ಶಿವಮೊಗ್ಗ : ಮಾಲಿನ್ಯದಿಂದ ಪರಿಸರ ನಾಶವಾಗುತ್ತಿರುವ ಈ ಹೊತ್ತಿನಲ್ಲಿ ಮಲೆನಾಡಿನ ದಿಟ್ಟ ಮಹಿಳೆ ಬಯೋ ರೂಫಿಂಗ್ ಎಂಬ ಹೊಸ ಪ್ರಯೋಗ ಕೈಗೊಂಡು ಸರಕಾರದ ಗಮನ ಸೆಳೆದಿದ್ದಾರೆ. ಚಿಕ್ಕಮಗಳೂರು ಕಾಫಿ ಬೆಳೆಗಾರರಾದ ಅತ್ತಿಕಟ್ಟೆ ಜಗನ್ನಾಥ್ ಅವರ ಪುತ್ರಿ, ವೈಷ್ಣವಿ ಅದ್ವಿತ್ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ತ್ಯಾಜ್ಯದಿಂದ ಬಯೋ ರೂಫಿಂಗ್ ಪ್ರಯೋಗ ಮಾಡಿರುವ ಮೊದಲ ಮಹಿಳೆ. ಈ ಕಾರಣದಿಂದಲೇ ಸರಕಾರ ಹೊಸ ನವೋದ್ಯಮಿಗಳನ್ನು ಪ್ರೋತ್ಸಾಹಿಸಲು ಕೈಗೊಂಡಿರುವ ಎಲಿವೇಟ್ 2023 ಯೋಜನೆಗೆ ಇವರ ಕಂಪನಿ ಆಯ್ಕೆಯಾಗಿದೆ.
ಕರ್ನಾಟಕ ಸರ್ಕಾರ ಎಲೆಕ್ಟ್ರಾನಿಕ್ಸ್ , ಐಟಿ, ಬಿಟಿ ಮತ್ತು ಎಸ್& ಎಸ್ಟಿ ಇಲಾಖೆಯು ವಾಣಿಜ್ಯೋದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಉದ್ದೇಶದಿಂದ ನವೋದ್ಯಮಗಳನ್ನು ಪ್ರೋತ್ಸಾಹಿಸಲು, ‘ಎಲಿವೇಟ್– 2023 ಯೋಜನೆ ಜಾರಿ ತಂದಿದೆ. ಈ ಯೋಜನೆಯಡಿ ಆರಂಭಿಕ ಹಂತದ ನವೋದ್ಯಮಗಳಿಗೆ ನೆರವಾಗಲು ₹50 ಲಕ್ಷದವರೆಗೆ ಅನುದಾನವನ್ನು ಸರಕಾರ ನೀಡಲಿದೆ.
817 ಕಂಪನಿಗಳಿಂದ ನೋಂದಣಿ
ಎಲಿವೇಟ್ 2023 ಯೋಜನೆ ಲಾಭ ಪಡೆಯಲು 817 ಸ್ಟಾರ್ಟ್ಅಪ್‌ಗಳು ಹೆಸರು ನೋಂದಾಯಿಸಿದ್ದವು. ಅವುಗಳಲ್ಲಿ 100 ಉನ್ನತ ನವೋದ್ಯಮಿಗಳು ಮಾತ್ರ ಆಯ್ಕೆಯಾಗಿದ್ದು, ಇದರಲ್ಲಿ ವೈಷ್ಣವಿ ಅವರ ಸ್ಟಾರ್ಟ್ ಅಪ್ ಕೂಡ ಒಂದು. ಈ 100 ಕಂಪನಿಗಳಿಗೆ ಸರಕಾರದ ಆರ್ಥಿಕ ಬೆಂಬಲ ಸಿಗಲಿದೆ.
ತೀರ್ಥಹಳ್ಳಿ ಮೂಲದ ಮೊದಲ ಮಹಿಳಾ ಕಂಪನಿ
ಶಿವಮೊಗ್ಗ ಜಿಲ್ಲೆಯ ಮೊದಲ ಮಹಿಳಾ ನೇತೃತ್ವದ ಕಂಪನಿ ವೈಷ್ಣವಿಯರದ್ದು. ಇವರು “ಕ್ಲೀನ್-ಟೆಕ್ ಸ್ಟಾಟ್ ಅಫ್ “. ವಾಲ್ಗೋ ಮತ್ತು ಅಮಾಹಿ ಪ್ರೈವೇಟ್ ಲಿಮಿಟೆಡ್’ ‘ ಹೆಸರಿನಲ್ಲಿ ನೋಂದಾಯಿಸಿದ್ದರು. ಸರಕಾರ ಇವರು ಕೈಗೊಂಡಿರುವ ಪ್ರಯೋಗ ನೋಡಿ ಇಂಪ್ರೇಸ್ ಆಗಿದೆ.
ಎಲಿವೇಟ್ 2023 ಆಯ್ಕೆ ಹೇಗೆ
ಎಲಿವೇಟ್ 2023 ಆಯ್ಕೆ ಸಂಪೂರ್ಣ ಕಠಿಣವಾಗಿದೆ. ಕಂಪನಿಗಳು ಕಟ್ಟುನಿಟ್ಟಾದ ಮೂರು ಹಂತದ ಮೌಲ್ಯಮಾಪನ ಮತ್ತು ಶೋಧನಾ ಪ್ರಕ್ರಿಯೆಗಳಿಗೆ ಒಳಪಡಬೇಕಾಗುತ್ತದೆ. ಇದರಲ್ಲಿ ಹಿರಿಯ ಉದ್ಯಮದ ಸದಸ್ಯರನ್ನು ಒಳಗೊಂಡಿರುವ, ಅಕಾಡೆಮಿಯ, ವೇಗ ವರ್ಧಕಗಳು, ಇನ್‌ಕ್ಯುಬೇಟರ್‌ಗಳು ಮತ್ತು ಉದ್ಯಮ ಸಂಘಗಳ ಪ್ರತಿನಿಧಿ ಇರುತ್ತಾರೆ. ಇಂತಹ ಗ್ರ‍್ಯಾಂಡ್ ಜ್ಯೂರಿ ಅವರ ಮುಂದೆ ವೈಷ್ಣವಿ ನೀಡಿದ ಪ್ರಾಯೋಗಿಕ prestation ಜ್ಯೂರಿಗಳ ಮನಸ್ಸು ಕದಿಯಿತು.
ಸ್ಟಾರ್ಟ್ ಅಪ್ ಇಟ್ಟ ಪ್ರಾಜೆಕ್ಟ್ ಹೆಸರು ಕಟಾವು
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿಬಿಟಿ) ಇಲಾಖೆಯ ಈ ಪ್ರತಿಷ್ಠಿತ ಅನುದಾನಕ್ಕೆ ವೈಷ್ಣವಿ ‘ಕಟಾವು” ಎಂಬ ಹೆಸರು ಇಟ್ಟಿದ್ದಾರೆ. ಅಲ್ಲದೇ ಕಂಪನಿ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.
ಏನಿದು ಪ್ರಾಜೆಕ್ಟ್ ಟಾವು, ಅಷ್ಟಕ್ಕೂ ವೈಷ್ಣವಿ ಕೈಗೊಂಡಿದ್ದ ಹೊಸ ಪ್ರಯೋಗ ಏನು?
ದೇಶದಾದ್ಯಂತ ಅಡಿಕೆ ಮತ್ತು ಕಾಫಿ ಬೆಳೆಗಾರರ ಆದಾಯವನ್ನು ಹೆಚ್ಚಿಸಲು ಅಗತ್ಯ ಬೆಂಬಲ ಮತ್ತು ನೆರವು ನೀಡುವುದು ವೈಷ್ಣವಿ ಗುರಿ. ಕೃಷಿ-ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸಿ, ಸುಸ್ಥಿರ ಮತ್ತು ಹಸಿರು ಆರ್ಥಿಕತೆಯನ್ನು ನಾವು ಸಕ್ರಿಯಗೊಳಿಸುವುದು ನನ್ನ ಮೂಲ ಉದ್ದೇಶ ಎಂದು ಹೇಳುತ್ತಾರೆ ಕಂಪನಿಯ ಸಹ-ಸಂಸ್ಥಾಪಕಿ ಮತ್ತು ನಿರ್ದೇಶಕಿಯಾದ ವೈಷ್ಣವಿ.
ಕಟಾವು ಅಂತ ಹೆಸರು ಇಟ್ಟಿದ್ಯಾಕೆ, ಏನಿದು ಪ್ರಯೋಗ?
“ಕಟಾವು” ಅಂದರೆ ಕನ್ನಡದಲ್ಲಿ ಕೊಯ್ಲು ಎಂದರ್ಥ. ಅಡಕೆ ಸಿಪ್ಪೆ, ಭತ್ತದ ಸಿಪ್ಪೆ, ಒಣಹುಲ್ಲು, ತೆಂಗಿನ ಸಿಪ್ಪೆ ಮತ್ತು ಕಾಫಿ ಪಲ್ಪ್ ಮುಂತಾದ ಕೃಷಿ ಅವಶೇಷ/ ತ್ಯಾಜ್ಯಗಳನ್ನು ಜೈವಿಕ ವಸ್ತುಗಳನ್ನಾಗಿ (ಬಯೋ-ಮೆಟೀರಿಯಲ್ಸ್) ರೂಪಿಸಿ, ಅವುಗಳನ್ನು ವಿವಿಧ ಕೈಗಾರಿಕೆಗಳಿಗೆ ಪೂರೈಸಿ, ಈ ಮೂಲಕ ಪೂರೈಕೆ ಸರಪಣಿಯಲ್ಲಿ ಇಂಗಾಲದ ಪ್ರಮಾಣವನ್ನು (ಕಾರ್ಬನ್ ಅಂಶ) ಕಡಿಮೆ ಮಾಡುವುದು ಕಂಪನಿ ಉದ್ದೇಶ.
ಅಡಕೆ ಸಿಪ್ಪೆಯಲ್ಲಿ ಲಿಗ್ನಿನ್, ಸೆಲ್ಯುಲೋಸ್ ಮತ್ತು ಹೆಮಿ ಸೆಲ್ಯುಲೋಸ್‌ಗಳು ಸಮೃದ್ಧವಾಗಿವೆ. ಹಾಗಾಗಿ ಅವು ಜೈವಿಕ ವಿಘಟನೆಗೆ ಪ್ರತಿರೋಧವನ್ನು ಪ್ರದರ್ಶಿಸುತ್ತವೆ. ಅದರ ಸಮರ್ಥನೀಯ ಸಾಮರ್ಥ್ಯ ಮತ್ತು ಕ್ರಿಯಾತ್ಮಕ ಗುಣಲಕ್ಷಣಗಳನ್ನು ಹೊರತುಪಡಿಸಿ, ನಿರ್ಮಾಣ, ಉಡುಪು, ಎಫ್‌ಎಂಸಿಜಿ ಮತ್ತು ಪ್ಯಾಕೇಜಿಂಗ್‌ನಂತಹ ಅಪಾರ ಸಂಖ್ಯೆಯ ಕೈಗಾರಿಕೆಗಳಿಗೆ ಪೂರಕವಾಗಿರುವ ಜೈವಿಕ-ವಸ್ತುಗಳು ಮತ್ತು ಉತ್ಪನ್ನಗಳನ್ನು ಉತ್ಪಾದಿಸಲು ಇವುಗಳನ್ನು ಸಂಸ್ಕರಿಸಬೇಕು.
ಕೃಷಿ-ತ್ಯಾಜ್ಯಗಳಾದ ಅಡಿಕೆ ಸಿಪ್ಪೆ ಮತ್ತು ಕಾಪಿ ಪಲ್ಪ್ ನ್ನು ರೈತರು ಸಾಮಾನ್ಯವಾಗಿ ಎಸೆಯುತ್ತಾರೆ. ಅಥವಾ ರಸ್ತೆ ಬದಿಯಲ್ಲಿ ಸುಡುತ್ತಾರೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಇಂಗಾಲವನ್ನು ಹೊರಸೂಸಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ನಾವು ಬಯಸುತ್ತೇವೆ ಎನ್ನುತ್ತಾರೆ ವೈಷ್ಣವಿ. ವೈಷ್ಣವಿ ಪತಿ ಅದ್ವಿತ್ ಶಿವಮೊಗ್ಗದ ಹಿರೇತೋಟ ಗ್ರಾಮದವರು. ಅವರು ಎಲೆಕ್ಟ್ರಾನಿಕ್ಸ್ ಬಿ.ಇ ಪದವೀಧರರಾಗಿದ್ದು, 12 ವರ್ಷಗಳಿಂದ ಅನೇಕ ತಂತ್ರಜ್ಞಾನ ಕಂಪನಿಗಳ ನಿರ್ದೇಶಕರಾಗಿದ್ದರು.
ಪ್ರಸ್ತುತ ಶಕ್ತಿಯ (ಇಂಧನ) ಬಿಕ್ಕಟ್ಟು ಮತ್ತು ಪರಿಸರ ಮಾಲಿನ್ಯ ಸಮಸ್ಯೆಗಳನ್ನು ನಿವಾರಿಸಲು, ನಾವು ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳಿಗೆ ಬೇಕಾಗುವ ಇಂಧನವನ್ನು ಕೃಷಿ ತ್ಯಾಜ್ಯಗಳನ್ನು ಬಳಸಿದ (ಬಯೋಮಾಸ್-ಆಧಾರಿತ ಸಿಲಿಕಾನ್ ಮತ್ತು ಕಾರ್ಬನ್ ಬಳಸಿ ಲಿಥಿಯಂ-ಐಯಾನ್ ಬ್ಯಾಟರಿ ಆನೋಡ್) ಜೈವಿಕ ಇಂಧನಗಳ ಪಡೆಯುವ ಸಂಶೋಧನೆ ಮಾಡುತ್ತಿದ್ದೇವೆ”
-ಅದ್ವಿತ್ ಮಹಿಪಾಲ್, ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಹಾಗೂ ವೈಷ್ಣವಿ ಪತಿ
ಯಾಕಾಗಿ ಈ ಪ್ರಯೋಗ
ಇಡೀ ಭಾರತದಲ್ಲಿ ವಾರ್ಷಿಕವಾಗಿ 5 ಲಕ್ಷ ಮೆಟ್ರಿಕ್ ಟನ್ ಅಡಕೆ ಉತ್ಪಾದನೆಯಾಗುತ್ತದೆ. ಅಡಕೆಗೆ ಒಳಗಿನ ಬೀಜವನ್ನು ಮಾತ್ರ ಬಳಸಲಾಗುತ್ತದೆ ಮತ್ತು ಹೊರಗಿನ ಸಿಪ್ಪೆಯನ್ನು ತ್ಯಾಜ್ಯವಾಗಿ ಎಸೆಯಲಾಗುತ್ತದೆ.
ಅಡಕೆ ಸಿಪ್ಪೆಯಲ್ಲಿ ಲಿಗ್ನಿನ್, ಸೆಲ್ಯುಲೋಸ್ ಮತ್ತು ಹೆಮಿಸೆಲ್ಯುಲೋಸ್‌ನಲ್ಲಿ ಸಮೃದ್ಧವಾಗಿದೆ. ಇದರಿಂದಾಗಿ ಅವುಗಳು ಜೈವಿಕ ವಿಘಟನೆಯ ವಿರುದ್ಧ ಪ್ರತಿರೋಧವನ್ನು ಪ್ರದರ್ಶಿಸುತ್ತವೆ. ಅಲ್ಲದೆ ಅಡಕೆ ತ್ಯಾಜ್ಯದಲ್ಲಿನ ಇಂಗಾಲ ಮತ್ತು ಸಾರಜನಕದ ಅನುಪಾತದಲ್ಲಿನ ವ್ಯಾಪಕ ವ್ಯತ್ಯಾಸವು ನಿಧಾನವಾದ ವಿಘಟನೆಗೆ ಮತ್ತೊಂದು ಕಾರಣವಾಗಿದೆ. ಬಹುಪಾಲು ರೈತರು ಅಡಕೆ ಸಿಪ್ಪೆಗಳನ್ನು ರಸ್ತೆ ಬದಿ ಎಸೆದು ಸುಡುತ್ತಾರೆ. ಇದರಿಂದ ಗ್ಲೋಬಲ್ ವಾರ್ಮಿಂಗ್ ಆಗಿದೆ.
ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಮತ್ತು ಚಿಕಾಗೋ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಸಹ-ಲೇಖಕರಾದ ಸಂಶೋಧನಾ ಪ್ರಬಂಧದ ಪ್ರಕಾರ, ಭಾರತದ ಸುಮಾರು 58,000 ಕಾರ್ಖಾನೆಗಳು ಇಂಗಾಲ ಬಿಡುತ್ತಿದ್ದು, ಇದರಿಂದ ಪರಸ್ಪರ ಸಂಬಂಧ ಹಾಳಾಗುತ್ತಿದೆ. ಆದ್ದರಿಂದ ಬಯೋ ತ್ಯಾಜ್ಯ ಬಳಸಿ ರೂಫಿಂಗ್ ಮಾಡಿದರೆ ರೈತನ ಜತೆ ಶ್ರೀ ಸಾಮಾನ್ಯ ಸುಖವಾಗಿರುತ್ತಾರೆ.
ಹಳೆ ಪದ್ದತಿಯಂತೆ ನೂತನ ಶೈಲಿ
ಈ ಹಿಂದೆ ಇದ್ದ ಹಳ್ಳಿ ಜನರು ವಾತಾವರಣ ತಂಪಾಗಿರಲು ದೇಶೀಯ ವಾಸ್ತುಶೈಲಿಯಿಂದ ಸ್ಥಳೀಯವಾಗಿ ಲಭ್ಯವಿರುವ ಸಸ್ಯ ಆಧಾರಿತ ವಸ್ತುಗಳನ್ನು ತಮ್ಮ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿದ್ದರು. ಹೆಚ್ಚಾಗಿ ಬೆಳೆದುದೆಲ್ಲವೂ ಅವುಗಳ ನಿರ್ಮಾಣದಲ್ಲಿ ಬಳಕೆಯಾಗುತ್ತಿತ್ತು.
ಉದಾಹರಣೆಗೆ ಅವರು ಒಣಹುಲ್ಲು ಅಥವಾ ಜಲನಿರೋಧಕ ಬಳಸಿ ಹುಲ್ಲಿನ ಛಾವಣಿ ನಿರ್ಮಾಣ ಮಾಡುತ್ತಿದ್ದರು. ಇದರಿಂದ ಮನೆಯೋಳಗೆ ಬೆಚ್ಚನೆ, ತಂಪಿನ ಅನುಭವವಾಗುತ್ತಿತ್ತು. ಆದರೆ ಹೆಚ್ಚಿನ ನಿರ್ವಹಣೆ ಮತ್ತು ಹುಲ್ಲಿನ ಛಾವಣಿಯನ್ನು ಹಾಕಲು ಮತ್ತು ರಚಿಸಲು ನುರಿತ ಕಾರ್ಮಿಕರು ಬೇಕಾಗಿದ್ದು ಈಗ ಅವರು ಸಿಗುತ್ತಿಲ್ಲ. ಆದರೆ ಈ ಎಲ್ಲ ಗುಣ ಲಕ್ಷಣಗಳು ಬಯೋ ರೂಫಿಂಗ್ ನಲ್ಲಿ ಸಿಗುತ್ತದೆ.
ಮೆಟಲ್ ರೂಫಿಂಗ್ ಗೆ ಗುಡ್ ಬೈ
ಸಾಮಾನ್ಯವಾಗಿ ಬಳಸಲಾಗುವ ಮಣ್ಣಿನ ಅಂಚುಗಳು / ಸಿಮೆಂಟ್ ಟೈಲ್ಸ್, ಮೆಟಲ್ ರೂಫಿಂಗ್ ಲೋಹದ ಛಾವಣಿಯ ಹಾಳೆಗಳಂತಹ ಛಾವಣಿಯ ಸಾಮಗ್ರಿಗಳಲ್ಲಿ ಕೆಲವೇ ಕೆಲವು ರೂಪಾಂತರಗಳಿವೆ. ಅವುಗಳ ನಿರ್ಮಾಣದ ಮೂಲಾಧಾರವಾಗಿ, ಛಾವಣಿಗಳು ಹೊಸತನವನ್ನು ಬಯಸುತ್ತವೆ. ಅಲ್ಲದೇ ರೂಫಿಂಗ್ ಮಾರುಕಟ್ಟೆಯು ನಿಶ್ಚಲತೆಯನ್ನು ಎದುರಿಸುತ್ತಿದೆ, ಸಮರ್ಥನೀಯ ಮತ್ತು ನವೀನ ವಸ್ತುಗಳ ಗಮನಾರ್ಹ ಕೊರತೆಯಿದೆ.
ಭಾರತದಲ್ಲಿ ಮೆಟಲ್ ಛಾವಣಿಯ ವಿಭಾಗವು ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ರೂಫಿಂಗ್ ವ್ಯವಸ್ಥೆಯಾಗಿದೆ. ಕಡಿಮೆ ವೆಚ್ಚ ಮತ್ತು ನಿರ್ವಹಣೆ ಕಡಿಮೆ ಎಂದು ಮೆಟಲ್ ರೂಫಿಂಗ್ ನ್ನು ಜನ ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ , ಭಾರತದಂತಹ ಉಷ್ಣವಲಯದ ಹವಾಮಾನದಲ್ಲಿ ಇದು ಸೂಕ್ತವಲ್ಲ. ಜಾಗತಿಕ ತಾಪಮಾನ ದಿನದಿಂದ ದಿನದಿಂದ ಏರಿಕೆಯಾಗುತ್ತಿದ್ದು, ಉಷ್ಣಾಂಶ ಹೆಚ್ಚುತ್ತಿದೆ. ಇನ್ನು ಜೇಡಿಮಣ್ಣಿನ ಅಂಚುಗಳು ಉಷ್ಣವಲಯಕ್ಕೆ ಹೆಚ್ಚು ಸೂಕ್ತವಾಗಿದೆ ಆದರೆ ಅವು ದುಬಾರಿಯಾಗಿದೆ. ಆದರೆ ಬಯೋ ರೂಫಿಂಗ್ ಇಂತಹ ಲಕ್ಷಣಗಳನ್ನು ಹೊಂದಿಲ್ಲ. ಅಲ್ಲದೇ ನೂತನ ಶೈಲಿಗೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ.
ಹೇಗೆ ತಯಾರು ಮಾಡಲಾಗುತ್ತದೆ
ಮೊದಲು ಒಣಗಿದ ಅಡಕೆ ಅಥವಾ ತೆಂಗಿನಕಾಯಿ ನಾರನ್ನು ದ್ರಾವಣದಲ್ಲಿ ಮುಳುಗಿಸಲಾಗುತ್ತದೆ. ನಂತರ ಹೆಚ್ಚುವರಿ ರಾಳವನ್ನು ತೆಗೆದುಹಾಕಲು, ಅಡಕೆ ನಾರನ್ನು ಹಿಸುಕು ಹಾಕಲಾಗುತ್ತದೆ. ಬಳಿಕ ಅದನ್ನು ಹೈಡ್ರಾಲಿಕ್ ಪ್ರೆಸ್‌ನಲ್ಲಿ ಸಂಕುಚಿತಗೊಳಿಸಿ ಮತ್ತು 130-140 ಡಿಗ್ರಿ ತಾಪಮಾನದಲ್ಲಿ 20 ನಿಮಿಷಗಳ ಕಾಲ ಬಿಡಲಾಗುತ್ತದೆ. ವಸ್ತುವು ಸಂಪೂರ್ಣವಾಗಿ ಒಣಗಿದ ನಂತರ ಅದನ್ನು ಜಲನಿರೋಧಕ ಲೇಪನದ ಪರಿಹಾರದೊಂದಿಗೆ ಲೇಪಿಸಲಾಗುತ್ತದೆ.
ನೀರಿಗೆ ನಿರೋಧಕ
ಬಯೋ ರೂಫ್ ಹೆಚ್ಚಿನ ಲಿಗ್ನಿನ್ ಮತ್ತು ಸೆಲ್ಯುಲೋಸ್ ಮತ್ತು ಹೆಮಿಸೆಲ್ಯುಲೋಸ್ ಅಂಶದಿಂದಾಗಿ ವಿಘಟನೆಗೆ ನಿರೋಧಕವಾಗಿದೆ. ಅಡಿಕೆ ಸಿಪ್ಪೆಯಲ್ಲಿ
ಅರೆಕಾಹಸ್ಕ್ ಇದ್ದು, ಇದು ಹೆಚ್ಚಿನ ಸಿಲಿಕಾ ಅಂಶವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ತುಲನಾತ್ಮಕವಾಗಿ ಗೆದ್ದಲು ನಿರೋಧಕವಾಗಿದೆ ಏಕೆಂದರೆ ಸಿಲಿಕಾವು ಗೆದ್ದಲುಗಳನ್ನು ಹಿಮ್ಮೆಟ್ಟಿಸುತ್ತದೆ.
ಸ್ಪರ್ಧಾತ್ಮ ಕ ಬೆಲೆ
ಬಯೋ ರೂಪ್ ಗೆ ಸ್ಪರ್ಧಾತ್ಮಕ ಬೆಲೆ ಇಡಲಾಗಿದ್ದು, ಅದು ಕಡಿಮೆ ಇದೆ. ಮೆಟಲ್ ರೂಫಿಂಗ್ ಶೀಟ್‌ಗಳು ಪ್ರತಿ sft ಗೆ ಸುಮಾರು 40 ರೂ.ಇದೆ. ಅವು ಪೌಡರ್ ಲೇಪಿತವಾಗಿದ್ದರೆ ಅವು ಪ್ರತಿ sft ಗೆ ಸುಮಾರು 130 ರೂ. ಇದೆ. ಆದರೆ ಬಯೋ ರೂಪ್ ಗೆ ಇಷ್ಟೊಂದು ಹಣದ ಅವಶ್ಯಕತೆ ಇಲ್ಲ
ಪ್ರಸ್ತುತ, ರೂಫಿಂಗ್, ಒಳಾಂಗಣ ವಿನ್ಯಾಸ (ಇಂಟೀರಿಯರ್) ಮತ್ತು ಪಾರ್ಟಿಕಲ್ ಬೋರ್ಡ್ಗಳಂತಹ ನಿರ್ಮಾಣ ಉದ್ಯಮಕ್ಕಾಗಿ ಜೈವಿಕ ವಸ್ತು ಮತ್ತು ಉತ್ಪನ್ನಗಳನ್ನು ಬಳಸಲು, ಬೆಂಗಳೂರಿನ, ಸ್ವರ್ಣಪದಕ ವಿಜೇತರಾದ ಹಿರಿಯ ಆರ್ಕಿಟೆಕ್ ಸಂಜನಾರಾಜ್
ಅವರ “ಸ್ಟುಡಿಯೋ ಇಕಿನ್ಸಾದೊಂದಿಗೆ” ವೈಷ್ಣವಿಯವರ ಜತೆ ಕೈ ಜೋಡಿಸಿದ್ದಾರೆ. ಒಟ್ಟಾರೆ ಮಹಿಳೆಯೊಬ್ಬಳ ದೂರ ದೃಷ್ಟಿ ಪರಿಸರಕ್ಕೆ ಸಹಕಾರಿಯಾಗಿದೆ.
…..
ಏನು ಪ್ರಯೋಜನ
ಬಯೋ ರೂಫ್ ನಿಂದ ಬಿಸಿಲಿನ ತಾಪ ಶೇಖಡ ಎರಡರಷ್ಟು ಕಡಿಮೆಯಾಗುತ್ತದೆ.
ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಂಪಿನ ಅನುಭವವಾಗುತ್ತದೆ. ಅಲ್ಲದೇ ಕೈಗಾರಿಕೆಗಳಿಗೆ ಬರುವ ಕಾರ್ಮಿಕರು ಗೈರಾಗುವುದಿಲ್ಲ
ಬಯೋ ಛಾವಣಿ ಅಳವಡಿಸುವುದಕ್ಕೆ ಹೆಚ್ಚಿನ ಕಾರ್ಮಿಕರ ಅವಶ್ಯಕತೆ ಇರೋದಿಲ್ಲ, ಹಣ ಉಳಿತಾಯವಾಗುತ್ತದೆ
ಕೂಲಿಂಗ್ ಇರುವುದರಿಂದ, ಎಸಿ, ಫ್ಯಾನ್ ಅವಶ್ಯಕತೆ ಇರೋದಿಲ್ಲ. ಇದರಿಂದ ಕರೆಂಟ್ ಬಿಲ್ ಉಳಿಯುತ್ತೇ
ರೈತರಿಗೆ ಆರ್ಥಿಕವಾಗಿ ಉಪಯೋಗವಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಬೇರೆ ಜಿಲ್ಲೆಗೆ ಹೋಗುವ ಅವಶ್ಯಕತೆ ಇರೋದಿಲ್ಲ.
ಅಡಿಕೆ ಸಿಪ್ಪೆಯನ್ನು ಬಳಸಿಕೊಂಡು ರೂಫಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಬಿಸಿಯಾದ ಜಗತ್ತಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ.
ಅಡಿಕೆ ಸಿಪ್ಪೆಯನ್ನು ಬಳಸಿರುವುದರಿಂದ ಕಡಿಮೆ ತೂಕದ, ಕಡಿಮೆ ವೆಚ್ಚದ ಮತ್ತು ಕಡಿಮೆ ನಿರ್ವಹಣೆಯಾಗಿದೆ. ಇದು ಸ್ಕ್ರೂ ನೈಲ್ ಸಿಸ್ಟಮ್ನೊಂದಿಗೆ ಸ್ಥಾಪಿಸಲು ಸುಲಭವಾಗಿದೆ.
ಇದು ಉಷ್ಣ ವಾಹಕತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಡಿಮೆ ಶಾಖವನ್ನು ಹೊರಸೂಸುತ್ತದೆ. ಇದರಿಂದಾಗಿ ತಂಪಾಗಿಸುವ ಸೌಲಭ್ಯಗಳ ಬಳಕೆಯನ್ನು ಕಡಿತಗೊಳಿಸುತ್ತದೆ.
…….
ಕೋಟ್
ಕಟಾವು’ ಯೋಜನೆ ಪ್ರಾರಂಭಿಸಿದಾಗ, ನಮ್ಮಗುರಿ ಸ್ಪಷ್ಟವಾಗಿತ್ತು: ಕೃಷಿ-ತ್ಯಾಜ್ಯವನ್ನು ಬಳಸಿಕೊಂಡು ಕಲಾತ್ಮಕವಾಗಿ, ಆಕರ್ಷಕ ಮತ್ತು ಕ್ರಿಯಾತ್ಮಕ ರಚನೆಗಳನ್ನು ರಚಿಸುವುದು, ವೈವಿಧ್ಯಮಯ ಬೇಡಿಕೆಗಳನ್ನು ಪೂರೈಸುವುದು ಎಂಬುದಾಗಿತ್ತು. ನಾವು ನಿರಂತರವಾಗಿ ಗಡಿಗಳನ್ನು ವಿಸ್ತರಿಸಲು ಮತ್ತು ದೊಡ್ಡದಾಗಿ ಬೇಕಾದ
ಹೌಸಿಂಗ್ ಪರಿಹಾರಗಳನ್ನು ರಚಿಸಲು ಪ್ರಯತ್ನಪಟ್ಟಿದ್ದು, ಸಕ್ಸಸ್ ಆಗಿದ್ದೇವೆ. ಬಯೋ ರೂಫ್ ಹಾಕುವುದರಿಂದ ಪರಿಸರಕ್ಕೆ ಧನಾತ್ಮಕವಾಗಿ ನಾವು ಕೊಡುಗೆ ನೀಡಿದಂತೆ ಆಗುತ್ತದೆ.
– ಸಂಜನಾ ರಾಜ್, ಬೆಂಗಳೂರಿನ, ಸ್ವರ್ಣಪದಕ ವಿಜೇತೆ, ವೈಷ್ಣವಿ ಜತೆ ಕೈ ಜೋಡಿಸಿದವರು.
ನಮ್ಮ ಉಪಕ್ರಮವು ಪರಿಸರಕ್ಕೆ ಪ್ರಯೋಜನವನ್ನು ನೀಡುವುದಲ್ಲದೆ, ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ. ಕೌಶಲ್ಯ ತರಬೇತಿಯೊಂದಿಗೆ ಗ್ರಾಮೀಣ ಪ್ರದೇಶಗಳ ಮಹಿಳೆಯರ ಮತ್ತು ಯುವಕರ ಉದ್ಯೋಗವನ್ನು ಉತ್ತೇಜಿಸುತ್ತದೆ, ಆ ಮೂಲಕ ಆರ್ಥಿಕ ವೃತ್ತಕ್ಕೆ ಕೊಡುಗೆ ನೀಡಿದಂತಾಗುತ್ತದೆ.
– ವೈಷ್ಣವಿ, ಕಂಪನಿ ಪ್ರೊಪ್ರೈಟರ್