(ಕಳೆದ ಸಂಚಿಕೆಯಿಂದ )
ಭಾರತ ಸ್ವಾತಂತ್ರ್ಯಪಡೆದ ಮುಕ್ಕಾಲು ಶತಮಾನದ ಈ ಕಾಲಘಟ್ಟದಲ್ಲಿ, ರಾಷ್ಟ್ರವು ಹಲವಾರು ದಿಕ್ಕುಗಳಲ್ಲಿ ಪ್ರಗತಿಯನ್ನು ದಾಖಲಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಈ ದೇಶದ ಎಸ್‌ಸಿ,ಎಸ್‌ಟಿ. ಮತ್ತು ಹಿಂದುಳಿದ ವರ್ಗಗಳಂತಹ ಶ್ರಮಿಕ ವರ್ಗಗಳಿಗೆ ಲಭ್ಯವಾಗಬೇಕಾಗಿದ್ದ ಸೌಲಭ್ಯಗಳು ಇನ್ನೂ ದೊರೆತಿಲ್ಲದಿರುವುದು ದುರದೃಷ್ಟಕರ.
ಸಂಪನ್ಮೂಲಗಳ ಹಂಚಿಕೆಯು ಕೂಡ ಅಸಮರ್ಪಕ ಪ್ರಮಾಣದಲ್ಲಿ ಅಥವಾ ಮೊಟಕುಗೊಳಿಸಿದ ರೀತಿಯಲ್ಲಿ ಈ ವರ್ಗಗಳಿಗೆ ಲಭ್ಯವಾದವು. ಉದಾಹರಣೆಗೆ, ಅಂಬೇಡ್ಕರೋತ್ತರ ಭಾರತದಲ್ಲಿ ಹಸಿರು ಕ್ರಾಂತಿಯ ನಂತರ ಕೃಷಿ ಉತ್ಪಾದನೆಯು ಹಲವು ಪಟ್ಟು ದ್ವಿಗುಣಿಸಲ್ಪಟ್ಟಿದೆ. ಆದರೆ ಹೆಚ್ಚಿನ ಪರಿಶಿಷ್ಟ ಜಾತಿಯ(SC)ಕುಟುಂಬಗಳು ಇಂದಿಗೂ ಸಹ ಕಳೆದ ಶತಮಾನಗಳಲ್ಲಿದ್ದಂತೆ ಮತ್ತೂ ಕೃಷಿ ಕೂಲಿ ಕಾರ್ಮಿಕರಾಗಿಯೇ ಉಳಿದಿದ್ದಾರೆ.
ಹಾಗೆ ನೋಡಿದರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೃಷಿ ರಂಗದಲ್ಲಿ ಆಗಿರುವ ಕ್ರಾಂತಿಯಿಂದಾಗಿ ಈ ವರ್ಗಗಳೂ ಸಹ ಇಂದು ಭೂಮಿಯ ಒಡೆತನ ಹೊಂದಬೇಕಿತ್ತಲ್ಲವೆ? ದುರದೃಷ್ಟವಶಾತ್, ಇಂದಿಗೂ ಅವರು ತಮ್ಮ ಆಹಾರಕ್ಕಾಗಿ ದಬ್ಬಾಳಿಕೆ ಮತ್ತು ಶೋಷಕರಾದ ಮೇಲ್ವರ್ಗಗಳ ಭೂಮಾಲೀಕ ವರ್ಗಗಳನ್ನೇ ಅವಲಂಬಿಸಿದ್ದಾರೆ ಎಂದರೆ ಏನರ್ಥ? ದೇಶದ ಪ್ರಜೆಗಳ ಶ್ರಮದಿಂದ ಬೃಹತ್ ನೀರಾವರಿ ಯೋಜನೆಗಳು, ಅಣೆಕಟ್ಟುಗಳು ನಿರ್ಮಾಣಗೊಂಡವು.
ದೇಶದ ಬಹು ದೊಡ್ಡ ಪ್ರಮಾಣದ ಕೃಷಿ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲಾಯಿತು ನಿಜ. ಆದರೆ , ಅಷ್ಟೇ ದೊಡ್ಡ ಪ್ರಮಾಣದಲ್ಲಿರುವ ದಲಿತರು ಮತ್ತು ಹಿಂದುಳಿದ ವರ್ಗಗಳ,ಅಲ್ಪಸಂಖ್ಯಾತರ ಭೂಮಿಗಳು ಒಣಬೇಸಾಯದ ಮೇಲೆಯೇ ಯಾಕೆ ಅವಲಂಬಿತವಾದವು. ಇದಕ್ಕೆ ಕಾರಣಗಳೇನು? ಈ ವರ್ಗಗಳು ಕೃಷಿ ಕೂಲಿ ಕಾರ್ಮಿಕ ವರ್ಗಗಳಾಗಿಯೇ ಇರುವಂತೆ ವ್ಯವಸ್ಥೆ ನಿರ್ಮಾಣ ಮಾಡಲಾಯಿತಾದರೂ ಏಕೆ?
1978 ರಲ್ಲಿ ಪರಿಚಯಿಸಲಾದ ಪರಿಶಿಷ್ಟ ಜಾತಿ/ವರ್ಗಗಳಿಗಾಗಿ ವಿಶೇಷ ಘಟಕ ಯೋಜನೆಯನ್ನು ನಿಯಮಿತವಾಗಿಯೇನೋ ಜಾರಿಗೆ ತರಲಾಯಿತು ಎಂಬುದು ನಿಜ, ಮತ್ತು ಇದಕ್ಕೆ ಪೂರಕವಾಗಿ 1980 ರಲ್ಲಿ ಪರಿಚಯಿಸಲಾದ ವಿಶೇಷ ಕೇಂದ್ರ ನೆರವು ಸಹ ನಿರೀಕ್ಷಿತ ಮಟ್ಟದಲ್ಲಿ ಈ ವರ್ಗಗಳನ್ನು ತಲುಪಲು ಸಾಧ್ಯವಾಗಲಿಲ್ಲ.
ಪರಿಶಿಷ್ಟ ಜಾತಿ/ವರ್ಗಗಳು ತಮಗೆಂದೇ ರೂಪಿಸಲಾದ ಹರಕಾರದ ಅಭಿವೃದ್ಧಿಯ ಯೋಜನೆ ಮತ್ತು ಅನುಷ್ಠಾನದಲ್ಲಿ ವಿಚಾರದಲ್ಲಿ ಅವಕಾಶಗಳಿಂದ ವಂಚಿತವಾದವು. ಇವೆಲ್ಲ ಯಾಕೆ ಏನು ಎಂಬುದಕ್ಕೆ ಕಾರಣಗಳು ನಿಗೂಢವಾಗಿಯೇನೂ ಉಳಿದಿಲ್ಲ.
ಪರಿಶಿಷ್ಟ ಜಾತಿಗಳು,ಬುಡಕಟ್ಟು ವರ್ಗಗಳ ಬದುಕು ಇಂದಿಗೂ ಅತ್ಯಂತ ಶೋಚನೀಯ ಗ್ರಾಮೀಣ ಸಂಪನ್ಮೂಲಗಳ ಆಧಾರದ ಮೇಲೆ ಬದುಕಬೇಕೆಂದು ಮತ್ತು ನಗರದ ಕೊಳೆಗೇರಿಗಳಲ್ಲಿ ವಾಸಿಸಬೇಕೆಂದು ಒತ್ತಾಯಿಸಲ್ಪಡುತ್ತಿದ್ದಾರೆ.
ಅದರಲ್ಲೂ ಪರಿಶಿಷ್ಟ ಜಾತಿಗಳ ಹೆಚ್ಚಿನ ಭಾಗದ ಜನರು ಜಾಡಮಾಲಿಗಳಾಗಿ, ತೋಟಿಗರಾಗಿ, ಪಾಯಿಖಾನೆಗಳ ಕ್ಲೀನಿಂಗುಗಳಂತಹ ಸ್ವಚ್ಚಗೊಳಿಸುವ ಸೇವೆಗಳನ್ನು ಮಾತ್ರ ಸಲ್ಲಿಸಲು ಒತ್ತಾಯಿಸಲ್ಪಡುತ್ತಿದ್ದಾರೆ.
ಎಷ್ಟೇ ಕಾರ್ಯಕ್ರಮಗಳನ್ನು ಸರ್ಕಾರಗಳು ಹಾಕಿಕೊಂಡರೂ ಅನುಷ್ಟಾನಗೊಳ್ಳುವಾಗ ಇಚ್ಚಾಶಕ್ತಿಯ ಕೊರತೆಯಿಂದಾಗಿ ವಿಫಲವಾಗುತ್ತಲೇ ಇವೆ. ಜೀತ ಕಾರ್ಮಿಕ ವ್ಯವಸ್ಥೆಯು ತನ್ನ ಎಲ್ಲಾ ದುಷ್ಟ ಶಕ್ತಿಗಳೊಂದಿಗೆ ಮತ್ತೂ ಜೀವಂತವಾಗಿ ಉಳಿದಿದೆ.
ದೇಶದ ಜೀತ ಕಾರ್ಮಿಕರಲ್ಲಿ ಸರಿಸುಮಾರು ಮೂರನೇ ಎರಡರಷ್ಟು ಜನರು ಪರಿಶಿಷ್ಟ ಜಾತಿಗಳಿಗೆ ಸೇರಿದವರಾಗಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಅವರು ತಮ್ಮ ಹಕ್ಕುಗಳ ಒಂದು ಸಣ್ಣ ಭಾಗವನ್ನು ಪಡೆಯಲು ಪ್ರಯತ್ನಿಸಿದಾಗಲೆಲ್ಲಾ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ.
ಅಸ್ಪೃಶ್ಯತೆ ಮತ್ತು ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ಶಿಕ್ಷಿಸಲು ಕಾನೂನುಗಳನ್ನು ದೋಷಪೂರಿತವಾಗಿಯೇ ರೂಪಿಸಲಾಗಿದೆ. ಚುನಾವಣಾ ರಾಜಕಾರಣದ ಒತ್ತಡಕ್ಕೆ ಒಳಗಾದ ರಾಜಕೀಯ ಶಕ್ತಿಗಳು ಒಲ್ಲದ ಮನಸ್ಸಿನಿಂದಲೇ ಇಂತಹ ನೀತಿಗಳನ್ನು ನಿರೂಪಿಸುತ್ತಿದ್ದಾರೆನಿಸುತ್ತಿದೆ.
Read also : ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಯಾರಿಗಾಗಿ ಮತ್ತು ಯಾಕೆ ಬೇಕು?
ಸರ್ಕಾರಿ ಸ್ವಾಮ್ಯದ, ಸಾರ್ವಜನಿಕ ವಲಯದ (ಪಿಎಸ್‌ಯು) ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿ ವೇತನಗಳು, ಹಾಸ್ಟೆಲ್‌ಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗಳಲ್ಲಿ ಪುನರ್ವಸತಿ ವ್ಯವಸ್ಥೆಗಳ ಮೂಲಕ ಉದ್ಯೋಗವನ್ನು ಪಡೆಯಲು ಸಾಧ್ಯವಾದ ಒಂದೇ ಕಾರಣಕ್ಕಾಗಿಯೇ ಕೇವಲ ಈ ವರ್ಗಗಳ ಒಂದು ಸಣ್ಣ ಭಾಗ, ಅಂದರೆ ಸುಮಾರು ಶೇ.2 ರಷ್ಟು SC ಕುಟುಂಬಗಳು, ಈ ಅನುಪಾತದವರು ಮಾತ್ರ “ಆರ್ಥಿಕ ಸ್ವಾತಂತ್ರ್ಯದ ರೇಖೆ” ಮತ್ತು “ಸ್ವಾಭಿಮಾನದ ರೇಖೆ“ಯನ್ನು ದಾಟಲು ಸಾಧ್ಯವಾಗಿದೆ ಎನ್ನಬಹುದು.
ಇದು SC, ST ಮತ್ತು Backward community ಗಳಿಗೆ ಹೆಚ್ಚು ಪ್ರಸ್ತುತವಾದ ರೇಖೆಗಳನ್ನು ಗುರುತಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ, ಕಳಪೆ ಅನುಷ್ಠಾನದಿಂದಾಗಿ ಇತ್ತೀಚಿನ ವರ್ಷಗಳಲ್ಲಿ, SC ಮತ್ತು STಗಳಿಗೆ ನೀಡಲಾದ ಮೀಸಲಾತಿಯ ವಿವಿಧ ನಿಬಂಧನೆಗಳನ್ನು ದುರ್ಬಲಗೊಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕ ಪ್ರಯತ್ನಗಳನ್ನು ಪ್ರಾರಂಭಿಸಿದ ಕಾರಣ, ಮೀಸಲಾತಿಯ ಪ್ರಯೋಜನಗಳು ಸಹ SC/ST ಗಳನ್ನು ಪೂರ್ಣವಾಗಿ ತಲುಪಲು ಸಾಧ್ಯವಾಗಿಲ್ಲ.
ಭಾರತದ ಜನಸಂಖ್ಯೆಯ ದೃಷ್ಟಿಯಿಂದ ಬಹುಸಂಖ್ಯಾತರಾಗಿರುವ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೇ ಇಂದು ಬದುಕಲು “ಆರ್ಥಿಕ ಸ್ವಾತಂತ್ರ್ಯ”ವೇ ಇಲ್ಲ ಎಂಬ ಸ್ಥಿತಿ. ಡಾ.ಅಂಬೇಡ್ಕರ್ ಹೇಳುವಂತೆ ಈ ಮೂರೂ ವರ್ಗಗಳಿಗೆ ಪೂರ್ಣಪ್ರಮಾಣದ ಅಥವಾ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಗಳು ನೀಡಲು ಆ ವರ್ಗಗಳು ಒತ್ತಾಯಿಸದಿದ್ದರೆ ದೇಶದ ಅಭಿವೃದ್ಧಿ ಕಾರ್ಯಕ್ರಮಗಳು ವಿಫಲವಾಗುತ್ತವೆ.
ಇಂದು,ಭಾರತದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಪರವಾಗಿ ಮಾತನಾಡುತ್ತಿವೆ.ಮಾತನಾಡುತ್ತಿವೆ ಎಂದರೆ ಕೇವಲಮಾತನಾಡುತ್ತಿವೆ ಅಷ್ಟೆ. ಪ್ರತಿಯೊಂದು ರಾಜಕೀಯ ಪಕ್ಷವೂ ಕೂಡ ಹಿಂದುಳಿದ ಸಮುದಾಯಗಳ ಜನರನ್ನು ಮೆಚ್ಚಿಸಲು ಬಯಸುತ್ತಿವೆ.
ಈ ಪಕ್ಷಗಳು ಚುನಾವಣಾ ಕಾಲಕ್ಕೆ ತಕ್ಕಂತೆ ಹಿಂದುಳಿದ ವರ್ಗಗಳ ಅವಶ್ಯಕತೆಗಳನ್ನು ಪೂರೈಸಲು ತಯಾರಿಗಾಗಿ ಕುಳಿತಂತೆ ಕಂಡರೂ ಆಂತರ್ಯದಲ್ಲಿ ಬೇರೆಯದೇ ಲೆಕ್ಕಾಚಾರವಿದೆ. ಅಳತೆಗೆ ತಕ್ಕ ಬಟ್ಟೆ ಹೊಲಿಯುವ ದರ್ಜಿಯ ರೀತಿಯಲ್ಲಿ ರಾಜಕೀಯ ಪಕ್ಷಗಳ ಮೇಲಾಟವು ನಡೆದಿದೆ.
ಈ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಪ್ರಮುಖ ಪಕ್ಷಗಳ ನಾಯಕತ್ವವೆಲ್ಲ ಮೇಲ್ಜಾತಿಗಳ ಕೈಯಲ್ಲಿಯೇ ಇದೆಯೆಂಬುದೂ ವಿಪರ್ಯಾಸ.ಇದು ಹೀಗೆಯೇ ಮುಂದುವರಿದರೆ, ಹಿಂದುಳಿದ ವರ್ಗಗಳು ತಮ್ಮರಾಜಕೀಯ ಗುರುತುಗಳನ್ನು, ಅಸ್ಮಿತೆಗಳನ್ನೂ ಕಳೆದುಕೊಳ್ಳುವ ಸಮಯ ದೂರವಿಲ್ಲ.
ಹಿಂದುಳಿದ ಸಮುದಾಯದ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಯಾವುದೇ ಮಾನದಂಡದಲ್ಲೂ ಹಿಂದುಳಿದಿಲ್ಲ ಮತ್ತು ವಿದೇಶಗಳಲ್ಲಿ ಅವರ ಹೂಡಿಕೆಗಳು ಭಾರತದ ಸಾಂಪ್ರದಾಯಿಕ ನಾಯಕರಿಗಿಂತ ಹೆಚ್ಚಾಗಿರುವುದನ್ನು ಗಮನಿಸಬಹುದು.
ಬಿಹಾರದ ಹಿಂದುಳಿದ ವರ್ಗದ ನಾಯಕ ಲಾಲೂ ಪ್ರಸಾದ್ ಯಾದವ್, ಉತ್ತರಪ್ರದೇಶದ ಮುಲಾಯಂಸಿಂಗ್ ಯಾದವ್, ಮಾಯಾವತಿ, ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ತಮಿಳುನಾಡಿನಲ್ಲಿ ಕರುಣಾನಿಧಿ, ಸ್ಟಾಲಿನ್,…ಹೀಗೆ ಪಟ್ಟಿಯನ್ನು ಮುಂದುವರೆಸಬಹುದು. ಆದರೆ ಹಿಂದುಳಿದ ಸಮುದಾಯಗಳ ಈ ನಾಯಕರ ನೇತೃತ್ವದ ಹೆಚ್ಚಿನ ಸಂಖ್ಯೆಯ ರಾಜಕೀಯ ಪಕ್ಷಗಳು ತಮ್ಮ ನಡುವೆಯೇ ಬಹಳಷ್ಟು ಅಂತರ-ಜಾತಿ ಪೈಪೋಟಿಗಳಿಗೆ ಕಾರಣವಾಗುತ್ತಿವೆ.
ಇದರ ಪ್ರಯೋಜನವನ್ನು ಮೇಲ್ಜಾತಿ ನಾಯಕತ್ವ ಪ್ರಯೋಜನ ಪಡೆಯುತ್ತಿದೆ.ಮೇಲ್ವರ್ಗಗಳ ರಾಜಕೀಯ ನೇತಾರರು ಭಾರತದಲ್ಲಿ ಹೀಗೆಯೇ ಸಂಭವಿಸಬೇಕೆಂದು ಬಯಸುತ್ತಾರೆ.
ಹಿಂದುಳಿದ ವರ್ಗಗಳ ಹೆಸರಿನ ಈಗಿರುವ ಪಕ್ಷಗಳಲ್ಲಿ ನಡೆಯುತ್ತಿರುವ ಪ್ರವೃತ್ತಿಗಳನ್ನು ಗಮನಿಸಿದರೆ ಹಿಂದುಳಿದ ವರ್ಗಗಳ ಪಕ್ಷಗಳೆಂದು ಹೇಳಿಕೊಳ್ಳುವ ಆರ್.ಜೆ.ಡಿ, ಸಮಾಜವಾದಿ ಪಾರ್ಟಿ,ಡಿ.ಎಂ.ಕೆ, ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಸರಕಾರವಾದರೂ ಅಹಿಂದ ಎಂಬ ಶಕ್ತಿಯ ಹೆಸರಿನ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ, ಮುಂತಾದ ರಾಜಕೀಯ ಪಕ್ಷಗಳು,ಭಾರತದ ರಾಜಕೀಯ ಕ್ಷೇತ್ರದಿಂದಲೇ ಕಣ್ಮರೆಯಾಗುವ ದಿನಗಳು ದೂರವಿಲ್ಲದಿಲ್ಲ.
ಬಿ.ಶ್ರೀನಿವಾಸ