ಹದಿನಾಲ್ಕು ದೇಶಗಳಲ್ಲಿ ಭಾರತದ ಕಬೀರನನ್ನ, ಮೀರಾಳನ್ನು, ತುಳಸೀದಾಸ, ಪರಮಾನಂದರನ್ನು ತನ್ನ ಹಾಡಿನಿಂದ ಪರಿಚಯಿಸಿದ, ಸಮ್ಮೋಹಕಗೊಳಿಸಿದ ವಿಶಿಷ್ಟ ಹಾಡುಗಾರ ಮೀರ್ ಮುಕ್ತಿಯಾರ್ ಅಲಿ.
ದೂರದ ಬಿಕಾನೇರ್ (ರಾಜಸ್ಥಾನ)ನವರು. ಈಗ ಹಾಡುತ್ತಿರುವ ಇವರು ತನ್ನ ಕುಟುಂಬದ ೨೬ ನೇ ತಲೆಮಾರಿನವರು. ಮೈ ಝುಮ್ಮೆನ್ನೆಸುವ ಹಾಡುಗಾರಿಕೆಗೆ ಮನಸೋಲದವರಿಲ್ಲ. ಅನುಭವಿಸಿ ಹಾಡ್ತಾರೆ.
ಹಾಡನ್ನೇ ಉಸಿರಾಗಿಸಿಕೊಂಡಿರುವ ಪೂರ್ಣಪ್ರಮಾಣದ ಬದುಕಾಗಿಸಿಕೊಂಡ ಇವರು ಬಹುತೇಕ ಭಾರತದ ಎಲ್ಲ ಮುಖ್ಯ ನಗರಗಳಲ್ಲೂ ಕಾರ್ಯಕ್ರಮ ಕೊಟ್ಟಿದ್ದಾರೆ.ಬಾಲಿವುಡ್ ಚಿತ್ರಗಳಿಗೂ ಹಾಡಿದ್ದಾರೆ.ಅವರ ಜೊತೆ ಶರೀಫಗಿರಿಯಲಿ ಇರುವ ಅವಕಾಶ ಸಿಕ್ಕಿತು.
ಅದಕ್ಕೆ ಕಾರಣವಾದದ್ದು ಹಾರ್ಮೋನಿಯಂ ಪೆಟ್ಟಿಗೆ! 1970 ನೇ ಇಸವಿಯಲಿ ಕೊಂಡ ಹಾರ್ಮೋನಿಯಮ್ ರಿಪೇರಿಗೆ ಬಂದಿತ್ತು. ಕೊಲ್ಕತ್ತಾ, ಅಹಮದಾಬಾದ್, ದೆಹಲಿ,ಲಕ್ನೋ… ಊರುಗಳಲ್ಲಿ ಕೇಳಿದರೂ ರಿಪೇರಿಯಾಗಲಿಲ್ಲ. ಕೊನೆಗೆ ಅವರ ತಂದೆಯವರ ನೆನಪಿನಿಂದ ಕರ್ನಾಟಕದ ದಾವಣಗೆರೆ…ಕಾಳಿಕಾದೇವಿ ರೋಡ್…ಇಷ್ಟು ವಿಳಾಸ ಹಿಡಿದು ಬಂದರು.
ಕರ್ನಾಟಕದ ಕಬೀರ ಶಿಶುನಾಳ ಶರೀಫರ ಮುಂದೆ ಕುಳಿತು ಹಾಡುವ ಅಭಿಲಾಷೆ ವ್ಯಕ್ತಪಡಿಸಿದರು.
ಶರೀಫನ ಎದುರಿನ ಬಯಲಿನಲ್ಲಿ ,ಸುರಿವ ಮಳೆಯಲ್ಲಿ ಹಾಡಿಯೇ ಹಾಡಿದರು….
ದೈವತ್ವ…ಎಂದರೆ ಇದೇ ಇರಬಹುದೇನೋ ಎಂಬಂತೆ….
ಮಳೆ ಸುರಿಯುತ್ತಿತ್ತು…
ನಮ್ಮೆದೆಗೆ ರಾಗವೂ ಇಳಿಯುತ್ತಿತ್ತು…
ಭಾಷೆ ಅಡ್ಡಿಯಾಗಲಿಲ್ಲ…
ದೇಶ…ಗಡಿಗಳು…ಬಣ್ಣ…..ಧರ್ಮಗಳೂ …ಸಹ.
ಕಾಲ ಕೂಡ ….!!
ಬಸೂ..ಅನುಪಮಾ..ಮಂಜಪ್ಪ ಮೇಷ್ಟ್ರು,ಗೆಳೆಯ ಲಿಂಗರಾಜ್,ಅನುಪಸ್ಥಿತಿಯಲ್ಲೂ ಕಾಡಿದ ಗೆಳೆಯ ರಮಜಾನ್ ಕಿಲ್ಲೆದಾರ್,ಶಿಶುವಿನಹಾಳದ ಮುಗಳಿ ಸರ್ ಮತ್ತು ಅಲ್ಲಿನ ಟ್ರಸ್ಟಿನ ಅಂತಃಕರುಣೆಗೆ,ಡಾ.ಅನಸೂಯಾ ಮೇಡಮ್ ಗೆ ಮತ್ತು ಕೈಯ್ಯಾರೆ ಉಪ್ಪಿಟ್ಟು ಬಡಿಸಿದ ಹಲವಾರು ಮರಿ ಶರೀಫರಿಗೆ ಧನ್ಯವಾದ.
ಮಗುವಿನಂತಹ ಮುಗ್ಧತೆಯನ್ನು, ಶರೀಫನಂತಹ ಗುರುವಿನ ಶಿಷ್ಯನಾಗುವ ಹಂಬಲವನ್ನೂ ಒಟ್ಟೊಟ್ಟಿಗೆ ಹೊಂದಿರುವ ಮುಕ್ತಿಯಾರ್ ರಿಗೆ ಕರ್ನಾಟಕವೆಂದರೆ ಬಲು ಪ್ರೀತಿ. ಶರೀಫರನ್ನು ಅರಿಯಲು ಪ್ರಯತ್ನಿಸುತ್ತಿರುವ ,ಕನ್ನಡವನ್ನು ಕಲಿತೇ ಶರೀಫನ ಪದ ಹಾಡುವ ಹಂಬಲ ವ್ಯಕ್ತಪಡಿಸುವಾಗ ವಿಧೇಯ ವಿದ್ಯಾರ್ಥಿಯಾಗುತ್ತಾರೆ.
ಸಧ್ಯದ ಅಸ್ತವ್ಯಸ್ತಗೊಂಡ ಭಾರತಕ್ಕೆ,ಸಾಂಸ್ಕೃತಿಕ ರಾಯಭಾರಿಯಾಗಬಲ್ಲವರು ಮೀರ್ ಮುಕ್ತಿಯಾರ್ ಅಲಿ!
ಬಿ.ಶ್ರೀನಿವಾಸ