ದಾವಣಗೆರೆ (Davangere District): ಮೂಢನಂಬಿಕೆಗಳನ್ನು ಬಿಟ್ಟರೆ ಜಗತ್ತು ಸ್ವರ್ಗವಾಗುತ್ತದೆ. ಇಂದು ದೇಶದಲ್ಲಿರುವ ಬಡತನಕ್ಕೆ ಅನೇಕ ಕಾರಣಗಳಿದ್ದರೂ ಅದರಲ್ಲಿ ಮೂಢನಂಬಿಕೆಗಳು ಒಂದು ಕಾರಣವಾಗಿದೆ ಎಂದು ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು
ನಗರದ ವಿರಕ್ತಮಠ (Viraktamatha) ದಲ್ಲಿ ಬಸವ ಪಂಚಮಿ ಅಂಗವಾಗಿ ಹಾಲು ಕುಡಿಸುವ ಹಬ್ಬ (Milk drinking festival) ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ನಾವು ಕುಡಿಯುವ ಅಮೃತ ಸಮಾನವಾದ ಹಾಲನ್ನು ದೇವರು, ಧರ್ಮದ ಹೆಸರಿನಲ್ಲಿ ಹಾಳು ಮಾಡುತ್ತಿದ್ದೇವೆ ಇದು ಶ್ರೇಷ್ಠತೆ ಅಲ್ಲ.ಈ ಹಾಲನ್ನು ಮಕ್ಕಳಿಗೆ , ಬಡಜನರಿಗೆ , ರೋಗಿಗಳಿಗೆ , ವೃದ್ಧರಿಗೆ ಕುಡಿಸಿದರೆ ನಿಜವಾಗಿಯೂ ದೇವರು ಸಂತೃಪ್ತಿಯಾಗುತ್ತಾನೆ. ದೇವರು ವಾಸವಾಗಿರುವುದು ಹಸಿದ ಜನರಲ್ಲಿ, ಬಡವರಲ್ಲಿ ಇದ್ದಾನೆ. ಅವರಲ್ಲಿ ದೇವರನ್ನು ಕಾಣಬೇಕು ಎಂದರು.
ಹಾಲನ್ನು ಕಲ್ಲನಾಗಪ್ಪಗೆ ನನ್ನ ಪಾಲು , ಅಪ್ಪನ ಪಾಲು , ಅವ್ವನ ಪಾಲು ಎಂದು ಮಣ್ಣುಪಾಲು ಮಾಡಬೇಡಿ . ಹಾಲನ್ನು ಮತ್ತೊಬ್ಬರಿಗೆ ಕುಡಿಸುವ ಮೂಲಕ ಬಸವ ಪಂಚಮಿ ಎಂದು ಆಚರಿಸಬೇಕೆಂದು ಚಿತ್ರದುರ್ಗ ಮುರುಘಾಮಠ (Chitradurga Muruga Math) ವು ಕರೆ ನೀಡಿದೆ. ಕಳೆದ ಮೂವತ್ತು ವರ್ಷಗಳಿಂದ ಬಸವ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ಆದರ್ಶವನ್ನು ಇಂದು ಅನೇಕ ಪ್ರಗತಿಪರ ಸಂಘಟನೆಗಳು ಆಚರಿಸಲು ಪ್ರಾರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಹಾಲನ್ನು ಹಾವುಗಳು ಸೇವಿಸುವುದಿಲ್ಲ ಹಾಲು ಹಾವಿನ ಆಹಾರ ಅಲ್ಲ. ಹಾಲನ್ನು ಸೇವಿಸುವುದಿಲ್ಲ ಎಂದು ವಿಜ್ಞಾನ ಹೇಳುತ್ತದೆ. ಈ ವೈಜ್ಞಾನಿಕ ಅಂಶವನ್ನು ನಾವು ಅರಿಯಬೇಕು ಧರ್ಮ, ದೇವರನ್ನು ನಾವು ವೈಜ್ಞಾನಿಕವಾಗಿ ಚಿಂತನೆ ನಡೆಸಿ ಆಚರಣೆ ಮಾಡಬೇಕು. ಆ ಹಿನ್ನಲೆಯಲ್ಲಿ ಬಸವಣ್ಣನವರು ನೀಡಿದ ಲಿಂಗಾಯತ ಧರ್ಮ ಜಗತ್ತಿನಲ್ಲಿಯೇ ವೈಜ್ಞಾನಿಕ , ವೈಚಾರಿಕತೆ , ಸಮಾನತೆಯ ಧರ್ಮವಾಗಿದೆ ಎಂದರು.
Read also : DAVANAGERE NEWS : ತಾಯಿಯ ಎದೆಹಾಲು ಮಕ್ಕಳಿಗೆ ದಿವ್ಯೌಷಧ : ನ್ಯಾ. ವೀಣಾ ಕೊಳೇಕರ್
ಬಸವರಾಜ ದೊಡ್ಡಮನಿ ಮಾತನಾಡಿ, ಮುರುಘಾಮಠವು ನಾಡಿನಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ನೊಂದವರ ಪರವಾಗಿ , ದುಃಖಿತರ ಪರವಾಗಿ ಬಸವಣ್ಣನವರು ಮಾಡಿದ ಕೆಲಸವನ್ನು ನಾವು ಪಾಲಿಸಬೇಕಾಗಿದೆ . ಬಸವತತ್ವಗಳು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ. ಮಾನವನನ್ನು ಮಾನವನಂತೆ ಪ್ರೀತಿ ಮಾಡಿ ಎಂದು ಬಸವಣ್ಣನವರು ಕರೆ ನೀಡಿದ್ದಾರೆ ಎಂದರು.
ಸಮಾರಂಭದ ಉದ್ಘಾಟನೆಯನ್ನು ದೂಡಾ ಸದಸ್ಯರಾದ ವಾಣಿ ಬಕ್ಕೇಶ್ ಅವರು ಮಕ್ಕಳಿಗೆ ಹಾಲನ್ನು ವಿತರಣೆ ಮಾಡುವ ಚಾಲನೆ ನೀಡಿದರು.
ಸಮಾರಂಭದಲ್ಲಿ ಎಸ್.ಓಂಕಾರಪ್ಪ , ಟಿ.ಎಂ. ವೀರೇಂದ್ರ , ಲಂಬಿ ಮುರುಗೇಶಪ್ಪ , ಸುಜಾತ ಬೂಸ್ನೂರ್ ಇದ್ದರು.