ದಾವಣಗೆರೆ (Davanagere) : ಕಲಬುರಗಿಯ ಸರಕಾರಿ ಮಹಾವಿದ್ಯಾಲಯಕ್ಕೆ ಸೇರಿದ ಭೂಮಿಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ನೀಡಲು ತೀರ್ಮಾನಿಸಿರುವ ಸರಕಾರದ ಕ್ರಮ ಖಂಡಿಸಿ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಮಾತನಾಡಿ, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದ 3.07 ಎಕರೆ ಭೂಮಿಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಮಂಜೂರು ಮಾಡಲು ಅನುಮತಿ ನೀಡಿರುವುದು ಸರಿಯಲ್ಲ. ಶೈಕ್ಷಣಿಕ ಚಟುವಟಿಕೆಗೆ ಬಳಕೆಯಾಗಬೇಕಾಗಿದ್ದ ಭೂಮಿಯನ್ನು ಜಾತಿ ಸಂಘಟನೆಗೆ ನೀಡಲು ಮುಂದಾಗಿರುವುದು ಸರಕಾರದ ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದು ಕಿಡಿಕಾರಿದರು.
Read also : Davanagere news | ಗ್ರಾಮೀಣ ಮೂಲ ಸೌಕರ್ಯಕ್ಕೆ ಒತ್ತು : ಡಾ; ಪ್ರಭಾ ಮಲ್ಲಿಕಾರ್ಜುನ್
ಶೈಕ್ಷಣಿಕ ಕಾರ್ಯಚಟುವಟಿಕೆ ನಡೆಯಬೇಕಾದ ಸ್ಥಳದಲ್ಲಿ ಜಾತಿ ಸಂಘಟನೆ ತಲೆ ಎತ್ತಲು ಅವಕಾಶ ಮಾಡಿಕೊಡುತ್ತಿರುವುದು ಖಂಡನೀಯ. ತಕ್ಷಣವೇ ಈ ನಿರ್ಧಾರವನ್ನು ಸರಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಜಿಂದಾಲ್ ಕಂಪನಿಗೆ ಅಂದಾಜು ೪೦ ಸಾವಿರ ಕೋಟಿ ರೂ. ವೌಲ್ಯದ 3,667 ಎಕರೆ ಜಮೀನನ್ನು ಶುದ್ಧ ಕ್ರಯ ಮಾಡಿಕೊಡಲು ಮುಂದಾಗಿರುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕೆರೆಯಾಗನಹಳ್ಳಿ ರಾಜು, ಎ.ತಿಪ್ಪೇಶ್, ಪರಶುರಾಮ ಸೇರಿದಂತೆ ಇತರರು ಇದ್ದರು.