ಹರಿಹರ (Davangere District) : ನಗರದಲ್ಲಿರುವ ಮೀಸಲು ನಿವೇಶನದಲ್ಲಿ ಹೊಸ ಅಂಚೆ ಕಚೇರಿ ನಿರ್ಮಾಣಕ್ಕೆ ಅಂಚೆ ಇಲಾಖೆ ಅನುದಾನ ಬಿಡುಗಡೆಮಾಡಬೇಕೆಂದು ಹಿರಿಯ ಪತ್ರಕರ್ತ ಐರಣಿ ಹನುಮಂತಪ್ಪ ಆಗ್ರಹಿಸಿದರು.
ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಶನಿವಾರ ನಡೆದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಗರದ ಮುಖ್ಯ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ ಕಟ್ಟಡ ಹಲವು ದಶಕಗಳ ಹಿಂದೆ ನಿರ್ಮಿಸಿದ್ದು ಅದು ಈಗಿನ ಕಾರ್ಯ ಒತ್ತಡಕ್ಕೆ ಸಾಕಾಗುತ್ತಿಲ್ಲ. ಗ್ರಾಹಕರ ವಾಹನ ನಿಲುಗಡೆಗೆ ಅವಕಾಶವಿಲ್ಲ, ಗ್ರಾಹಕರಿಗೆ ನಿಲ್ಲಲೂ ಜಾಗವಿಲ್ಲದಂತೆ ಕಿಷ್ಕಿಂದೆಯಾಗಿದೆ.
ಆಧಾರ್ ಕಾರ್ಡ್ ಹೊಸತಾಗಿ ಪಡೆಯಲು, ತಿದ್ದುಪಡಿ ಮಾಡಿಸಲು ಬರುವ ಜನರಿಗೆ ನಿಲ್ಲಲೂ ಜಾಗವಿಲ್ಲ, ಇತರೆ ಹತ್ತಾರು ಸೇವೆ ಪಡೆಯಲು ಬರುವವರಿಗೆ ಕಿರಿಕಿರಿಯಾಗುತ್ತಿದೆ. ಭಾರತ್ ಆಯಿಲ್ ಮಿಲ್ ಕಾಂಪೌಂಡ್‍ನಲ್ಲಿರುವ ವಿಶಾಲವಾದ ನಿವೇಶನದಲ್ಲಿ ಸುಸಜ್ಜಿತ ಅಂಚೆ ಕಚೇರಿ ಕಟ್ಟಡ ನಿರ್ಮಿಸಬೇಕೆಂದರು.
ಭಾರತ್ ಆಯಿಲ್ ಮಿಲ್ ಕಾಂಪೌಂಡ್‍ನಲ್ಲಿರುವ ನಿವೇಸನದಲ್ಲಿ ಕಚೇರಿಗೆ ಹೊಸ ಕಟ್ಟಡ ನಿರ್ಮಿಸಲು ಅನುದಾನಕ್ಕೆ ಇಲಾಖೆಯ ಹಿರಿಯರ ಗಮನ ಸೆಳೆಯಲಾಗಿದೆ. ಅನುದಾನ ಬಿಡುಗಡೆಯಾದರೆ ಆ ಕಾರ್ಯ ನೆರೆವೇರಲಿದೆ ಎಂದು ಉದ್ಘಾಟಿಸಿದ ದಾವಣಗೆರೆ ವಿಬಾಗದ ಅಂಚೆ ಅಧೀಕ್ಷಕ ಚಂದ್ರಶೇಖರ್ ಹೇಳಿದರು.
ಇದನ್ನು ಓದಿ : Davanagere : ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ವಿಶೇಷ ಆಭರಣಗಳ ಪ್ರದರ್ಶನ
ವ್ಯವಹಾರ, ವಹಿವಾಟಿನಲ್ಲಿ ದಾವಣಗೆರೆ ವಿಬಾಗವು ರಾಜ್ಯದಲ್ಲಿ ಹಾಗೂ ಹರಿಹರ ಉಪ ವಿಭಾಗವು ದಾವಣಗೆರೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ. ಬ್ಯಾಂಕಿಂಗ್ ಹಾಗೂ ಇತರೆ ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಾ ಅಂಚೆ ಇಲಾಖೆ ಜನರಿಗೆ ಹತ್ತಿರವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಕೆಇಟಿ ಸಿಬಿಎಸ್‍ಸಿ ಶಾಲೆ ಪ್ರಾಚಾರ್ಯ ಮಂಜುನಾಥ ಕುಲಕರ್ಣಿ ಮಾತನಾಡಿ, ಅಂಚೆ ಬಟವಾಡೆಗೆ ಸೀಮಿತವಾಗಿದ್ದ ಅಂಚೆ ಇಲಾಖೆ ಈಗ ವಿಮೆ, ಬ್ಯಾಂಕಿಂಗ್, ನಿವೃತ್ತರಿಗೆ, ಮಹಿಳೆ, ಮಕ್ಕಳಿಗೆ ಹೆಚ್ಚು ವರಮಾನದ ಠೇವಣಿ, ಮಾಸಿಕ ಪಾವತಿಯ ಯೋಜನೆಗಳನ್ನು ರೂಪಿಸಿದೆ. ಹಣ ಪಡೆದ ಹಲವು ಖಾಸಗಿ ಫೈನಾನ್ಸ್ ಸಂಸ್ಥೆಗಳು ಜನರಿಗೆ ಮೋಸ ಮಾಡಿವೆ, ಆದರೆ ಅಂಚೆ ಇಲಾಖೆಯು ದೇಶದ ಜನರ ವಿಶ್ವಾಸ ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಅಂಚೆ ಪಾಲಕ ಆರ್.ಶ್ರೀನಿವಾಸ್ ರಾವ್, ಸಹಾಯಕ ಅಂಚೆ ಅಧೀಕ್ಷಕರಾದ ಜೆ.ಎಸ್.ಗುರುಪ್ರಸಾದ್, ನರೇಂದ್ರನಾಯ್ಕ ಕೆ.ಎಂ., ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿದರು. ಸಾಧಕ ಸಿಬ್ಬಂದಿಗಳನ್ನು ಸತ್ಕರಿಸಲಾಯಿತು.
ಶ್ವೇತಾ ಶ್ರೀನಿವಾಸ್ ಪ್ರಾರ್ಥಿಸಿದರು, ಕಾವ್ಯ ಸ್ವಾಗತಿಸಿದರು. ಪ್ರದೀಪ್ ನಿರೂಪಿಸಿದರು. ನಿವೃತ್ತ ಅಂಚೆ ಪಾಲಕ ಸಂಗನಾಳಮಠ ಹಾಗೂ ಸಿಬ್ಬಂದಿ ಇದ್ದರು.