ದಾವಣಗೆರೆ: ಮನಸ್ಸಿಗೆ ಉಲ್ಲಾಸ ನೀಡಿ, ಓದಿಗೆ ಹೊಸ ಚೈತನ್ಯ ನೀಡುವ ಶಕ್ತಿ ಕಲೆಗಿದೆ. ಕ್ರೀಡೆ, ಚಿತ್ರಕಲೆ, ಸಂಗೀತ, ನೃತ್ಯದಂತಹ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಉಲ್ಲಾಸಯುತ ಉನ್ನತ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯಲ್ಲಿ ಶನಿವಾರ ಏರ್ಪಡಿಸಿದ್ದ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಶಿವಗಂಗೋತ್ರಿ ಯುವಜನೋತ್ಸವ-೨೬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಓದಿನ ನಡುವೆ ಇಷ್ಟದ ಸಂಗೀತದ ಆಲಾಪ ಕೇಳುತ್ತಿದ್ದಂತೆ ಮನಸ್ಸಿಗೆ ಮುದ ಸಿಗುತ್ತದೆ. ಹಾಗೆಯೇ ಪದವಿ ಅಧ್ಯಯನದ ಪಠ್ಯದ ಕಲಿಕೆಯ ಜೊತೆಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಂತಹ ಪಠ್ಯೇತರ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಇದರಿಂದ ಏಕಗ್ರತೆ ಹೆಚ್ಚಿಸಿ, ಆತ್ಮವಿಶ್ವಾಸದಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಭಾರತಕ್ಕೆ ತನ್ನದೇಯಾದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯನ್ನು ಒಳಗೊಂಡಿದೆ. ವೈವಿಧ್ಯಮಯ ಕಲೆಗಳು, ಸಂಸ್ಕೃತಿ, ಕಲಾಕೌಶಲ್ಯಗಳು, ವೃತ್ತಿ ಕೌಶಲ್ಯಗಳು ವ್ಯಕ್ತಿತ್ವವನ್ನು ವಿಕಸನಗೊಳಿಸಲು ಅನುಕೂಲವಾಗಿವೆ. ಯಾವುದೇ ರೀತಿಯ ಸಮಸ್ಯೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವೂ ಕಲೆಗಳಿವೆ. ಇವು ಮುಂದಿನ ಪೀಳಿಗೆಗೆ ಒಯ್ಯುವ ಕೆಲಸವನ್ನು ಯುವಜನರು ಪ್ರಾಮಾಣಿಕವಾಗಿ ಮಾಡಬೇಕು ಎಂದು ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಸಂಗೀತ, ನೃತ್ಯ ಹಾಗೂ ಪ್ರದರ್ಶಕ ಕಲೆಗಳ ಅಧ್ಯಯನಕ್ಕಾಗಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಕೊರತೆಯಿಂದ ಮುನ್ನಡೆಸಲು ಸಾಧ್ಯವಾಗಿಲ್ಲ. ಆದರೆ ಈಗಲೂ ದಾವಣಗೆರೆಯಲ್ಲಿ ಸಂಗೀತ, ಶಾಸ್ತಿçÃಯ ನೃತ್ಯದಂತಹ ಕಲೆಗಳನ್ನು ಕಲಿಸಲು ಆಸಕ್ತರು ಮುಂದಾದರೆ, ದಾವಣಗೆರೆ ವಿಶ್ವವಿದ್ಯಾನಿಲಯದ ವತಿಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಿದ್ಧ ಎಂದು ಭರವಸೆ ನೀಡಿದರು.
ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಗೀತ ಕಲಾವಿದೆ ಸುಶೀಲಾ ಜೋಶಿ ಹಾಡನ್ನೇ ಹಾಡಿ ಉದ್ಘಾಟನಾ ಭಾಷಣ ಮಾಡಿದರು.
Read also : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ
ಕುಲಸಚಿವ ಎಸ್.ಬಿ.ಗಂಟಿ ಮಾತನಾಡಿ, ಸಾಂಸ್ಕೃತಿಕ ಕಲೆಗಳ ಆಸಕ್ತಿಯು ಮನೋವಿಶ್ವಾಸ ಹೆಚ್ಚಿಸಿ, ಬೌದ್ಧಿಕ ವಿಕಸನಕ್ಕೆ ಪೂರಕವಾಗಿ ಕೆಲಸ ಮಾಡುವುದು. ವ್ಯಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಶಕ್ತಿಯೂ ಕಲೆ, ಸಂಗೀತಕ್ಕಿದೆ ಎಂದು ಹೇಳಿದರು.
ಸ್ನಾತಕೋತ್ತರ ವಿದ್ಯಾರ್ಥಿ ಕೂಟದ ಅಧ್ಯಕ್ಷ ಡಾ.ಸತೀಶ ವಲ್ಲೇಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕೂಟ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ, ಶಿಕ್ಷಣ ನಿಕಾಯದ ಡೀನ್ ಪ್ರೊ.ಕೆ.ವೆಂಕಟೇಶ, ಪ್ರೊ.ಅಶೋಕಕುಮಾರ ಪಾಳೇದ, ಪ್ರೊ.ಮಲ್ಲಿಕಾರ್ಜುನ ಕೆ., ಉಪಸ್ಥಿತರಿದ್ದರು. ಉಪಾಧ್ಯಕ್ಷ ಆಸೀಫುಲ್ಲಾ ಸ್ವಾಗತಿಸಿದರು. ಡಾ.ಜಿ.ನೀಲಮ್ಮ ವಂದಿಸಿದರು. ಡಾ. ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು.
