ದಾವಣಗೆರೆ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸ, ವ್ಯಾಪಾರ, ರಾಜಕೀಯ ಪ್ರತಿಯೊಂದರಲ್ಲೂ ಸ್ಪರ್ಧೆ ಇದೆ. ಯಾವ ಕ್ಷೇತ್ರದಲ್ಲಿ ನಿಮಗೆ ಆಸಕ್ತಿಯಿದೆಯೋ ಆ ಕ್ಷೇತ್ರದಲ್ಲಿ ಕಷ್ಟ ಪಟ್ಟು ಸಾಧನೆ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಕ್ಕಳಿಗೆ ಕಿವಿಮಾತು ಹೇಳಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ 2025 -26 ನೇ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆಯಾದ ಮಂತ್ರಿಮಂಡಲ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸದೊಂದಿಗೆ ಸಂಸ್ಕೃತಿ, ಶಿಸ್ತು ಇರುವಂತಹ ಶಾಲೆ ಈಶ್ವರಮ್ಮ ಶಾಲೆಯಾಗಿದೆ. ಆಡಳಿತ ಪಕ್ಷದ ವೈಖರಿ ವಿರೋಧ ಪಕ್ಷದ ತಪ್ಪುಗಳನ್ನು ತಿದ್ದುವ ಕಾರ್ಯದ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕಾಗುತ್ತದೆ. ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ, ಮುಂದಿನ ವರ್ಷದ ಮಕ್ಕಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಎಸ್‌ಕೆಪಿ ಡೈಮಂಡ್ ಜುಬ್ಲಿ ವಿದ್ಯಾಪೀಠದ ಉಪಾಧ್ಯಕ್ಷ ಆರ್.ಎಲ್.ಪ್ರಭಾಕರ್ ಮಾತನಾಡಿ, ಈಶ್ವರಮ್ಮ ಶಾಲೆ ಪಠ್ಯ ಮತ್ತು ಪಕ್ಷೇತರ ವಿಷಯಗಳನ್ನು ಹೂರಣ ಮಾಡಿ ಉಣಬಡಿಸುವ ವಿಶಿಷ್ಟ ಶಾಲೆಯಾಗಿದೆ. ಕೇವಲ ಅಂಕಗಳಿಗೆ ಮಹತ್ವ ಕೊಡಬಾರದು ನಿಮ್ಮಲ್ಲಿರುವ ಕೌಶಲ್ಯಗಳನ್ನು ನೋಡಿ ನಿಮ್ಮನ್ನು ಗುರುತಿಸುತ್ತಾರೆ. ಉದ್ಯೋಗ ಅವಕಾಶಗಳನ್ನು ಕೊಡುತ್ತಾರೆ. ಸ್ವ-ಉದ್ಯೋಗ ಮಾಡುವುದನ್ನು ಕಲಿತು ನೀವೇ ಕೈಗಾರಿಕೆಗಳನ್ನು ನಡೆಸುವ ಉದ್ಯಮಿಗಳಾಗಬೇಕೆಂದರು.
ನಮ್ಮ ದೇಹವೂ ಒಂದು ಮಂತ್ರಿ ಮಂಡಲ. ಹಾಗೆಯೇ ಮನೆಯೂ ಒಂದು ಮಂತ್ರಿ ಮಂಡಲವಿದ್ದಂತೆ. ಇದು ನಿಮಗೆ ಅರ್ಥವಾಗುವಂತೆ ಶಾಲಾ ಮಂತ್ರಿಮಂಡಲವನ್ನು ರಚಿಸಿ ದೇಶದ ಆಡಳಿತ ವ್ಯವಸ್ಥೆ ಯನ್ನು ಬಾಲ್ಯದಲ್ಲಿಯೇ ತಿಳಿದುಕೊಳ್ಳುವಂತೆ ಮಾಡಿ, ನಿಮ್ಮ ವ್ಯಕ್ತಿತ್ವ ನಿರ್ಮಾಣ ಮಾಡಿದ ಶಾಲೆಗೆ ತಂದೆ ತಾಯಿಯರಿಗೆ ಒಳ್ಳೆಯ ಹೆಸರು ತರುವಂತಹ ಮಕ್ಕಳಾಗಬೇಕೆಂದರು.
ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಮೌಲ್ಯಗಳನ್ನು ಅಳವಡಿಸಿಕೊಂಡು ಮೌಲ್ಯಯುತವಾದ ಜೀವನ ನಡೆಸಬೇಕು. ದೇಶ ನಮಗಾಗಿ ಏನು ಕೊಟ್ಟಿದೆ ಎಂದು ಕೇಳುವ ಬದಲು, ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ದೇಶ ಪ್ರೇಮವನ್ನು ಬೆಳೆಸಿಕೊಂಡು ಭವ್ಯ ಭಾರತದ ಉತ್ತಮ ನಾಗರಿಕರಾಗಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್.ಸುಜಾತ ಕೃಷ್ಣ, ಮಂತ್ರಿಮಂಡಲದ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದಂತೆ, ಮೌಲ್ಯಗಳನ್ನು ಅಳವಡಿಸಿ ಕೊಂಡು ಬದುಕಬೇಕು. ಮಂತ್ರಿಮಂಡಲದ ಉದ್ದೇಶವನ್ನು ಸಾರ್ಥಕ ಮಾಡಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂದರು.
ಆಡಳಿತ ಪಕ್ಷ ಏನೇ ಮಾಡಿದರೂ ಅದನ್ನು ವಿರೋಧಿಸುವುದು ವಿರೋಧ ಪಕ್ಷದ ಕೆಲಸವಾಗಿರುತ್ತದೆ. ಆದರೆ ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದವರು ಒಂದಾಗಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೀರಿ. ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಸಂದೇಶಗಳನ್ನು ಪಾಲಿಸಿರಿ ಬಾಬಾರವರು ಹೇಳುವಂತೆ ಎಲ್ಲರನ್ನು ಪ್ರೀತಿಸಿ ಎಲ್ಲರ ಸೇವೆಯನ್ನು ಮಾಡಬೇಕೆಂದು ತಿಳಿಸಿದರು.
ಮಕ್ಕಳ ಮೊದಲು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಮಾತೃಭೂಮಿ, ತಂದೆ-ತಾಯಿಯರನ್ನು ಗೌರವಿಸಬೇಕು. ನಮ್ಮ ದೇಶದ ಮೇಲೆ ನಮಗೆ ಅಪಾರವಾದ ಪ್ರೀತಿಯಿರಬೇಕು. ವೀರಸನ್ಯಾಸಿ ಸ್ವಾಮಿ ವಿವೇಕಾನಂದರಂತೆ ದೇಶಭಕ್ತರಾಗಿ ಉತ್ತಮ ನಾಯಕತ್ವವನ್ನು ಬೆಳೆಸಿಕೊಳ್ಳಿ ಎಂದು ತಿಳಿಸಿದರು.
Read also : ದಾವಣಗೆರೆ|ಆಧುನಿಕ ಹೈನುಗಾರಿಕೆ ತರಬೇತಿ
ಶಾಲೆಯಲ್ಲಿ ಮೌಲ್ಯ ಶಿಕ್ಷಣವನ್ನು ಪಡೆಯುತ್ತಿರುವ ನೀವು ನಿಮ್ಮ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳುವಂತವರಾಗಬೇಕೆಂದು ಸಲಹೆ ನೀಡಿದರು.
10ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್‌ಕುಮಾರ್ ಸುರ್ವೆ ಮುಖ್ಯಮಂತ್ರಿಯಾಗಿ, 10ನೇ ತರಗತಿಯ ವಿದ್ಯಾರ್ಥಿನಿ ಬಿ.ಖುಷಿ ವಿರೋಧ ಪಕ್ಷದ ನಾಯಕಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಸಹ ಶಿಕ್ಷಕಿ ಹೇಮಲತಾ ಚುನಾವಣಾ ಪ್ರಕ್ರಿಯೆ ವಿವರಿಸಿದರು. 25 ಸಚಿವರನ್ನೊಳಗೊಂಡ ಶಾಲಾ ಮಂತ್ರಿಮಂಡಲದಲ್ಲಿ ರಾಜ್ಯಪಾಲರಾಗಿ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್, ಸಭಾಪತಿಯಾಗಿ ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ, ಸಂಪುಟ ಕಾರ್ಯದರ್ಶಿಯಾಗಿ ಸಹ ಶಿಕ್ಷಕಿ ರೋಹಿಣಿ ಎಂ. ಭಾವಿ ನಾಯಕರಾಗುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು.
ಸಹಶಿಕ್ಷಕಿ ಶ್ರೀದೇವಿ ಬಿ. ವಿದ್ಯಾರ್ಥಿ ಸಂಘ ಪರಿಚಯಿಸಿದರು. ರಾಜ್ಯಪಾಲರಾದ ಪ್ರಾಂಶುಪಾಲರು ಮಂತ್ರಿಮಂಡಲದ ಎಲ್ಲ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವಿರಬೇಕು. ತಂದೆ-ತಾಯಿಗಳ ಬಗ್ಗೆ ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಗುರುಗಳ ಮಾರ್ಗದರ್ಶನದಂತೆ ನಡೆದು, ಶಾಲೆಗೆ, ಪೋಷಕರಿಗೆ, ದೇಶಕ್ಕೆ ಕೀರ್ತಿ ತರುವಂತ ಮಕ್ಕಳಾಗಬೇಕು.
-ದಿನೇಶ್ ಕೆ.ಶೆಟ್ಟಿ, ದೂಡಾ ಅಧ್ಯಕ್ಷರು.