ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಜ್ಯ ಬಿಜೆಪಿಯ ಹಲ ನಾಯಕರಿಗೆ ನಿರಾಸೆ ಉಂಟು ಮಾಡಿದೆ.ಹಾಗಂತ ಈ ಫಲಿತಾಂಶ, ಪಕ್ಷಕ್ಕೆ ವ್ಯತಿರಿಕ್ತವಾಗಿರಲಿ ಅಂತೇನೂ ಅವರು ಬಯಸಿರಲಿಲ್ಲ.
ಆದರೆ, ಬಿಹಾರ ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ಒಂದಷ್ಟು ಬಲಿಷ್ಟವಾಗಲಿ ಅಂತ ಅವರು ನಿರೀಕ್ಷಿಸುತ್ತಿದ್ಧರು.ಕಾರಣ?ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಉತ್ತಮವಾದರೆ,ಆ ಮೂಲಕ ಅದಕ್ಕೆ ಶಕ್ತಿ ಬಂದರೆ ಕರ್ನಾಟಕದ ರಾಜಕಾರಣದಲ್ಲಿ ಪಲ್ಲಟಗಳಾಗಲಿವೆ.ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಲು ಅದು ಸಜ್ಜಾಗುತ್ತದೆ ಎಂದು ಭಾವಿಸಿದ್ದರು.
ಅವರ ಈ ಲೆಕ್ಕಾಚಾರಕ್ಕೆ ಕೆಲವು ನಂಬಿಕೆಗಳೂ ಕಾರಣವಾಗಿದ್ದವು.
ಇಂತಹ ನಂಬಿಕೆಗಳ ಪೈಕಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ವರಿಷ್ಟರು ಎಷ್ಟು ಇಷ್ಟಪಡುತ್ತಾರೆ?ಎಂಬ ಬಗೆಗಿನ ಮಾಹಿತಿಯೂ ಒಂದು.
ಎಲ್ಲಕ್ಕಿಂತ ಮುಖ್ಯವಾಗಿ ಸೋನಿಯಾಗಾಂಧಿ,ಪ್ರಿಯಾಂಕ ಗಾಂಧಿ,ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೆಲ್ಲ ಹೆಜ್ಜೆ ಹೆಜ್ಜೆಗೂ ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸುವುದರಿಂದ,ಸಹಜವಾಗಿಯೇ ರಾಹುಲ್ ಗಾಂಧಿ ಅವರ ಮೇಲೆ ಒತ್ತಡ ಹೇರುತ್ತಾರೆ.ಅವರ ಮೂಲಕವೇ ಸಿದ್ಧರಾಮಯ್ಯ ಅವರಿಗೆ ಪದತ್ಯಾಗ ಮಾಡುವಂತೆ ಸೂಚನೆ ಕೊಡಿಸುತ್ತಾರೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿತ್ತು.
ಇದಕ್ಕೆ ಪೂರಕವಾಗಿ ಇತ್ತೀಚೆಗೆ ಕೈ ಪಾಳೆಯದಿಂದ ತೇಲಿ ಬಂದ ಸುದ್ದಿಯೊಂದು ಬಿಜೆಪಿ ನಾಯಕರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು.
ಅದೆಂದರೆ, ಇವತ್ತು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಪ್ರಬಲ ನಾಯಕರೆಂದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್.ಇಂತಹ ವೇಣುಗೋಪಾಲ್ ಅವರ ಮಾತನ್ನು ರಾಹುಲ್ ಗಾಂಧಿ ಯಾವ ಕಾರಣಕ್ಕೂ ಮೀರುವುದಿಲ್ಲ.
ಇದೇ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ಎಷ್ಟೇ ಪ್ರಯತ್ನ ಮಾಡಿದರೂ ಅಂತಿಮ ಹಂತದಲ್ಲಿ ವೇಣುಗೋಪಾಲ್ ಅದಕ್ಕೆ ಅಡ್ಡಿಯಾಗುತ್ತಿದ್ದರು. ಅದರೆ, ಅಂತಹ ಕೆ.ಸಿ.ವೇಣುಗೋಪಾಲ್ ಅವರ ಮೇಲೆ ಈಗ ಪ್ರಿಯಾಂಕ ಗಾಂಧಿಯವರ ವಕ್ರ ದೃಷ್ಟಿ ಬಿದ್ದಿದೆ.ಹೀಗಾಗಿ ರಾಹುಲ್ ಗಾಂಧಿವರ ಕಣ್ಣು, ಕಿವಿಯಾಗಿರುವ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿ ಮಾಡಿಸಿ,ಅ ಜಾಗಕ್ಕೆ ರಾಜಸ್ತಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು ತಂದು ಕೂರಿಸಲು ಅವರು ಬಯಸಿದ್ದಾರೆ ಎಂಬುದು.
ಹೀಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಹೆಚ್ಚಾಗುತ್ತಿರುವುದರಿಂದ ನವೆಂಬರ್ ಇಪ್ಪತ್ತರ ಹೊತ್ತಿಗೆ ಕರ್ನಾಟಕದಲ್ಲಿ ಸಿಎಂ ಬದಲಾವಣೆಯ ಆಟ ಆರಂಭವಾಗುತ್ತದೆ.ಈ ಆಟ ಶುರುವಾಗಿ ಸಿದ್ಧರಾಮಯ್ತ ಅವರು ಕೆಳಗಿಳಿದಾಗ ಸಹಜವಾಗಿಯೇ ರಾಜ್ಯ ಕಾಂಗ್ರೆಸ್ ನಲ್ಲಿ ಘಟಸ್ಪೋಟ ಸಂಭವಿಸುತ್ತದೆ.
ಸಿದ್ದರಾಮಯ್ಯ ಅವರು ಕೆಳಗಿಳಿದು ಡಿ.ಕೆ.ಶಿವಕುಮಾರ್ ಪಟ್ಟಕ್ಕೇರಿದ ಮೇಲೆ ಸಿದ್ದರಾಮಯ್ಯ ಅವರ ಬಣ ಕ್ರಾಂತಿಗೆ ಮುಂದಾಗುತ್ತದೆ.
ಈ ಸಂದರ್ಭದಲ್ಲಿ ಅರವತ್ತರಷ್ಟು ಶಾಸಕರು ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಿಂದ ಹೊರಬರುತ್ತಾರೆ.ಪರಿಣಾಮ?ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಉರುಳುತ್ತದೆ.ಆ ಮೂಲಕ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತದೆ.
ಹೀಗೆ ಮಧ್ಯಂತರ ಚುನಾವಣೆ ನಡೆದರೆ ಅನುಮಾನವೇ ಬೇಡ,ಬಿಜೆಪಿ-ಜೆಡಿಎಸ್ ಮೈತ್ರಿಕೂಟ ನೂರೈವತ್ತು ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲ್ಲುತ್ತದೆ ಎಂಬುದು ರಾಜ್ಯ ಬಿಜೆಪಿಯ ಹಲ ನಾಯಕರ ಲೆಕ್ಕಾಚಾರವಾಗಿತ್ತು.
ಆದರೆ, ಕಳೆದ ವಾರ ಹೊರಬಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟಕ್ಕೆ ಬಂಪರ್ ಕೊಡುಗೆ ದಕ್ಕಿದ್ದರೆ ಮಹಾಘಟಬಂಧನ್ ಹೀನಾಯ ಸೋಲನುಭವಿಸಿದೆ. ಇನ್ನು ಬಿಹಾರದ ರಾಜಕಾರಣದಲ್ಲಿ ದೊಡ್ಡ ಮಟ್ಟದ ಆಟ ಅಡುವ ಕನಸು ಕಂಡಿದ್ದ ಕಾಂಗ್ರೆಸ್, ಯಗಾದಿಗಾ ಹೊಡೆತ ತಿಂದು ಮೂಲೆ ಸೇರಿದೆ.ಯಾವಾಗ ಅದರ ಸ್ಥಿತಿ ಇಂತಹ ದಯನೀಯ ಸ್ಥಿತಿಗೆ ತಲುಪಿತೋ?ಇದಾದ ನಂತರ ಕಾಂಗ್ರೆಸ್ ವರಿಷ್ಟರು ಕಂಗಾಲಾಗಿದ್ದಾರೆ.ಅಷ್ಟೇ ಅಲ್ಲ,ಕರ್ನಾಟಕದಲ್ಲಿ ಸಿಎಂ ಬದಲಾವಣೆಗೆ ಕೈ ಹಾಕುವ ಆಟದಿಂದ ಗಪ್ಪನೆ ಹಿಂದೆ ಸರಿದಿದ್ದಾರೆ.ಹೀಗೆ ಅವರು ಹಿಂದೆ ಸರಿದಿರುವುದು ಸ್ಪಷ್ಟವಾಗುತ್ತಿದ್ದಂತೆಯೇ ಮಧ್ಯಂತರ ಚುನಾವಣೆಯ ಕನಸು ಕಂಡ ರಾಜ್ಯ ಬಿಜೆಪಿಯ ಹಲ ನಾಯಕರು ತಣ್ಣಗಾಗಿದ್ದಾರೆ.ಅಷ್ಟೇ ಅಲ್ಲ,ಮೊನ್ನೆ ಮೊನ್ನೆಯ ತನಕ ಸಿದ್ದರಾಮಯ್ಯ ಕೆಳಗಿಳಿಯುವುದು ಗ್ತಾರಂಟಿ ಅಂತ ಶಾಸ್ತ್ರ ಹೇಳುತ್ತಿದ್ದವರು:’ರಾಜ್ಯ ಕಾಂಗ್ರೆಸ್ ನ್ನು ಸಿದ್ದರಾಮಯ್ತ ಫಿನಿಷ್ ಮಾಡುತ್ತಾರೆ’ ಅಂತ ಪ್ಲೇಟು ತಿರುಗಿಸುತ್ತಿದ್ದಾರೆ.
ವಿಜಯೇಂದ್ರ ಅವರೇ ಇರಲಪ್ಪೋ..
ಇದೇ ರೀತಿ ಬಿಹಾರ ವಿದಾನಸಭೆ ಚುನಾವಣೆಯ ಫಲಿತಾಂಶ ಇಲ್ಲಿ ಮಧ್ಯಂತರ ಚುನಾವಣೆಯ ಕನಸನ್ನು ಭಗ್ನಗೊಳಿಸುತ್ತಿದ್ದಂತೆಯೇ ರಾಜ್ಯ ಬಿಜೆಪಿ ಪಾಳಯದಲ್ಲಿ ಹೊಸ ವರಸೆ ಶುರುವಾಗಿದೆ.
ಅದೆಂದರೆ, ಪಕ್ಷದ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರು ಮುಂದುವರಿಯಲಿ ಅಂತ ಅವರ ವಿರೋಧಿಗಳೇ ಹೇಳುತ್ತಿರುವುದು.
ಮೊನ್ನೆ ಮೊನ್ನೆಯ ತನಕ ವಿಜಯೇಂದ್ರ ಹಟಾವೋ ಯೋಜನೆಗೆ ಬಲ ತುಂಬುತ್ತಿದ್ದ ಈ ವಿರೋಧಿಗಳು ಈಗ: ವಿಜಯೇಂದ್ರ ಅವರು ಪಕ್ಷದ ರಾಜ್ತಾಧ್ಯಕ್ಷರಾಗಿ ನವೆಂಬರ್ 15 ಕ್ಕೆ ಎರಡು ವರ್ಷ ಪೂರ್ತಿಯಾಗಿದೆ.ಹೇಗಿದ್ದರೂ ಅವರ ಅಧಿಕಾರಾವಧಿ ಇನ್ನೂ ಒಂದು ವರ್ಷ ಇರುವುದರಿಂದ ಅವರೇ ಅಲ್ಲಿಯತನಕ ಮುಂದುವರಿಯಲಿ.ಆದರೆ, ವರಿಷ್ಠರು ಕರ್ನಾಟಕಕ್ಕೆ ಬಂದು ಪುನ: ಅವರ ಹೆಸರನ್ನು ಘೋಷಿಸಬಾರದು ಎಂಬುದು ಈ ವಿರೋಧಿಗಳ ಒತ್ತಾಯ.
ಮೂಲಗಳ ಪ್ರಕಾರ,ಇದನ್ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರಿಗೆ ವಿವರಿಸಲು ರಾಜ್ಯ ಬಿಜೆಪಿಯ ಕೆಲ ನಾಯಕರು ದಿಲ್ಲಿಗೆ ಹೋಗಲಿದ್ದಾರೆ.
ಅಂದ ಹಾಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಕನಸು ಮೊಳೆತಿದ್ದರೆ ಈ ವಿರೋಧಿ ಪಡೆ ವಿಜಯೇಂದ್ರ ಹಟಾವೋ ಯೋಜನೆಗೆ ಬಲ ತುಂಬುತ್ತಿತ್ತು. ಆದರೆ ಯಾವಾಗ ಈ ಕನಸು ಕಮರಿತೋ?ಇದಾದ ನಂತರ ಅಧ್ಯಕ್ಷ ಸ್ಥಾನದ ಹೊರೆ ತಕ್ಷಣ ಬೇಡ.ಹೀಗಾಗಿ ಅದು ವಿಜಯೇಂದ್ರ ಹೆಗಲ ಮೇಲೇ ಇರಲಿ ಎಂಬ ಲೆಕ್ಕಾಚಾರಕ್ಕೆ ಬಂದಿದೆ.
ಕರ್ನಾಟಕದಲ್ಲೂ ಬಿಹಾರ ಮಾಡೆಲ್
ಅಂದ ಹಾಗೆ ಬಿಹಾರ ಚುನಾವಣೆಯ ಫಲಿತಾಂಶ ಎನ್.ಡಿ.ಎ ಮೈತ್ರಿಕೂಟದ ಪರವಾಗಿರಲು ಏನು ಕಾರಣ?ಎಂಬ ಬಗ್ಗೆ ಕುತೂಹಲಕಾರಿ ಚರ್ಚೆ ಆಗುತ್ತಿದೆ.
ಅದರ ಪ್ರಕಾರ:ಬಿಹಾರದಲ್ಲಿ ಅತೀ ಹಿಂದುಳಿದ ಜಾತಿಗಳನ್ನು ಗುರುತಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಅವುಗಳನ್ನು ಸಂಘಟಿಸಿದರು.ಇದರ ಲಾಭ ಎನ್.ಡಿ.ಎ ಮೈತ್ರಿಕೂಟಕ್ಕೆ ದೊಡ್ಡ ಮಟ್ಟದಲ್ಲಿ ದೊರೆಯಿತು ಎಂಬುದು ಒಂದು.
ಕುತೂಹಲದ ಸಂಗತಿ ಎಂದರೆ ಬಿಹಾರದಲ್ಲಿ ನಿತೀಶ್ ಕುಮಾರ್ ಮಾಡಿದ ಕೆಲಸವನ್ನು ಕರ್ನಾಟಕದಲ್ಲಿ ಬಿಜೆಪಿ ಕೂಡಾ ಮಾಡುತ್ತಿದೆ.ಮೂಲಗಳ ಪ್ರಕಾರ:ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಈ ಕಾರ್ಯಕ್ಕೆ ಚಾಲನೆ ನೀಡಿ ಹಲವು ತಿಂಗಳುಗಳೇ ಆಗಿವೆ.
ಅದರ ಪ್ರಕಾರ ಹಿಂದುಳಿದ ಜಾತಿಗಳಿಂದ ಬಂದ ಹಲವು ನಾಯಕರನ್ನು ಗುರುತಿಸಿ, ಅವರಿಗೆ ಜವಾಬ್ದಾರಿ ಕೊಟ್ಟು ಅತೀ ಹಿಂದುಳಿದ ಜಾತಿಗಳ ಮತ ಬ್ಯಾಂಕನ್ನು ಬಲಪಡಿಸುವ ಜವಾಬ್ದಾರಿ ವಹಿಸಲಾಗಿದೆ.
ಕುತೂಹಲದ ಸಂಗತಿ ಎಂದರೆ ಈ ಹೊಣೆಗಾರಿಕೆ ಹೊತ್ತ ಹಲವರು ಬಿಜೆಪಿಯವರಲ್ಲ. ಹೀಗೆ ಇಂತವರನ್ನು ನೇಮಿಸುವಾಗ ಸಿದ್ದರಾಮಯ್ಯ ಸರ್ಕಾರದಲ್ಲಿ ಲಾಭ ಪಡೆಯುತ್ತಿರುವ ಹಿಂದುಳಿದ ಜಾತಿಗಳು ಯಾವುವು? ವಂಚಿತವಾಗುತ್ತಿರುವ ಜಾತಿಗಳು ಯಾವುವು?ಎಂಬ ದಾಖಲೆಗಳನ್ನು ಸಂಗ್ರಹಿಸುವ ಹೊಣೆಗಾರಿಕೆಯನ್ನು ಅವರಿಗೆ ವಹಿಸಲಾಗಿದೆ.
ಇವತ್ತು ರಾಜ್ಯದಲ್ಲಿ 197-198 ಹಿಂದುಳಿದ ಜಾತಿಗಳಿವೆ. ಇದರಲ್ಲಿ ಅತೀ ಹಿಂದುಳಿದವರ ಪಟ್ಟಿಯಲ್ಲಿ 95 ಜಾತಿಗಳಿವೆ.ಈ ಜಾತಿಗಳನ್ನು ಸಂಘಟಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ವಿನ್ನಿಂಗ್ ಮಾರ್ಜಿನ್ ಗೆ ಅಗತ್ಯವಾದಷ್ಟು ಮತಗಳು ದಕ್ಕುತ್ತವೆ ಎಂಬುದು ಸಂತೋಷ್ ಲೆಕ್ಕಾಚಾರ.
ಸಂಪುಟ ಪುನರ್ರಚನೆ ನಿಜಕ್ಕೂ ಕಷ್ಟ
ಇನ್ನು ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿ ಪ್ರವಾಸ ಮಾಡಿದರಲ್ಲ?ಈ ಸಂದರ್ಭದಲ್ಲಿ ಅವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬಂದಿದ್ದೇ ತಡ,ಕರ್ನಾಟಕದಲ್ಲಿ ಸಂಪುಟ ಪುನರ್ರಚನೆ ಗ್ಯಾರಂಟಿ ಎಂಬ ಮಾತು ಕೇಳಿ ಬರುತ್ತಿದೆ.
ಆದರೆ, ದಿಲ್ಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ:ಸಂಪುಟ ಪುನರ್ರಚನೆ ನಿಜಕ್ಕೂ ಕಷ್ಟ.ಕಾರಣ?ಸಂಪುಟ ಪುನರ್ರಚನೆಗೆ ಕೈ ಹಾಕಿ ಹತ್ತೋ ಹನ್ನೆರಡು ಮಂದಿಯನ್ನು ಕಿತ್ತು ಹಾಕಿದರೆ ಮೊದಲ ಕಂತಿನ ಭಿನ್ನಮತೀಯರ ಪಡೆ ಮೇಲೆದ್ದು ನಿಲ್ಲುತ್ತದೆ.ಇದೇ ರೀತಿ ಮಂತ್ರಿ ಮಂಡಲಕ್ಕೆ ಸೇರಲಾಗದವರು ಎರಡನೇ ಕಂತಿನ ಭಿನ್ನಮತೀಯರಾಗುತ್ತಾರೆ.
ಇವತ್ತು ಬಿಹಾರದ ಫಲಿತಾಂಶ ಕಾಂಗ್ರೆಸ್ ಪಕ್ಷದ ಸೊಂಟಕ್ಕೆ ಬಕಾಬರಲೆ ಬಾರಿಸಿರುವುದರಿಂದ ಕರ್ನಾಟಕದಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದು ವರಿಷ್ಟರಿಗೆ ಇಷ್ಟವಿಲ್ಲ.ಇದೇ ರೀತಿ ಮಂತ್ರಿ ಮಂಡಲ ಪುನರ್ರಚನೆಗೆ ಕೈ ಹಾಕಿದರೆ ಹಲವು ಬಣಗಳು ಬಡಿದಾಟಕ್ಕಿಳಿಯುತ್ತವೆ.ಇಂತಹ ಬಡಿದಾಟ ಬಿಜೆಪಿಯ ಆಸೆಗೆ ಬೆಂಬಲ ನೀಡಬಹುದು ಎಂಬುದು ವರಿಷ್ಟರ ಆತಂಕ.
ಸದ್ಯಕ್ಕಿರುವ ಮಾಹಿತಿಗಳ ಪ್ರಕಾರ ಹಾಲಿ ಸಂಪುಟದ 17 ರಿಂದ 19 ಮಂತ್ರಿಗಳನ್ನು ತೆಗೆದು ಹಾಕಬೇಕು ಅಂತ ಪಕ್ಷದ ರಣತಂತ್ರಜ್ಣರು ಕಳಿಸಿರುವ ರಿಪೋರ್ಟು ವರಿಷ್ಟರ ಕೈಲಿದೆ.
ಆದರೆ, ಬಿಹಾರದಲ್ಲಿ ಬಿದ್ದ ಹೊಡೆತದಿಂದ ಸುಸ್ತಾಗಿರುವ ವರಿಷ್ಟರು ಈ ವರದಿಯನ್ನು ಜಾರಿಗೊಳಿಸಲು ಹಿಂಜರಿಯುತ್ತಿದ್ದಾರೆ.
ಮೂಲಗಳ ಪ್ರಕಾರ:ಸಂಪುಟ ಪುನರ್ರಚನೆ ಈ ವರ್ಷ ನಡೆಯುವುದು ಡೌಟು.ಒಂದು ವೇಳೆ ಎಲ್ಲವನ್ನೂ ಮೀರಿ ರಿಸ್ಕ್ ತೆಗೆದುಕೊಳ್ಳಲು ವರಿಷ್ಟರು ಮುಂದಾದರೆ ಅದು ಪವಾಡ.
ಲಾಸ್ಟ್ ಸಿಪ್
ಅಂದ ಹಾಗೆ ಬಿಹಾರ ವಿಧಾನಸಭೆ ಚುನಾವಣೆಯ ಪಲಿತಾಂಶ ಸಿಎಂ ಸಿದ್ದರಾಮಯ್ಯ ಅವರನ್ನು ಗಟ್ಟಿಗೊಳಿಸಿದೆ ಎಂಬ ಮಾತೇನಿದೆ?ಇದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳಯ ಒಪ್ಪುವುದಿಲ್ಲ. ಕೇಳಿದರೆ:’ನೋಡ್ತಾ ಇರಿ.ಡಿಕೆಶಿ ಸಾಹೇಬ್ರು ರಿಯಲ್ ಫೈಟರ್. ನಿರ್ಣಾಯಕ ಸಂದರ್ಭದಲ್ಲಿ ಒಂದು ಬಾಂಬು ಸಿಡಿಸಿ ಪರಿಸ್ಥಿತಿಯನ್ನು ತಮ್ಮ ಕಂಟ್ರೋಲಿಗೆ ತೆಗೆದುಕೊಳ್ಳುತ್ತಾರೆ,ಮುಖ್ಯಮಂತ್ರಿ ಅಗುತ್ತಾರೆ’ ಅಂತ ವಿಶ್ವಾಸ ವ್ಯಕ್ತಪಡಿಸುತ್ತದೆ. ಅದು ಹೇಳುವ ಬಾಂಬು ಯಾವುದು?ಅನ್ನುವುದೇ ಸದ್ಯದ ಕುತೂಹಲ.
–ಆರ್.ಟಿ.ವಿಠ್ಠಲಮೂರ್ತಿ
