ದಾವಣಗೆರೆ : ದೇಶಾದ್ಯಂತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಐ.ಎನ್.ಡಿ.ಐ. ಒಕ್ಕೂಟದ ಭಾಗವಾಗಿರುವ ಭಾರತ ಕಮ್ಯುನಿಸ್ಟ್ ಪಕ್ಷವು ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಲು ಶ್ರಮಿಸುತ್ತಿದೆ ಎಂದು ಸಿಪಿಐ ರಾಜ್ಯ ಮುಖಂಡ ಡಾ.ಸಿದ್ದನಗೌಡ ಪಾಟೀಲ್ ತಿಳಿಸಿದರು.
ಸುದ್ದಿಗೋ಼ಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸಿಪಿಐ ಪಕ್ಷ ಬೆಂಬಲಿಸಲಿದೆ. ಮತದಾರರು ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡಿ ಬೆಂಬಲ ಸೂಚಿಸಬೇಕು. ದೇಶದ ಉತ್ತಮ ಭವಿಷ್ಯಕ್ಕಾಗಿ ಜನರು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸ ಮಾಡುತ್ತಿದೆ. ಚುನಾವಣೆಯಲ್ಲಿ ಹೇಳಿಕೊಳ್ಳಲು ಯಾವುದೇ ವಿಷಯ ಇಲ್ಲದ ಕಾರಣ ದೇವಸ್ಥಾನದಲ್ಲಿ ಇರಬೇಕಾದ ರಾಮನನ್ನು ಬೀದಿಗೆ ತಂದಿದ್ದಾರೆ. ಪಾರ್ಲಿಮೆಂಟ್ ನಲ್ಲಿ ಇರಬೇಕಾದ ಮೋದಿ ದೇವಸ್ಥಾನದಲ್ಲಿ ಕುಳಿತು ಭಜನೆ ಮಾಡುತ್ತಿದ್ದಾರೆ. ರೈತ ವಿರೋಧಿ, ಕೃಷಿ ವಿರೋಧಿ, ಕಾರ್ಮಿಕ ವಿರೋಧಿ ಕಾನೂನನ್ನು ಜಾರಿಗೆ ತಂದು ದೇಶದ ಕಾರ್ಮಿಕರ, ರೈತರ ಬದುಕನ್ನೇ ನಾಶ ಮಾಡುತ್ತಿದ್ದಾರೆ. ಆಡಳಿತವಿರೋಧಿ ಅಭಿಪ್ರಾಯಗಳನ್ನು ತಡೆಯಲು ಮುಂದಾಗಿದ್ದಾರೆ. ಪ್ರಸಕ್ತ ಚುನಾವಣೆಯು ಪ್ರಜಾಪ್ರಭುತ್ವದ ಅಳಿವು-ಉಳಿವಿನ ಪ್ರಶ್ನೆಯಾಗಿದೆ ಎಂದರು.
ಪಕ್ಷದ ಮುಖಂಡರಾದ ಹೆಚ್.ಜಿ.ಉಮೇಶ್, ಆನಂದ ರಾಜ್, ಆವರಗೆರೆ ಚಂದ್ರು, ವಿ.ಲಕ್ಷ್ಮಣ, ಟಿ.ಎಸ್.ನಾಗರಾಜ್, ಎಂ.ಬಿ.ಶಾರದಮ್ಮ ಸುದ್ದಿಗೋಷ್ಠಿಯಲ್ಲಿದ್ದರು.