ದಾವಣಗೆರೆ (Davanagere): ಹಿಂದುತ್ವದ ಮೋಡಿಗೆ ಬಿದ್ದಿರುವ ನಮ್ಮ ಸಣ್ಣ ಸಮುದಾಯಗಳು ನಾಶ ಆಗುತ್ತಿರುವುದು ಗಂಭೀರ ಚಿಂತನೆಗೆ ಎಡೆಮಾಡಿಕೊಡುವ ವಿಚಾರ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.
ನಗರದ ನಿವೃತ್ತ ಪೊಲೀಸ ಅಧಿಕಾರಿಗಳ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿ.ಶ್ರೀನಿವಾಸ್ ಅವರ ಐದು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ, ಮಾತನಾಡಿದ ಅವರು, ಸಣ್ಣ ಸಣ್ಣ ಸಮುದಾಯಗಳು ಇಂದು ಮೇಲ್ಜಾತಿಗಳ ಪ್ರಭಾವದಿಂದ ತಮ್ಮ ಮೂಲವನ್ನು ಕಳೆದುಕೊಳ್ಳುತ್ತಿವೆ. ನೀವು ಪೂಜಿಸುವ ದೇವರು ರಾಮನ ಕಾಲದಲ್ಲಿ ಕಪಿ ಸೇನೆಯಲ್ಲಿದ್ದ ಎಂದು ಹೇಳುತ್ತಲೇ ಎಲ್ಲವನ್ನೂ ಮರೆಯುವ ಸಮುದಾಯಗಳು ಜೈ ಶ್ರೀರಾಂ ಎಂದು ತಮ್ಮ ತನ ಬಿಡುತ್ತಿದ್ದಾರೆ. ಇದು ಕೇವಲ ನಮ್ಮ ದೇಶದಲ್ಲಿ ಅಲ್ಲ, ಪ್ರಪಂಚದ ಎಲ್ಲೆಡೆ ದೊಡ್ಡ ಜಾತಿಗಳ ಬಲೆಗೆ ಬೀಳುವ ಸಣ್ಣ ಸಮುದಾಯಗಳು ನಾಶ ಆಗುತ್ತಿವೆ ಎಂದರು.
ನಾವು ನಮ್ಮ ಸುತ್ತಮುತ್ತಲ ಪರಿಸರವನ್ನು ದೇವರನ್ನಾಗಿ ನೋಡುತ್ತೇವೆ. ಆದರೆ, ಅದನ್ನೇ ಕಲುಷಿತ ಮಾಡುತ್ತಿದ್ದೇವೆ. ಗಂಗೆಯನ್ನು ದೇವರಿಗೆ ಹೋಲಿಸುವ ನಾವು ಇದೇ ಗಂಗೆಯನ್ನು ಸಂಪೂರ್ಣ ಕಲುಷಿತ ಮಾಡಿದ್ದೇವೆ. ಪ್ರಕೃತಿಯ ಪ್ರತಿ ಮರದಲ್ಲಿ ದೇವರ ಕಾಣುವ ನಾವು ಪ್ರತಿ ಮರ ನಾಶ ಆದಾಗಲೂ ಕನಿಷ್ಠ ಕಾಳಜಿ ತೋರುತ್ತಿದ್ದೇವೆ. ಅಂಕಿ ಅಂಶಗಳ ಆಧಾರದಲ್ಲಿ ಕಾಡು ಉಳಿಸಿದ್ದಾಗಿ ಹೇಳುತ್ತೇವೆ. ಆದರೆ, ಅಂಕಿ ಅಂಶದಿಂದ ಕಾಡು ಉಳಿಯಲ್ಲ. ಈ ವಿಷಯದಲ್ಲಿ ನ್ಯಾಯಪೀಠಗಳು ಜವಾಬ್ದಾರಿ ಮರೆತಿವೆ ಎಂದು ಅವರು ಬೇಸರಿಸಿದರು.
ನಮ್ಮ ಪ್ರಭುತ್ವಗಳು ಇಂದು ದೊಡ್ಡಮಟ್ಟದ ಹಿಡಿತ ಸಾಧಿಸಿವೆ. ಎಲ್ಲಾ ಮಾಹಿತಿಯನ್ನು ಹಿಡಿದಿಟ್ಟುಕೊಳ್ಳುವಷ್ಟು ತಾಕತ್ತು ಗಳಿಸಿವೆ. ಇದಕ್ಕೆ ಉತ್ತಮ ಉದಾಹರಣೆ ಕುಂಭ ಮೇಳದಲ್ಲಿ ಸತ್ತವರು ಎಷ್ಟು ಎಂಬುದನ್ನು ನಿಖರವಾಗಿ ತಿಳಿಯಲು ಯಾವುದೇ ಮಾಧ್ಯಮ ನೋಡಿದರೂ, ಪತ್ರಿಕೆ ಓದಿದರೂ ತಿಳಿಯದು ಎಂದು ಬೇಸರಿಸಿದರು.
ಶ್ರೀನಿವಾಸ್ ಅವರು ಸಾಮಾಜಿಕ ವ್ಯವಸ್ಥೆಯನ್ನು ಪಕ್ವವಾಗಿ ಅರಿತು, ನಿರ್ಭಯವಾಗಿ ಸಾಹಿತ್ಯ ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಅಂಕಣಕಾರ ಶಿವಸುಂದರ್ ಮಾತನಾಡಿ, ದೇಶದಲ್ಲಿ ಇಂದು ಸಂವಿಧಾನ ಆಧಾರಿತ ಸರ್ಕಾರ ಆಗಲಿ, ನ್ಯಾಯಾಲಯ ಆಗಲಿ ಇಲ್ಲ. ಎಲ್ಲವೂ ಪ್ರಭುತ್ವದ ಹಿಡಿತದಲ್ಲಿರುವ ಅಂಗಗಳಾಗಿವೆ. ಒಂದು ಕಾಲದಲ್ಲಿ ನ್ಯಾಯಾಂಗ ಕಾರ್ಯಾಂಗ ಮಧ್ಯೆ ಶ್ರೇಷ್ಠತೆಯ ಸಮರ ನಡೆದಿತ್ತು. ಕಾರ್ಯಾಂಗ ತಾನೂ ಶ್ರೇಷ್ಠ ಎಂದು ತೋರಿಸುವ ಸಲುವಾಗಿ ಅಂದಿನ ಇಂದಿರಾ ಗಾಂಧಿ ಸರ್ವಾಧಿಕಾರಿ ಧೋರಣೆ ತಳೆದು ಭೂಮಿ ಹಂಚಿಕೆ ವಿಷಯದಲ್ಲಿ ಹಿರಿತನ ತೋರಿಸಲು ಹೋದರು. ಆಗ ಸುಪ್ರೀಂ ಕೋರ್ಟ್ ನೀವು ಮಾಡಿದ್ದೇ ಕಾನೂನು ಅಲ್ಲ, ನಾವು ಒಪ್ಪಿದರೆ ಮಾತ್ರ ಅದು ಕಾನೂನು ಎಂದು ಪೈಪೋಟಿಗೆ ಬಿದ್ದರು. ಅಂದಿನಿಂದಲೂ ನ್ಯಾಯಾಂಗ ಪ್ರಭುತ್ವದ ಅಡಿಯಲ್ಲಿಯೇ ಇದೆ. ಇದು ಕೇವಲ ಭಾರತದಲ್ಲಿ ಮಾತ್ರ ಅಲ್ಲ, ಅಮೇರಿಕಾದಲ್ಲೂ ಸಹ ಇದೇ ಸ್ಥಿತಿ ಇದೆ ಎಂದ ಅವರು ಇಂದು ಜಾತಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನ್ಯಾಯಾಧೀಶರು ತಾವು ಸಂವಿಧಾನತ್ಮಕವಾಗಿ ರಚನೆ ಆದ ನ್ಯಾಯಪೀಠಗಳ ಮುಖ್ಯಸ್ಥರು ಎಂಬುದ ಮರೆತು ಧರ್ಮದ ತಳಹದಿಯಲ್ಲಿ ಸಂವಿಧಾನ ನಿರ್ಮಾಣ ಆಗಿದೆ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ವಕೀಲ ಬಿ.ಎಂ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಆರ್.ಜಿ. ಹಳ್ಳಿ ನಾಗರಾಜ, ಸತೀಶ್ ಕುಲಕರ್ಣಿ, ಬಸವರಾಜ ಸೂಳಿಭಾವಿ, ಹಸೀನಾ, ಘನಿ ತಾಹಿರ್ ವೇದಿಕೆಯಲ್ಲಿದ್ದರು.
ಶ್ರೀನಿವಾಸ್ ಅವರು ಸೊಂಡೂರಿನ ಕತೆಗಳು, ಎಲ್.ಜಿ. ಹಾವನೂರು ಸೇರಿದಂತೆ 5 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
–ಕೋಟ್–
ಅಂಬೇಡ್ಕರ್ ಅಂಬೇಡ್ಕರ್ ಎಂದು ಜಪ ಮಾಡುವ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗ ಸಿಗುತ್ತಿತ್ತು ಎಂದವರಿಗೆ ನಾನು ಹೇಳಬಯಸುವೆ. ನಮ್ಮ ಹಲವು ತಲೆಮಾರು ಇದೇ ದೇವರ ಜಪ ಮಾಡಿಕೊಂಡು ಬಂದಿತ್ತು. ಸ್ವರ್ಗ ಇರಲಿ ಕನಿಷ್ಠ ನಾವು ಮನುಷ್ಯರು ಎಂಬುದನ್ನು ಆ ದೇವರು ಹೇಳಲಿಲ್ಲ. 70 ವರ್ಷದಲ್ಲಿ ಅಂಬೇಡ್ಕರ್ ನಾವು ಯಾರು, ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ. ಹೀಗಾಗಿ ನಾವು ಅಂಬೇಡ್ಕರ್ ಜಪ ಮಾಡ್ತೇವೆ.-ಬಿ.ಎಂ.ಹನುಮಂತಪ್ಪ, ಹಿರಿಯ ವಕೀಲರು.
Read also : ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್