ದಾವಣಗೆರೆ: ಈಗಿನ ಮಕ್ಕಳು ಹೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಮಕ್ಕಳಿಗೆ ಬೇಕಾಗಿರುವ ಸಂಸ್ಕೃತಿ, ಸಂಸ್ಕಾರಗಳನ್ನು ಒಳಗೊಂಡಿರುವ ಸಾಹಿತ್ಯವನ್ನು ಶಾಲಾ-ಕಾಲೇಜುಗಳಲ್ಲಿ ವಿಭಿನ್ನ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸಲಹೆ ನೀಡಿದರು.
ತಾಲೂಕಿನ ಕುರ್ಕಿ-ಹಿರೇತೊಗಲೇರಿಯಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ದಾವಣಗೆರೆ ತಾಲ್ಲೂಕು ೧೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ಮಕ್ಕಳಿಗೆ ಪ್ರೀತಿ, ವಿಶ್ವಾಸ ತೋರಿಸಬೇಕು. ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿ, ಆತ್ಮವಿಶ್ವಾಸ ತುಂಬಬೇಕು. ಮೂಢನಂಬಿಕೆ ಹೋಗಲಾಡಿಸಿ, ವೈಚಾರಿಕತೆ ಬೆಳೆಸಬೇಕು. ಉತ್ತಮ ಮೌಲ್ಯಗಳನ್ನು ಕಲಿಸಿ, ಪ್ರೋತ್ಸಾಹಿಸಬೇಕು’. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಹೆಚ್ಚು ಹೆಚ್ಚು ಕಾರ್ಯ ಚಟುವಟಿಕೆಗಳನ್ನು ಶಾಲಾ- ಕಾಲೇಜು ಮಕ್ಕಳಿಗೆ ಹಮ್ಮಿಕೊಂಡು ಮಕ್ಕಳಲ್ಲಿ ಕನ್ನಡ ಸಾಹಿತ್ಯ ಓದುವ ಅಭಿರುಚಿ ಬೆಳೆಸಬೇಕೆಂದರು.
ಗ್ರಾಮೀಣ ಪ್ರದೇಶಗಳಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು ಅತ್ಯಂತ ಅವಶ್ಯಕ, ಏಕೆಂದರೆ ಅವು ಗ್ರಾಮೀಣ ಜನರ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಪ್ರೋತ್ಸಾಹಿಸು ತ್ತವೆ, ಕನ್ನಡ ಭಾಷೆಯ ಪ್ರಚಾರ ಮಾಡುತ್ತವೆ, ಗ್ರಾಮೀಣ ಸಮಸ್ಯೆಗಳನ್ನು ಮುಖ್ಯ ವೇದಿಕೆಗೆ ತರುತ್ತವೆ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುತ್ತವೆ, ಮತ್ತು ಸಾಹಿತ್ಯ ಪರಿಷತ್ತನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುತ್ತವೆ; ಈ ಸಮ್ಮೇಳನಗಳು ಸ್ಥಳೀಯ ಅಭಿವೃದ್ಧಿ, ಶಿಕ್ಷಣ ಹಾಗೂ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಪ್ರಮುಖವಾಗಿವೆ ಎಂದರು.
ಪಟ್ಟಣದ ಸಮ್ಮೇಳನಗಳಿಗೆ ಹೋಗಲು ಕಷ್ಟಪಡುವ ಗ್ರಾಮಸ್ಥರು, ಮಕ್ಕಳನ್ನು ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಇವು ಸಹಕಾರಿ. ಅಲ್ಲದೇ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಗ್ರಾಮೀಣ ಪ್ರದೇಶಗಳಲ್ಲಿನ ಸಾಹಿತ್ಯ ಅಭಿರುಚಿ, ಸ್ಥಳೀಯ ಸಂಸ್ಕೃತಿಗಳ ರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಮುಂತಾದ ಗ್ರಾಮೀಣ ಸಮಸ್ಯೆಗಳನ್ನು ಮುಖ್ಯ ವೇದಿಕೆಗೆ ತರಲು ಇವು ವೇದಿಕೆ ಒದಗಿಸುತ್ತವೆ ಎಂದು ತಿಳಿಸಿದರು.
ಮನೆಯಲ್ಲಿ ಮಕ್ಕಳಿಗೆ ಅಪ್ಪ-ಅಮ್ಮ ಎಂದು ಹೇಳುವುದನ್ನು ಪ್ರೋತ್ಸಾಹಿಸುವುದು, ಕನ್ನಡ ಭಾಷೆಯ ಪ್ರಾಮುಖ್ಯತೆ ತಿಳಿಸುವುದು ಇಂತಹ ಸಮ್ಮೇಳನಗಳ ಮೂಲಕ ನಡೆಯುತ್ತದೆ.ಅಲ್ಲದೇ ಗ್ರಾಮೀಣ ಮಟ್ಟದ ಸಮ್ಮೇಳನಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ, ಸ್ಥಳೀಯ ಸಂಸ್ಕೃತಿ ಮತ್ತು ಅಭಿವೃದ್ಧಿಗೆ ನೆರವಾಗುವ ಪ್ರಮುಖ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು.
ದೇವಸ್ಥಾನಗಳು ಬೇರೆಯಲ್ಲ, ನಮ್ಮ ಮಕ್ಕಳು ಓದುವ ಶಾಲೆಗಳು ಬೇರೆಯಲ್ಲ; ಅಂತಹ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ನಾಳೆಯಿಂದಲೇ ಶಾಲೆಯ ಅಭಿವೃದ್ಧಿಗೆ ಕ್ರಮ ಜರುಗಿಸುತ್ತೇನೆ. ರೈತರ ಹಿತವನ್ನು ಕಾಪಾಡುತ್ತೇನೆ. ಈಗಾಗಲೇ 70 ಕೋಟಿ ರೂ. ವೆಚ್ಚದಲ್ಲಿ ಭದ್ರಾ ಕಾಲುವೆಗಳನ್ನು ಆಧುನೀಕರಣ ಕೆಲಸ ಪ್ರಾರಂಭಿಸಲಾಗಿದೆ. ಜೊತೆಗೆ 22 ಕೆರೆಗಳ ಏತನೀರಾವರಿ ಯೋಜನೆಯ ಕಾಮಗಾರಿಯನ್ನೂ ಶೀಘ್ರದಲ್ಲಿ ಪ್ರಾರಂಭಿಸುವ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಗಣ್ಯರು ಕೃತಿಗಳಾದ ವಿಜ್ಞಾನಧಾರೆ,ಸೌರ ಕುಟುಂಬ,ಅಂತಸಾಕ್ಷಿ,ಜೀವನಾಡಿ ಹಾಗೂ ತಾತನ ಪ್ರತಿಧ್ವನಿಗಳು ಲೋಕಾರ್ಪಣೆಗಳಿಸಲಾಯಿತು. ಕೃತಿಗಳನ್ನು ರಚಿಸಿದ ಸಾಹಿತಿಗಳನ್ನು ಸನ್ಮಾನಿಸಲಾಯಿತು.
Read also : ಹುಚ್ಚು ನಾಯಿ ಕಡಿತ- ರೇಬಿಸ್ ಕಾಯಿಲೆ- ಮರಣ ಶತಸಿದ್ಧ: ನಗರವನ್ನು ನಾಯಿಗಳಿಂದ ಮುಕ್ತ ಮಾಡಿ-ಅಧಿಕಾರಿಗಳಿಗೆ ಕಳಕಳಿಯ ಮನವಿ
ಸಮ್ಮೇಳನದ ಸರ್ವಾಧ್ಯಕ್ಷರಾದ ಎಸ್.ಸಿದ್ದೇಶ್ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಬಿ ವಾಮದೇವಪ್ಪ ತೊಗಲೇರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುಮತಿ ಜಯ್ಯಪ್ಪ,ಕುರ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಟಿ.ಟಿ.ನಳಿನಾಕ್ಷಿ ವೆಂಕಟೇಶ್, ದೂಡ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ , ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸರ್ವ ಸದಸ್ಯರು,ಪದಾಧಿಕಾರಿಗಳು ,ಶಾಲಾ ಮಕ್ಕಳು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಕ್ಕಳಿಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದು ಒಂದು ವಿಶೇಷ ಅನುಭವ. ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಲು ಇದೊಂದು ಸೂಕ್ತ ವೇದಿಕೆ.ಮಗುವಿನ ಬಾಯಿಂದ ಮೊದಲು ತೊದಲು ನುಡಿ ಹೊರ ಬರುವುದು ಮಾತೃಭಾಷೆ. ಪ್ರಾಥಮಿಕ ಹಂತದಿಂದಲ್ಲಿ ಸಾಹಿತ್ಯ ಅಭಿರುಚಿ ಮೂಡಿ ಬರಲು ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾದದ್ದು.
-ಕೆ.ಎಸ್.ಬಸವಂತಪ್ಪ, ಶಾಸಕರು, ಮಾಯಕೊಂಡ.
