ಇತ್ತೀಚೆಗೆ ದಿಲ್ಲಿಯ ಎಐಸಿಸಿ ಪಡಸಾಲೆಯಿಂದ ಬರುತ್ತಿರುವ ಒಂದು ವರ್ತಮಾನ ಸಿಎಂ ಸಿದ್ದರಾಮಯ್ಯ (c.m.siddaramaiah)ಅವರ ಪಾಳಯಕ್ಕೆ ಹಿತಕರವಾಗಿ ಕೇಳಿಸುತ್ತಿಲ್ಲ.ಹಾಗಂತ ಸಿಎಂ ಬದಲಾವಣೆ ಆಗಿ ಬಿಡುತ್ತದೆ ಅಂತಲೂ ಅವರು ಭಾವಿಸಿಲ್ಲ.
ಯಾಕೆಂದರೆ, ಪಕ್ಷದ ವರಿಷ್ಟ ರಾಹುಲ್ ಗಾಂಧಿ( rahulgandhi)ಅವರ ಇದುವರೆಗಿನ ಹೆಜ್ಜೆಗಳಲ್ಲಿ ಸಣ್ಣ ಅನುಮಾನವೂ ಅವರಿಗೆ ಗೋಚರಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕೆಲ ಕಾಲದ ಹಿಂದೆ ದಿಲ್ಲಿಯಲ್ಲಿ ನಡೆದ ಪಕ್ಷದ ಸಮಾವೇಶ ವೊಂದರಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಬಗ್ಗೆ ರಾಹುಲ್ ಗಾಂಧಿ ಅವರಾಡಿದ ಮಾತು ನೆಪ ಮಾತ್ರದ್ದಾಗಿರಲಿಲ್ಲ.
ಅವತ್ತು ವೇದಿಕೆಯ ಮೇಲಿದ್ದ ಸಿದ್ಧರಾಮಯ್ಯ ಅವರ ಕಡೆ ಕೈ ಮಾಡುತ್ತಾ:’ಇಲ್ಲಿ ಹಿಂದುಳಿದ ವರ್ಗಗಳ ಚಾಂಪಿಯನ್ ಅನ್ನಿಸಿಕೊಂಡ ಸಿದ್ದರಾಮಯ್ಯ ಅವರಿದ್ದಾರೆ. ಅಶೋಕ್ ಗೆಹ್ಲೋಟ್ ಅವರಿದ್ದಾರೆ.
ಇಂತಹ ಕೆಲ ನಾಯಕರಿದ್ದರೆ ನಾವು ದಿಲ್ಲಿ ಗದ್ದುಗೆಯನ್ನು ಮರಳಿ ವಶಕ್ಕೆ ಪಡೆಯುತ್ತೇವೆ’ ಅಂತ ರಾಹುಲ್ ಗಾಂಧಿ ಅವರಾಡಿದ ಮಾತೇನಿತ್ತು? ಅದು ಪಕ್ಷದ ಎಲ್ಲ ಕೇಡರುಗಳಿಗೆ ಒಂದು ಸ್ಪಷ್ಟ ಸಂದೇಶ ರವಾನಿಸಿತ್ತು.
ಅರ್ಥಾತ್, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಸಿದ್ದರಾಮಯ್ಯ ಅವರಂತಹ ನಾಯಕರ ವರ್ಚಸ್ಸನ್ನು ಬಳಸಿಕೊಳ್ಳಲು ರಾಹುಲ್ ಗಾಂಧಿ ಬಯಸಿದ್ದಾರೆ ಎಂಬ ಸಂದೇಶ ಎಲ್ಲರಿಗೂ ರವಾನೆ ಯಾಗಿತ್ತು.
ಈ ಮಧ್ಯೆ ಅಹಿಂದ ವರ್ಗಗಳ ಮತದಾರರೇ ಹೆಚ್ಚಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದಂತಹ ರಾಜ್ಯಗಳ ವಿಧಾನಸಭೆ ಚುನಾವಣೆ ಹತ್ತಿರವಿರುವಾಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಬದಲಿಸಲು ರಾಹುಲ್ ಗಾಂಧಿ ತಪ್ಪಿಯೂ ಯೋಚಿಸುವುದಿಲ್ಲ ಎಂಬುದು ಸಿದ್ದರಾಮಯ್ಯ ಪಾಳಯದ ಖಚಿತ ವಿಶ್ವಾಸ.
ಇಷ್ಟಾದರೂ ದಿಲ್ಲಿಯಿಂದ ಹಾರಿ ಬರುತ್ತಿರುವ ಒಂದು ವರ್ತಮಾನ ಸಿದ್ದರಾಮಯ್ಯ ಪಾಳಯದ ಕಸಿವಿಸಿಗೆ ಕಾರಣವಾಗಿದೆ. ಅದರ ಪ್ರಕಾರ: ಇತ್ತೀಚೆಗೆ ರಾಹುಲ್ ಗಾಂಧಿಯವರು ಓದುತ್ತಿರುವ ಬಹುತೇಕ ಪತ್ರಿಕೆಗಳಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Sivakumar)ಅವರ ನಾಯಕತ್ವವನ್ನು ಹೊಗಳುವ,ಅವರು ಕರ್ನಾಟಕದ ಮುಖ್ಯ ಮಂತ್ರಿಯಾಗುವ ಅನಿವಾರ್ಯತೆಯನ್ನು ಎತ್ತಿ ತೋರಿಸುವ ವರದಿಗಳು,ಸ್ಟೋರಿಗಳು ದಂಡಿಯಾಗಿರುತ್ತವೆ.
ಕರ್ನಾಟಕದಲ್ಲಿ ಪಕ್ಷ ಅಧಿಕಾರ ಹೀನ ಸ್ಥಿತಿಯಲ್ಲಿದ್ದಾಗ ಕೆಪಿಸಿಸಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್(D.K.Sivakumar) ಎಂತಹ ರಣತಂತ್ರಗಳನ್ನು ರೂಪಿಸಿದರು?ಮತ್ತು ಯಾವ್ಯಾವ ಸಂದರ್ಭಗಳಲ್ಲಿ ಪಕ್ಷಕ್ಕಾಗಿ ತ್ಯಾಗ ಮಾಡಿದರು?ಎಂಬಲ್ಲಿಯ ತನಕ ಒಂದಿಲ್ಲೊಂದು ವರದಿಗಳು ಪ್ರತಿ ದಿನ ರಾಹುಲ್ ಗಾಂಧಿಯವರ ಕಣ್ಣಿಗೆ ಬೀಳುತ್ತಿವೆ.
ಕುತೂಹಲದ ಸಂಗತಿ ಎಂದರೆ ಎಐಸಿಸಿಯ ಮಾಧ್ಯಮ ವಿಭಾಗದ ಪ್ರಮುಖರಾದ ಜಯರಾಂ ರಮೇಶ್, ಪವನ್ ಖೇರ್ ಅವರೇ ಪತ್ರಿಕೆಗಳಲ್ಲಿ ಬರುತ್ತಿರುವ ಈ ಸುದ್ದಿಗಳನ್ನು ರಾಹುಲ್ ಗಾಂಧಿಯವರ ಗಮನಕ್ಕೆ ತರುತ್ತಾರೆ.
ಅಂದ ಹಾಗೆ ಇಂತಹ ವರದಿಗಳನ್ನು ನೋಡಿದ ಕೂಡಲೇ ರಾಹುಲ್ ಗಾಂಧಿ ಅವರ ಮನಪರಿವರ್ತನೆ ಆಗಿಬಿಡುತ್ತದೆ, ಅವರು ಡಿ.ಕೆ.ಶಿವಕುಮಾರ್ ಅವರ ಪರವಾಗಿ ನಿಂತು ಬಿಡುತ್ತಾರೆ ಅಂತೇನೂ ಅಲ್ಲ. ಆದರೆ ಈ ಎಪಿಸೋಡು ಪ್ರತಿದಿನ ರಿಪೀಟ್ ಆಗುತ್ತಾ ಹೋದರೆ, ಮತ್ತೊಂದು ಕಡೆಯಿಂದ ಸೋನಿಯಾಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಂದ ಒತ್ತಡ ಹೆಚ್ಚತೊಡಗಿದರೆ ರಾಹುಲ್ ಗಾಂಧಿ ವಿವಶರಾಗಿಬಿಟ್ಡರೇ? ಎಂಬುದು ಸಿದ್ಧರಾಮಯ್ಯ ಪಾಳೆಯದ ಶಂಕೆ.
ಇದೇ ರೀತಿ ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಇಂತಹ ವರದಿಗಳು ಪ್ರಕಟವಾಗಲು ಮತ್ತು ರಾಹುಲ್ ಗಾಂಧಿಯವರ ಕಣ್ಣಿಗೆ ಬೀಳಲು ಡಿ.ಕೆ.ಶಿವಕುಮಾರ್ ಅವರ ಟೆಕ್ನಿಕ್ಕೇ ಕಾರಣ ಎಂಬುದು ಅದರ ಅನುಮಾನ.
ಇಂತಹ ಅನುಮಾನಕ್ಕೆ ಪೂರಕವಾಗಿ ಸಿದ್ದರಾಮಯ್ಯ ಪಾಳೆಯ ಆಪರೇಷನ್ ‘ಎ’ ಮತ್ತು ಆಪರೇಷನ್ ‘ಬಿ’ ಕಾರ್ಯಾ ಚರಣೆಗೆ ರೆಡಿಯೂ ಆಗಿದೆ. ಅರ್ಥಾತ್,ಇವತ್ತಿನ ಸ್ಥಿತಿಯಲ್ಲಿ ಸರ್ಕಾರ ಸುಭದ್ರವಾಗಿರಬೇಕು ಎಂದರೆ ಯಾವ ಕಾರಣಕ್ಕೂ ಸಿದ್ಧರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬಾರದು.
ಒಂದು ವೇಳೆ ಅವರನ್ನು ಬದಲಿಸುವುದೇ ಆದರೆ ಗೃಹ ಸಚಿವ, ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತರಬೇಕು ಎಂಬುದು ಆಪರೇಷನ್ ‘ಎ’ಪ್ಲಾನು.
ಒಂದು ವೇಳೆ ವರಿಷ್ಟರು ಇದನ್ನು ಒಪ್ಪದೇ ಹೋದರೆ ಸಿದ್ಧರಾಮಯ್ಯ ಅವರಿಲ್ಲದ ಆಪರೇಷನ್ ‘ಬಿ’ ಪ್ಲಾನ್ ಅನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜಾರಿಗೆ ತರಲು ಸಜ್ಜಾಗುತ್ತಾರೆ. ಅಂದರೆ? ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ಇರಲು ಇಚ್ಚಿಸದ ಸಚಿವರು,ಶಾಸಕರ ಪಡೆ ವಲಸೆಗೆ ಸಜ್ಜಾಗುತ್ತದೆ.
ಹೀಗೆ ಆಪರೇಷನ್ ಬಿ ಪ್ಲಾನು ಜಾರಿಯಾಗುವ ಸಂದರ್ಭ ಬರುತ್ತದಾ ಗೊತ್ತಿಲ್ಲ.ಆದರೆ ದಿಲ್ಲಿಯಿಂದ ಈಗ ಹಾರಿ ಬರುತ್ತಿರುವ ವರ್ತಮಾನ ಸಿದ್ಧರಾಮಯ್ಯ ಪಾಳೆಯವನ್ನು ಕಸಿವಿಸಿಗೆ ತಳ್ಳಿರುವುದಂತೂ ನಿಜ.
ಬಿಜೆಪಿ ಭಿನ್ನರ ಲೇಟೆಸ್ಟು ಚಿಂತೆ(Political analysis)
ಈ ಮಧ್ಯೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಟಾವೋ ಚಳವಳಿಗೆ ಕೈ ಹಾಕಿರುವ ಬಿಜೆಪಿಯ ಭಿನ್ನರಿಗೆ ಚಿಂತೆ ಕಾಡತೊಡಗಿದೆ. ಅದೆಂದರೆ, ವಿಜಯೇಂದ್ರ ಅವರು ಅಧ್ಯಕ್ಷರಾಗಿರುವಾಗಲೇ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಉರುಳಿ ಬಿಟ್ಟರೇ? ಅನ್ನುವುದು.
ಅಂದ ಹಾಗೆ ವಿಜಯೇಂದ್ರ ಅವರನ್ನು ಸಧ್ಯಕ್ಕೆ ಕೆಳಗಿಳಿಸುವುದು ಬೇಡ.ಬದಲಿಗೆ ಮುಂದಿನ ವರ್ಷ ನವೆಂಬರ್ ತನಕ ಅವರು ಮುಂದುವರಿಯಲಿ.ಆಗ ಸಹಜವಾಗಿಯೇ ನಿಮ್ಮ ಅವಧಿ ಮುಗಿಯಿತು ಅಂತ ಅವರನ್ನು ಕೆಳಗಿಳಿಸಬಹುದು.
ಆದರೆ, ಅವರ ಅಧಿಕಾರದ ಅವಧಿ ಮುಗಿಯುವುದಕ್ಕಿಂತ ಮುಂಚೆ ಅವರನ್ನು ಕೆಳಗಿಳಿಸಿದರೆ ರಾಂಗ್ ಮೆಸೇಜು ಹೋಗುತ್ತದೆ ಎಂಬುದು ವರಿಷ್ಟರಿಂದ ಭಿನ್ನರಿಗೆ ಬಂದಿರುವ ಸಂದೇಶ.
ಹೀಗೆ ವರಿಷ್ಟರಿಂದ ಬಂದ ಸಂದೇಶದ ಬಗ್ಗೆ ಭಿನ್ನರಿಗೂ ತಕರಾರಿಲ್ಲ.ಆದರೆ ಇದರ ಬೆನ್ನಲ್ಲೇ ಅವರಿಗೆ ಅಂಟಿಕೊಂಡ ಚಿಂತೆಯೆಂದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಉರುಳಿದರೇ? ಎಂಬುದು.
ಇವತ್ತು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕ್ಯಾಂಪುಗಳ ಮಧ್ಯೆ ನಡೆಯುತ್ತಿರುವ ಕದನವನ್ನು ನೋಡಿದರೆ,ಅಧಿಕಾರ ಹಸ್ತಾಂತರವಾಗದಿದ್ದರೂ ಕಷ್ಟ.ಆದರೂ ಕಷ್ಟ ಎಂಬ ಪರಿಸ್ಥಿತಿ ಇದೆ.
ಯಾಕೆಂದರೆ ಡಿಕೆಶಿ ಮುಖ್ಯಮಂತ್ರಿಯಾಗುವುದನ್ನು ಸಿದ್ಧರಾಮಯ್ಯ ಬೆಂಬಲಿಗರು ಒಪ್ಪಲು ತಯಾರಿಲ್ಲ.
ಅದೇ ರೀತಿ ತಮಗೆ ಮುಖ್ಯಮಂತ್ರಿ ಪಟ್ಟ ಸಿಗಬೇಕು ಎಂಬ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಡಿ.ಕೆ.ಶಿವಕುಮಾರ್ ಕೂಡಾ ಬಿಲ್ ಕುಲ್ ತಯಾರಿಲ್ಲ.
ಹೀಗಾಗಿ ಅಧಿಕಾರ ಹಸ್ತಾಂತರದ ಎಪಿಸೋಡು ಯಾವ ರೂಪಕ್ಕೆ ತಿರುಗಿದರೂ ರಾಜ್ಯ ಸರ್ಕಾರದ ಪತನ ನಿಶ್ವಿತ. ಆದರೆ, ಸರ್ಕಾರ ಪತನವಾಗುವುದು ಖಚಿತವಾದರೆ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತವಾಗುತ್ತದೆ.
ಹೀಗೆ ಮಧ್ಯಂತರ ಚುನಾವಣೆ ನಿಶ್ಚಿತ ಎಂಬ ವಾತಾವರಣ ಕಾಣಿಸಿಕೊಂಡರೆ ವಿಜಯೇಂದ್ರ ಅವರ ಖುರ್ಚಿ ಮತ್ತಷ್ಟು ಗಟ್ಟಿಯಾಗುತ್ತದೆ.ಯಾಕೆಂದರೆ ಈ ಸಂದರ್ಭದಲ್ಲಿ ಅವರನ್ನು ಇಳಿಸುವುದು ಡೇಂಜರು ಅಂತ ವರಿಷ್ಟರೇ ಹೇಳುತ್ತಾರೆ.
ಅಲ್ಲಿಗೆ ವಿಜಯೇಂದ್ರ ಅವರ ನಾಯಕತ್ವದಡಿಯಲ್ಲೇ ನಾವು ಮಧ್ಯಂತರ ಚುನಾವಣೆಗೆ ಅಣಿಯಾಗಬೇಕಾಗುತ್ತದೆ.ಹೀಗೆ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಮುಂದೆ ಅವರೇ ಶಾಸಕಾಂಗ ಪಕ್ಚದ ನಾಯಕರಾಗುವುದು ನಿಕ್ಕಿಯಾಗುತ್ತದೆ.ಅಷ್ಟಾದ ಮೇಲೆ ನಮಗೆ ಉಳಿಯುವುದೇನು? ಎಂಬುದು ಭಿನ್ನರ ಲೇಟೆಸ್ಟು ಚಿಂತೆ
ನಡ್ಡಾಗೆ ತಲುಪಿದ ಕಂಪ್ಲೇಂಟು ಪಟ್ಟಿ (Political analysis)
ಈ ಮಧ್ಯೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ರಾಜ್ಯ ಬಿಜೆಪಿಯ ಹಲ ಕಾರ್ಯಕರ್ತರು ಕಂಪ್ಲೇಂಟು ಪಟ್ಟಿಯದನ್ನು ರವಾನಿಸಿದ್ದಾರಂತೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ನಮ್ಮ ಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಬಯಲು ಮಾಡಲು ಆಸಕ್ತಿಯನ್ನೇ ತೋರುತ್ತಿಲ್ಲ.ಬದಲಿಗೆ ಸೈಲೆಂಟಾಗಿ ಅದನ್ನು ಮರೆ ಮಾಚುತ್ತಿದ್ದಾರೆ ಎಂಬುದು ಈ ಕಂಪ್ಲೇಂಟು ಪಟ್ಟಿಯ ಮುಖ್ಯ ಅಂಶ.
ಇವತ್ತು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿ ಇರಬಹುದು,ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಇರಬಹುದು.ಕೆಲವೇ ಗುತ್ತಿಗೆದಾರರು ಇಲ್ಲಿ ಬಂಪರ್ ಬೆಳೆ ತೆಗೆಯುತ್ತಿದ್ದರೆ,ಅ ಬಗ್ಗೆ ನಮ್ಮವರು ಚಕಾರ ಎತ್ತುತ್ತಿಲ್ಲ. ಇನ್ನು ರಾಜಧಾನಿಯ ಹಲ ಕಾಮಗಾರಿಗಳ ಗುತ್ತಿಗೆ ಪಡೆದ ಮಂಗಳೂರು ಮೂಲದ ಗುತ್ತಿಗೆದಾರರೊಬ್ಬರು ಕೆಲಸ ಮಾಡದೆ ಬಿಲ್ ಸುತ್ತುತ್ತಿದ್ದರೂ, ಅಧಿವೇಶನದಲ್ಲಿ ನಮ್ಮವರು ಅದನ್ನು ಹೇಳುವ ಧೈರ್ಯ ಮಾಡುತ್ತಿಲ್ಲ.
ಇದೆಲ್ಲಾ ಹೋಗಲಿ,ದೊಡ್ಡ ದೊಡ್ಡ ವಿಷಯಗಳನ್ನು ಹಿಡಿದು ಹೋರಾಡುವುದು ನಮ್ಮವರಿಗೆ ಕಷ್ಟ ಎಂದರೆ,ಅಸಹಾಯಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಪ್ರಸ್ತಾಪಿಸಲು ಇವರಿಗೆ ಪುರುಸೊತ್ತಿಲ್ಲ. ಉದಾಹರಣೆಗೆ ವೃದ್ದಾಪ್ಯ ವೇತನ,ವಿಧವಾ ವೇತನ,ಅಂಗವಿಕಲರ ವೇತನಗಳು ಸಕಾಲಕ್ಕೆ ಫಲಾನುಭವಿಗಳಿಗೆ ತಲುಪುತ್ತಿಲ್ಲ.ಇದರಿಂದ ಅ ಜೀವಗಳಿಗೆ ಆಗುತ್ತಿರುವ ನೋವು ಅಪಾರ.
ಆದರೆ ನಮ್ಮವರಿಗೆ ಕನಿಷ್ಟ ಪಕ್ಷ ಇಂತಹ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಚಾಟಿ ಬೀಸಲು ವ್ಯವಧಾನವಿಲ್ಲ ಎಂಬುದು ಬಿಜೆಪಿ ಕಾರ್ಯಕರ್ತರ ಕಂಪ್ಲೇಂಟು ಪಟ್ಟಿ. ಬಿಜೆಪಿ ಮೂಲಗಳ ಪ್ತಕಾರ,ನಡ್ಡಾಗೆ ರವಾನೆಯಾಗುತ್ತಿರುವ ಈ ಕಂಪ್ಲೇಂಟುಗಳ ಪಟ್ಟಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ.
ನಿಖಿಲ್ ಪತ್ತೆ ಮಾಡಿದ ರಹಸ್ಯ (Political analysis)
ಇನ್ನು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ (state president of Yuva Janata Dal Nikhil) ಪತ್ತೆ ಮಾಡಿದ ರಹಸ್ಯವೊಂದು ದೊಡ್ಡ ಗೌಡರು ಮತ್ತು ಕುಮಾರಸ್ವಾಮಿಯವರ ಗಮನ ಸೆಳೆದಿದೆ. ಪಕ್ಷಕ್ಕೆ ದೊಡ್ಡ ಯಶಸ್ಸು ಸಿಗಬೇಕೆಂದರೆ ಲೀಡರ್ ಟು ಲೀಡರ್ ಬದಲು ಲೀಡರ್ ಟು ಕೇಡರ್ ಸೂತ್ರವನ್ನು ಅನುಸರಿಸುವುದು ಅನಿವಾರ್ಯ ಎಂಬುದು ನಿಖಿಲ್ ಅವರು ಕಂಡು ಹಿಡಿದ ಸತ್ಯ.
ಇದುವರೆಗೆ ಒಂದು ಕ್ಷೇತ್ರದಲ್ಲಿ ಗೆಲುವು ಗಳಿಸಲು ನಾವು ಲೀಡರ್ ಟು ಲೀಡರ್ ಸೂತ್ರವನ್ನು ಅನುಸರಿಸುತ್ತಾ ಬಂದಿದ್ದೇವೆ.ಅಂದರೆ? ರಾಜ್ಯದ ನಾಯಕರು ಕ್ಷೇತ್ರದ ಪ್ರತಿಯೊಂದು ವಿಷಯಗಳಿಗೂ ಸ್ಥಳೀಯ ನಾಯಕರನ್ನು ಅವಲಂಬಿಸುವ ಕೆಲಸವಾಗುತ್ತಿತ್ತು.
ಅದೇ ರೀತಿ ನಮ್ಮ ಹಿಂದೆ ಇಷ್ಟು ಜನರಿದ್ದಾರೆ ಎಂಬುದರಿಂದಾ ಹಿಡಿದು ಎಲ್ಲದಕ್ಕೂ ಆ ಸ್ಥಳೀಯ ನಾಯಕರನ್ನೇ ನಂಬುವ ಕೆಲಸವಾಗುತ್ತಿತ್ತು.ಇದರ ಮಧ್ಯೆ ಕ್ಷೇತ್ರದ ಕಾರ್ಯಕರ್ತರಿಗೆ ಕಡಿಮೆ ಪ್ರಾತಿನಿಧ್ಯ ಸಿಗುತ್ತಿತ್ತು.
ಅಂದ ಹಾಗೆ ರಣಾಂಗಣದಲ್ಲಿ ಹೋರಾಡುವಾಗ ದಂಡನಾಯಕನಿಗೆ ಮಾತ್ರವಲ್ಲ,ಸೈನಿಕರಿಗೂ ಹೆಚ್ಚಿನ ಕೆಚ್ಚಿರಬೇಕು. ಆದರೆ, ನಾವು ಆ ಕಡೆ ಹಮನ ಕೊಡದ ಪರಿಣಾಮವಾಗಿ ದಂಡನಾಯಕನ ಕೆಚ್ಚಿನ ಮೇಲೆ ಪಕ್ಷದ ಸೈನ್ಯ ಹೋರಾಡಬೇಕಿತ್ತು.
Read also : Political analysis|ರಾಹುಲ್ ಗಾಂಧಿಗೆ ಒಪ್ಪಂದದ ಕತೆ ಬೇಕಿಲ್ಲ…..
ಆದರೆ, ಹಲವು ಸಂದರ್ಭಗಳಲ್ಲಿ ನಮ್ಮ ಸೈನ್ಯದ ದಂಡನಾಯಕ ಎದುರಾಳಿಯ ಜತೆ ಹೊಂದಾಣಿಕೆ ಮಾಡಿಕೊಂಡು ನಮ್ಮ ಸೈನ್ಯದ ಆತ್ಮವಿಶ್ವಾಸ ಕುಗ್ಗುವಂತೆ ಮಾಡುತ್ತಿದ್ದರು.
ಹೀಗಾಗಿ ಈ ದು:ಸ್ಥಿತಿಯನ್ನು ತಡೆಗಟ್ಟಲು ಲೀಡರ್ ಟು ಲೀಡರ್ ಬದಲು ಲೀಡರ್ ಟು ಕೇಡರ್ ತಂತ್ರವನ್ನು ಅನುಸರಿಸಬೇಕು.ಅರ್ಥಾತ್,ಒಂದು ಕ್ಷೇತ್ರದ ಆಗುಹೋಗುಗಳ ಬಗ್ಗೆ ಕಾರ್ಯಕರ್ತರ ವಿಶ್ವಾಸವನ್ನು ಗಳಿಸಿ ಮುಂದುವರೆಯಬೇಕು ಎಂಬುದು ನಿಖಿಲ್ ಕುಮಾರಸ್ವಾಮಿಯವರ ವಾದ. ಅಂದ ಹಾಗೆ ಅವರು ಈ ಲೀಡರ್ ಟು ಕೇಡರ್ ಸೂತ್ರವನ್ನು ಕಂಡು ಹಿಡಿದಿದ್ದು ಸ್ವಂತ ಅನುಭವದಿಂದ.
ಈ ಹಿಂದೆ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ,ಪಕ್ಷದ ಘಟಾನುಘಟಿ ನಾಯಕರೇ ಬಂದು ತಮ್ಮ ಪರವಾಗಿ ಹೋರಾಡಿದರೂ ತಮಗೆ ಏಕೆ ಸೋಲಾಯಿತು? ಅಂತ ನಿಖಿಲ್ ಆತ್ಮವಿಮರ್ಶೆ ಮಾಡಿ ಕೊಂಡಿದ್ದರಂತೆ.
ಈ ಸಂದರ್ಭದಲ್ಲಿ ಅವರಿಗೆ ಹೊಳೆದ ಸತ್ಯವೇ ಇದು.ಅವತ್ತು ನಾವು ಲೀಡರ್ ಟು ಲೀಡರ್ ಸೂತ್ರದ ಬದಲು ಲೀಡರ್ ಟು ಕೇಡರ್ ಸೂತ್ರವನ್ನು ಅನುಸರಿಸಿದ್ದರೆ ಸೋಲುವ ಪ್ರಮೇಯ ಎದುರಾಗುತ್ತಿರಲಿಲ್ಲ ಎಂಬುದು ಅವರ ಲೆಕ್ಕಾಚಾರ.
ಈ ಲೆಕ್ಕಾಚಾರದ ಬಗ್ಗೆ ಅವರು ತಂದೆ ಕುಮಾರಸ್ವಾಮಿಯವರಿಗೆ ಮತ್ತು ಅಜ್ಜ ದೇವೇಗೌಡರಿಗೆ ವಿವರಿಸಿದಾಗ ಶಹಬ್ಬಾಸ್ ಎಂಬ ಮೆಚ್ಚುಗೆ ಸಿಕ್ಕಿದೆಯಂತೆ.
ಆರ್.ಟಿ.ವಿಠ್ಟಲಮೂರ್ತಿ
