ದಾವಣಗೆರೆ : ಹೆಂಡತಿಯ ಮೇಲೆ ಸಂಶಯಪಟ್ಟು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿ ಗಂಡನಿಗೆ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಸಜೆ ಹಾಗೂ 13 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಮಲೆಬೆನ್ನೂರಿನ ಪರಮೇಶ್ವರಪ್ಪ(51) ಶಿಕ್ಷೆಗೆ ಗುರಿಯಾದ ಆರೋಪಿ.
ಈ ಹಿಂದೆ ಪರಮೇಶ್ವರಪ್ಪ ಯಲವಟ್ಟಿಯ ಓರ್ವ ಹೆಣ್ಣು ಮಗಳನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲಿನಲ್ಲಿದ್ದ. ಈ ಸಂದರ್ಭದಲ್ಲಿ ಹೆಂಡತಿ ವೇದಾವತಿ ರಾಜ್ಯ ಹೈಕೋರ್ಟಿಗೆ ಅಪೀಲು ಹೋಗಿ ಜಾಮೀನಿನ ಮೇಲೆ ಗಂಡ ಪರಮೇಶ್ವರಪ್ಪನನ್ನು ಬಿಡಿಸಿಕೊಂಡು ಬಂದಿದ್ದಳು.
ಹೀಗೆ ಜೈಲಿನಿಂದ ಬಂದ ಮೇಲೆ ಗಂಡ-ಹೆಂಡತಿ ಜೊತೆಯಲ್ಲಿಯೇ ಇದ್ದರು. ನಂತರ ಹೆಂಡತಿ ವೇದಾವತಿ ಮೇಲೆ ಸಂಶಯಪಡುತ್ತ ನಿತ್ಯ ಗಲಾಟೆ ಮಾಡಲು ಆರಂಭಿಸಿದ್ದ. ಕಳೆದ ವರ್ಷ ಫೆಬ್ರವರಿ 2 ರಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವೇದಾವತಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದಾಗ ಆಕೆ ತಪ್ಪಿಸಿಕೊಂಡಿದ್ದಳು.
ಆದರೂ ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿತ್ತು. ನಂತರ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದಾಗ ಮಗ ಮತ್ತು ಇತರರು ಬಂದು ಬಿಡಿಸಿದ್ದರು. ಈ ಸಂದರ್ಭದಲ್ಲಿ ನಿನ್ನನ್ನು ಕೊಲೆ ಮಾಡಿಯೇ ತೀರುತ್ತೇನೆ ಎಂದು ಪರಮೇಶ್ವರಪ್ಪ ಹೆಂಡತಿಗೆ ಜೀವ ಬೆದರಿಕೆ ಹಾಕಿದ್ದ.
ಈ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆ ವೇದಾವತಿ ನೀಡಿದ ದೂರಿನ ಮೇರೆಗೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ದಾಖಲಿಸಿದ್ದರು.
ವಾದ- ವಿವಾದ ಆಲಿಸಿದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಸಾಕ್ಷಿ ಆಧಾರಗಳಿಂದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಪರಮೇಶ್ವರಪ್ಪನಿಗೆ 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 13 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ.
ನೊಂದ ಮಹಿಳೆಯ ಪರವಾಗಿ ಸರ್ಕಾರಿ ಅಭಿಯೋಜಕ ಜಯ್ಯಪ್ಪ ವಾದ ಮಂಡಿಸಿದ್ದರು.
