ದಾವಣಗೆರೆ ಡಿ.10: ಅವರಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ದಿನನಿತ್ಯ ಅಪಾಯದ ಮಧ್ಯೆ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ನಿಗಾ ಸಮಿತಿ ಸದಸ್ಯ ಅವರಗೆರೆ ವಾಸು ಆರೋಪಿಸಿದ್ದಾರೆ.
ಶಾಲಾ ಮೈದಾನದಲ್ಲಿ ಸ್ಥಳೀಯ ಯುವಕರು ರಾತ್ರಿ ವೇಳೆ ಗೂಳಿ ಆಡುತ್ತಾ, ಮದ್ಯದ ಬಾಟಲಿಗಳನ್ನು ಒಡೆದು ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಕಾಲಿಗೆ ಗಾಜಿನ ತುಣುಕುಗಳು ಚುಚ್ಚಿ ಗಾಯವಾಗುತ್ತಿದೆ ಮತ್ತು ಆಟವಾಡುವುದೇ ಕಷ್ಟವಾಗಿದೆ. ಶಾಲಾ ಸಮಯದಲ್ಲೂ ಕೆಲವರು ಕುರಿ-ಹುಡುಗರ ಜೂಜು ಆಡಿಸುತ್ತಿದ್ದು, ಶಾಲಾ ಆವರಣದಲ್ಲಿ ಮಕ್ಕಳು ಹಾಗೂ ಶಿಕ್ಷಕರು ಮಾಡಿರುವ ತರಕಾರಿ-ಕೈತೋಟವನ್ನು ನಾಶಪಡಿಸುತ್ತಿದ್ದಾರೆ.
ಕ್ರಿಕೆಟ್ ಆಡುವಾಗ ನೆಟ್ಟಿರುವ ಸಸ್ಯ-ಗಿಡಗಳನ್ನು ಮುರಿದು ಹಾಕುತ್ತಿದ್ದಾರೆ.ಶಾಲೆಯ ಕಬ್ಬಿಣದ ಕಾಂಪೌಂಡು ಕಿತ್ತು ಹಾಕಲಾಗಿದ್ದು, ಸಿಮೆಂಟ್ ಗೋಡೆ ನಿರ್ಮಾಣವಾಗಬೇಕಿದೆ. ನಾಲ್ಕು ಕೊಠಡಿಗಳ ಶಾಲಾ ಕಟ್ಟಡ ಹಾಗೂ ನಾಲ್ಕು ಶೌಚಾಲಯಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ.
Read also : ಸಾಹಿತಿ ಬಿ.ಶ್ರೀನಿವಾಸರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ಕೃತಿಗೆ ರಾಷ್ಟ್ರೀಯ ಪುಸ್ತಕ ಪುರಸ್ಕಾರ
ಈ ಬಗ್ಗೆ ಜಿಲ್ಲಾ ಪಂಚಾಯಿತಿ, ಡಿಡಿಪಿಐ, ಬಿಇಒ, ಮುಖ್ಯೋಪಾಧ್ಯಾಯರು, ಎಸ್ಡಿಎಂಸಿ ಸಮಿತಿ ಮತ್ತು ಪೆÇಲೀಸ್ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಸು ಆವೇದನ ವ್ಯಕ್ತಪಡಿಸಿದ್ದಾರೆ.
“ಶಾಲಾ ಮಕ್ಕಳ ಭವಿಷ್ಯ ಮತ್ತು ಸುರಕ್ಷತೆಗೆ ಗಂಭೀರ ಧಕ್ಕೆ ಉಂಟಾಗಿದೆ. ತಕ್ಷಣ ಕಾಂಪೌಂಡ್ ನಿರ್ಮಿಸಿ, ಶಿಥಿಲ ಕಟ್ಟಡ-ಶೌಚಾಲಯ ದುರಸ್ತಿ ಮಾಡಿ, ರಾತ್ರಿ ಮೈದಾನದಲ್ಲಿ ಗೂಳಿ-ಜೂಜು ತಡೆಗಟ್ಟಬೇಕು” ಎಂದು ಅವರಗೆರೆ ವಾಸು ಒತ್ತಾಯಿಸಿದ್ದಾರೆ.
ಈ ಸಮಸ್ಯೆ ತಕ್ಷಣ ಪರಿಹಾರವಾಗದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
