ಮುಂದಿನ ತಿಂಗಳ ಮೂರನೇ ವಾರ ದಿಲ್ಲಿ ದಂಡಯಾತ್ರೆಗೆ ಹೊರಡಲಿರುವ ಸಿಎಂ ಸಿದ್ಧರಾಮಯ್ಯ ವರಿಷ್ಟರ ಮುಂದೆ ಹೊಸ ಪ್ರಪೋಸಲ್ಲು ಮಂಡಿಸಲಿದ್ದಾರೆ.ಈ ಪ್ರಪೋಸಲ್ಲಿಗೆ ಒಪ್ಪಿಗೆ ಸಿಕ್ಕರೆ ಇನ್ನಿಬ್ಬರು ನಾಯಕರು ಕರ್ನಾಟಕದ ಉಪಮುಖ್ಯಮಂತ್ರಿಗಳಾಗಲಿದ್ದಾರೆ.
ಸಿದ್ಧರಾಮಯ್ಯ ಅವರ ಆಪ್ತರ ಪ್ರಕಾರ: ಉಪಮುಖ್ಯಮಂತ್ರಿ ಪಟ್ಟಕ್ಕೆ ಬರಲಿರುವ ಈ ನಾಯಕರ ಪೈಕಿ ಒಬ್ಬರು ದಲಿತ ನಾಯಕ ಪ್ರಿಯಾಂಕ್ ಖರ್ಗೆ.ಮತ್ತೊಬ್ಬರು ಮುಸ್ಲಿಂ ನಾಯಕ ಜಮೀರ್ ಅಹ್ಮದ್. ಅಂದ ಹಾಗೆ ಉಪಮುಖ್ಯ ಮಂತ್ರಿ ಪಟ್ಟಕ್ಕೆ ಈ ಇಬ್ಬರು ನಾಯಕರು ಬರಬೇಕು ಅಂತ ಸಿದ್ದರಾಮಯ್ಯ ಬಯಸಲು ಕೆಲ ಕಾರಣಗಳಿವೆ.
ಉದಾಹರಣೆಗೆ ಪ್ರಿಯಾಂಕ್ ಖರ್ಗೆ ಅವರನ್ನೇ ತೆಗೆದುಕೊಳ್ಳಿ.ಇವತ್ತು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಹೋರಾಡುವ ವಿಷಯದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರ ದೊಡ್ಡದು.ಇತ್ತೀಚೆಗೆ ಆರೆಸ್ಸೆಸ್ ವಿರುದ್ದ ಅವರು ಮುಗಿ ಬಿದ್ದಿರುವ ರೀತಿಯಿಂದ ಸ್ವತ: ರಾಹುಲ್ ಗಾಂಧಿಯವರೇ ಖುಷಿಯಾಗಿದ್ದಾರೆ ಎಂದರೆ ಕೈ ಪಾಳಯದಲ್ಲಿ ಪ್ರಿಯಾಂಕ್ ವರ್ಚಸ್ಸು ಹೆಚ್ಚುತ್ತಿದೆ ಎಂದೇ ಅರ್ಥ.
ಹೀಗೆ ಬಿಜೆಪಿ,ಆರೆಸ್ಸೆಸ್ ವಿರುದ್ದದ ಹೋರಾಟದಿಂದ ವರಿಷ್ಟರ ಗಮನ ಸೆಳೆದಿರುವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸಂಪುಟದಲ್ಲಿ ಡಿಸಿಎಂ ಆಗಲಿ ಅಂತ ಸಿದ್ಧರಾಮಯ್ಯ ಬಯಸಿದ್ದಾರೆ. ಅವರ ಈ ಬಯಕೆಗೆ ಮತ್ತೊಂದು ಒಳ ಉದ್ದೇಶವೂ ಇದೆ. ಅದೆಂದರೆ ಕರ್ನಾಟಕದಲ್ಲಿ ಪರ್ಯಾಯ ನಾಯಕತ್ವದ ಕೂಗು ಮೇಲೇಳಲು ಕಾರಣವಾಗುತ್ತಿರುವ ಮೂಲ ಕೂಲ್ ಆಗುತ್ತದೆ ಎಂಬುದು.
ಇದೇ ರೀತಿ ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿ ಆಗಲಿ ಅಂತ ಸಿದ್ದರಾಮಯ್ಯ ಬಯಸುತ್ತಿರುವ ಮತ್ತೊಂದು ಹೆಸರೆಂದರೆ ಜಮೀರ್ ಅಹ್ಮದ್ ಅವರದ್ದು. ಹೀಗೆ ಜಮೀರ್ ಅಹ್ಮದ್ ಅವರಿಗೆ ಪ್ರಮೋಷನ್ ಕೊಡಬೇಕು ಎಂಬ ಸಿದ್ಧರಾಮಯ್ಯ ಬಯಕೆಗೆ ಜಮೀರ್ ಅವರಲ್ಲಿರುವ ಲೀಡರ್ ಷಿಪ್ ಗುಣವೇ ಕಾರಣ.
ತಮ್ಮ ಸಂಪುಟದಲ್ಲಿರುವ ಬಹುತೇಕ ನಾಯಕರು ಆಲ್ ಇನ್ ಕಮಿಂಗ್ ಫ್ರೀ-ಔಟ್ ಗೋಯಿಂಗ್ ಬಾರ್ ಮೋಡಿನವರಾದರೆ ಕೆಲವೇ ನಾಯಕರು ಆಲ್ ಇನ್ ಕಮಿಂಗ್ ಫ್ರೀ-ಔಟ್ ಗೋಯಿಂಗೂ ಫ್ರೀ ಮೋಡಿನವರು.ಅದರಲ್ಲಿ ಜಮೀರ್ ಫ್ರಂಟ್ ಲೈನಿನಲ್ಲಿದ್ದಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು.
ಹಾಗಂತ ಇದು ಸಿದ್ದರಾಮಯ್ಯ ಅವರ ಮನಸ್ಸಿಗಷ್ಟೇ ಬಂದಿರುವ ವಿಷಯವಲ್ಲ.ಬದಲಿಗೆ ಮಂಗಳೂರು ಗಲಭೆಯ ಎಪಿಸೋಡಿನ ನಂತರ ದಿಲ್ಲಿಯ ನಾಯಕರಿಗೂ ಮಮವರಿಕೆ ಆಗಿರುವ ಸತ್ಯ. ಅದರ ಪ್ರಕಾರ,ಈ ಹಿಂದೆ ಮಂ ಗಳೂರಿನಲ್ಲಿ ಅಶ್ರಫ್ ಕೊಲೆ ಪ್ರಕರಣ ನಡೆಯಿತಲ್ಲ?ಇದರ ಬೆನ್ನ ಹಿಂದೆಯೇ ಸುಭಾಷ್ ಶೆಟ್ಟಿ ಮತ್ತು ಅಬ್ದುಲ್ ರೆಹಮಾನ್ ಅವರ ಹತ್ಯೆ ಪ್ರಕರಣಗಳು ನಡೆದವು.
Read also : Political analysis|ರಾಹುಲ್ ಗಾಂಧಿಗೆ ಸಿದ್ದು ಹೇಳಿದ್ದೇನು?
ಈ ಸಂದರ್ಭದಲ್ಲಿ ಅಮಾಯಕ ಅಬ್ದುಲ್ ರೆಹಮಾನ್ ಅವರ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂಬ ವಿಷಯ ಬಂದಾಗ ಸರ್ಕಾರದ ಪರಿಹಾರಕ್ಕೂ ಕಾಯದೆ ಜಮೀರ್ ಅಹ್ಮದ್ ಅವರು ಅಬ್ದುಲ್ ರೆಹಮಾನ್ ಅವರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ನೀಡಿದ್ದಾರೆ.ಅದೇ ರೀತಿ ಅಶ್ರಫ್ ಮತ್ತು ಅಬ್ದುಲ್ ರೆಹಮಾನ್ ಗೆಳೆಯನ ಕುಟುಂಬಕ್ಕೂ ಸಿದ್ಧರಾಮಯ್ಯ ಅವರ ಮುಂದೆಯೇ ಪರಿಹಾರ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಜತೆಗಿದ್ದ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು,:’ರೀ ಜಮೀರ್ ಆ್ಯಕ್ಚುವಲಿ ನಿಮ್ಮ ವಿಷಯದಲ್ಲಿ ನನಗೆ ಭಿನ್ನಾಭಿಪ್ರಾಯವೇ ಇತ್ತು.ಆದರೆ ಇವತ್ತು ಹೇಳುತ್ತೇನೆ. ನೀವು ನಿಜವಾದ ಹೃದಯ ಶ್ರೀ ಮಂತಿಕೆ ಇರುವ ನಾಯಕ.
ನಾನು ಕೂಡಾ ತುಂಬ ಲೀಡರುಗಳನ್ನು ಹತ್ತಿರದಿಂದ ನೋಡಿದ್ದೇನೆ.ಅದರಲ್ಲಿ ಬಹುತೇಕರು ಎಂಜಲು ಕೈಯ್ಯಲ್ಲಿ ಕಾಗೆ ಓಡಿಸುವವರಲ್ಲ.ದಂಡಿಯಾಗಿ ದುಡ್ಡು ಮಾಡಿದರೂ ನಾಲ್ಕು ಜನರಿಗೆ ಹಂಚುವ ಗುಣ ಹೊಂದಿದವರಲ್ಲ.ಯೂ ಆರ್ ರಿಯಲ್ ಲೀಡರ್’ ಎಂದಿದ್ದಾರೆ.
ಮುಂದೆ ಈ ಎಪಿಸೋಡು ದಿಲ್ಲಿಯಲ್ಲೂ ಚರ್ಚೆಗೆ ಕಾರಣವಾಗಿದೆಯಲ್ಲದೆ ಜಮೀರ್ ಅಹ್ಮದ್ ಅವರ ಇಂತಹ ಹಲವಾರು ದಾನ ಕಾರ್ಯಗಳ ವಿವರ ಹೊರಬಂದು ಒಂದು ಹವಾ ಎಬ್ಬಿಸಿದೆ.ಅಷ್ಟೇ ಅಲ್ಲ,ನಿಜವಾದ ನಾಯಕನಿಗೆ ಇಂತಹ ಮನುಷ್ಯತ್ವದ ಗುಣಗಳಿರಬೇಕು ಎಂದು ಮಾತನಾಡಿಕೊಳ್ಳುವಂತೆ ಮಾಡಿದೆ.
ಮೂಲಗಳ ಪ್ರಕಾರ,ಇಂತಹ ಹಲವು ಕಾರಣಗಳಿಗಾಗಿ ಜಮೀರ್ ಅಹ್ಮದ್ ಅವರ ಹೆಸರನ್ನು ಡಿಸಿಎಂ ಹುದ್ದೆಗೆ ಶಿಫಾರಸ್ಸು ಮಾಡಲು ಹೊರಟಿರುವ ಸಿದ್ಧರಾಮಯ್ಯ ಅವರು ಅಂತಿಮವಾಗಿ ಪ್ರಿಯಾಂಕ್ ಖರ್ಗೆ-ಜಮೀರ್ ಅಹ್ಮದ್ ತಮ್ಮ ಸಂಪುಟದ ಹೊಸ ಜೋಡೆತ್ತುಗಳಾಗಲಿ ಎಂದು ಬಯಸಿದ್ದಾರೆ.
ಕೆಪಿಸಿಸಿ ಪಟ್ಟಕ್ಕೆ ಕೃಷ್ಣ ಭೈರೇಗೌಡ? (Political analysis)
ಇನ್ನು ದಿಲ್ಲಿಗೆ ಹೋದಾಗ ಹಾಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲು ಸಿದ್ಧರಾಮಯ್ಯ ಬಯಸಿದ್ದಾರೆ.
ವಾಸ್ತವವಾಗಿ ಈ ಹಿಂದೆ ಲಿಂಗಾಯತ ನಾಯಕರೊಬ್ಬರನ್ನು ಕೆಪಿಸಿಸಿ ಪಟ್ಟಕ್ಕೆ ತರಬೇಕು ಅಂತ ಬಯಸಿದ್ದ ಸಿದ್ದರಾಮಯ್ಯ ಅವರು ಇದೇ ಕಾರಣಕ್ಕಾಗಿ ಅಪ್ಪಾಜಿ ನಾಡಗೌಡರ ಹೆಸರನ್ನು ಫ್ರಂಟ್ ಲೈನಿಗೆ ತರಲು ಹೊರಟಿದ್ದರು. ಆದರೆ ಸ್ವತ: ಅಪ್ಪಾಜಿ ನಾಡಗೌಡರಿಗೆ ಕೆಪಿಸಿಸಿ ಪಟ್ಟಕ್ಕಿಂತ ಮಂತ್ರಿಗಿರಿಯೇ ವಾಸಿ ಅನ್ನಿಸಿದೆ. ಹೀಗಾಗಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬರುವ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿ ಮಂತ್ರಿ ಮಂಡಲಕ್ಕೆ ಸೇರುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಪರಿಣಾಮ? ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿನಿಂದ ಅಪ್ಪಾಜಿ ನಾಡಗೌಡರ ಹೆಸರು ಹಿಂದೆ ಸರಿದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಫ್ರಂಟ್ ಲೈನಿಗೆ ಬಂದಿದೆ. ಮೂಲಗಳ ಪ್ರಕಾರ:ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಆಸೆ ಸಿದ್ಧರಾಮಯ್ಯ ಅವರಿಗಿದ್ದರೂ ರಾಹುಲ್ ಗಾಂಧಿ ಅವರ ಮನಸ್ಸು ಅವರಿಗೆ ಅರ್ಥವಾಗಿದೆ. ಅದೆಂದರೆ ಕಂದಾಯ ಸಚಿವ ಕೃಷ್ಣ ಭೈರೇಗೌಡರನ್ನು ಭವಿಷ್ಯದ ನಾಯಕ ಅಂತ ರಾಹುಲ್ ಗಾಂಧಿ ಭಾವಿಸಿರುವುದು.
ಹೀಗೆ ರಾಹುಲ್ ಗಾಂಧಿ ಅವರ ಮನದಿಂಗಿತ ಅರ್ಥವಾಗಿರುವುದರಿಂದ ಕೃಷ್ಣ ಭೈರೇಗೌಡರು ಕೆಪಿಸಿಸಿ ಅಧ್ಯಕ್ಷರಾಗಲಿ ಅಂತ ಸಿದ್ದು ಕೂಡಾ ಬಯಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣ ಭೈರೇಗೌಡರ ಹೆಸರನ್ನು ಸೂಚಿಸಿದರೆ ರಾಹುಲ್ ಗಾಂಧಿ ಖುಷಿಯಾಗುತ್ತಾರೆ ಎಂಬುದು ಸಿದ್ದು ಲೆಕ್ಕಾಚಾರ.
ಇಂತಹ ಲೆಕ್ಕಾಚಾರದ ನಂತರ ಸಂಪುಟ ಪುನರ್ರಚನೆಗೆ ಗ್ರೀನ್ ಸಿಗ್ನಲ್ ಪಡೆಯಲಿರುವ ಸಿದ್ದರಾಮಯ್ಯ ಹಾಲಿ ಮಂತ್ರಿ ಮಂಡಲದಿಂದ ಯಾರನ್ನು ಬಿಡಬೇಕು?ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು?ಎಂಬ ಬಗ್ಗೆ ತಮ್ಮ ಕೈಲಿರುವ ಪಟ್ಟಿಯನ್ನು ವರಿಷ್ಟರಿಗೆ ನೀಡಲಿದ್ದಾರೆ.
ಮೂಲಗಳ ಪ್ರಕಾರ,ಹಾಲಿ ಸಂಪುಟದಲ್ಲಿರುವ ಬಹುತೇಕ ಸೀನಿಯರ್ ಮಂತ್ರಿಗಳು ಸಂಪುಟದಿಂದ ಹೊರಬೀಳಲಿದ್ದು ಅವರ ಜಾಗಕ್ಕೆ ಹಲ ಮಂದಿ ಹಿರಿಯ ಶಾಸಕರು ಬರಲಿದ್ದಾರೆ. ಇದೇ ರೀತಿ ಈ ಬಾರಿಯ ದಿಲ್ಲಿ ಭೇಟಿಯ ಸಂದರ್ಭದಲ್ಲಿ ತಮ್ಮ ನಾಯಕತ್ವದ ಅನಿವಾರ್ಯತೆಯ ಬಗ್ಗೆ ಸಿದ್ಧರಾಮಯ್ಯ ವರಿಷ್ಡರಿಗೆ ಮನದಟ್ಟು ಮಾಡಿಕೊಡಲಿದ್ದಾರೆ ಎಂಬುದು ಅವರ ಪಾಳಯದ ವರ್ತಮಾನ.
ಕುಮಾರಣ್ಣನಿಗೆ ಅಮಿತ್ ಶಾ ಸಿಗ್ನಲ್ಲು …..(Political analysis)
ಈ ಮಧ್ಯೆ ಕರ್ನಾಟಕದ ರಾಜಕಾರಣದ ಮೇಲೆ ಹೆಚ್ಚೆಚ್ಚು ಗಮನವಿಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೆಚ್.ಡಿ.ಕುಮಾರದ್ವಾಮಿ ಅವರಿಗೆ ಸೂಚಿಸಿದ್ದಾರಂತೆ.
ಕಾರಣ?ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆಗಾಗಿ ನಡೆಯುತ್ತಿರುವ ಶೀತಲ ಸಮರ ನವೆಂಬರ್ ಮಧ್ಯ ಭಾಗದಿಂದ ತೀವ್ರ ರೂಪ ಪಡೆಯಲಿದೆ ಎಂಬುದು ಅಮಿತ್ ಶಾ ಅವರ ಲೆಕ್ಕಾಚಾರ.
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದ ನಂತರ ಸಿದ್ಧರಾಮಯ್ಯ ಅವರು ಅಧಿಕಾರ ಹಸ್ತಾಂತರಕ್ಕೆ ಒಪ್ಪಲಿ,ಒಪ್ಪದೆ ಇರಲಿ.ಆದರೆ ಕಾಂಗ್ರೆಸ್ ಪಾಳಯದಲ್ಲಿ ಘಟಸ್ಪೋಟ ಶತ:ಸ್ಸಿದ್ದ ಎಂಬುದು ಅಮಿತ್ ಶಾ ಅವರ ಲೆಕ್ಕಾಚಾರ.
ಹೀಗಾಗಿ ತಲ್ಲಣಗೊಳ್ಳಲಿರುವ ಕಾಂಗ್ರೆಸ್ ಪಾಳಯವನ್ನು ಮತ್ತಷ್ಟು ತಲ್ಲಣಗೊಳಿಸಲು ಸಜ್ಜಾಗುವಂತೆ ಅಮಿತ್ ಶಾ ಅವರು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.
ಹೀಗೆ ಅಮಿತ್ ಶಾ ಅವರಿಂದ ಸೂಚನೆ ಪಡೆದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ನ ಹಲವು ನಾಯಕರು,ಸಚಿವರ ಭ್ರಷ್ಟಾಚಾರದ ಹಗರಣಗಳನ್ನು ಬಯಲು ಮಾಡಲು ಅಣಿಯಾಗುತ್ತಿದ್ದಾರೆ.ಮತ್ತದೇ ಕಾರಣಕ್ಕಾಗಿ ಅವರ ಬಳಿ ಇರುವ ಹಲವು ಮಹತ್ವದ ದಾಖಲೆಗಳು ಬಹಿರಂಗವಾಗಲಿವೆ ಎಂಬುದು ಲೇಟೆಸ್ಟ್ ನ್ಯೂಸು.
ಬಿಜೆಪಿಯಲ್ಲಿ ಜಿಬಿಎ ಕಿರಿಕಿರಿ……(Political analysis)
ಉಳಿದಂತೆ ರಾಜ್ಯ ಬಿಜೆಪಿ ಪಾಳಯದಲ್ಲಿ ಜಿಬಿಎ ಕಿರಿಕಿರಿ ಶುರುವಾಗಿದೆ. ಕಾರಣ? ಗ್ರೇಟರ್ ಬೆಂಗಳೂರು ಅಥಾರಿಟಿಗೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗೆ ಬಿಜೆಪಿ ನಡೆಸಿರುವ ತಯಾರಿ.
ಈ ತಯಾರಿಯ ಭಾಗವಾಗಿ ಐದು ಭಾಗಗಳಿಗೆ ಚುನಾವಣಾ ಉಸ್ತುವಾರಿಗಳನ್ನು ಪಕ್ಷ ನೇಮಕ ಮಾಡಿದ ನಂತರ ಪಕ್ಷದಲ್ಲಿ ಒಂದು ಹಾಹಾಕಾರ ಎದ್ದಿದೆ.ಕಾರಣ? ಇಂತಹ ಉಸ್ತುವಾರಿಗಳನ್ನು ನೇಮಕ ಮಾಡುವಾಗ ಹಿರಿಯ ನಾಯಕರಾದ ಅರವಿಂದ ಲಿಂಬಾವಳಿ,ರವಿ ಸುಬ್ರಹ್ಮಣ್ಯ, ಎನ್.ಅರ್.ರಮೇಶ್ ಅವರ ಹೆಸರುಗಳನ್ನು ಪರಿಗಣಿಸಿಯೇ ಇಲ್ಲ.
ಹೀಗಾಗಿ ರಾಜಧಾನಿಯ ಬಿಜೆಪಿ ಪಾಳಯದಲ್ಲಿ ಕಲರವ ಶುರುವಾಗಿದೆಯಲ್ಲದೆ ಇದಕ್ಕೆಲ್ಲ ಬೆಂಗಳೂರಿನಒಬ್ಬರು ಲೀಡರೇ ಕಾರಣ ಎಂಬ ಕೂಗು ಶುರುವಾಗಿದೆ.
ಕುತೂಹಲದ ಸಂಗತಿ ಎಂದರೆ ಈ ಎಪಿಸೋಡಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರ ಹೆಸರು ತಪ್ಪಿಯೂ ಕೇಳುತ್ತಿಲ್ಲ.ಸ್ವತ: ಅಸಮಾದಾನಿತರು ಕೂಡಾ:ಜಿಬಿಎ ಎಲೆಕ್ಷನ್ ಗೆ ಸಂಬಂಧಿಸಿದ ತಯಾರಿಯಲ್ಲಿ ವಿಜಯೇಂದ್ರ ಮೂಗು ತೂರಿಸಿಲ್ಲ.
ಯಾಕೆಂದರೆ, ಬೆಂಗಳೂರಿನ ರಾಜಕಾರಣದ ವಿಷಯದಲ್ಲಿ ಅವರಿಗೀಗ ಆಸಕ್ತಿಯೂ ಇಲ್ಲ.ಆದರೆ ವಿಜಯೇಂದ್ರ ಅವರ ಈ ನಿರಾಸಕ್ತಿಯ ಲಾಭ ಪಡೆದು ಬೆಂಗಳೂರಿನ ಒಬ್ಬ ನಾಯಕರು ಆಟವಾಡುತ್ತಿದ್ದಾರೆ ಎಂಬುದು ಅಸಮಾಧಾನಿತರ ಸಿಟ್ಟು.
ಮುಂದೇನಾಗುತ್ತದೋ ಕಾದು ನೋಡಬೇಕು.
ಲಾಸ್ಟ್ ಸಿಪ್…….(Political analysis)
ಅಂದ ಹಾಗೆ ಅಧಿಕಾರ ಹಂಚಿಕೆಯ ವಿಷಯದಲ್ಲಿ ಏನೇ ಹೇಳುತ್ತಿರಲಿ.ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪು ಮಾತ್ರ ಫುಲ್ಲು ಕಾನ್ಫಿಡೆಂಟ್ ಅಗಿದೆ.ಅದರ ಪ್ರಕಾರ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ವರಿಷ್ಟರು ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಆಹ್ವಾನಿಸಲಿದ್ದಾರೆ.
ಈ ಆಹ್ವಾನದ ಮೇರೆಗೆ ವರಿಷ್ಟರನ್ನು ಭೇಟಿ ಮಾಡಲಿರುವ ಸಿದ್ದರಾಮಯ್ಯ ಅವರಿಗೆ ಅಧಿಕಾರ ತ್ಯಾಗ ಮಾಡುವಂತೆ ಸೂಚನೆ ನೀಡಲಾಗುತ್ತದೆ.ಇದಾದ ನಂತರ ಡಿಕೆಶಿ ಸಿಎಂ ಆಗಲು ಅಣಿಯಾಗುತ್ತಾರೆ ಎಂಬುದು ಆ ಕ್ಯಾಂಪಿನ ನಂಬಿಕೆ.
ಆರ್.ಟಿ.ವಿಠ್ಠಲಮೂರ್ತಿ
