ದಾವಣಗೆರೆ: ಮಹಿಳೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಬಸವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಗುಜರಿ ಆಯುವ ಕೆಲಸ ಮಾಡುತ್ತಿದ್ದ, ಹಾವೇರಿ ಜಿಲ್ಲೆ ಸವಣೂರು ತಾಲೂಕು ಹೆಸರೂರು ಗ್ರಾಮ ಮೂಲದ ಶಂಕರ ಲಮಾಣಿ (37) ಬಂಧಿತ ಆರೋಪಿ.
ದಾವಣಗೆರೆ ಕಾರಾಗೃಹ ಹಿಂಭಾಗ ರೈಲ್ವೆ ಇಲಾಖೆಯ ಶಿಥಿಲ ವಸತಿ ಗೃಹದ ಎದುರು ಮಾರ್ಚ್ 30ರಂದು ಸುಮಾರು 40-45 ವರ್ಷದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಶವವು ಕೊಲೆಯಾದ ಸ್ಥಿತಿಯಲ್ಲಿದ್ದ ಕಾರಣ, ದಾವಣಗೆರೆ ರೈಲ್ವೆ ಪೊಲೀಸರು ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಸವನಗರ ಠಾಣೆ ಇನ್‌ಸ್ಪೆಕ್ಟರ್ ಡಿ.ಕೆ. ಸಂತೋಷ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಘಟನೆ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿ ಗಮನಿಸಿದಾಗ, ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವುದು ತಂಡಕ್ಕೆ ಖಚಿತವಾಯಿತು. ಆರೋಪಿಯ ಜಾಡು ಹಿಡಿದು ತನಿಖೆ ನಡೆಸಿದ ತಂಡ, ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಪಟ್ಟಣದಲ್ಲಿ ಆರೋಪಿಯನ್ನು ಬಂಧಿಸಿದೆ.
ದೈಹಿಕ ಸಂಪರ್ಕಕ್ಕೆ ಒಪ್ಪದ ಕಾರಣ ಕಲ್ಲಿನಿಂದ ಜಜ್ಜಿ, ಸೀರೆಯಿಂದ ಕುತ್ತಿಗೆ ಬಿಗಿದು ಮಹಿಳೆಯ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತ ಮಹಿಳೆಯ ಗುರುತು ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.