ರಧಾನ ಕಾರ್ಯದರ್ಶಿ ಜೆ.ಎಸ್.ವಿರೇಶ್ , ಖಜಾಂಚಿ ಸುರೇಶ್ ಆರ್. ಕುಣಿಬೆಳಕೆರೆ, ಕಾರ್ಯದರ್ಶಿ ಕೆ.ಹೆಚ್.ಗೋವಿಂದ ರಾಜು, ಸಂಘಟನಾ ಕಾರ್ಯದರ್ಶಿ ಜಿ.ಎಂ.ಮಂಜುನಾಥ್, ಸದಸ್ಯ ಎನ್ .ನಂದನ್ ಕುಮಾರ್ ಸೇರಿದಂತೆ ಇತರರು ಇದ್ದರು.