ಕೆಲ ದಿನಗಳಿಂದ ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರ ಬಗ್ಗೆ ಬರುತ್ತಿರುವ ಮಾಹಿತಿ ಸಿಎಂ ಸಿದ್ಧರಾಮಯ್ಯ ಅವರನ್ನು ಕೆರಳಿಸಿದೆ. ಹೀಗಾಗಿ ಮುಂದಿನ ಸಲ ದಿಲ್ಲಿಗೆ ಹೋದಾಗ ಸುರ್ಜೇವಾಲ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಮಾತನಾಡಲು ಅವರು ನಿರ್ಧರಿಸಿದ್ದಾರೆ.
ಅಂದ ಹಾಗೆ ಇತ್ತೀಚೆಗೆ ಪಕ್ಷದ ಸಚಿವರು,ಶಾಸಕರ ಜತೆ ಒನ್ ಟು ಒನ್ ಸಭೆ ನಡೆಸಿದ ಸುರ್ಜೇವಾಲಾ ಅವರ ಬಗ್ಗೆ ಸಿದ್ದು ಆಪ್ತರ ಪಡೆ ಸಿಟ್ಟಿಗೆದ್ದಿರುವುದು ರಹಸ್ಯವೇನಲ್ಲ. ಆದರೆ ಇಂತಹ ಸಭೆ,ಅಧಿಕಾರಿಗಳ ಮಟ್ಟದಲ್ಲಿ ಶುರುವಾಗಿರುವುದರಿಂದ ಸಿದ್ದು ಆಪ್ತರು ನೇರವಾಗಿಯೇ ತಿರುಗಿ ಬಿದ್ದಿದ್ದಾರೆ. ಹಾಗಂತ ಇವೆಲ್ಲ ನಡೆದ ಮೇಲೆಯೇ ಸಿದ್ದರಾಮಯ್ಯ ಕೆರಳಿದ್ದಾರೆ ಅಂತಲ್ಲ.ವಾಸ್ತವವಾಗಿ ಸುರ್ಜೇವಾಲಾ ಅವರ ಬಗ್ಗೆ ಪಾರ್ಟಿ ಕೇಡರುಗಳಿಂದ ಬರುತ್ತಿದ್ದ ವರ್ತಮಾನಗಳಿಂದ ಸಿದ್ಧರಾಮಯ್ಯ ಈ ಹಿಂದೆಯೇ ಕಸಿವಿಸಿಗೆ ಒಳಗಾಗಿದ್ದರು.
ಅದರಲ್ಲೂ ಜಿಲ್ಲೆ ಮತ್ತು ತಾಲ್ಲೂಕು ಲೆವೆಲ್ಲಿನಲ್ಲಿ ಪಕ್ಷದ ಚಟುವಟಿಕೆಗಳಿಗೆ ಕೈ ಹಾಕುತ್ತಿರುವ ಸುರ್ಜೇವಾಲಾ ಅವರು,ನಿಗಮ-ಮಂಡಳಿಗಳಿಗೆ ತಂದು ಕೂರಿಸಿದ ಕೆಲ ಹೆಸರುಗಳನ್ನು ನೋಡಿ ಅವರಿಗೆ ಮುಜುಗರವಾಗಿತ್ತು. ಅಷ್ಟೇ ಅಲ್ಲ,ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಟಿಕೆಟ್ ಆಕಾಂಕ್ಷಿಯೊಬ್ಬರು:’ನಿಮಗೆ ಟಿಕೆಟ್ ಗ್ಯಾರಂಟಿ ಅಂತ ಸುರ್ಜೇವಾಲಾ ಪದೇ ಪದೇ ವಿಡಿಯೋ ಕಾಲ್ ಮಾಡಿ ಭರವಸೆ ನೀಡಿದ್ದರು.ಆದರೆ ನನಗೆ ಟಿಕೆಟ್ ಸಿಕ್ಕಿಲ್ಲ’ ಅಂತ ದೂರಿದಾಗ ಕಿರಿಕಿರಿಯಾಗಿತ್ತು.
ಹೀಗಾಗಿಯೇ ಕೆಲ ತಿಂಗಳ ಹಿಂದೆ ದಿಲ್ಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದಾಗ ನೇರವಾಗಿಯೇ ಸುರ್ಜೇವಾಲ ವಿರುದ್ದ ಮುಗಿಬಿದ್ದಿದ್ದ ಅವರು:’ ಸುರ್ಜೇವಾಲ ನಮಗೆ ಬೇಕಿಲ್ಲ.ತಕ್ಷಣ ಅವರನ್ನು ವಾಪಸ್ಸು ಕರೆಸಿಕೊಳ್ಳಿ’ ) ಎಂದಿದ್ದರು. ಮೂಲಗಳ ಪ್ರಕಾರ,ರಾಹುಲ್ ಗಾಂಧಿಯವರ ಬಳಿ ಸುರ್ಜೇವಾಲ ಬಗ್ಗೆ ಇದ್ದ ಕಂಪ್ಲೇಂಟುಗಳನ್ನು ಸವಿವರವಾಗಿ ಹೇಳಿದ್ದ ಸಿದ್ಧರಾಮಯ್ಯ,’ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿಗೆ ಬೇರೊಬ್ಬರನ್ನು ನೇಮಿಸಿ.ಇಲ್ಲದಿದ್ದರೆ ಕಷ್ಟವಾಗುತ್ತದೆ’ ಎಂದಿದ್ದರು.
ಕುತೂಹಲದ ಸಂಗತಿ ಎಂದರೆ ಈ ಮಾತನ್ನು ಅವರು ರಾಹುಲ್ ಗಾಂಧಿಯವರಿಗೆ ರಹಸ್ಯವಾಗಿಯೇನೂ ಹೇಳಿರಲಿಲ್ಲ. ಬದಲಿಗೆ ಖುದ್ದು ಸುರ್ಜೇವಾಲ ಅವರನ್ನು ಎದುರಿಗಿಟ್ಟುಕೊಂಡೇ ಝಾಡಿಸಿದ್ದರು. ಯಾವಾಗ ಸಿದ್ಧರಾಮಯ್ಯ ಅವರು ರಾಹುಲ್ ಗಾಂಧಿಯವರ ಮುಂದೆಯೇ ತಮ್ಮನ್ನು ಝಾಡಿಸಿದರೋ? ಇದಾದ ನಂತರ ಸುರ್ಜೇವಾಲ ಕರ್ನಾಟಕದ ಕೆಲ ನಾಯಕರ ಬಳಿ:’ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿಯಾಗಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ’ಅಂತ ಅಲವತ್ತುಕೊಂಡಿದ್ದರಂತೆ.
ವಾಸ್ತವವಾಗಿ ಸಿದ್ಧರಾಮಯ್ಯ ಅವರು ಹೀಗೆ ತಿರುಗಿ ಬಿದ್ದ ಬೆಳವಣಿಗೆಯಿಂದ ಸುರ್ಜೇವಾಲಾ ಅವರು ಕರ್ನಾಟಕದ ಉಸ್ತುವಾರಿಯಿಂದ ಗಂಟು ಮೂಟೆ ಕಟ್ಟಲು ರೆಡಿಯಾಗಬೇಕಿತ್ತು. ಆದರೆ, ದಿನ ಕಳೆದಂತೆ ಪರಿಸ್ಥಿತಿ ನಾರ್ಮಲ್ ಆಗುತ್ತಾ, ಸುರ್ಜೇವಾಲಾ ಕೂಡಾ ಮತ್ತೆ ಚಿಗುರಿಕೊಳ್ಳುತ್ತಾ ಹೋದರು.ಇದೇಕೆ ಹೀಗೆ ?ಸ್ವತ: ರಾಹುಲ್ ಗಾಂಧಿ ಅವರ ಬಳಿ ಸುರ್ಜೇವಾಲಾ ನಮಗೆ ಬೇಡ. ವಾಪಸ್ ಕರೆಸಿಕೊಳ್ಳಿ ಅಂತ ಹೇಳಿದ ಮೇಲೂ ಅವರು ಹೇಗೆ ಮುಂದುವರಿದಿದ್ದಾರೆ? ಅಂತ ಸಿದ್ಧರಾಮಯ್ಯ ಚೆಕ್ ಮಾಡಿದರೆ ಅವರಿಗೆ ಹೊಸ ವಿಷಯವೊಂದು ಗಮನಕ್ಜೆ ಬಂದಿದೆ. ಅದೆಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುರ್ಜೇವಾಲ ಅವರ ಬಗ್ಗೆ ಸಾಫ್ಟ್ ಆಗಿದ್ದಾರೆ. ಹೀಗಾಗಿ ಸುರ್ಜೇವಾಲಾ ಅವರನ್ನು ಕರ್ನಾಟಕದಿಂದ ವಾಪಸ್ಸು ಕರೆಸಿಕೊಳ್ಳುವ ವಿಷಯದಲ್ಲಿ ರಾಹುಲ್ ಗಾಂಧಿ ಖಡಕ್ ಆಗಿ ವರ್ತಿಸುತ್ತಿಲ್ಲ ಎಂಬುದು.
ಯಾವಾಗ ಸುರ್ಜೇವಾಲಾ ಬೆನ್ನಿಗೆ ಖರ್ಗೆ ನಿಂತಿದ್ದಾರೆ ಅಂತ ಗೊತ್ತಾಯಿತೋ? ಇದಾದ ನಂತರ ಸಿದ್ದರಾಮಯ್ಯ ಕೂಡಾ ಈ ಎಪಿಸೋಡನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ.
ಆದರೆ ಇತ್ತೀಚೆಗೆ ಸುರ್ಜೇವಾಲಾ ಅವರು ಶಾಸಕರ ಜತೆ ಒನ್ ಟು ಒನ್ ಸಭೆ ನಡೆಸಿದ ಮೇಲೆ ಸಿದ್ದರಾಮಯ್ಯ ಮತ್ತೆ ಕೆರಳಿದ್ದಾರೆ.ಅಷ್ಟೇ ಅಲ್ಲ,ತಮ್ಮ ಆಪ್ತ ಸಚಿವರು,ಶಾಸಕರು ತರುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಪರಿಣಾಮ? ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳಲು ಅಂತ ಬಂದಿರುವ ಸುರ್ಜೇವಾಲಾ ಏನು ಮಾಡುತ್ತಿದ್ದಾರೆ? ಪಕ್ಷದ ಕೆಲಸಗಳಲ್ಲಿ ಮೂಗು ತೂರಿಸುವುದರಿಂದ ಹಿಡಿದು, ಕರ್ನಾಟಕದಲ್ಲಿರುವ ಹಲ ಉತ್ತರ ಭಾರತೀಯ ಅಧಿಕಾರಿಗಳ ಸಂಪರ್ಕ ಪಡೆದು ಯಾವ ಹೆಜ್ಜೆ ಇಡುತ್ತಿದ್ದಾರೆ ಎಂಬಲ್ಲಿಯ ತನಕ ಹಲ ಮಾಹಿತಿಗಳನ್ನು ಒಗ್ಗೂಡಿಸಿ ರಾಹುಲ್ ಗಾಂಧಿಯವರ ಮುಂದಿಡಲು ತೀರ್ಮಾನಿಸಿದ್ದಾರೆ.
ಪ್ರಾಮಿಸ್ಸು ಮಾಡಿದ್ದು ಯಾರು? (Political analysis)
ಅಂದ ಹಾಗೆ ಇತ್ತೀಚೆಗೆ ದಿಲ್ಲಿಗೆ ಹೋಗಿದ್ದ ಸಿದ್ದರಾಮಯ್ಯ:ನಾನೇ ಐದು ವರ್ಷ ಸಿಎಂ ಅಂತ ಗುಡುಗಿ ಬಂದಿದ್ದರಲ್ಲ? ಈ ಬೆಳವಣಿಗೆಯ ನಂತರ ದಿಲ್ಲಿಯ ವಿಷಯದಲ್ಲಿ ಅವರ ದೃಷ್ಟಿ ಕೋನವೇ ಬದಲಾಗಿದೆ. ಮುಂಚೆಲ್ಲ ಹೈಕಮಾಂಡ್ ಮಟ್ಟದಲ್ಲಿ ಏನು ನಡೆಯುತ್ತಿದೆ ಅಂತ ತಿಳಿದುಕೊಳ್ಳಲು ಕೆ.ಸಿ.ವೇಣುಗೋಪಾಲ್ ಅವರನ್ನು ನೆಚ್ಚಿಕೊಂಡಿದ್ದ ಸಿದ್ದರಾಮಯ್ಯ ಈಗ ಬೇರೆ ಬೇರೆ ಮೂಲಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.
ಮೊನ್ನೆ ಇಂತಹ ಮೂಲಗಳಿಂದ ಅವರಿಗೆ ಬಂದಿರುವ ವರ್ತಮಾನದ ಪ್ರಕಾರ,ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಗಾಗಿ ತಮ್ಮ ಮತ್ತು ಡಿಕೆಶಿ ಮಧ್ಯೆ ಪೈಪೋಟಿ ನಡೆಯಿತಲ್ಲ? ಈ ಸಂದರ್ಭದಲ್ಲಿ ತಾವು ಪಟ್ಟು ಬಿಡದೆ ಹೋದಾಗ ಖರ್ಗೆ,ಸುರ್ಜೇವಾಲ ಅವರು ಡಿ.ಕೆ.ಶಿವಕುಮಾರ್ ಅವರನ್ನು ವೈಯಕ್ತಿಕವಾಗಿ ಸಮಾಧಾನಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ನೀವೆಷ್ಟು ಶ್ರಮಿಸಿದ್ದೀರಿ ಅಂತ ನಮಗೆ ಗೊತ್ತು. ನ್ಯಾಯವಾಗಿ ನಿಮಗೆ ಸಿಎಂ ಹುದ್ದೆ ಸಿಗಲೇಬೇಕು.ಆದರೆ ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಳ್ಳುವುದು ಸೇಫ್ ಅಲ್ಲ.ಹೀಗಾಗಿ ಮೊದಲ ಎರಡೂವರೆ ವರ್ಷ ಅವರು ಸಿಎಂ ಆಗಲಿ,ನಂತರದ ಎರಡೂವರೆ ವರ್ಷ ನೀವು ಸಿಎಂ ಆಗುವಿರಂತೆ ಅಂತ ಈ ನಾಯಕರು ಹೇಳಿದ್ದರಂತೆ.
ಆದರೆ ಈ ಲೆವೆಲ್ಲಿನಲ್ಲಿ ಸಿಕ್ಕ ಭರವಸೆಯನ್ನೇ ಹೈಕಮಾಂಡ್ ಬರವಸೆ ಅಂತ ನಂಬಿ ಡಿಕೆಶಿ ಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದಾರೆ ಎಂಬುದು ಈಗ ಸಿದ್ದು ಕಿವಿಗೆ ತಲುಪಿರುವ ವರ್ತಮಾನ.
ಯಾವಾಗ ಈ ವರ್ತಮಾನ ತಮ್ಮ ಕಿವಿ ತಲುಪಿತೋ? ಇದಾದ ನಂತರ ದಿಲ್ಲಿಯ ರಾಜಕಾರಣದ ಬಗ್ಗೆ ಸಿದ್ಧರಾಮಯ್ಯ ಅಲರ್ಟ್ ಆಗಿದ್ದಾರೆ.ಅರ್ಥಾತ್,ಹೈಕಮಾಂಡ್ ಮಟ್ಟದಲ್ಲಿ ಯಾರ್ಯಾರು ದಾಳ ಉರುಳಿಸುತ್ತಾರೆ? ಯಾರ್ಯಾರ ಹೆಸರಿನಲ್ಲಿ ಉರುಳಿಸುತ್ತಾರೆ ಅನ್ನುವುದರ ಮೇಲೆ ನಿಗಾ ಇಟ್ಟಿದ್ದಾರೆ.
ಯಾಕೆಂದರೆ ಸೋನಿಯಾಗಾಂಧಿ ಅವರಾಗಲೀ,ರಾಹುಲ್ ಗಾಂಧಿ ಅವರೇ ಆಗಲಿ.ಕಳೆದೆರಡು ವರ್ಷಗಳಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ತಮ್ಮ ಬಳಿ ಪ್ರಸ್ತಾಪಿಸಿಯೇ ಇಲ್ಲ. ಇಷ್ಟಾದರೂ ಅಧಿಕಾರ ಹಂಚಿಕೆಯ ಮಾತು ಜೀವಂತವಾಗಿದೆ ಎಂದರೆ ಹೈಕಮಾಂಡ್ ಮಟ್ಟದಲ್ಲಿ ಇದನ್ನು ಪೋಷಿಸುವ ಕೈಗಳು ಬಲಿಷ್ಟವಾಗಿವೆ ಎಂದೇ ಅರ್ಥ. ಸಹಜವಾಗಿಯೇ ಈ ಕೈಗಳು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಅಂತ ಹೇಳಿದರೆ ರಾಹುಲ್ ಗಾಂಧಿ ಅದನ್ನು ನಂಬುತ್ತಾರೆ. ಹೀಗೆ ಅವರು ನಂಬಿದರೆ ನಾಯಕತ್ವ ಬದಲಾವಣೆಯ ಆಟ ಶುರುವಾಗುತ್ತದೆ. ಹಾಗೆ ಆಟ ಶುರುವಾಗಬಾರದು ಎಂದರೆ ದಿಲ್ಲಿಯ ಆಟಗಳ ಮೇಲೆ ಕಣ್ಣಿಡುವುದು,ಅದಕ್ಕೆ ಕೌಂಟರ್ ಕೊಡುವುದು ಅನಿವಾರ್ಯ ಎಂಬುದು ಸಿದ್ದರಾಮಯ್ಯ ಅವರಿಗೆ ಮನವರಿಕೆ ಆಗಿದೆ.
ಎಮ್ಮೆಲ್ಸಿ ಪಟ್ಟಿಗೆ ರೋಚಕ ಟ್ವಿಸ್ಟ್ (Political analysis)
ಈ ಮಧ್ಯೆ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ನಾಲ್ಕು ಮಂದಿ ಎಮ್ಮೆಲ್ಸಿಗಳ ಲಿಸ್ಟಿಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅದೆಂದರೆ ಈ ಹಿಂದೆ ರೆಡಿಯಾಗಿದ್ದ ಡಿ.ಜಿ.ಸಾಗರ್,ದಿನೇಶ್ ಅಮೀನ್ ಮಟ್ಟು, ರಮೇಶ್ ಬಾಬು ಮತ್ತು ಆರತಿ ಕೃಷ್ಣ ಅವರ ಹೆಸರುಗಳ ಪಟ್ಟಿಗೆ ಸ್ವತ: ರಾಹುಲ್ ಗಾಂಧಿ ಬ್ರೇಕ್ ಹಾಕಿದ್ದಾರೆ ಎಂಬುದು.
ಅಂದ ಹಾಗೆ ಸದರಿ ಪಟ್ಟಿಯಲ್ಲಿ ತಾವು ಹೇಳಿದ ಒಂದು ಹೆಸರೂ ಇಲ್ಲ ಎಂಬ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ವರಿಷ್ಟರ ಮುಂದೆ ಅಸಮಾಧಾನ ತೋಡಿಕೊಂಡಿದ್ದೇನೋ ನಿಜ.ಅದೇ ರೀತಿ ಮೇಡಂ ಗಾಂಧಿಯವರನ್ನು ಟೀಕಿಸಿ ಬರೆದವರಿಗೆ ಜಾಗ ಸಿಕ್ಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದೂ ನಿಜ. ಆದರೆ, ಈಗ ಬರುತ್ತಿರುವ ವರ್ತಮಾನಗಳ ಪ್ರಕಾರ: ಡಿಕೆಶಿ ಅಸಮಾಧಾನ ತೋಡಿಕೊಂಡರು ಅಂತೇನೂ ಪಟ್ಟಿಗೆ ಬ್ರೇಕ್ ಬಿದ್ದಿಲ್ಲ. ಬದಲಿಗೆ ಪ್ರಾತಿನಿಧ್ಯ ವಂಚಿತ ಸಮುದಾಯಗಳಿಗೆ ಅವಕಾಶ ಸಿಗಬೇಕಿತ್ತು ಅಂತ ರಾಹುಲ್ ಹೇಳಿದ್ದೇ ಬ್ರೇಕಿಗೆ ಮೂಲ ಕಾರಣ.
ರಾಹುಲ್ ಪ್ರಕಾರ, ಬಲಿಜರಿಗೆ,ಒಕ್ಕಲಿಗರಿಗೆ,ಈಡಿಗರಿಗೆ ಮತ್ತು ದಲಿತರಲ್ಲಿ ಬಲಗೈನವರಿಗೆ ಹಲವು ಅವಕಾಶಗಳನ್ನು ನೀಡಲಾಗಿದೆ. ಹೀಗಾಗಿ ಸವಿತಾ ಸಮಾಜ,ಮಡಿವಾಳ ಸಮಾಜ ಸೇರಿದಂತೆ ಪ್ರಾತಿನಿಧ್ಯ ವಂಚಿತ ಸಮುದಾಯಗಳೇನಿವೆ? ಅವುಗಳಿಗೆ ಅವಕಾಶ ಸಿಗಬೇಕು ಎಂಬುದು ರಾಹುಲ್ ವಾದ. ಅವರ ಈ ವಾದದ ಬಗ್ಗೆ ಸಿದ್ಧರಾಮಯ್ಯ ಅವರೇನೂ ತಕರಾರು ಮಾಡುತ್ತಿಲ್ಲ. ಬದಲಿಗೆ, ರೆಡಿಯಾದ ಪಟ್ಟಿಗೆ ಸಹಿ ಹಾಕಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು ತಾವು. ಹೀಗಾಗಿ ಅದನ್ನು ಬದಲಿಸುವುದು ಸರಿಯಲ್ಲ ಎಂಬುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪಟ್ಟು. ಮೂಲಗಳ ಪ್ರಕಾರ,ಖರ್ಗೆಯವರ ಪಟ್ಟಿನ ಬಗ್ಗೆ ಮಾಹಿತಿ ಪಡೆದ ಸಿದ್ಧರಾಮಯ್ಯ ಅವರೀಗ ಎಮ್ಮೆಲ್ಸಿ ಪಟ್ಟಿಯ ಬಗ್ಗೆ ಉತ್ಸುಕತೆ ತೋರುವುದನ್ನೇ ಬಿಟ್ಟಿದ್ದಾರೆ.
ಇದ್ದುದರಲ್ಲಿ ದಿನೇಶ್ ಅಮೀನ್ ಮಟ್ಟು ಅವರ ಹೆಸರನ್ನು ಬಿಟ್ಟರೆ, ಉಳಿದ ಮೂರು ಹೆಸರುಗಳಿಗಾಗಿ ತಾವೇನೂ ಪಟ್ಟು ಹಿಡಿದಿಲ್ಲ.ಅರ್ಥಾತ್,ಡಿ.ಜಿ.ಸಾಗರ್,ರಮೇಶ್ ಬಾಬು ಮತ್ತು ಆರತಿಕೃಷ್ಣ ಎಮ್ಮೆಲ್ಸಿಗಳಾಗಬೇಕು ಎಂಬ ವಿಷಯದಲ್ಲಿ ತಮಗಿಂತ ಖರ್ಗೆಯವರ ಒತ್ತಾಸೆ ಹೆಚ್ಚು ಎಂಬುದು ಸಿದ್ದರಾಮಯ್ಯ ಅವರಿಗಿರುವ ಫೀಡ್ ಬ್ಯಾಕು. ಆದರೆ ಸದರಿ ಪಟ್ಟಿಗೆ ರಾಹುಲ್ ಬ್ರೇಕ್ ಹಾಕಿದರೆ ಇದು ತಮ್ಮ ಮತ್ತು ಡಿಕೆಶಿ ನಡುವಣ ಸಂಘರ್ಷದ ಫಲ ಅಂತ ಹೈಲೈಟ್ ಆಗುತ್ತಿದೆ ಎಂಬುದು ಅವರ ಅನುಮಾನ. ಪರಿಣಾಮ? ಅವರೀಗ ಎಮ್ಮೆಲ್ದಿ ಪಟ್ಟಿಯ ವಿಷಯದಲ್ಲಿ ಮೌನವಾಗಿರಲು ನಿರ್ಧರಿಸಿದ್ದಾರೆ.
ಲಾಸ್ಟ್ ಸಿಪ್ (Political analysis)
ಅಂದ ಹಾಗೆ ರಾಜ್ಯ ಕಾಂಗ್ರೆಸ್ ನ ಬೆಳವಣಿಗೆಗಳೇನೇ ಇರಲಿ,ಆದರೆ ಸಿದ್ದರಾಮಯ್ಯ ಅವರನ್ನು ಹಿಂದುಳಿದ ವರ್ಗಗಳ ನಂಬರ್ ಒನ್ ನಾಯಕ ಎಂದು ಪ್ರತಿಬಿಂಬಿಸುವ ಕೆಲಸಕ್ಕೆ ರಾಹುಲ್ ಇಂಬು ಕೊಟ್ಟಿದ್ದಾರೆ. ಈ ವರ್ಷಾಂತ್ಯದ ವೇಳೆಗೆ ಎದುರಾಗಲಿರುವ ಬಿಹಾರ ವಿಧಾನಸಭೆಯ ಚುನಾವಣೆ ಇರಬಹುದು.ತದನಂತರ ಚುನಾವಣೆ ಎದುರಿಸುವ ಕೇರಳ,ಪಶ್ಚಿಮ ಬಂಗಾಳ,ತಮಿಳ್ನಾಡು ರಾಜ್ಯಗಳೇ ಇರಬಹುದು.
ಇಲ್ಲೆಲ್ಲ ಹಿಂದುಳಿದ ವರ್ಗಗಳ ಮತದಾರರು ಜಾಸ್ತಿ.ಅವರ ಮೇಲೆ ಪ್ರಭಾವ ಬೀರಲು ಸಿದ್ದರಾಮಯ್ಯ ಹೆಸರನ್ನು ಮುಂಚೂಣಿಗೆ ಬಿಡುವುದು ರಾಹುಲ್ ಬಯಕೆ. ಇದಕ್ಕೆ ಪೂರಕವಾಗಿ ಅಕ್ಟೋಬರ್ ಹೊತ್ತಿಗೆ ದಿಲ್ಲಿಯಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಸುವುದು ಅವರ ಥಿಂಕಿಂಗು.ಸಿದ್ದು ಆಪ್ತರ ಪ್ರಕಾರ,ಈ ಸಮಾವೇಶ ಸಿದ್ದರಾಮಯ್ಯ ಅವರ ಗ್ರಾಫನ್ನು ಹೆಚ್ಚಿಸಲಿದೆ.ಅಷ್ಟೇ ಅಲ್ಲ,ಸಿಎಂ ಪಟ್ಟದಲ್ಲಿ 2028 ರವರೆಗೂ ಅವರು ಭದ್ರವಾಗಿ ಕೂರುವಂತೆ ಮಾಡಲಿದೆ.
ಆರ್.ಟಿ.ವಿಠ್ಠಲಮೂರ್ತಿ