ದಾವಣಗೆರೆ : ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಕಠಿಣ ಸತ್ಯಗಳನ್ನು ಎದುರಿಸಿ, ನಿಸ್ವಾರ್ಥ ಸೇವೆಯ ಮೂಲಕ ದೇಶದ ಏಕತೆ ಮತ್ತು ಪ್ರಗತಿಗೆ ಶ್ರಮಿಸಬೇಕು. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಸಕಾರಾತ್ಮಕ ಚಿಂತನೆಯೊಂದಿಗೆ ಭವಿಷ್ಯ ಕನಸು ಕಾಣಬೇಕು. ಇದೇ ರೀತಿಯಲ್ಲಿ ಸವಾಲುಗಳನ್ನು ಎದುರಿಸಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಂತಾಗಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಪ್ರತಿಪಾದಿಸಿದರು.
ನಗರದ ಹಳೇ ದಾವಣಗೆರೆಯ ಮಿಲ್ಲತ್ ಅಡಿಟೋರಿಯಂನಲ್ಲಿ ಏರ್ಪಡಿಸಲಾಗಿದ್ದ ಯುವ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಪ್ರಸ್ತುತ ರಾಜಕಾರಣದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಬೇಕು. ನಿಸ್ವಾರ್ಥ, ಪ್ರತಿ ಫಲಾಕ್ಷೆ ಇಲ್ಲದೇ ಸೇವೆ ಸಲ್ಲಿಸಿದವರಿಗೆ ಅವಕಾಶಗಳು ಹೆಚ್ಚಿನದಾಗಿ ಸಿಗಬೇಕು. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯತೆ ಇದೆ ಎಂದು ಹೇಳಿದರು.
ಇಂದಿನ ಯುವಕರೇ ಮುಂದಿನ ಭವಿಷ್ಯದ ನೇತಾರರು. ಹಾಗಾಗಿ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ದೇಶದ ಭವಿಷ್ಯವಾಗಿರುವ ಯುವಕರಲ್ಲಿ ಆತ್ಮವಿಶ್ವಾಸ, ರಾಷ್ಟ್ರಪ್ರೇಮ ಹಾಗೂ ಜವಾಬ್ದಾರಿಯನ್ನು ಜಾಗೃತಿಗೊಳಿಸಬೇಕಾದ ಅಗತ್ಯ ತೆ ಇದೆ. ಇದಕ್ಕೆ ಸೂಕ್ತ ವೇದಿಕೆ ಸಿಗುವಂತಾಗಬೇಕು. ಆಗ ಮಾತ್ರ ಯುವಕರ ನಿಜವಾದ ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ರಾಜಕಾರಣದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಪೈಕಿ ಕೆಲವೇ ಕೆಲವರಿಗೆ ಮಾತ್ರ ಅವಕಾಶ ಸಿಗುತ್ತದೆ. ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟಕಡೆಯ ಯುವಕನಿಗೂ ವೇದಿಕೆ ಸಿಕ್ಕರೆ ಸಾಧಿಸಿ ತೋರಿಸುತ್ತಾನೆ ಎಂಬುದು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದವರಿಗೂ ಅವಕಾಶ ಸಿಕ್ಕರೆ ಖಂಡಿತವಾಗಿಯೂ ದೇಶದ ಮತ್ತಷ್ಟು ಸದೃಢವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಸೇವೆ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಯುವಕರು ಪಣತೊಡಬೇಕು. ಯುವಕರು ಕೇವಲ ದೇಶದ ಸಂಪನ್ಮೂಲವಲ್ಲ, ಅವರು ದೇಶದ ಶಕ್ತಿ. ಶಿಕ್ಷಣ, ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವ ಸಮುದಾಯಕ್ಕೆ ಸಾಮರ್ಥ್ಯವಿದೆ. ಅದೇ ರೀತಿಯಲ್ಲಿ ರಾಜಕಾರಣದಲ್ಲಿಯೂ ಬದಲಾವಣೆ ಆಗಬೇಕಿದೆ ಎಂದು ಹೇಳಿದರು.
“ನಿಮ್ಮ ಮೇಲೆ ನೀವು ನಂಬಿಕೆ ಇಡಿ”. ಕಠಿಣ ಸತ್ಯಗಳನ್ನು ಎದುರಿಸಿ, ನಿಸ್ವಾರ್ಥ ಸೇವೆಯ ಮೂಲಕ ದೇಶದ ಏಕತೆ ಮತ್ತು ಪ್ರಗತಿಗೆ ಶ್ರಮಿಸಬೇಕು. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಸಕಾರಾತ್ಮಕ ಚಿಂತನೆಯೊಂದಿಗೆ ಭವಿಷ್ಯ ಕನಸು ಕಾಣಬೇಕು ಎಂದು ಸೈಯದ್ ಖಾಲಿದ್ ಅಹ್ಮದ್ ತಿಳಿಸಿದರು.
ಬಿಜೆಪಿಯವರು ಯುವಕರ ಮನಸ್ಸು ಕಲುಷಿತಗೊಳಿಸಿ ಸಮಾಜದಲ್ಲಿ ಶಾಂತಿ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಧರ್ಮಾಧರಿತ ರಾಜಕಾರಣ ಮಾಡುವ ಮೂಲಕ ಮನಸು ಕದಡಿಸುತ್ತಿದ್ದಾರೆ. ಈ ಬಗ್ಗೆ ಯುವಕರು ಗಂಭೀರ ಚಿಂತನೆ ನಡೆಸ ಬೇಕಾದ ಅಗತ್ಯತೆ ಇದೆ. ವಾಸ್ತವತೆ, ಭವಿಷ್ಯವನ್ನು ಕಣ್ಮುಂದೆ ಇಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೇ ಕೋಮು ಪ್ರಚೋದಿತ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡಬಾರದು ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡ ಸೈಯದ್ ಸೈಫುಲ್ಲಾ ಸಾಬ್ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 40 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಎಲ್ಲಾ ಅನುಭವಗಳೂ ಇವೆ. ಈ ಬಾರಿಯ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ತನ್ನ ಪುತ್ರನೂ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ಅವಕಾಶ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇವೆ. ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ಬದ್ಧರಿದ್ದೇವೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದು ಹೇಳಿದರು.
ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಅವಕಾಶಗಳು ಸಿಕ್ಕಾಗ ಯಾವುದೇ ಕಾರಣಕ್ಕೂ ಬಿಡಬಾರದು. ಉಪಯೋಗ ಮಾಡಿಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಪ್ರಯತ್ನ, ನಿರಂತರ ಶ್ರಮ ಇದ್ದರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ. ಕಾಯುವ ತಾಳ್ಮೆ ಇರಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲಾ ಧರ್ಮ, ಜಾತಿ, ವರ್ಗದವರನ್ನೂ ತಲುಪಿದೆ. ಈ ಜನಪ್ರಿಯ ಕಾರ್ಯಕ್ರಮಗಳನ್ನು ಯುವಕರು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ನಿಮ್ಮ ಸೇವೆ ಮಾಡುವಂಥ ನಿಜವಾದ ಯುವ ನಾಯಕನ ಬೆಳೆಸುವ, ಪ್ರೋತ್ಸಾಹಿಸುವ, ಬೆಂಬಲಿಸುವ ಹೊಣೆಗಾರಿಕೆ ಯುವಕರ ಮೇಲಿದೆ ಎಂದು ಕರೆ ನೀಡಿದರು.
ಕೆಪಿಸಿಸಿ ಉಪಾಧ್ಯಕ್ಷ ವಿಪಿ ಮುಜಮ್ಮಿಲ್ ಹುಸೇನ್ ಮಾತನಾಡಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಕೂಡ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಯಿದ್ದೇನೆ. ಪಕ್ಷಕ್ಕಾಗಿ ದುಡಿದಿದ್ದೇನೆ. ಕೆಪಿಸಿಸಿ ಸೇರಿದಂತೆ ತನಗೆ ನೀಡಿದ ಜವಾಬ್ಜಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ. ಯುವಕರಿಗೆ ಆದ್ಯತೆ ನೀಡಬೇಕು. ಪಕ್ಷಕ್ಕಾಗಿ ದುಡಿದಿರುವ ತಮಗೆ ಟಿಕೆಟ್ ನೀಡಿದರೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ನನಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಎನ್.ಕೆ.ಇಸ್ಮಾಯಿಲ್ ಸಾಬ್, ಸೈಯದ್ ಅಲ್ತಾಫ್, ಸಿದ್ದಪ್ಪ, ಶಂಕರಿ, ಮಂಜುನಾಥ್, ಪ್ರವೀಣ್, ಸೈಯದ್ ಆರೀಫ್, ಅವಿನಾಶ್, ಹಾಲೇಶ್, ಹರೀಶ್, ಕೆ.ಸಿ.ಮಹಮ್ಮದ್, ಇನಾಯತ್ ಅಲಿ, ಯುವ ಕಾಂಗ್ರೆಸ್ ಘಟಕದ ಯುವ ನಾಯಕರು, ಪದಾಧಿಕಾರಿಗಳು ಹಾಜರಿದ್ದರು.
