ದಾವಣಗೆರೆ (Davangere district ) : ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿ (Safai Karmachari) ಗಳಿಗೆ ಶಾಶ್ವತ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲವ ಅವರನ್ನು ಕೆಳಸ್ತರದಿಂದ ಮೇಲುಸ್ತರಕ್ಕೆ ಎತ್ತುವ ಪ್ರಾಮಾಣಿಕ ಪ್ರಯತ್ನ ಜಿಲ್ಲಾಧಿಕಾರಿಗಳು ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ (MLA K.S.Basavanthappa) ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಫಾಯಿ ಕರ್ಮಚಾರಿಗಳ ನೇಮಕಾತಿ ನಿಷೇಧ ಮತ್ತು ಪುನರ್ ವಸತಿ ಕಾಯ್ದೆ-2013ರ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 2500 ಸಾವಿರ ಸಫಾಯಿ ಕರ್ಮಚಾರಿಗಳು ಇದ್ದು, ಸರಿಯಾದ ಮೂಲಭೂತ ಸೌಲಭ್ಯಗಳು ಇಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಅವರ ಬದುಕು ಬೀದಿಗೆ ಬಂದಿದೆ. ಈ ನಿಟ್ಟಿನಲ್ಲಿ ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಅವರ ಬದುಕು ಹಸನು ಮಾಡುವ ಕೆಲಸ ಅಧಿಕಾರಿಗಳು ಮಾಡಬೇಕೆಂದು ತಾಕೀತು ಮಾಡಿದರು.
ಸಫಾಯಿ ಕರ್ಮಚಾರಿಗಳು ವಾಸ ಮಾಡಲು ಯೋಗ್ಯವಾದ ಮನೆಗಳು ಇಲ್ಲ. ಅವರ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದ ಅವರ ಕುಟುಂಬಗಳು ಸಮಾಜಮುಖಿಯಾಗದೆ ಕಮರಿ ಹೋಗುತ್ತಿವೆ ಎಂದರು.
HARIHARA : ಗುತ್ತೂರು ಗ್ರಾಮಕ್ಕೆ ಶಾಶ್ವತ ರುದ್ರಭೂಮಿ ಕಲ್ಪಿಸಿ : ಪ್ರತಿಭಟನೆ
ಸಫಾಯಿ ಕರ್ಮಚಾರಿಗಳ ಮನೆ ನಿರ್ಮಾಣಕ್ಕೆ ಕೊಡುವ 2.50 ಲಕ್ಷ ರೂ. ಹಣ ಕಡಿಮೆಯಾಗಿದೆ. ಅದನ್ನು 8 ಲಕ್ಷ ರೂ. ಹೆಚ್ಚಳಕ್ಕೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರ ಬಳಿ ಚರ್ಚಿಸುತ್ತೇನೆ. ಇದರಿಂದ ಅವರು ಶಾಶ್ವತ ಸೂರು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸಫಾಯಿ ಕರ್ಮಚಾರಿಗಳು ಅವಿದ್ಯಾವಂತರಾಗಿರುವುದರಿಂದ ಅವರ ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. 1,2,3,4,5, 6ನೇ ತರಗತಿ ಓದಿ ಶಾಲೆ ಬಿಟ್ಟು ಮನೆಯಲ್ಲಿರುವ ಮಕ್ಕಳನ್ನು ಗುರುತಿಸಿ ಅವರನ್ನು ನೇರವಾಗಿ ಮೊರಾರ್ಜಿ ದೇಸಾಯಿ ಶಾಲೆಗಳಿಗೆ ದಾಖಲಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ರಾಜ್ಯ ಸರ್ಕಾರ ಸಫಾಯಿ ಕರ್ಮಚಾರಿಗಳಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಆ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ. ಇಹಟ್ನಾಳ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ. ನಾಗರಾಜ್ , ಹೆಚ್ಚವರಿ ಎಸ್ಪಿ ವಿಜಯ್ ಕುಮಾರ್ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.