ಹೊನ್ನಾಳಿ ಜೂ 6: ಮೂಲ ಸಂವಿಧಾನದ ಪ್ರಕಾರ ನಾವೆಲ್ಲರೂ ನಡೆದುಕೊಂಡರೆ ದೇಶದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಪ್ರಜಾಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ. ಈಶ್ವರಪ್ಪ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪ್ರಜಾಪರಿವರ್ತನಾ ವೇದಿಕೆಯ ಜಿಲ್ಲಾ ಪದಾಧಿಕಾರಿಗಳು ಎ.ಡಿ. ಈಶ್ವರಪ್ಪ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದರು.
ಈ ದೇಶದಲ್ಲಿ ಜಾತಿಯ ವ್ಯವಸ್ಥೆ ದೇಶವ್ಯಾಪಿ ಹರಡಿದೆ. ಅದಕ್ಕೆ ಸಂವಿಧಾನದಲ್ಲಿ ಪರಿಹಾರವಿದೆ. ಆದರೆ ಸಂವಿಧಾನವನ್ನು ಓದಿಕೊಂಡ ಅಲ್ಪರು ತಮಗಿಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಆದರೆ ಸಂವಿಧಾನದ ಬಗ್ಗೆ ಗೊತ್ತಿಲ್ಲದ ಬಹಸಂಖ್ಯಾತರು ಮೌನವಾಗಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಸಂಪತ್ತಿನ ಸಮಾನ ಹಂಚಿಕೆಯಾಗಿಲ್ಲ, ಬಡವರಿಗೆ ದುಡಿಮೆ ಮಾಡಲು ಒಂದಿಷ್ಟು ಭೂಮಿ ಇಲ್ಲ, ದುಡಿಯುವ ರಟ್ಟೆಗಳಿಗೆ ಕೆಲಸವಿಲ್ಲ, ಹೀಗಾದರೆ ದೇಶದ ಸರ್ವಾಂಗೀಣ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನಾವು ಅನಗತ್ಯವಾಗಿ ಮಾತನಾಡುವುದರಿಂದ ಪ್ರಯೋಜನವಿಲ್ಲ, ಇಂತಹ ಚಿಂತನ ಮಂಥನದಂತಹ ಕಾರ್ಯಕ್ರಮಗಳ ಮೂಲಕ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸಂವಿಧಾನವನ್ನು ಓದಿ ತಿಳಿದುಕೊಳ್ಳಬೇಕಾಗಿದೆ. ನಮ್ಮ ಸಂಘಟನೆಗಳು ದೇಶವ್ಯಾಪಿ ಸಂಚಲನ ಮೂಡಿಸಬೇಕಾಗಿದೆ. ತಪ್ಪುಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಬೇಕಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂಲ ಆಶಯಗಳನ್ನು ಅರ್ಥಮಾಡಿಕೊಂಡು ಜನರಿಂದ ಜನರಿಗೆ ಮುಟ್ಟಿಸುವ ಕೆಲಸವನ್ನು ನಮ್ಮ ವೇದಿಕೆವತಿಯಿಂದ ಮಾಡಲಾಗುವುದು ಎಂದರು.
ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಕೃಷ್ಣಪ್ಪ ಅರಕೆರೆ ಕಾರ್ಯಕ್ರಮ ನಡೆಸಿಕೊಟ್ಟರು. ತಾಲ್ಲೂಕು ಘಟಕದ ಅಧ್ಯಕ್ಷ ಒ. ಹನುಮಂತಪ್ಪ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಚಿಂತನ ಮಂಥನ ಸಭೆಯಲ್ಲಿ ನೂರಾರು ಜನ ಅಭಿಮಾನಿಗಳು, ವೇದಿಕೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.