ದಾವಣಗೆರೆ.ಏ.27: 25 ವರ್ಷದ ಹಳೆಯ ಶ್ರೀ ರಾಜವೀರ ಮದಕರಿನಾಯಕ ಮಹಾದ್ವಾರ ಹಾಗೂ ಶ್ರೀ ವಾಲ್ಮೀಕಿ ವೃತ್ತವನ್ನು ಕಾನೂನು ಬಾಹಿರವಾಗಿ ತೆರವುಗೊಳಿಸಿರುವುದನ್ನು ಖಂಡಿಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಿದ್ದೇವೆ ಎಂದು ಹರಿಹರ ತಾಲ್ಲೂಕಿನ ಬಾನುವಳ್ಳಿ ಗ್ರಾಮಸ್ಥರು ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸಮಾಜದ ಮುಖಂಡ ಪುಟ್ಟಪ್ಪ ಮಾತನಾಡಿ, ಕಳೆದ 1999 ರಲ್ಲಿ ಅಂದಿನ ಸಚಿವರಾಗಿದ್ದ ಹೆಚ್.ಶಿವಪ್ಪ ಹಾಗೂ ಸಮುದಾಯದ ಪೀಠಾಧ್ಯಕ್ಷರಾಗಿದ್ದ ಲಿಂ. ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ರಾಜವೀರ ಮದಕರಿ ಮಹಾದ್ವಾರ ಹಾಗೂ ವಾಲ್ಮೀಕಿ ವೃತ್ತ ನಿರ್ಮಾಣಗೊಂಡಿದ್ದು ಆದರೆ ಜಿಲ್ಲಾಡಳಿದ ಮತ್ತೊಂದು ಸಮುದಾಯದ ಮಾತು ಕೇಳಿ ತೆರವುಗೊಳಿಸಿದ್ದು ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದರು.
ಈ ಬಗ್ಗೆ ಸಮಾಜದ ಮುಖಂಡರು ಸುಮಾರು 16 ದಿನಗಳ ಪ್ರತಿಭಟನೆ ಮಾಡಿದರು, 1999 ರ ದಾಖಲೆ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ. ಒಂದು ವೇಳೆ ಡಿಸಿ ಅವರು ಮರು ಸ್ಥಾಪನೆಗೆ ಲಿಖಿತ ಭರವಸೆ ನೀಡಿದರೆ ಮತದಾನ ಮಾಡಲಿದ್ದೇವೆ ಎಂದರು.
ಗೋಷ್ಠಿಯಲ್ಲಿ ಬಾನುವಳ್ಳಿಯ ಕರಿಯಪ್ಪ, ರಂಗಸ್ವಾಮಿ, ನಾರಯಣಪ್ಪ ದೊಡ್ಮನಿ, ಅಜಯ್ ಕುಮಾರ್, ನಾಗಪ್ಪ, ಮಹಾಂತೇಶ್ ಇತರರು ಇದ್ದರು.