ಹರಿಹರ (Harihara): ಹರಿಹರದಲ್ಲಿ ಬುಧವಾರದಿಂದ ಸುರಿದ ಮಳೆಯಿಂದಾಗಿ ಹಲವು ನಗರಗಳಲ್ಲಿ 200 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ಜೈ ಭೀಮನಗರದಲ್ಲಿ ಮನೆಯ ಗೋಡೆ ಕುಸಿದು 4 ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಬೆಂಕಿನಗರ ಹಾಗೂ ಕಾಳಿದಾಸ ನಗರ, ಮೆಹಬೂಬ್ ನಗರ, ನೀಲಕಂಠ ನಗರದಲ್ಲಿ 200 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಳೆಗೆ ಈ ಬಡಾವಣೆಗಳಿಗೆ ಹೊಂದಿಕೊಂಡಿರುವ ಚಾನಲ್ ನೀರಿನ ಮಟ್ಟ ಏರಿಕೆಯಾಗಿ ಈ ಅವಾಂತರ ಸೃಷ್ಟಿಯಾಗಿದೆ. ಇಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೂಲಿ ಮಾಡಿ ಕೂಡಿಟ್ಟುಕೊಂಡಿದ್ದ ದವಸ, ಧಾನ್ಯ, ಬಟ್ಟೆಗಳು ಸೇರಿ ಎಲ್ಲ ಸಾಮಗ್ರಿಗಳು ನೀರು ಪಾಲಾಗಿವೆ. ತಡರಾತ್ರಿಯಿಂದ ಜನರು ಮನೆಗಳಿಗೆ ಬೀಗ ಹಾಕಿ ಮಕ್ಕಳ ಜತೆ ಮಳೆಯಲ್ಲಿಯೇ ರಸ್ತೆಯಲ್ಲಿ ನಿಂತ ನೀರಿನಲ್ಲಿ ಕಾಲ ಕಳೆದಿರುವ ಹೃದಯ ಹಿಂಡುವ ಘಟನೆ ನಡೆದಿದೆ. ಮಧ್ಯಾಹ್ನವಾದರೂ ಈ ಬಡಾವಣೆಯ ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿಯುತ್ತಿತ್ತು.
Read also : ರಾಮಾಯಣದಲ್ಲಿನ ತತ್ವಾದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಡಾ.ಪ್ರಭಾ ಮಲ್ಲಿಕಾರ್ಜುನ್
ಜತೆಗೆ ಇಲ್ಲಿನ ನಿವಾಸಿಗಳು ಮಧ್ಯಾಹ್ನವಾದರೂ ಕೂಡ ಅನ್ನ, ಆಹಾರವಿಲ್ಲದೆ ಇರುವುದು ಕಂಡು ಬಂತು. ನಂತರ ಸಂತ್ರಸ್ತರ ನೆರವಿಗಾಗಿ ತಾಲೂಕು ಆಡಳಿತದಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ. ಚಾನಲ್‌ಗೆ ತಡೆಗೋಡೆ ಇಲ್ಲದೆ ಈ ಅನಾಹುತ ಸಂಭವಿಸಿದೆ. ಹಲವು ವರ್ಷಗಳಿಂದ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಗಮನ ಹರಿಸಿಲಿಲ್ಲ, ಈಗ ಈ ಪರಿಸ್ಥಿತಿ ಬಂದಿದೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸಂಸದರ ಭೇಟಿ : ನಗರದ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿರುವ ಮಾಹಿತಿ ತಿಳಿದ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಜನರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆಗೆ ಭೇಟಿ : ಗೋಡೆಕುಸಿದ ಗಂಭೀರವಾಗಿ ಗಾಯಗೊಂಡಿರುವ ಬಾಲಕಿ ಆಯಿಷಾ ಉಮ್ರಾ ಆರೋಗ್ಯ ವಿಚಾರಿಸಿ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಶಾಸಕ ಬಿ.ಪಿ. ಹರೀಶ್ ಭೇಟಿ : ಮನೆಗಳಿಗೆ ನೀರು ನುಗ್ಗಿರುವ ಪ್ರದೇಶಗಳಿಗೆ ಭೇಟಿ ಪರಿಶೀಲಿಸಿದ ಶಾಸಕ ಬಿ.ಪಿ.ಹರೀಶ್, ನಂತರ ಗೋಡೆ ಕುಸಿದ ಬಾಲಕಿ ಮನಗೆ ತೆರಳಿ ಮಾಹಿತಿ ಪಡೆದರು.
ಈ ವೇಳೆ ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.